ETV Bharat / bharat

ಪೊಲೀಸ್​ ಮಾಹಿತಿದಾರರೆಂಬ ಶಂಕೆ: ಮೂವರು ವ್ಯಾಪಾರಿಗಳಿಗೆ ನಕ್ಸಲರಿಂದ ಥಳಿತ, ಓರ್ವ ಸಾವು

author img

By

Published : Apr 9, 2023, 5:24 PM IST

naxalites-beat-businessman-to-death-in-sukma
ಪೊಲೀಸ್​ ಮಾಹಿತಿದಾರರು ಎಂಬ ಶಂಕೆ: ಮೂವರು ವ್ಯಾಪಾರಿಗಳ ಮೇಲೆ ಥಳಿಸಿದ ನಕ್ಸಲರು

ಪೊಲೀಸ್​ ಮಾಹಿತಿದಾರರು ಎಂದು ಶಂಕಿಸಿ ಮೂವರು ವ್ಯಾಪಾರಿಗಳಿಗೆ ನಕ್ಸಲರು ಥಳಿಸಿದ್ದು, ಓರ್ವ ವ್ಯಾಪಾರಿ ಮೃತಪಟ್ಟಿರುವ ಘಟನೆ ಛತ್ತೀಸ್​ಗಢದಲ್ಲಿ ನಡೆದಿದೆ.

ಸುಕ್ಮಾ (ಛತ್ತೀಸ್​ಗಢ): ಛತ್ತೀಸ್​ಗಢದ ನಕ್ಸಲ್‌ಪೀಡಿತ ಬಸ್ತಾರ್ ವಿಭಾಗದ ಸುಕ್ಮಾ ಜಿಲ್ಲೆಯಲ್ಲಿ ನಕ್ಸಲರು ಮತ್ತೆ ನೆತ್ತರು ಹರಿಸಿದ್ದಾರೆ. ಪೊಲೀಸ್​ ಮಾಹಿತಿದಾರರು ಎಂಬ ಶಂಕೆಯ ಮೇಲೆ ಮೂವರು ವ್ಯಾಪಾರಿಗಳಿಗೆ ದೊಣ್ಣೆಗಳಿಂದ ಥಳಿಸಿದ್ದಾರೆ. ಪರಿಣಾಮ ಓರ್ವ ವ್ಯಾಪಾರಿ ಸಾವಿಗೀಡಾದರೆ, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪಾಲಮಡ್ಗು ಪ್ರದೇಶದಲ್ಲಿ ಶನಿವಾರ ರಾತ್ರಿ ಘಟನೆ ನಡೆದಿದೆ.

ಇದನ್ನೂ ಓದಿ: ಅರಣ್ಯದಲ್ಲಿ ಇಬ್ಬರು ನಕ್ಸಲ್​ ನಾಯಕರ ಸೆರೆ: ಟಿಫಿನ್ ಬಾಂಬ್ ಸೇರಿ ಸ್ಫೋಟಕಗಳ ಜಪ್ತಿ

ನಕ್ಸಲರ ದಾಳಿಯಲ್ಲಿ ದೋರ್ನಪಾಲ್‌ ಗ್ರಾಮದ ಪ್ರದೀಪ್ ಬಘೇಲ್ ಮೃತಪಟ್ಟಿದ್ದಾರೆ. ಪ್ರಧಾನ್ ಸುನಾನಿ, ಗೋಪಾಲ್ ಬಾಘೇಲ್ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಮೂವರು ಶುಕ್ರವಾರ ದಿನಸಿ ಮತ್ತು ಇತರ ಸಾಮಗ್ರಿಗಳೊಂದಿಗೆ ವ್ಯಾಪಾರ ಮಾಡಲು ಬೈಕ್​ಗಳಲ್ಲಿ ಪಾಲಮಡ್ಗು ಪ್ರದೇಶಕ್ಕೆ ಬಂದಿದ್ದರು. ಪಾಲಮಡ್ಗುವಿನ ಕೊನೆಯ ಗ್ರಾಮವಾದ ಕುಮಾರಪರದಲ್ಲಿ ಗ್ರಾಮಸ್ಥರ ವೇಷದಲ್ಲಿದ್ದ ನಲ್ಸಕರು ವ್ಯಾಪಾರಿಗಳನ್ನು ಅಡ್ಡಗಟ್ಟಿದ್ದಾರೆ.

