ETV Bharat / bharat

ಮ.ಪ್ರ ಬಿಜೆಪಿ ಗೆಲುವಿನ ಹಿಂದಿನ ಶಕ್ತಿ ಶಿವರಾಜ್ ಸಿಂಗ್; 5ನೇ ಬಾರಿಗೆ ಸಿಎಂ ಪಟ್ಟಕ್ಕೇರುತ್ತಾರಾ ಮಾಮಾ?​

author img

By ETV Bharat Karnataka Team

Published : Dec 3, 2023, 6:59 PM IST

Shivraj Singh Chouhan
Shivraj Singh Chouhan

ಸರಳತೆಗೆ ಹೆಸರಾದ ಮಧ್ಯಪ್ರದೇಶ ಹಾಲಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಬಿಜೆಪಿ ಅಭ್ಯರ್ಥಿಗಳ ಪರ ಎಲ್ಲೆಡೆ ಪ್ರಚಾರ ಮಾಡಿದ್ದಾರೆ. ಮಧ್ಯಪ್ರದೇಶದಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ ಕೀರ್ತಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಸಲ್ಲುತ್ತದೆ.

ಭೋಪಾಲ್ (ಮಧ್ಯಪ್ರದೇಶ): ರಾಜಕೀಯ ವಲಯದಲ್ಲಿ 'ಮಾಮಾ' ಎಂದೇ ಜನಪ್ರಿಯರಾಗಿರುವ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಭಾರತೀಯ ಜನತಾ ಪಕ್ಷದ ಗೆಲುವಿನ ಅಘೋಷಿತ ನಾಯಕ. ಸರಳತೆಗೆ ಹೆಸರಾದ 64 ವರ್ಷದ ಶಿವರಾಜ್ ಸಿಂಗ್ ಚೌಹಾಣ್ ಅವರು ರಾಜ್ಯದ ಸೆಹೋರ್ ಜಿಲ್ಲೆಯ ಬುಧ್ನಿ ಕ್ಷೇತ್ರದಿಂದ 1 ಲಕ್ಷಕ್ಕೂ ಹೆಚ್ಚು ಮತಗಳಿಂದ ಗೆದ್ದಿದ್ದಾರೆ. ಹಾಲಿ ಮುಖ್ಯಮಂತ್ರಿಯು ಆಡಳಿತ ವಿರೋಧಿತನವನ್ನು ತೊಡೆದುಹಾಕಿದ್ದಲ್ಲದೆ, ನಿರ್ಣಾಯಕ ಹಿಂದಿ ರಾಜ್ಯದಲ್ಲಿ ಕೇಸರಿ ಪಕ್ಷಕ್ಕೆ ಅಧಿಕಾರವನ್ನು ಉಳಿಸಿಕೊಟ್ಟಿದ್ದಾರೆ.

ಭಾರತೀಯ ಚುನಾವಣಾ ಆಯೋಗದ ವೆಬ್‌ಸೈಟ್ ಪ್ರಕಾರ 230 ಸದಸ್ಯ ಬಲದ ಮಧ್ಯಪ್ರದೇಶ ವಿಧಾನಸಭೆಯ 166 ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಶಿವರಾಜ್ ಸಿಂಗ್ ಚೌಹಾಣ್ ಅವರು ತಮ್ಮ ಪಕ್ಷವನ್ನು ಹಾಗೇ ಉಳಿಸಿಕೊಂಡರು ಮತ್ತು ಅವರ ಶಾಸಕರು ಮತ್ತು ಸಚಿವರು ತನಗೆ ನಿಷ್ಠರಾಗಿರುವುದನ್ನು ಖಚಿತಪಡಿಸಿಕೊಂಡರು. ರಾಜ್ಯದ ಮೂಲೆ ಮೂಲೆಗಳಲ್ಲಿ ಸಂಚರಿಸಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ ಶಿವರಾಜ್ ಇಂದು ಯಶಸ್ಸಿನ ಫಲವನ್ನು ಕಾಣುತ್ತಿದ್ದಾರೆ.

