ETV Bharat / bharat

ದೇಶ ಸೇವೆ ಸಲ್ಲಿಸಿದ ಅಗ್ನಿವೀರರಿಗೆ ಆದ್ಯತೆ ಮೇರೆಗೆ ನೆರವು ನೀಡಿ: ರಾಜನಾಥ್​ ಸಿಂಗ್​ ಕರೆ

author img

By

Published : Jan 4, 2023, 12:27 PM IST

minister-rajnath-singh-on-agniveers
ರಾಜನಾಥ್​ ಸಿಂಗ್

ಅಗ್ನಿಪಥ್​ ಯೋಜನೆಯಡಿ ನೇಮಕವಾದ ಆಗ್ನಿವೀರರ ಸೇವಾ ನಂತರ ಅವರಿಗೆ ಎಲ್ಲ ರಾಜ್ಯ ಸರ್ಕಾರಗಳು ಮತ್ತು ಸಂಘ ಸಂಸ್ಥೆಗಳು ಆದ್ಯತೆಯ ಮೇರೆಗೆ ಅವಕಾಶ ನೀಡಬೇಕು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್​ ಕರೆ ನೀಡಿದರು.

ನವದೆಹಲಿ: ದೇಶ ಸೇವೆ ಮಾಡಿ ನಾಲ್ಕು ವರ್ಷಗಳ ನಂತರ ನಿವೃತ್ತರಾಗುವ ಅಗ್ನಿವೀರರಿಗೆ ಆಯಾ ರಾಜ್ಯ ಸರ್ಕಾರಗಳು ಮತ್ತು ಖಾಸಗಿ ಸಂಸ್ಥೆಗಳು ನೆರವಾಗಬೇಕು. ಹುದ್ದೆಗಳ ನೇಮಕಾತಿ ವೇಳೆ ವೀರಯೋಧರಿಗೆ ಆದ್ಯತೆ ನೀಡಬೇಕು ಎಂದು ಕೇಂದ್ರ ಸರ್ಕಾರ ಕೋರಿದೆ.

ಈ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್​, ದೇಶ ಸೇವೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಡುವ 'ಅಗ್ನಿವೀರ'ರಿಗೆ ಅವಕಾಶಗಳನ್ನು ಒದಗಿಸುವುದು ವ್ಯವಸ್ಥೆಯ ಜವಾಬ್ದಾರಿಯಾಗಿದೆ. ಅಗ್ನಿಪಥ್ ಯೋಜನೆ ಸಶಸ್ತ್ರ ಪಡೆಗಳ ಸೇನಾಬಲವನ್ನು ಯುವ, ಹೈಟೆಕ್ ಮತ್ತು ಅಲ್ಟ್ರಾ ಆಧುನೀಕರಣಗೊಳಿಸಲಿದೆ ಎಂದು ಹೇಳಿದರು.

ಅಗ್ನಿವೀರರು 4 ವರ್ಷಗಳಿಗೆ ಸೀಮಿತವಾಗಿ ದೇಶ ಸೇವೆ ಮಾಡಿದ ನಂತರ ನಿರುದ್ಯೋಗಿಗಳಾಗುವ ಬಗ್ಗೆ ಮಾತನಾಡಿದ ಅವರು, ಯುವ ಸೈನಿಕರು ತಾಯ್ನಾಡಿನ ಸೇವೆಯ ಬಳಿಕ ಅವರ ಕೌಶಲ್ಯ ಮತ್ತು ಶಿಕ್ಷಣವನ್ನು ಮುಂದುವರಿಸಲು ವಿವಿಧ ಇಲಾಖೆಗಳು ಒಪ್ಪಂದ ಮಾಡಿಕೊಂಡಿವೆ. ಅದರಂತೆ ಅವರಲ್ಲಿರುವ ಕೌಶಲ್ಯಕ್ಕೆ ಅನುಗುಣವಾಗಿ ಸೇವೆ ಆರಂಭಿಸಲಿದ್ದಾರೆ. ಈ ವ್ಯವಸ್ಥೆಯ ಭಾಗವಾಗಿ ರಾಜ್ಯ ಸರ್ಕಾರಗಳು ಮತ್ತು ಸಂಘ ಸಂಸ್ಥೆಗಳು ಅವರ ನೆರವಿಗೆ ನಿಲ್ಲಬೇಕು ಎಂದು ಕೋರಿದರು.

