ETV Bharat / bharat

ತೆಲಂಗಾಣ ಸಿಎಂ ಕೆಸಿಆರ್​ ಪ್ರಧಾನಿ ಮೋದಿಯವರ ಆಜ್ಞಾಪಾಲಕ: ರಾಹುಲ್ ಗಾಂಧಿ ವಾಗ್ದಾಳಿ

author img

By

Published : Nov 2, 2022, 12:01 PM IST

ಸಿಎಂ ಕೆಸಿಆರ್​ ಪ್ರಧಾನಿ ಮೋದಿಯವರ ಆಜ್ಞೆಗಳನ್ನು ಪಾಲಿಸುತ್ತಾರೆ: ರಾಹುಲ್ ಗಾಂಧಿ ವಾಗ್ದಾಳಿ
'KCR gets orders from PM Modi', Rahul Gandhi jibes at Telangana CM

ಚುನಾವಣೆ ಬಂದಾಗ ಎರಡೂ ಪಕ್ಷಗಳು ಪರಸ್ಪರ ಟೀಕೆ ಮಾಡುವಂತೆ ನಟಿಸುತ್ತವೆ. ಆದರೆ ಕೆಸಿಆರ್ ಕರೆ ಮಾಡಿದ ತಕ್ಷಣ ಪ್ರಧಾನಿ ಮೋದಿ ಪ್ರತಿಕ್ರಿಯಿಸುತ್ತಾರೆ. ತೆಲಂಗಾಣ ರಾಷ್ಟ್ರ ಸಮಿತಿಯು (ಟಿಆರ್‌ಎಸ್) ಸಂಸತ್ತಿನಲ್ಲಿ ಬಿಜೆಪಿಯನ್ನು ಹಲವು ಬಾರಿ ಸಮರ್ಥಿಸಿಕೊಂಡಿದೆ ಎಂದು ರಾಹುಲ್ ಗಾಂಧಿ ಹೇಳಿದರು.

ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಹಾಗೂ ಟಿಆರ್​ಎಸ್​ ಮುಖ್ಯಸ್ಥ ಕೆ. ಚಂದ್ರಶೇಖರ ರಾವ್ ಒಂದು ಕಡೆ ಪ್ರಧಾನಿ ಮೋದಿಯವರ ಆದೇಶಗಳನ್ನು ಪಾಲಿಸುತ್ತಾರೆ ಹಾಗೂ ಇನ್ನೊಂದೆಡೆ ಭಾರತೀಯ ಜನತಾ ಪಕ್ಷದ ಎದುರಾಳಿಯಾಗಿರುವಂತೆ ನಟಿಸುತ್ತಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಭಾರತ್ ಜೋಡೋ ಯಾತ್ರೆ ಅಂಗವಾಗಿ ಹೈದರಾಬಾದ್​ನ ನೆಕ್ಲೇಸ್ ರಸ್ತೆಯಲ್ಲಿ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ರಾಹುಲ್, ಕೇಂದ್ರದ ಬಿಜೆಪಿ ಸರ್ಕಾರ ಮತ್ತು ತೆಲಂಗಾಣದ ಟಿಆರ್‌ಎಸ್ ಆಡಳಿತ ಎರಡೂ ರೈತರ ಬಿಕ್ಕಟ್ಟಿನ ಸಮಯದಲ್ಲಿ ಅವರ ರಕ್ಷಣೆಗೆ ಬರಲಿಲ್ಲ ಎಂದರು. ರೈತರಿಂದ ಹಿಡಿದು ಯುವಕರವರೆಗೆ ಸಮಾಜದ ಎಲ್ಲ ವರ್ಗದವರೂ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂದು ಅವರು ಪ್ರತಿಪಾದಿಸಿದರು.

kcr-gets-orders-from-pm-modi-rahul-gandhi-jibes-at-telangana-cm
ಹೈದರಾಬಾದ್​ನಲ್ಲಿ ರಾಹುಲ್ ಗಾಂಧಿ ಭಾಷಣ

