ETV Bharat / bharat

ಬಿಜೆಪಿಯನ್ನು ನನ್ನ ಗುರು ಎಂದು ಪರಿಗಣಿಸಿರುವೆ: ರಾಹುಲ್​ ಗಾಂಧಿ

author img

By

Published : Dec 31, 2022, 4:05 PM IST

Updated : Dec 31, 2022, 4:58 PM IST

i-consider-bjp-my-guru-says-rahul-gandhi
ನಾನು ಬಿಜೆಪಿಯನ್ನು ನನ್ನ ಗುರು ಎಂದು ಪರಿಗಣಿಸಿರುವೆ: ರಾಹುಲ್​ ಗಾಂಧಿ

ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್ ಜೋಡೋ ಯಾತ್ರೆ-ಸದ್ಯಕ್ಕೆ ವಿರಾಮ ಪಡೆದಿರುವ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ-ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಬಗ್ಗೆ ಅಚ್ಚರಿ ಹೇಳಿಕೆ

ನವದೆಹಲಿ: ಭಾರತೀಯ ಜನತಾ ಪಕ್ಷ (ಬಿಜೆಪಿ)ವನ್ನು ನಾನು ನನ್ನ ಗುರು ಎಂದು ಪರಿಗಣಿಸಿದ್ದೇನೆ. ಏಕೆಂದರೆ, ಬಿಜೆಪಿ ನನಗೆ ಮಾರ್ಗಸೂಚಿಯನ್ನು ತೋರಿಸುತ್ತದೆ ಮತ್ತು ಯಾವತ್ತೂ ಏನು ಮಾಡಬಾರದು ಎಂಬುವುದು ಕೂಡ ನನಗೆ ಬಿಜೆಪಿಗೆ ಕಲಿಸುತ್ತದೆ. ಹೀಗೆಂದು ಹೇಳಿದ್ದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ.

ದೆಹಲಿಯಲ್ಲಿ ಇಂದು ಮಾಧ್ಯಮಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್​ ಗಾಂಧಿ, ಅವರು (ಬಿಜೆಪಿ) ನಮ್ಮ ಮೇಲೆ ಆಕ್ರಮಣಕಾರಿಯಾಗಿ ದಾಳಿ ಮಾಡಬೇಕೆಂದು ನಾನು ಬಯಸುತ್ತೇನೆ. ಇದು ಕಾಂಗ್ರೆಸ್ ಪಕ್ಷದ ಸಿದ್ಧಾಂತವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ನಾನು ಅವರನ್ನು (ಬಿಜೆಪಿ) ನನ್ನ ಗುರು ಎಂದು ಪರಿಗಣಿಸುತ್ತೇನೆ. ಅವರು ನನಗೆ ದಾರಿ ತೋರಿಸುತ್ತಿದ್ದಾರೆ ಮತ್ತು ಏನು ಮಾಡಬಾರದು ಎಂದು ನನಗೆ ತರಬೇತಿ ನೀಡುತ್ತಿದ್ದಾರೆ ಎಂದೂ ಹೇಳಿದರು.

ಭಾರತ್ ಜೋಡೋ ಯಾತ್ರೆಯು ಡಿ.24ರಂದು ನವದೆಹಲಿಯನ್ನು ಪ್ರವೇಶಿಸಿದ ನಂತರ, ಒಂಬತ್ತು ದಿನಗಳ ಕಾಲ ವಿರಾಮ ತೆಗೆದುಕೊಳ್ಳಲಾಗಿದೆ. ಈ ಯಾತ್ರೆ ಬಗ್ಗೆ ಮಾತನಾಡಿದ ಅವರು, ನಾನು ಇದನ್ನು (ಭಾರತ್ ಜೋಡೋ ಯಾತ್ರೆ) ಪ್ರಾರಂಭಿಸಿದಾಗ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಅದನ್ನು ಸಾಮಾನ್ಯ ಯಾತ್ರೆಯಾಗಿ ತೆಗೆದುಕೊಂಡೆ. ಈ ಯಾತ್ರೆಯು ಜನರ ಧ್ವನಿ ಮತ್ತು ಭಾವನೆಗಳನ್ನು ಹೊಂದಿದೆ ಎಂದು ನಾವು ನಿಧಾನವಾಗಿ ಅರ್ಥಮಾಡಿಕೊಂಡಿದ್ದೇವೆ ಎಂದು ತಿಳಿಸಿದರು.

ಬಿಜೆಪಿ ಮತ್ತು ಆರ್‌ಎಸ್‌ಎಸ್​ಗೆ ಧನ್ಯವಾದ: ಭಾರತ್ ಜೋಡೋ ಯಾತ್ರೆಯುದ್ದಕ್ಕೂ ಜನರ ಧ್ವನಿ ಆಲಿಸಲು ಸಾಧ್ಯವಾಗಿರುವುದಕ್ಕೆ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಜನರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಏಕೆಂದರೆ ಅವರು (ಬಿಜೆಪಿ ಮತ್ತು ಆರ್‌ಎಸ್‌ಎಸ್‌ಯವರು) ನಮ್ಮನ್ನು ಹೆಚ್ಚು ಗುರಿಯಾಗಿಸಿಕೊಂಡರೆ ಅದು ನಮಗೆ ಕೆಲವು ರೀತಿಯಲ್ಲಿ ಸಹಾಯ ಮಾಡುತ್ತದೆ ಎಂದು ರಾಹುಲ್​ ಗಾಂಧಿ ಹೇಳಿದರು.