ಇದೇ ವೇಳೆ, ವಿವಿಧ ಹುದ್ದೆಗಳಲ್ಲಿ ಅಗ್ನಿವೀರರಿಗೆ ಬೆಂಬಲ ನೀಡುತ್ತಿರುವ ರಕ್ಷಣಾ ಸಚಿವಾಲಯ, ಗೃಹ ಸಚಿವಾಲಯ, ರೈಲ್ವೆ ಸಚಿವಾಲಯ, ರಾಜ್ಯ ಸರ್ಕಾರಗಳು ಮತ್ತು ಖಾಸಗಿ ವಲಯವನ್ನು ಶ್ಲಾಘಿಸಿದ ರಕ್ಷಣಾ ಸಚಿವರು, ಉಳಿದ ಸಚಿವಾಲಯಗಳು, ರಾಜ್ಯ ಸರ್ಕಾರಗಳು ಮತ್ತು ಕಾರ್ಪೊರೇಟ್ ವಲಯಗಳು ಮುಂದೆ ಬರುವಂತೆ ಕರೆ ನೀಡಿದರು.

ಒಪ್ಪಂದಗಳಿಗೆ ಇಲಾಖೆಗಳು ಸಹಿ: ರಕ್ಷಣಾ ಸಚಿವಾಲಯ, ಶಿಕ್ಷಣ ಸಚಿವಾಲಯ, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯಗಳು ಸಶಸ್ತ್ರ ಸೇವೆಯಲ್ಲಿ ಸೇವೆ ಸಲ್ಲಿಸುತ್ತಿರುವಾಗ ಅಗ್ನಿವೀರರ ಶಿಕ್ಷಣವನ್ನು ಮುಂದುವರೆಸಲು ಅನುಕೂಲವಾಗುವಂತೆ ವಿವಿಧ ಪಾಲುದಾರರೊಂದಿಗೆ ಒಪ್ಪಂದಗಳಿಗೆ ಸಹಿ ಹಾಕಿದವು. ಅಗ್ನಿವೀರರ ಅನುಭವ ಮತ್ತು ಕೌಶಲ್ಯಕ್ಕೆ ಅನುಗುಣವಾಗಿ ಪ್ರಮಾಣಪತ್ರಗಳ ಪ್ರಶಸ್ತಿಯನ್ನು ನೀಡಲೂ ಉದ್ದೇಶಿಸಲಾಗಿದೆ ಎಂದು ರಕ್ಷಣಾ ಸಚಿವರು ಇದೇ ವೇಳೆ ಮಾಹಿತಿ ನೀಡಿದರು.

ಒಪ್ಪಂದದಂತೆ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲ್ ಮತ್ತು ಇಂದಿರಾಗಾಂಧಿ ನ್ಯಾಷನಲ್ ಓಪನ್ ಯೂನಿವರ್ಸಿಟಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಇದರಡಿ ಅಗ್ನಿವೀರರಿಗೆ 12 ನೇ ತರಗತಿ ಮತ್ತು ಪದವಿ ಶಿಕ್ಷಣದ ಪ್ರಮಾಣಪತ್ರ ನೀಡಲಾಗುತ್ತದೆ ಎಂದು ರಾಜನಾಥ್​ ಸಿಂಗ್​ ಸ್ಪಷ್ಟಪಡಿಸಿದರು.

