ETV Bharat / bharat

ಇಬ್ಬರು ಮಕ್ಕಳ ಸಮೇತ ಸಂರಕ್ಷಿತ ಬುಡಕಟ್ಟು ಜನಾಂಗದ ದಂಪತಿ ಆತ್ಮಹತ್ಯೆ

author img

By

Published : Apr 2, 2023, 8:34 PM IST

Updated : Apr 3, 2023, 12:11 AM IST

pahadi-korwa-tribal-couple-and-two-children-die-by-suicide-in-chhattisgarh
ಇಬ್ಬರು ಮಕ್ಕಳ ಸಮೇತ ಸಂರಕ್ಷಿತ ಬುಡಕಟ್ಟು ಜನಾಂಗದ ದಂಪತಿ ಆತ್ಮಹತ್ಯೆ

ಛತ್ತೀಸ್​ಗಢದ ಸಂರಕ್ಷಿತ ಬುಡಕಟ್ಟು ಜನಾಂಗದ ದಂಪತಿ ತಮ್ಮ ಇಬ್ಬರು ಮಕ್ಕಳ ಸಮೇತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಜಶ್‌ಪುರ (ಛತ್ತೀಸ್‌ಗಢ): ಬುಡಕಟ್ಟು ಸಮುದಾಯದ ದಂಪತಿ ತಮ್ಮ ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಛತ್ತೀಸ್‌ಗಢದ ಜಶ್‌ಪುರ ಜಿಲ್ಲೆಯಲ್ಲಿ ನಡೆದಿದೆ. ಈ ದಂಪತಿ ಮೊದಲು ತಮ್ಮ ಮಕ್ಕಳನ್ನು ಕೊಂದು ನಂತರ ಅವರೂ ಕೂಡ ಸಾವಿಗೆ ಶರಣಾಗಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.

ಇಲ್ಲಿನ ಬಗೀಚಾ ಪೊಲೀಸ್ ಠಾಣೆ ವ್ಯಾಪ್ತಿಯ ಸಂಹರ್ ಬಹಾರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮರದ ಕೆಳಗೆ ನಾಲ್ವರ ಮೃತದೇಹಗಳು ಪತ್ತೆಯಾಗಿವೆ. ಇದನ್ನು ಗಮನಿಸಿದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಆದರೆ, ದಂಪತಿಯ ಆತ್ಮಹತ್ಯೆಗೆ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ದಂಪತಿ ಮತ್ತವರ ಇಬ್ಬರು ಮಕ್ಕಳು ಜುಮ್ರಾದು ಮಾರ್‌ ಬಸ್ತಿಯಲ್ಲಿ ವಾಸಿಸುತ್ತಿದ್ದರು. ಇತ್ತೀಚೆಗೆ ಪಕ್ಕದ ಅರಣ್ಯ ಪ್ರದೇಶದಲ್ಲಿ ಮಹುವಾ ಹೂವು ಸಂಗ್ರಹಿಸುವ ವಿಚಾರವಾಗಿ ನೆರೆಯವರೊಂದಿಗೆ ದಂಪತಿ ಜಗಳವಾಡಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ಇದರ ಆಧಾರದ ಮೇಲೆ ತನಿಖೆ ನಡೆಸಲಾಗುತ್ತಿದೆ. ಸದ್ಯ ಅಕ್ಕ-ಪಕ್ಕದ ಜನರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅಲ್ಲದೇ, ಜಿಲ್ಲಾಧಿಕಾರಿ ರವಿ ಮಿತ್ತಲ್​ ಕೂಡ ಗ್ರಾಮಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ.

ಸಂರಕ್ಷಿತ ಬುಡಕಟ್ಟು ಜನಾಂಗ: ಛತ್ತೀಸ್​ಗಢದಲ್ಲಿರುವ 42 ಬುಡಕಟ್ಟುಗಳಲ್ಲಿ ಒಂದಾದ ಪಹಾಡಿ ಕೊರ್ವಾ ಸಮುದಾಯಕ್ಕೆ ಮೃತ ದಂಪತಿ ಸೇರಿದ್ದಾರೆ. ಈ ಸುಮುದಾಯವು ರಾಷ್ಟ್ರಪತಿಗಳ ದತ್ತುಪುತ್ರರು ಎಂದು ಕರೆಯಲ್ಪಡುವ ಸಂರಕ್ಷಿತ ಬುಡಕಟ್ಟು ಜನಾಂಗವಾಗಿದೆ. ಒಟ್ಟು 42 ಬುಡಕಟ್ಟುಗಳಲ್ಲಿ ಏಳು ಜನಾಂಗಗಳನ್ನು ಸಂರಕ್ಷಿಸಲಾಗಿದೆ. ಇವರನ್ನು ವಿಶೇಷ ಹಿಂದುಳಿದ ಬುಡಕಟ್ಟು ಜನಾಂಗ ಎಂದು ಘೋಷಿಸಲಾಗಿದೆ.

