ETV Bharat / bharat

Power crisis: ಕಲ್ಲಿದ್ದಲು ಸಾಗಿಸುವ ರೈಲುಗಳಿಗಾಗಿ 42 ಪ್ಯಾಸೆಂಜರ್​ ಟ್ರೈನ್​ಗಳು ರದ್ದು

author img

By

Published : Apr 30, 2022, 2:38 PM IST

ಗಣಿಗಳಿಂದ ಕಲ್ಲಿದ್ದಲನ್ನು ಒಂದೆಡೆಯಿಂದ ಮತ್ತೊಂದೆಡೆ ಸಾಗಿಸಲು ಅನುಕೂಲಕರವಾಗಿರಲು ಇದುವರೆಗೆ 42 ಪ್ಯಾಸೆಂಜರ್ ರೈಲುಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

Power crisis: Rlys cancels around 42 trains across two zones to facilitate coal freight movement
Power crisis: ಕಲ್ಲಿದ್ದಲು ಸಾಗಿಸಲು ಅನುವಾಗುವಂತೆ 42 ಪ್ಯಾಸೆಂಜರ್​ಗಳು ರದ್ದು

ನವದೆಹಲಿ: ದೇಶದ ಹಲವೆಡೆ ಕಲ್ಲಿದ್ದಲು ಕೊರತೆ ಕಾಣಿಸಿಕೊಂಡಿದೆ. ಇತ್ತೀಚೆಗಷ್ಟೇ ಕಲ್ಲಿದ್ದಲು ಕೊರತೆಯಿಂದಾಗಿ ರಾಯಚೂರು ಬೃಹತ್ ಶಾಖೋತ್ಪನಾ ಘಟಕದ ನಾಲ್ಕು ವಿದ್ಯುತ್ ಘಟಕಗಳಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಲಾಗಿದೆ ಎಂದು ಹೇಳಲಾಗುತ್ತಿತ್ತು. ಆದರೆ ಸಚಿವರೊಬ್ಬರು ರಾಜ್ಯದಲ್ಲಿ ಕಲ್ಲಿದ್ದಲು ಕೊರತೆಯಿಲ್ಲ. ಎಲ್ಲಾ ಉಷ್ಣ ವಿದ್ಯುತ್ ಸ್ಥಾವರಗಳಿಗೆ ಸಮಯಕ್ಕೆ ಸರಿಯಾಗಿ ಕಲ್ಲಿದ್ದಲು ಪೂರೈಕೆ ಮಾಡುತ್ತಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದರು.

ಈಗ ಬೇರೆ ರಾಜ್ಯಗಳಲ್ಲಿಯೂ ಕೂಡಾ ಕಲ್ಲಿದ್ದಲು ಕೊರತೆ ಕಾಣಿಸಿಕೊಂಡಿದೆ. ಈ ಕೊರತೆಯನ್ನು ನೀಗಿಸುವ ಸಲುವಾಗಿ ಇದುವರೆಗೆ 42 ಪ್ಯಾಸೆಂಜರ್ ರೈಲುಗಳನ್ನು ಸ್ಥಗಿತಗೊಳಿಸಲಾಗಿದೆ. ಕಲ್ಲಿದ್ದಲು ಗಣಿಗಳಿಂದ ಕಲ್ಲಿದ್ದಲನ್ನು ಒಂದೆಡೆಯಿಂದ ಮತ್ತೊಂದೆಡೆ ಸಾಗಿಸಲು ಅನುಕೂಲಕರವಾಗಿರಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಂದರೆ ಕಲ್ಲಿದ್ದಲು ಸಾಗಿಸುವ ರೈಲುಗಳು ಸುಗಮವಾಗಿ ಸಂಚಾರ ಮಾಡಲು ಪ್ಯಾಸೆಂಜರ್ ರೈಲುಗಳನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದ ಕಲ್ಲಿದ್ದಲು ಉತ್ಪಾದಿಸುವ ರಾಜ್ಯಗಳಾದ ಛತ್ತೀಸ್‌ಗಢ, ಒಡಿಶಾ, ಮಧ್ಯಪ್ರದೇಶ ಮತ್ತು ಜಾರ್ಖಂಡ್‌ನ ಜನರಿಗೆ ತೊಂದರೆಯಾಗಿದೆ.