ಟಿಆರ್‌ಎಸ್ ಮತ್ತು ಬಿಜೆಪಿ ಹಲವಾರು ಸಂದರ್ಭಗಳಲ್ಲಿ ಒಟ್ಟಾಗಿ ಕೆಲಸ ಮಾಡಿವೆ. ಚುನಾವಣೆ ಬಂದಾಗ ಎರಡೂ ಪಕ್ಷಗಳು ಪರಸ್ಪರ ಟೀಕೆ ಮಾಡುವಂತೆ ನಟಿಸುತ್ತವೆ. ಆದರೆ ಕೆಸಿಆರ್ ಕರೆ ಮಾಡಿದ ತಕ್ಷಣ ಪ್ರಧಾನಿ ಮೋದಿ ಪ್ರತಿಕ್ರಿಯಿಸುತ್ತಾರೆ. ತೆಲಂಗಾಣ ರಾಷ್ಟ್ರ ಸಮಿತಿಯು (ಟಿಆರ್‌ಎಸ್) ಸಂಸತ್ತಿನಲ್ಲಿ ಬಿಜೆಪಿಯನ್ನು ಹಲವು ಬಾರಿ ಸಮರ್ಥಿಸಿಕೊಂಡಿದೆ ಎಂದು ಅವರು ಹೇಳಿದರು.

ಕೆಲಸ ಸಿಗದ ಕಾರಣ ಎಂಜಿನಿಯರಿಂಗ್ ಪದವೀಧರರು ಸ್ವಿಗ್ಗಿಯಲ್ಲಿ ಕೆಲಸ ಮಾಡುವಂತಾಗಿದೆ. ಯುವಕರಿಗೆ ದೇಶದಲ್ಲಿ ಉದ್ಯೋಗ ಸಿಗುತ್ತಿಲ್ಲ. ಮೋದಿ ಸರ್ಕಾರ ಸಾರ್ವಜನಿಕ ವಲಯದ ಕಂಪನಿಗಳಾದ ವಿಮಾನ ನಿಲ್ದಾಣ, ಎಲ್​ಐಸಿ, ಟೆಲಿಕಾಂಗಳನ್ನು ಅಗ್ಗದ ಬೆಲೆಗೆ ಮಾರಾಟ ಮಾಡುತ್ತಿದೆ. ನೋಟು ಅಮಾನ್ಯೀಕರಣದಿಂದಾಗಿ ಸಣ್ಣ ವ್ಯಾಪಾರಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ರಾಹುಲ್ ವಾಗ್ದಾಳಿ ನಡೆಸಿದರು.

kcr-gets-orders-from-pm-modi-rahul-gandhi-jibes-at-telangana-cm
ಚಾರ್‌ಮಿನಾರ್‌ನಲ್ಲಿ ರಾಹುಲ್ ಗಾಂಧಿ ರಾಷ್ಟ್ರಧ್ವಜಾರೋಹಣ

ಎಲ್ಲಿ ಜಾಗ ಕಬಳಿಸಲು ಅವಕಾಶವಿದೆಯೋ ಎಂದು ನೋಡಲು ಟಿಆರ್​ಎಸ್​ ಮುಖ್ಯಸ್ಥರು ಯಾವಾಗಲೂ ಧರಣಿ ಪೋರ್ಟಲ್​ನತ್ತ ದೃಷ್ಟಿ ನೆಟ್ಟಿರುತ್ತಾರೆ ಎಂದು ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದರು.

ನಗರದ ಚಾರ್‌ಮಿನಾರ್‌ನಲ್ಲಿ ರಾಹುಲ್ ಗಾಂಧಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಮೂರು ದಶಕಗಳ ಹಿಂದೆ ರಾಜೀವ್ ಗಾಂಧಿ ಇಲ್ಲಿಂದಲೇ ಸದ್ಭಾವನಾ ಯಾತ್ರೆ ಆರಂಭಿಸಿದ್ದರು. ಕಾಂಗ್ರೆಸ್ ಹಿರಿಯ ನಾಯಕರಾದ ಜೈರಾಮ್ ರಮೇಶ್, ದಿಗ್ವಿಜಯ ಸಿಂಗ್ ಮತ್ತು ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ ಮುಖ್ಯಸ್ಥ ರೇವಂತ್ ರೆಡ್ಡಿ ಉಪಸ್ಥಿತರಿದ್ದರು. ರಾಹುಲ್ ಗಾಂಧಿ ವೇದಿಕೆ ಮೇಲೆ ತಮ್ಮ ತಂದೆಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ಇದನ್ನೂ ಓದಿ: ಯುಪಿಯಲ್ಲಿ ಗೆಲ್ಲಲಾಗದವರು ಕೆಸಿಆರ್‌ ಅವರನ್ನು ಅಪಹಾಸ್ಯ ಮಾಡುತ್ತಿದ್ದಾರೆ: ರಾಗಾ ವಿರುದ್ಧ ಕೆಟಿಆರ್​ ಕಿಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.