ETV Bharat / bharat

ಸಂಚಿತ ನಿಧಿಯಿಂದ ₹3.73 ಲಕ್ಷ ಕೋಟಿ ಹೆಚ್ಚುವರಿ ಬಳಕೆ ಮಸೂದೆಗೆ ರಾಷ್ಟ್ರಪತಿ​ ಒಪ್ಪಿಗೆ

author img

By

Published : Jan 14, 2022, 3:43 PM IST

ವಿವಿಧ ಸೇವೆಗಳಿಗಾಗಿ ದೇಶದ ಸಂಚಿತ ನಿಧಿಯಿಂದ ಹಣಕಾಸು ವರ್ಷವೊಂದರಲ್ಲಿ ಹೆಚ್ಚುವರಿಯಾಗಿ ತುರ್ತು ಅಗತ್ಯಗಳ ಪೂರೈಕೆಗೆ ಹಣದ ವಿನಿಯೋಗ ಮಾಡಿಕೊಳ್ಳಲು ಈ ಮಸೂದೆಯು ಅಧಿಕಾರ ನೀಡುತ್ತದೆ. ಇದಕ್ಕೀಗ ರಾಷ್ಟ್ರಪತಿ ಕೋವಿಂದ್​ ಅವರು ಒಪ್ಪಿಗೆ ನೀಡಿದ್ದಾರೆ.

President
ರಾಷ್ಟ್ರಪತಿ ರಾಮನಾಥ್​ ಕೋವಿಂದ್

ನವದೆಹಲಿ: ಪ್ರಮುಖ ಬೆಳವಣಿಗೆಯೊಂದರಲ್ಲಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು, ಕೇಂದ್ರ ಸರ್ಕಾರ ಪ್ರಸಕ್ತ ಹಣಕಾಸು ವರ್ಷದಲ್ಲಿ ಹೆಚ್ಚುವರಿಯಾಗಿ 3.73 ಲಕ್ಷ ಕೋಟಿ ರೂಪಾಯಿಯನ್ನು ಸಂಚಿತ ನಿಧಿಯಿಂದ ಬಳಸಿಕೊಳ್ಳಲು ಧನ ವಿನಿಯೋಗ ಮಸೂದೆ(ಸಂ.5)ಗೆ ಒಪ್ಪಿಗೆ ನೀಡಿದ್ದಾರೆ.

ವಿವಿಧ ಸೇವೆಗಳಿಗಾಗಿ ದೇಶದ ಸಂಚಿತ ನಿಧಿಯಿಂದ ಹಣಕಾಸು ವರ್ಷವೊಂದರಲ್ಲಿ ಹೆಚ್ಚುವರಿಯಾಗಿ ತುರ್ತು ಅಗತ್ಯಗಳ ಪೂರೈಕೆಗೆ ಹಣದ ವಿನಿಯೋಗ ಮಾಡಿಕೊಳ್ಳಲು ಈ ಮಸೂದೆಯು ಅಧಿಕಾರ ನೀಡುತ್ತದೆ. ಇದಕ್ಕೀಗ ರಾಷ್ಟ್ರಪತಿ ಕೋವಿಂದ್​ ಅವರು ಗ್ರೀನ್​ ಸಿಗ್ನಲ್​ ನೀಡಿದ್ದಾರೆ.