ಕಲ್ಲಿದ್ದಲು ಉತ್ಪಾದಿಸುವ ಪ್ರದೇಶಗಳನ್ನು ಒಳಗೊಂಡಿರುವ ಸೌತ್ ಈಸ್ಟ್ ಸೆಂಟ್ರಲ್ ರೈಲ್ವೆ (SECR) ವಿಭಾಗವು 34 ಪ್ಯಾಸೆಂಜರ್ ರೈಲುಗಳನ್ನು ರದ್ದುಗೊಳಿಸಿದೆ. ಉತ್ತರ ಭಾರತದ ಅನೇಕ ವಿದ್ಯುತ್ ಕೇಂದ್ರಗಳಿಗೆ ಕಲ್ಲಿದ್ದಲು ಸಾಗಿಸುವ ಉತ್ತರ ರೈಲ್ವೆ (NR) ಎಂಟು ಪ್ಯಾಸೆಂಜರ್​ ರೈಲುಗಳನ್ನು ರದ್ದುಗೊಳಿಸಿದೆ.

ಕೇಂದ್ರ ವಿದ್ಯುಚ್ಛಕ್ತಿ ಪ್ರಾಧಿಕಾರದ (ಸಿಇಎ) ದೈನಂದಿನ ಕಲ್ಲಿದ್ದಲು ದಾಸ್ತಾನು ವರದಿಯ ಪ್ರಕಾರ 165 ಉಷ್ಣ ವಿದ್ಯುತ್ ಸ್ಥಾವರಗಳ ಪೈಕಿ 56 ವಿದ್ಯುತ್ ಸ್ಥಾವರಗಳಲ್ಲಿ ಅಗತ್ಯಕ್ಕಿಂತ ಶೇ.10ರಷ್ಟು ಅಥವಾ ಅದಕ್ಕಿಂತ ಕಡಿಮೆ ಕಲ್ಲಿದ್ದಲು ಉಳಿದಿದೆ. 26 ವಿದ್ಯುತ್ ಸ್ಥಾವರಗಳಲ್ಲಿ ಶೇಕಡಾ 5ಕ್ಕಿಂತ ಕಡಿಮೆ ಸ್ಟಾಕ್ ಹೊಂದಿದೆ. ಭಾರತದ ಶೇಕಡಾ 70ರಷ್ಟು ವಿದ್ಯುತ್ ಬೇಡಿಕೆಯನ್ನು ಕಲ್ಲಿದ್ದಲಿನ ಮೂಲಕ ಪೂರೈಸಲಾಗುತ್ತದೆ.

ಮಾರ್ಚ್ 28ರಂದು ಸ್ಥಗಿತಗೊಳಿಸಲಾದ ಬಿಲಾಸ್‌ಪುರ್-ಭೋಪಾಲ್ ರೈಲು ಮೇ 3ರವರೆಗೆ ಸ್ಥಗಿತಗೊಳ್ಳಲಿದೆ. ಮಹಾರಾಷ್ಟ್ರದ ಗೊಂಡಿಯಾ ಮತ್ತು ಒಡಿಶಾದ ಜರ್ಸುಗುಡಾ ನಡುವಿನ ರೈಲು ಏಪ್ರಿಲ್ 24ರಿಂದ ಮೇ 23ರವರೆಗೆ ರದ್ದಾಗಿದೆ ಮತ್ತು ಛತ್ತೀಸ್‌ಗಢದ ರಾಯ್‌ಪುರ - ಡೊಂಗರ್‌ಗಢ್ ನಡುವಿನ ಮೆಮು ರೈಲು ಏಪ್ರಿಲ್ 11ರಿಂದ ರದ್ದಾಗಿದ್ದು, ಮೇ 24ರವರೆಗೆ ರದ್ದಾಗಿದೆ.