ಇತ್ತೀಚೆಗೆ ಈ ಬುಡಕಟ್ಟು ಜನಸಂಖ್ಯೆಯು ಕ್ಷೀಣಿಸುತ್ತಿದೆ. ರಾಜ್ಯದ ಉತ್ತರ ಮತ್ತು ಈಶಾನ್ಯ ಭಾಗಗಳಲ್ಲಿ ಅಂದರೆ ಸುರ್ಗುಜಾ, ಬರಂಪುರ ಮತ್ತು ಜಶ್ಪುರ್ ಪ್ರದೇಶಗಳಲ್ಲಿ ದಟ್ಟವಾದ ಕಾಡುಗಳಲ್ಲಿ ಪಹಾಡಿ ಕೊರ್ವಾ ಜನಾಂಗದವರು ವಾಸಿಸುತ್ತಿದ್ದಾರೆ. ಈ ಬುಡಕಟ್ಟು ಜನಾಂಗದವರು ತಮ್ಮ ಜೀವನಕ್ಕೆ ಸಂಪೂರ್ಣವಾಗಿ ಅರಣ್ಯವನ್ನೇ ಅವಲಂಬಿಸಿದ್ದಾರೆ. ಇವರ ಕುಟುಂಬಗಳಲ್ಲಿ ಯಾರಾದರೂ ಸತ್ತರೆ, ಉಳಿದ ಸದಸ್ಯರು ಆ ಮನೆಯನ್ನು ತೊರೆದು ಬೇರೆಡೆ ವಾಸಿಸಲು ಪ್ರಾರಂಭಿಸುವ ಸಂಪ್ರದಾಯವನ್ನು ಹೊಂದಿದ್ದಾರೆ. ಅಲ್ಲದೇ, ಇಂದಿಗೂ ಮಣ್ಣಿನ ಪಾತ್ರೆಗಳಲ್ಲಿ ಅಡುಗೆ ಮಾಡಿ ಸೇವಿಸುತ್ತಾರೆ. ಕಾಡುಗಳಿಂದ ಸಂಗ್ರಹಿಸಿದ ಹಣ್ಣುಗಳು ಮತ್ತು ಗಡ್ಡೆಗಳನ್ನು ಹೆಚ್ಚಾಗಿ ಸೇವಿಸಿ ಬದುಕುತ್ತಾರೆ.

ಇದನ್ನೂ ಓದಿ: ಮೂವರು ಮಕ್ಕಳೊಂದಿಗೆ ಆತ್ಮಹತ್ಯೆಗೆ ಶರಣಾದ ತಾಯಿ

ಜಾರ್ಖಂಡ್​ನಲ್ಲಿ ಮಕ್ಕಳ ಸಮೇತ ತಾಯಿ ಆತ್ಮಹತ್ಯೆ: ಇತ್ತೀಚೆಗೆ ಜಾರ್ಖಂಡ್​ನ ಪಲಾಮು ಜಿಲ್ಲೆಯಲ್ಲಿ ಮಹಿಳೆಯೊಬ್ಬರು ತನ್ನ ಮೂವರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿತ್ತು. ಮೃತ ಮಹಿಳೆಯನ್ನು ಮನಿತಾ ದೇವಿ ಮತ್ತು ಮಕ್ಕಳು 3 ರಿಂದ 7 ವರ್ಷದೊಳಗಿನವರು ಎಂದು ಗುರುತಿಸಲಾಗಿತ್ತು.

ಕೆಲ ವರ್ಷಗಳ ಹಿಂದೆ ಮೃತ ಮನಿತಾ ದೇವಿ ಹರಿಹರಗಂಜ್​ನ ರವಿ ಸಿಂಗ್ ಎಂಬುವವರನ್ನು ವಿವಾಹವಾಗಿದ್ದರು. ಆದರೆ, ಮನಿತಾ 20 ದಿನಗಳ ಹಿಂದೆ ಮನೆ ಬಿಟ್ಟು ಹೋಗಿದ್ದರು. ಮಾರ್ಚ್​ 29ರಂದು ಮಕ್ಕಳೊಂದಿಗೆ ಆತ್ಮಹತ್ಯೆಗೆ ಮಾಡಿಕೊಂಡು ಶವವಾಗಿ ಪತ್ತೆಯಾಗಿದ್ದರು. ಘಟನಾ ಸ್ಥಳದಿಂದ ಪೊಲೀಸರು ಮೊಬೈಲ್ ಫೋನ್​ ವಶಪಡಿಸಿಕೊಂಡು, ತನಿಖೆ ಕೈಗೊಂಡಿದ್ದರು.

ಇದನ್ನೂ ಓದಿ: ಮಂಗಳೂರಿನ ಲಾಡ್ಜ್‌ನಲ್ಲಿ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ!

Last Updated :Apr 3, 2023, 12:11 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.