ಭಾರತ್ ಜೋಡೋ ಯಾತ್ರೆಯ ಬಾಗಿಲು ಎಲ್ಲರಿಗೂ ತೆರೆದಿದೆ. ನಮ್ಮೊಂದಿಗೆ ಸೇರುವುದನ್ನು ನಾವು ತಡೆಯುವುದಿಲ್ಲ. ಉತ್ತರ ಪ್ರದೇಶದ ಮಾಜಿ ಸಿಎಂಗಳಾದ ಅಖಿಲೇಶ್ ಯಾದವ್​, ಮಾಯಾವತಿ ಮತ್ತು ಇತರರು ಸಹ ಹಿಂದೂಸ್ತಾನದ ಪ್ರೀತಿಯನ್ನೇ ಬಯಸುತ್ತಾರೆ ಎಂದ ರಾಹುಲ್​, 2024ರ ಸಾರ್ವತ್ರಿಕ ಚುನಾವಣೆಗೆ ಮುನ್ನವೇ ಎಲ್ಲ ವಿರೋಧ ಪಕ್ಷಗಳು ಒಟ್ಟಾಗುವ ಕುರಿತು ಮುಕ್ತ ಆಹ್ವಾನವನ್ನು ನೀಡಿದರು.

ಬಿಜೆಪಿಗೆ ಗೆಲುವು ಕಷ್ಟಕರ: ಪ್ರತಿಪಕ್ಷಗಳು ದೂರದೃಷ್ಟಿಯೊಂದಿಗೆ ಸಮರ್ಥವಾಗಿ ನಿಂತರೆ, ಚುನಾವಣೆಯಲ್ಲಿ ಗೆಲ್ಲುವುದು ಬಿಜೆಪಿಗೆ ತುಂಬಾ ಕಷ್ಟಕರವಾಗುತ್ತದೆ. ಆದರೆ ಪ್ರತಿಪಕ್ಷಗಳು ಸರಿಯಾಗಿ ಸಮನ್ವಯ ಸಾಧಿಸಬೇಕು ಮತ್ತು ಪ್ರತಿಪಕ್ಷಗಳು ಪರ್ಯಾಯ ದೃಷ್ಟಿಯೊಂದಿಗೆ ಜನರ ಬಳಿಗೆ ಹೋಗಬೇಕಿದೆ ಎಂದೂ ರಾಹುಲ್ ಗಾಂಧಿ ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಸರ್ಕಾರದಿಂದ ಭಾರತ್​ ಜೋಡೋ ಯಾತ್ರೆಗೆ ಅಡ್ಡಿ ಯತ್ನ: ಕರ್ನಾಟಕ ಬಿಜೆಪಿ ಯಾತ್ರೆ ಪ್ರಶ್ನಿಸಿದ ಕಾಂಗ್ರೆಸ್​

ಮಧ್ಯಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್ ಸ್ವೀಪ್ ಮಾಡಲಿದೆ ಎಂದು ನಾನು ಲಿಖಿತವಾಗಿ ನೀಡಬಲ್ಲೆ. ಬಿಜೆಪಿ ಎಲ್ಲಿಯೂ ಕಾಣಿಸುವುದಿಲ್ಲ. ನಾನು ಇದನ್ನು ನಿಮಗೆ ಖಾತರಿ ನೀಡಬಲ್ಲೆ. ಬಿಜೆಪಿ ಹಣ ಬಳಸಿ ಸರ್ಕಾರ ರಚಿಸಿದೆ ಎಂಬುದು ಮಧ್ಯಪ್ರದೇಶದ ಪ್ರತಿಯೊಬ್ಬರಿಗೂ ತಿಳಿದಿದೆ ಎಂದು ಹೇಳಿದರು. ಇದೇ ವೇಳೆ ನಾನು ಧರಿಸುವ ಟೀ ಶರ್ಟ್​ ಬಗ್ಗೆ ಇಷ್ಟೊಂದು ಅವಾಂತರ ಯಾಕೆ?. ನಾನು ಸ್ವೆಟರ್ ಧರಿಸುವುದಿಲ್ಲ. ಯಾಕೆಂದರೆ, ನನಗೆ ಚಳಿಗಾಲದ ಭಯವಿಲ್ಲ. ಚಳಿ ಶುರುವಾದ ಮೇಲೆ ಸ್ವೆಟರ್ ಧರಿಸಲು ಯೋಚಿಸುತ್ತಿದ್ದೇನೆ ಎಂದರು.

ಸೆಪ್ಟೆಂಬರ್ 7ರಂದು ಕನ್ಯಾಕುಮಾರಿಯಿಂದ ಪ್ರಾರಂಭವಾದ ಭಾರತ್ ಜೋಡೋ ಯಾತ್ರೆಯು ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಮಹಾರಾಷ್ಟ್ರ ಮತ್ತು ಹರಿಯಾಣದ ಮೂಲಕ ಈಗ ದೆಹಲಿಗೆ ಪ್ರವೇಶಿಸಿದೆ. ಈ ನಡುವೆ ಬೇರೆ ದೇಶಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್ ನಿಯಮ ಪಾಲಿಸಿ, ಇಲ್ಲವಾದಲ್ಲಿ ಭಾರತ್ ಜೋಡೋ ಯಾತ್ರೆಯನ್ನು ಮುಂದೂಡಿ ಎಂದು ಕೇಂದ್ರ ಸರ್ಕಾರ ಸೂಚಿಸಿದೆ.

ಇದನ್ನೂ ಓದಿ: ಕೋವಿಡ್ ನಿಯಮ ಪಾಲಿಸಲಾಗದಿದ್ದರೆ ಯಾತ್ರೆ ಮುಂದೂಡಿ: ರಾಹುಲ್​ ಗಾಂಧಿಗೆ ಆರೋಗ್ಯ ಸಚಿವಾಲಯ ಸೂಚನೆ

Last Updated :Dec 31, 2022, 4:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.