ಏನಿದು ಅಗ್ನಿಪಥ್​ ಯೋಜನೆ?: ದೇಶದ ಸಶಸ್ತ್ರ ಪಡೆಗಳಿಗೆ ಯುವಕರ ನೇಮಕಾತಿಗಾಗಿ ಕಳೆದ ವರ್ಷದ ಜೂನ್​ನಲ್ಲಿ ಅಗ್ನಿಪಥ್​ ಯೋಜನೆ ಘೋಷಿಸಲಾಗಿದೆ. ಅದರಂತೆ 4 ವರ್ಷಗಳ ಅವಧಿಗೆ ಯುವಕರು ಮೂರೂ ಪಡೆಗಳಲ್ಲಿ ಸೇವೆ ಸಲ್ಲಿಸಲಿದ್ದಾರೆ. ಸರ್ಕಾರ ಇದಕ್ಕೆ ಉತ್ತಮ ಪ್ಯಾಕೇಜ್ ಘೋಷಣೆ ಮಾಡಿತ್ತು. ಪ್ರತಿಯೊಬ್ಬ ಅಗ್ನಿವೀರರು ಸುಮಾರು 11.71 ಲಕ್ಷ ಆರ್ಥಿಕ ಪ್ಯಾಕೇಜ್ ಪಡೆಯಲಿದ್ದಾರೆ.

ಆದರೆ, ಯೋಜನೆಯಡಿ ಆಯ್ಕೆಯಾದ ಯುವ ಸೈನಿಕರು ನಿವೃತ್ತರಾದ ಬಳಿಕ ಅವರನ್ನು ನಿರುದ್ಯೋಗ ಕಾಡಲಿದೆ. ಶಿಕ್ಷಣದಿಂದಲೂ ಅವರು ವಂಚಿತರಾಗಲಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಇದು ದೇಶಾದ್ಯಂತ ದಳ್ಳುರಿಯನ್ನೇ ಸೃಷ್ಟಿಸಿತು. ಇದರ ವಿರುದ್ಧ ತೀವ್ರ ಪ್ರತಿಭಟನೆ ಕೂಡಾ ನಡೆದಿತ್ತು.

ಅಗ್ನಿವೀರರಾಗಲು ಅರ್ಹತೆಗಳೇನು?: ಅಗ್ನಿಪಥ್ ಯೋಜನೆ ಪ್ರಕಾರ ಸೇನೆಯ ಮೂರು ವಿಭಾಗಗಳಲ್ಲಿ ಯುವಕ - ಯುವತಿಯರು ತರಬೇತಿಯೂ ಸೇರಿದಂತೆ ನಾಲ್ಕು ವರ್ಷದ ಮಟ್ಟಿಗೆ ‘ಅಗ್ನಿವೀರ್’ ಯೋಧರಾಗಿ ಕೆಲಸ ಮಾಡಲಿದ್ದಾರೆ. ನಾಲ್ಕು ವರ್ಷದಲ್ಲಿ ಮೊದಲು 6 ತಿಂಗಳು ತರಬೇತಿ ಇರಲಿದೆ. 10 ನೇ ತರಗತಿ ಹಾಗೂ ಪಿಯುಸಿ ಪಾಸಾದವರು ಅಗ್ನಿವೀರರಾಗಲು ಅರ್ಹರು. ಇದಕ್ಕೆ ದೇಶಾದ್ಯಂತ ಮೆರಿಟ್ ಅಧಾರದ ಒಂದೇ ಸಾಮಾನ್ಯ ಪ್ರವೇಶ ಪರೀಕ್ಷೆ ಇರಲಿದೆ. 17.5 ವರ್ಷ ಮೇಲ್ಪಟ್ಟ 24 ವರ್ಷ ವಯಸ್ಸಿನ ಒಳಗಿನ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢವಾಗಿರುವ ಯುವಕ ಯುವತಿಯರು ಅಗ್ನಿವೀರರಾಗಲು ಅರ್ಜಿ ಸಲ್ಲಿಸಬಹುದು.

ಓದಿ: ಅಗ್ನಿವೀರ್ ನೇಮಕಾತಿ ರ್‍ಯಾಲಿಗಾಗಿ ನೋಂದಣಿ ಆರಂಭ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.