ಇವರನ್ನು ಪೊಲೀಸ್​ ಮಾಹಿತಿದಾರರು ಎಂದು ಶಂಕಿಸಿ ಸಾಮಗ್ರಿಗಳನ್ನು ಕಸಿದುಕೊಂಡು ದೊಣ್ಣೆಯಿಂದ ದಾಳಿ ಮಾಡಿದ್ದಾರೆ. ಬೈಕ್​ಗಳಿಗೆ ಬೆಂಕಿ ಹಚ್ಚಿದ್ದಾರೆ. ದಾಳಿಯಿಂದ ಗಂಭೀರವಾಗಿ ಗಾಯಗೊಂಡ ಮೂವರು ಸಹ ಕಾಲ್ನಡಿಗೆಯಲ್ಲಿ ಆಸ್ಪತ್ರೆ ಸೇರಲು ಯತ್ನಿಸಿದ್ದಾರೆ. ಅಷ್ಟರಲ್ಲಿ ಪಿಕಪ್ ವಾಹನ ಬಂದಿದ್ದು, ಅದನ್ನು ಹತ್ತಿ ಆಸ್ಪತ್ರೆಗೆ ಹೋಗಿದ್ದಾರೆ. ಆದರೆ, ಚಿಂತಾಜನಕ ಸ್ಥಿತಿಯಲ್ಲಿದ್ದ ಪ್ರದೀಪ್ ಬಘೇಲ್ ಸಾವನ್ನಪ್ಪಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಇಂದು ಬೆಳಗ್ಗೆ ಎನ್‌ಕೌಂಟರ್: ಘಟನೆಯಲ್ಲಿ ಗಾಯಗೊಂಡ ಪ್ರಧಾನ್ ಸುನಾನಿ, ಗೋಪಾಲ್ ಬಾಘೇಲ್ ದೋರ್ನಪಾಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಷಯ ತಿಳಿದು ಪೊಲೀಸರು ಆಸ್ಪತ್ರೆಗೆ ಭೇಟಿ ಮಾಹಿತಿ ಕಲೆ ಹಾಕಿದ್ದಾರೆ. ಇಂದು ಬೆಳಗ್ಗೆ ಘಟನಾ ಸ್ಥಳಕ್ಕೆ ಭದ್ರತಾ ಸಿಬ್ಬಂದಿ ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಭದ್ರತಾ ಪಡೆಗಳು ಮತ್ತು ನಕ್ಸಲರ ನಡುವೆ ಎನ್‌ಕೌಂಟರ್ ನಡೆದಿದೆ. ಮೂರ್ನಾಲ್ಕು ನಕ್ಸಲರು ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ಸ್ಥಳ ಶೋಧಿಸಿದಾಗ ಕಳೆದ ರಾತ್ರಿ ವ್ಯಾಪಾರಿಗಳಿಂದ ಲೂಟಿ ಮಾಡಿದ ಸರಕುಗಳು ಮತ್ತು ಸುಟ್ಟು ಹೋದ ಮೋಟರ್‌ ಸೈಕಲ್‌ಗಳು ಹಾಗೂ ನಕ್ಸಲರಿಗೆ ಸೇರಿದ ಕೆಲ ವಸ್ತುಗಳು ಪತ್ತೆಯಾಗಿದ್ದು, ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

2 ದಿನದ ಹಿಂದೆ ಇಬ್ಬರು ನಕ್ಸಲರು ಸೆರೆ: ಇದೇ ಬಸ್ತಾರ್ ವಿಭಾಗದಲ್ಲಿ ಶುಕ್ರವಾರವಷ್ಟೇ ತಲಾ ಒಂದು ಲಕ್ಷ ರೂಪಾಯಿ ಬಹುಮಾನ ಹೊತ್ತಿದ್ದ ಇಬ್ಬರು ಉನ್ನತ ನಕ್ಸಲ್​​ ನಾಯಕರಾದ ಮುಚಾಕಿ ಸುಖರಾಮ್ ಮತ್ತು ಮದ್ವಿ ಕೋಸಾ ಎಂಬುವವರನ್ನು ಪೊಲೀಸರು ಬಂಧಿಸಿದ್ದರು. ಸುಕ್ಮಾ ಮತ್ತು ದಾಂತೇವಾಡ ಜಿಲ್ಲೆಯ ಕುನ್ನಾ ಗಡಿ ಗ್ರಾಮಗಳಾದ ಕಣ್ವಡ್‌ಪಾರಾ ಮತ್ತು ಪೆಡಪಾರಾ ಪ್ರದೇಶದ ಕುಕನಾರ್ ಅರಣ್ಯದಲ್ಲಿ ಸ್ಫೋಟಕ ವಸ್ತುಗಳನ್ನು ತಯಾರಿಸುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಇದರ ಮೇರೆಗೆ ಆ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಿದಾಗ ಇಬ್ಬರು ಕೂಡ ಸೆರೆ ಸಿಕ್ಕಿದ್ದರು. ಬಂಧಿತರಿಂದ ಹಲವು ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಸುಮಾರು 8-10 ಕೆಜಿಯ ತೂಕದ ಸುಧಾರಿತ ಸ್ಫೋಟಕ ಸಾಧನ ಹೊಂದಿದ್ದ ಟಿಫಿನ್ ಬಾಂಬ್, 12 ಎಲೆಕ್ಟ್ರಿಕ್ ಡಿಟೋನೇಟರ್, ಒಂದು ಎಲೆಕ್ಟ್ರಿಕ್ ಮಲ್ಟಿಮೀಟರ್, ಸುಮಾರು 60 ಕೆಜಿ ಅಮೋನಿಯಂ ನೈಟ್ರೇಟ್ ಸೇರಿ ಹಲವು ಸ್ಫೋಟಕ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.