5ನೇ ಬಾರಿ ಸಿಎಂ ಆಗ್ತಾರಾ ಶಿವರಾಜ್: ಶಿವರಾಜ್ ಅವರು ಮತ್ತೊಮ್ಮೆ ಮುಖ್ಯಮಂತ್ರಿಯಾದರೆ ಅದು ಅವರ ಐದನೇ ಅಧಿಕಾರ ಅವಧಿ ಆಗಲಿದೆ. ಜನಸಾಮಾನ್ಯರೊಂದಿಗೆ ಸಂಪರ್ಕ ಹೊಂದುವ ನಾಯಕ, ಶಿವರಾಜ್ ಮಧ್ಯಪ್ರದೇಶವು ತನ್ನ 'ಬಿಮರು' ಎಂಬ ಟ್ಯಾಗ್​ನಿಂದ ಹೊರ ತರಬೇಕು ಎಂದು ರಾಜ್ಯವನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯುವಂತೆ ನೋಡಿಕೊಂಡರು.

ಸಂಘದ ನಂಟು: ಹಾಲಿ ಮುಖ್ಯಮಂತ್ರಿ ಶಿವರಾಜ್​ 1972 ರಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಸ್ವಯಂಸೇವಕರಾಗಿದ್ದರು. ಅವರು ತುರ್ತು ಪರಿಸ್ಥಿತಿಯ ವಿರುದ್ಧ ಚಳವಳಿಯಲ್ಲಿ ಭಾಗವಹಿಸಿದರು ಮತ್ತು 1976-77ರಲ್ಲಿ ಭೋಪಾಲ್ ಜೈಲಿನಲ್ಲಿ ಬಂಧಿಸಲ್ಪಟ್ಟರು. ಅವರು 1977-78ರಲ್ಲಿ ಭೋಪಾಲ್‌ನ ಸಂಘಟನಾ ಕಾರ್ಯದರ್ಶಿಯಾಗಿ ಮತ್ತು 1978-80ರಲ್ಲಿ ಅದರ ಸಂಘಟನಾ ಕಾರ್ಯದರ್ಶಿಯಾಗಿ ಬಿಜೆಪಿಯ ವಿದ್ಯಾರ್ಥಿ ಘಟಕವಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಯಿಂದ ತಮ್ಮ ರಾಜಕೀಯ ಪ್ರಯಾಣವನ್ನು ಪ್ರಾರಂಭಿಸಿದರು.

ರಾಜಕೀಯ ಪ್ರವೇಶ: ನಂತರ ಅವರು 1984 ರಿಂದ 91ರ ವರೆಗೆ ಭಾರತೀಯ ಜನತಾ ಯುವ ಮೋರ್ಚಾ ಮಧ್ಯಪ್ರದೇಶದ ಜಂಟಿ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಮತ್ತು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಶಿವರಾಜ್ ಸಿಂಗ್ ಚೌಹಾಣ್ 1990 ರಲ್ಲಿ 9ನೇ ವಿಧಾನಸಭೆಯ ಸದಸ್ಯರಾಗಿ ಆಯ್ಕೆಯಾದರು ಮತ್ತು ನವೆಂಬರ್ 23, 1991 ರಂದು ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು.

