ETV Bharat / bharat

ಮಾಂಡೌಸ್ ಚಂಡಮಾರುತ: ತಮಿಳುನಾಡಿನಲ್ಲಿ ಭಾರಿ ಮಳೆ ಸಾಧ್ಯತೆ.. ಎನ್‌ಡಿಆರ್‌ಎಫ್ ಸನ್ನದ್ಧ

author img

By

Published : Dec 7, 2022, 7:21 PM IST

mandous-cyclone-will-cross-between-tn-ap-precautions-in-tn
ಮಾಂಡೌಸ್ ಚಂಡಮಾರುತ: ತಮಿಳುನಾಡಿನಲ್ಲಿ ಭಾರಿ ಮಳೆ ಸಾಧ್ಯತೆ.. ಎನ್‌ಡಿಆರ್‌ಎಫ್ ಸನ್ನದ್ಧ

ಮಾಂಡೌಸ್ ಚಂಡಮಾರುತವು ತಮಿಳುನಾಡಿಗೆ ಅಪ್ಪಳಿಸಲಿದ್ದು, ಮುಂದಿನ ಎರಡು ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಆದ್ದರಿಂದ ಅಧಿಕಾರಿಗಳು ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸಿದ್ಧತೆ ನಡೆಸಿದ್ದಾರೆ.

ಚೆನ್ನೈ (ತಮಿಳುನಾಡು): ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದ್ದು, ಇದು ಮಾಂಡೌಸ್ ಚಂಡಮಾರುತವಾಗಿ ಬದಲಾಗಲಿದೆ. ಇದರಿಂದ ತಮಿಳುನಾಡಿನ ಹಲವೆಡೆ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಬಂಗಾಳ ಕೊಲ್ಲಿಯಲ್ಲಿ ರೂಪುಗೊಂಡಿದ್ದ ಕಡಿಮೆ ಒತ್ತಡದ ಪ್ರದೇಶವು ವಾಯುಭಾರ ಕುಸಿತವಾಗಿ ಬಲಗೊಂಡಿದೆ. ಇದು 12 ಕಿಮೀ ವೇಗದಲ್ಲಿ ಚೆನ್ನೈನಿಂದ 830 ಕಿಮೀ ದೂರದಲ್ಲಿ ಪಶ್ಚಿಮ ಮತ್ತು ವಾಯುವ್ಯ ದಿಕ್ಕಿನಲ್ಲಿ ಚಲಿಸುತ್ತಿದೆ. ಡಿಸೆಂಬರ್ 9 ಮತ್ತು 10ರಂದು ಈಶಾನ್ಯ ಪುದುಚೇರಿ ಮತ್ತು ದಕ್ಷಿಣ ಆಂಧ್ರದ ಕರಾವಳಿ ಪ್ರದೇಶದ ಉದ್ದಕ್ಕೂ ಚಲಿಸುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಈ ಚಂಡಮಾರುತದಿಂದಾಗಿ ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್‌ನ ಕೆಲವು ಸ್ಥಳಗಳಲ್ಲಿ ಗುಡುಗು ಮತ್ತು ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಡಿ.9ರಂದು ಚೆನ್ನೈ, ಕಲ್ಲಕುರಿಚಿ, ಅರಿಯಲೂರ್, ಕಡಲೂರು, ವಿಲ್ಲುಪುರಂ, ಚೆಂಗಲ್ಪಟ್ಟು, ಕಾಂಚೀಪುರಂ, ತಿರುವಳ್ಳೂರು, ಪೆರಂಬಲೂರು, ಮೈಲಾಡುತುರೈ, ತಂಜೂರು, ತಿರುವರೂರು, ನಾಗಪಟ್ಟಣಂ ಜಿಲ್ಲೆಗಳು ಮತ್ತು ಕಾರೈಕಲ್​ನ ಕೆಲ ಪ್ರದೇಶಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಡಿ.10ರಂದು ತಮಿಳುನಾಡಿನ ತಿರುವಳ್ಳೂರು, ಚೆನ್ನೈ, ಕಾಂಚೀಪುರಂ, ಚೆಂಗಲ್ಪಟ್ಟು, ರಾಣಿಪೇಟ್, ವೆಲ್ಲೂರು, ತಿರುಪತ್ತೂರ್ ಮತ್ತು ತಿರುವಣ್ಣಾಮಲೈ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಕೃಷ್ಣಗಿರಿ, ಧರ್ಮಪುರಿ, ಈರೋಡ್, ಸೇಲಂ, ನಾಮಕ್ಕಲ್, ಕಲ್ಲಕುರಿಚಿ ಮತ್ತು ವಿಲ್ಲುಪುರಂ ಜಿಲ್ಲೆಗಳಲ್ಲೂ ಮಳೆ ಸುರಿಯಲಿದೆ.

ಆಂಧ್ರಪ್ರದೇಶದ ದಕ್ಷಿಣ ಕರಾವಳಿ ಜಿಲ್ಲೆಗಳಾದ ನೆಲ್ಲೂರು, ಪ್ರಕಾಶಂ, ಚಿತ್ತೂರು ಮತ್ತು ರಾಯಲಸೀಮಾದ ಅನಂತಪುರದಲ್ಲಿ ಹೆಚ್ಚು ಪರಿಣಾಮ ಬೀರುವ ಸಾಧ್ಯತೆಯೂ ಇದೆ. ಚಂಡಮಾರುತದ ಪರಿಸ್ಥಿತಿಯನ್ನು ಎದುರಿಸಲು ವಿಪತ್ತು ತಂಡಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ.

ತಮಿಳುನಾಡಿನಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್)ಯ ಆರು ತಂಡಗಳನ್ನು ಚೆನ್ನೈ, ಕಡಲೂರು, ನಾಗಪಟ್ಟಿಣಂ, ತಂಜಾವೂರು, ತಿರುವಾರೂರ್ ಮತ್ತು ಮೈಲಾಡುತುರೈಯಲ್ಲಿ ನಿಯೋಜಿಸಲಾಗಿದೆ. ಅಲ್ಲದೇ, ಚೆನ್ನೈ ಮಹಾನಗರ ಪಾಲಿಕೆ ಕೂಡ ಅಧಿಕಾರಿಗಳಿಗೆ ಸನ್ನದ್ಧ ಸ್ಥಿತಿಯಲ್ಲಿರುವಂತೆ ಸೂಚನೆ ನೀಡಿದೆ. ಈ ನಿಟ್ಟಿನಲ್ಲಿ ಕೆಲ ಕಟ್ಟುನಿಟ್ಟಿನ ಸೂಚನೆಗಳನ್ನು ಹೊರಡಿಸಲಾಗಿದೆ.

  • ಕಳೆದ ಮಳೆಗಾಲದಲ್ಲಿ ಮಳೆ ನೀರು ನಿಂತಿದ್ದ ಸ್ಥಳಗಳಲ್ಲಿ ಮೋಟಾರುಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು. ಅಗತ್ಯ ಇರುವ ಕಡೆ ಹೆಚ್ಚುವರಿ ಮೋಟಾರ್‌ಗಳ ದಾಸ್ತಾನು ಇಡಬೇಕು.
  • ಡಿ.8ರಿಂದ 10ರವರೆಗೆ ಪಾಲಿಕೆಯ ಕ್ಷೇತ್ರ ಕಾರ್ಯಕರ್ತರು 24 ಗಂಟೆ ಕರ್ತವ್ಯ ನಿರ್ವಹಿಸಬೇಕು. ನೌಕರರಿಗೆ ಕೆಲಸದ ಸಮಯವನ್ನು ಪಾಳಿ ಆಧಾರದ ಮೇಲೆ ನಿಗದಿ ಮಾಡಬೇಕು.
  • ಎಲ್ಲ ವಾರ್ಡ್‌ಗಳಲ್ಲಿ 10 ತಾತ್ಕಾಲಿಕ ರಕ್ಷಣಾ ಕಾರ್ಯಕರ್ತರು ಸಿದ್ಧರಿದ್ದಾರೆ ಎಂಬುದನ್ನು ವಲಯ ಅಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು. ಎಲ್ಲ ವಲಯ ನಿಯಂತ್ರಣ ಕೊಠಡಿಗಳು 24 ಗಂಟೆಗಳ ಕಾಲ ಕಾರ್ಯನಿರ್ವಹಿಸಬೇಕು.
  • ದುರ್ಬಲವಾದ ಮರ ಮತ್ತು ಕೊಂಬೆಗಳನ್ನು ತೆಗೆದುಹಾಕಬೇಕು. ಈ ಬಗ್ಗೆ ವಲಯ ಮಟ್ಟದ ಅಧಿಕಾರಿಗಳು ಪರಿಶೀಲನೆ ನಡೆಸಿ ಮರಗಳ ತೆರವು ಕಾರ್ಯ ಖಾತ್ರೆ ಪಡಿಸಿಕೊಳ್ಳಬೇಕು. ಮರಗಳ ಕಡಿಯುವ ಯಂತ್ರದಂತಹ ಎಲ್ಲ ಯಂತ್ರಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು.
  • ಮಳೆ ನೀರಿನ ಚರಂಡಿಗಳು ಮತ್ತು ಹೊಸದಾಗಿ ನಿರ್ಮಿಸಲಾದ ಚರಂಡಿಗಳಲ್ಲಿ ನೀರನ್ನು ಅಡೆತಡೆಯಿಲ್ಲದೇ ಹೊರಹಾಕಲು ಸರಿಯಾದ ಸಿದ್ಧತೆ ಬಗ್ಗೆ ಎಲ್ಲ ಅಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು.
  • ಎಲ್ಲ ವಾರ್ಡ್‌ಗಳಲ್ಲಿ ವೈದ್ಯಕೀಯ ತಂಡ ಸಹ ಸಿದ್ಧವಾಗಿರಬೇಕು. ಆಸ್ಪತ್ರೆಗಳಲ್ಲಿ ಸಾಕಷ್ಟು ಔಷಧಗಳು ಲಭ್ಯವಿವೆ ಎಂಬುದನ್ನು ವೈದ್ಯಕೀಯ ತಂಡ ಖಚಿತಪಡಿಸಿಕೊಳ್ಳಬೇಕು.
  • ಅನುಮತಿಯಿಲ್ಲದೇ ಹಾಕಿರುವ ಎಲ್ಲ ಬ್ಯಾನರ್‌ಗಳನ್ನು ಅಧಿಕಾರಿಗಳು ತೆರವು ಮಾಡಬೇಕು.

ಇದನ್ನೂ ಓದಿ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ರಾಜ್ಯದೆಲ್ಲೆಡೆ ಮತ್ತೆ ಮಳೆ ಸಾಧ್ಯತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.