ETV Bharat / bharat

'ನಿವೃತ್ತಿಗೂ ಒಂದು ದಿನ ಮುನ್ನ ಘೋಷಣೆಯಾಗುವ ವಾರ್ಷಿಕ ವೇತನ ಹೆಚ್ಚಳಕ್ಕೆ ನೌಕರರು ಅರ್ಹ'

author img

By

Published : Apr 11, 2023, 8:12 PM IST

ವಾರ್ಷಿಕ ಇನ್‌ಕ್ರಿಮೆಂಟ್‌ (ವೇತನ ಹೆಚ್ಚಳ) ವಿಚಾರದಲ್ಲಿ ಕರ್ನಾಟಕ ಹೈಕೋರ್ಟ್‌ ನೀಡಿದ್ದ ತೀರ್ಪು ಪ್ರಶ್ನಿಸಿ ಕೆಪಿಟಿಸಿಎಲ್ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

Supreme Court dismisses KPTCL appeal on annual increment
ಸುಪ್ರೀಂನಲ್ಲಿ ಕೆಪಿಟಿಸಿಎಲ್ ಮೇಲ್ಮನವಿ ವಜಾ

ನವದೆಹಲಿ: ನಿವೃತ್ತಿಗೂ ಒಂದು ದಿನ ಮುನ್ನ ಘೋಷಣೆಯಾಗುವ ವಾರ್ಷಿಕ ವೇತನ ಹೆಚ್ಚಳಕ್ಕೂ ಸರ್ಕಾರಿ ನೌಕರರು ಅರ್ಹರು ಎಂದು ಸುಪ್ರೀಂ ಕೋರ್ಟ್ ಇಂದು (ಮಂಗಳವಾರ) ಮಹತ್ವದ ಆದೇಶ ನೀಡಿದೆ. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಲಿಮಿಟೆಡ್ (ಕೆಪಿಟಿಸಿಎಲ್) ನೌಕರರ ವಿಚಾರದಲ್ಲಿ ಕೋರ್ಟ್‌ ಆದೇಶ ಹೊರಹಾಕಿತು.

ಈ ಹಿಂದೆ, ಮರು ದಿನವೇ ನಿವೃತ್ತಿಯಾಗಲಿರುವ ನೌಕರರೂ ಸಹ ವಾರ್ಷಿಕ ಇನ್‌ಕ್ರಿಮೆಂಟ್‌ಗೆ ಅರ್ಹರು ಎಂದು ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರಿ ಸ್ವಾಮ್ಯದ ಕೆಪಿಟಿಸಿಎಲ್ ಸುಪ್ರೀಂ ಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಆದರೆ, ಅರ್ಜಿಯನ್ನು ನ್ಯಾಯಮೂರ್ತಿಗಳಾದ ಎಂ.ಆರ್.ಶಾ ಮತ್ತು ಸಿ.ಟಿ.ರವಿಕುಮಾರ್ ಅವರನ್ನೊಳಗೊಂಡ ಪೀಠವು ವಜಾಗೊಳಿಸಿದೆ.

''ಈಗ ಮೇಲ್ಮನವಿದಾರರ ಪರವಾಗಿ (ಕೆಪಿಟಿಸಿಎಲ್) ಸಲ್ಲಿಸಿದ ವಾರ್ಷಿಕ ಇನ್‌ಕ್ರಿಮೆಂಟ್ ಪ್ರೋತ್ಸಾಹಕ ರೂಪದಲ್ಲಿದೆ. ಉದ್ಯೋಗಿಯನ್ನು ಉತ್ತಮವಾಗಿ ಕಾರ್ಯನಿರ್ವಹಿಸಲು ಪ್ರೋತ್ಸಾಹಿಸಲು ನೀಡುವ ಆರ್ಥಿಕ ಲಾಭವಾಗಿರುತ್ತದೆ. ಒಮ್ಮೆ ಅವರು (ನೌಕರರು) ಸೇವೆಯಲ್ಲಿರದಿದ್ದರೆ ವಾರ್ಷಿಕ ಇನ್‌ಕ್ರಿಮೆಂಟ್‌ನ ಅನುದಾನದ ಪ್ರಶ್ನೆಯೇ ಇಲ್ಲ. ಹೀಗಾಗಿ ನಿವೃತ್ತಿಗೂ ಮುನ್ನ ಒಂದು ದಿನ ಘೋಷಣೆಯಾಗುವ ವಾರ್ಷಿಕ ಹೆಚ್ಚಳ ಕೊಡಬಾರದು ಎಂಬುದರಲ್ಲಿ ಯಾವುದೇ ಹುರುಳಿಲ್ಲ'' ಎಂದು ಹೇಳಿತು.