ಅವರು 1991ರಲ್ಲಿ ಹತ್ತನೇ ಲೋಕಸಭೆಗೆ ಆಯ್ಕೆಯಾದರು. ನಂತರ ಅವರು ವಿವಿಧ ಹುದ್ದೆಗಳಲ್ಲಿ ಬಿಜೆಪಿಗೆ ಸೇವೆ ಸಲ್ಲಿಸಿದರು. ಶಿವರಾಜ್ ಮತ್ತೊಮ್ಮೆ 1996ರಲ್ಲಿ ಹನ್ನೊಂದನೇ ಲೋಕಸಭೆಗೆ ಆಯ್ಕೆಯಾದರು ಮತ್ತು ವಿವಿಧ ಸಂಸದೀಯ ಸಮಿತಿಗಳಲ್ಲಿ ಸೇವೆ ಸಲ್ಲಿಸಿದರು. ಅವರು 1998 ಮತ್ತು 1999 ರಲ್ಲಿ 12ನೇ ಮತ್ತು 13ನೇ ಲೋಕಸಭೆಗೆ ಆಯ್ಕೆಯಾದರು. 2004ರಲ್ಲಿ ಶಿವರಾಜ್ 14 ನೇ ಲೋಕಸಭೆಗೆ ಆಯ್ಕೆಯಾದರು.

ಮೊದಲ ಬಾರಿಗೆ ಸಿಎಂ ಗಿರಿ: ಅವರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಮಧ್ಯಪ್ರದೇಶ ಬಿಜೆಪಿಯ ರಾಜ್ಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಆರ್‌ಎಸ್‌ಎಸ್‌ಗೆ ನಿಕಟವಾಗಿರುವ ಶಿವರಾಜ್ ಮೊದಲ ಬಾರಿಗೆ ನವೆಂಬರ್ 29, 2005 ರಂದು ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

ಅವರು ಮೇ 6, 2006 ರಂದು ನಡೆದ ಉಪಚುನಾವಣೆಯಲ್ಲಿ 12ನೇ ವಿಧಾನಸಭೆಯ ಸದಸ್ಯರಾಗಿ ಆಯ್ಕೆಯಾದರು ಮತ್ತು ಅವರು ಮೇ 10, 2006 ರಂದು ಲೋಕಸಭೆಯ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು. ಅವರು ಡಿಸೆಂಬರ್ 10, 2008 ರ ವರೆಗೆ ಮುಖ್ಯಮಂತ್ರಿಯಾಗಿದ್ದರು.

ನಂತರ ಅವರು 2008 ರಲ್ಲಿ 13ನೇ ವಿಧಾನಸಭೆಯ ಸದಸ್ಯರಾಗಿ ಆಯ್ಕೆಯಾದರು ಮತ್ತು ಡಿಸೆಂಬರ್ 12, 2008 ರಿಂದ ಡಿಸೆಂಬರ್ 9, 2013 ರವರೆಗೆ ಮುಖ್ಯಮಂತ್ರಿಯಾಗಿದ್ದರು. ನಂತರ ಅವರು 2013 ರಲ್ಲಿ ವಿಧಾನಸಭಾ ಸದಸ್ಯರಾಗಿ ಆಯ್ಕೆಯಾದರು. ಅವರು ಡಿಸೆಂಬರ್ 14, 2013 ರಿಂದ ಡಿಸೆಂಬರ್ 12, 2018ರ ವರೆಗೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು. 2018 ರಲ್ಲಿ ಅವರು ಮತ್ತೊಮ್ಮೆ ಶಾಸಕರಾಗಿ ಆಯ್ಕೆಯಾದರು ಮತ್ತು ಕಮಲನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಪತನಗೊಂಡ ನಂತರ ಅವರು ರಾಜ್ಯದ ಆಡಳಿತವನ್ನು ವಹಿಸಿಕೊಂಡರು. ಈಗ ಅವರು ಮತ್ತೊಮ್ಮೆ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗುವ ಎಲ್ಲಾ ಸಾಧ್ಯತೆಗಳಿವೆ.

ಇದನ್ನೂ ಓದಿ: ಗ್ವಾಲಿಯರ್-ಚಂಬಲ್​ನಲ್ಲಿ ಮುಂದುವರೆದ ಜ್ಯೋತಿರಾದಿತ್ಯ ಸಿಂಧಿಯಾ ಪ್ರಭಾವ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.