ಕಳೆದ ವರ್ಷದ ಡಿಸೆಂಬರ್​ನಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಹಣಕಾಸು ಸಚಿವರ ನಿರ್ಮಲಾ ಸೀತಾರಾಮನ್​ ಅವರು, ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಧನ ವಿನಿಯೋಗ ಮಸೂದೆಯನ್ನು ಮಂಡಿಸಿ ಅನುಮೋದನೆ ಪಡೆದುಕೊಂಡಿದ್ದರು. ವಿವಿಧ ತುರ್ತು ಸೇವೆಗಳಿಗಾಗಿ 3,73,761 ಕೋಟಿ ರೂಪಾಯಿಗಳನ್ನು ಹೆಚ್ಚುವರಿಯಾಗಿ ಬಳಸಿಕೊಳ್ಳಲು ರಾಷ್ಟ್ರಪತಿಗಳು ಮಸೂದೆಗೆ ಜನವರಿ 12 ರಂದು ಒಪ್ಪಿಗೆ ಸೂಚಿಸಿದ್ದಾರೆ ಎಂದು ಕೇಂದ್ರ ಸರ್ಕಾರ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಯಾವುದಕ್ಕೆಲ್ಲಾ ಹಣ ಬಳಕೆ?

ಹೆಚ್ಚುವರಿ ವೆಚ್ಚವು ಏರ್ ಇಂಡಿಯಾದ ಹೊಣೆ ಹೊತ್ತ ಸಂಸ್ಥೆಗೆ ಉಳಿದ ಆಸ್ತಿಗಳು ಮತ್ತು ಹೊಣೆಗಾರಿಕೆಗಾಗಿ ಕಂಪನಿಗೆ 62,000 ಕೋಟಿ ರೂ. ಪಾವತಿ, ರಸಗೊಬ್ಬರ ಸಬ್ಸಿಡಿಗೆ 58,430 ಕೋಟಿ ರೂ., ಬಾಕಿ ಉಳಿದಿರುವ ರಫ್ತು ಪ್ರೋತ್ಸಾಹಕ್ಕೆ 53,123 ಕೋಟಿ ರೂ. ಪಾವತಿ, ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ನಿಧಿಗೆ ವರ್ಗಾಯಿಸಲು ಗ್ರಾಮೀಣಾಭಿವೃದ್ಧಿ ಸಚಿವಾಲಯಕ್ಕೆ 22,039 ಕೋಟಿ ರೂಪಾಯಿ ಪಾವತಿಸಬೇಕಾಗಿದೆ.

ಅಲ್ಲದೆ, ಆಹಾರ ಸಂಗ್ರಹಣೆ ಮತ್ತು ಉಗ್ರಾಣದ ವಿವಿಧ ಯೋಜನೆಗಳ ವೆಚ್ಚವನ್ನು ಪೂರೈಸಲು ಹೆಚ್ಚುವರಿಯಾಗಿ 49,805 ಕೋಟಿ ರೂ.ಅನ್ನು ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಗೆ, ಬಡ್ಡಿ ಸಮೀಕರಣ ಯೋಜನೆ ಅಡಿಯಲ್ಲಿ ಸಬ್ಸಿಡಿಗಳ ವೆಚ್ಚವನ್ನು ಪೂರೈಸಲು ವಾಣಿಜ್ಯ ಇಲಾಖೆಗೆ 2,400 ಕೋಟಿ ರೂಪಾಯಿ, ರಕ್ಷಣಾ ಮತ್ತು ಗೃಹ ಸಚಿವಾಲಯಗಳ ಹೆಚ್ಚುವರಿ ವೆಚ್ಚಕ್ಕಾಗಿ ಕ್ರಮವಾಗಿ 5,000 ಕೋಟಿ, 4,000 ಕೋಟಿ ರೂ ನೀಡಲು ಈ ಹಣವನ್ನು ಕೇಂದ್ರ ಸರ್ಕಾರ ಬಳಕೆ ಮಾಡಿಕೊಳ್ಳಲಿದೆ.

ಇದನ್ನೂ ಓದಿ: ದೆಹಲಿಯಲ್ಲಿ ಸುಧಾರಿತ ಸ್ಫೋಟಕ ವಸ್ತು ಪತ್ತೆ; ನಿಷ್ಕ್ರಿಯಗೊಳಿಸಿ ಅನಾಹುತ ತಪ್ಪಿಸಿದ ಎನ್‌ಎಸ್‌ಜಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.