ಇದೇ ವೇಳೆ ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿಯ ನೌಕರರ ಸೇವಾ ನಿಯಮಾವಳಿಗಳ 1997ರ ನಿಯಮಾವಳಿ 40 (1) ಕುರಿತು ನ್ಯಾಯ ಪೀಠವು ವಿವರವಾಗಿ ಪರಿಶೀಲನೆ ನಡೆಸಿತು. ಜೊತೆಗೆ ವಾರ್ಷಿಕ ಹೆಚ್ಚಳದ ಅನುದಾನದ ಉದ್ದೇಶವನ್ನೂ ವಿಶ್ಲೇಷಣೆ ಮಾಡಿದೆ. ''ಸರ್ಕಾರಿ ನೌಕರನಿಗೆ ಒಂದು ವರ್ಷ ಸೇವೆ ಸಲ್ಲಿಸುವಾಗ ಅವರ ಉತ್ತಮ ನಡವಳಿಕೆಯ ಆಧಾರದ ಮೇಲೆ ವಾರ್ಷಿಕ ಇನ್ಕ್ರಿಮೆಂಟ್ ನೀಡಲಾಗುತ್ತದೆ. ಅಂತಹ ಇನ್‌ಕ್ರಿಮೆಂಟ್‌ಗಳು ಶಿಕ್ಷೆ ಅಥವಾ ದಕ್ಷತೆಯ ಮಾನದಂಡವಾಗಿರುತ್ತದೆ. ಆದ್ದರಿಂದ ಒಂದು ವರ್ಷ/ನಿಗದಿತ ಅವಧಿಯಲ್ಲಿ ಉತ್ತಮ ನಡತೆಯೊಂದಿಗೆ ಸೇವೆ ಸಲ್ಲಿಸುವುದಕ್ಕಾಗಿ ಇಂಕ್ರಿಮೆಂಟ್ ನೀಡಲಾಗುತ್ತದೆ'' ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು.

ಈಗಾಗಲೇ ಸಲ್ಲಿಸಿದ ಸೇವೆಯಿಂದಾಗಿ ವಾರ್ಷಿಕ ಇನ್‌ಕ್ರಿಮೆಂಟ್‌ನ ಪ್ರಯೋಜನಕ್ಕೆ ಅರ್ಹತೆ ಇದೆ. ಸರ್ಕಾರಿ ನೌಕರನು ಮರುದಿನವೇ ನಿವೃತ್ತಿ ಹೊಂದಿದ ಮಾತ್ರಕ್ಕೆ, ಹಿಂದಿನ ವರ್ಷದಲ್ಲಿ ಉತ್ತಮ ನಡತೆ ಮತ್ತು ದಕ್ಷತೆಯಿಂದ ಸೇವೆ ಸಲ್ಲಿಸಿದ ನಂತರ ಅವರು ಗಳಿಸಿದ ವಾರ್ಷಿಕ ಇನ್‌ಕ್ರಿಮೆಂಟ್ ಅನ್ನು ನಿರಾಕರಿಸಲಾಗುವುದಿಲ್ಲ. ಕರ್ನಾಟಕ ಹೈಕೋರ್ಟಿನ ವಿಭಾಗೀಯ ಪೀಠವು ಮೇಲ್ಮನವಿದಾರರಿಗೆ (ಕೆಪಿಟಿಸಿಎಲ್) ವಾರ್ಷಿಕ ಹೆಚ್ಚಳವನ್ನು ನೀಡಲು ಸರಿಯಾಗಿ ನಿರ್ದೇಶಿಸಿದೆ ಎಂದು ಶ್ಲಾಘಿಸಿತು.

ಈ ಹಿಂದೆ ಹೈಕೋರ್ಟ್‌ನ ಏಕಸದಸ್ಯ ಪೀಠವು ಕೆಪಿಟಿಸಿಎಲ್ ಪರವಾಗಿ ತೀರ್ಪು ನೀಡಿತ್ತು. ಈ ತೀರ್ಪನ್ನು ಹೈಕೋರ್ಟ್ ವಿಭಾಗೀಯ ಪೀಠ ವಜಾ ಮಾಡಿತ್ತು. ಇನ್‌ಕ್ರಿಮೆಂಟ್ ಇನ್ಸೆಂಟಿವ್ ರೂಪದಲ್ಲಿರುವುದರಿಂದ ನೌಕರರು ಸೇವೆಯಲ್ಲಿಲ್ಲದಿದ್ದಾಗ ಅವರಿಗೆ ಯಾವುದೇ ವಾರ್ಷಿಕ ಇನ್‌ಕ್ರಿಮೆಂಟ್ ನೀಡುವ ಪ್ರಶ್ನೆಯೇ ಇಲ್ಲ ಎಂದು ಕೆಪಿಟಿಸಿಎಲ್ ವಾದಿಸಿತ್ತು.

ಇದನ್ನೂ ಓದಿ: ರೋಹಿಣಿ ಸಿಂಧೂರಿ ವಿರುದ್ಧ ಮಾನಹಾನಿಕರ ಹೇಳಿಕೆ ನೀಡದಂತೆ ನ್ಯಾಯಾಲಯ ನೀಡಿದ್ದ ಆದೇಶಕ್ಕೆ ಹೈಕೋರ್ಟ್ ತಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.