ಸೌತ್ ಈಸ್ಟ್ ಸೆಂಟ್ರಲ್ ರೈಲ್ವೆ 22 ಎಕ್ಸ್‌ಪ್ರೆಸ್ ರೈಲುಗಳು ಮತ್ತು 12 ಪ್ಯಾಸೆಂಜರ್ ರೈಲುಗಳನ್ನು ರದ್ದುಗೊಳಿಸಿದರೆ, ಉತ್ತರ ರೈಲ್ವೆ ನಾಲ್ಕು ಎಕ್ಸ್‌ಪ್ರೆಸ್ ರೈಲುಗಳನ್ನು ಮತ್ತು 4 ಪ್ಯಾಸೆಂಜರ್ ರೈಲುಗಳನ್ನು ರದ್ದುಗೊಳಿಸಿದೆ. ರೈಲ್ವೆಯು ಕಲ್ಲಿದ್ದಲು ರೇಕ್‌ಗಳ ಸರಾಸರಿ ದೈನಂದಿನ ಲೋಡ್ ಅನ್ನು ದಿನಕ್ಕೆ 400ಕ್ಕೂ ಅಧಿಕಗೊಳಿಸಿದೆ. ಇದು ಕಳೆದ ಐದು ವರ್ಷಗಳಲ್ಲಿ ಅತ್ಯಧಿಕವಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ಕಲ್ಲಿದ್ದಲು ಸುಂಕಕ್ಕಾಗಿ ದಿನಕ್ಕೆ 533 ರೇಕ್‌ಗಳನ್ನು ಹಾಕಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಗುರುವಾರ, 427 ರೇಕ್‌ಗಳಲ್ಲಿ 1.62 ಮಿಲಿಯನ್ ಟನ್ ಕಲ್ಲಿದ್ದಲನ್ನು ಲೋಡ್ ಮಾಡಲಾಗಿದೆ.

ಕೆಲವು ದಿನಗಳ ಹಿಂದೆ, ರೈಲು ಸೇವೆ ರದ್ದಾದ ಕಾರಣ ಸೌತ್ ಈಸ್ಟ್ ಸೆಂಟ್ರಲ್ ರೈಲ್ವೆ ವಿಭಾಗದಲ್ಲಿ ಬರುವ ಛತ್ತೀಸ್‌ಗಢದಲ್ಲಿ ಬೃಹತ್ ಪ್ರತಿಭಟನೆ ನಡೆದಿದೆ. ಮುಖ್ಯಮಂತ್ರಿ ಭೂಪೇಶ್ ಬಾಘೆಲ್ ಅವರು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರೊಂದಿಗೆ ಈ ಬಗ್ಗೆ ಚರ್ಚೆ ನಡೆಸಿದ್ದು, ಸ್ಥಗಿತಗೊಂಡಿದ್ದ ರೈಲುಗಳಲ್ಲಿ ಆರು ರೈಲುಗಳಿಗೆ ಚಾಲನೆ ನೀಡಲಾಗಿದೆ. ಛತ್ತೀಸ್​ಗಢ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಮೋಹನ್ ಮಾರ್ಕಮ್ ಅವರು ಸೌತ್ ಈಸ್ಟ್ ಸೆಂಟ್ರಲ್ ರೈಲ್ವೆಯ ರಾಯ್‌ಪುರ ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಚೇರಿಯ ಹೊರಗೆ ಪ್ರತಿಭಟನೆ ನಡೆಸಿದ್ದಾರೆ. ಹಟಿಯಾ-ಲೋಕಮಾನ್ಯ ತಿಲಕ್ ಟರ್ಮಿನಸ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್‌ನಂತಹ ರೈಲುಗಳನ್ನು ರದ್ದುಗೊಳಿಸಿರುವುದು ಮುಂಬೈಗೆ ತೆರಳುವ ಕ್ಯಾನ್ಸರ್ ರೋಗಿಗಳಿಗೆ ಅನಾನುಕೂಲವಾಗುವಂತೆ ಮಾಡಿದೆ.

ರೈಲ್ವೆ ಸೇವೆಗಳ ಅಮಾನತು ಅಥವಾ ರದ್ದತಿ ಬಗ್ಗೆ ರೈಲ್ವೆ ಸಚಿವಾಲಯದಿಂದ ಇದುವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ. ಎಸ್‌ಸಿಇಆರ್ ಮತ್ತು ಎನ್‌ಆರ್ ರೈಲ್ವೆ ವಲಯಗಳಲ್ಲಿ ಒಟ್ಟು 753 ಟ್ರಿಪ್‌ಗಳನ್ನು ರದ್ದುಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಇದರಲ್ಲಿ 363 ಎಕ್ಸ್‌ಪ್ರೆಸ್ ರೈಲುಗಳು ಮತ್ತು 390 ಪ್ಯಾಸೆಂಜರ್ ರೈಲುಗಳ ಟ್ರಿಪ್​ಗಳನ್ನು ರದ್ದುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರು ವಾರೆನ್ ಬಫೆಟ್ ಮಂತ್ರ ಪಾಲಿಸಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.