ETV Bharat / bharat

ಟೈರ್ ಸ್ಫೋಟಗೊಂಡು ಲಾರಿಗೆ ಗುದ್ದಿದ ಜೀಪ್​: ನಾಲ್ವರು ಮಹಿಳೆಯರು ಸೇರಿ ಆರು ಮಂದಿ ದುರ್ಮರಣ

author img

By

Published : Feb 15, 2023, 9:43 PM IST

ಗುಜರಾತ್​ನಲ್ಲಿ ಪಟಾನ್‌ ಜಿಲ್ಲೆಯ ರಾಧನ್‌ಪುರದ ವಾರಾಹಿ ಹೆದ್ದಾರಿಯಲ್ಲಿ ನಿಂತಿದ್ದ ಲಾರಿಗೆ ಜೀಪ್ ಡಿಕ್ಕಿ ಹೊಡೆದು ಆರು ಜನರು ಸಾವನ್ನಪ್ಪಿದ್ದಾರೆ.

Gujarat: Six killed, eight injured as jeep hits truck
ಟೈರ್ ಸ್ಫೋಟಗೊಂಡು ಲಾರಿಗೆ ಗುದ್ದಿದ ಜೀಪ್​: ನಾಲ್ವರು ಮಹಿಳೆಯರು ಸೇರಿ ಆರು ಮಂದಿ ದುರ್ಮರಣ

ಪಟಾನ್‌ (ಗುಜರಾತ್​): ಗುಜರಾತ್​ನಲ್ಲಿ ಬುಧವಾರ ಮಧ್ಯಾಹ್ನ ಜೀಪ್​ ಮತ್ತು ಲಾರಿ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ನಾಲ್ವರು ಮಹಿಳೆಯರು ಆರು ಜನರು ದುರ್ಮರಣ ಹೊಂದಿದ್ದಾರೆ. ಅಲ್ಲದೇ, ಈ ಘಟನೆಯಲ್ಲಿ ಇತರ ಎಂಟು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ.

ಪಟಾನ್‌ ಜಿಲ್ಲೆಯ ರಾಧನ್‌ಪುರದ ವಾರಾಹಿ ಹೆದ್ದಾರಿಯಲ್ಲಿ ಈ ದುರ್ಘಟನೆ ನಡೆದಿದೆ. ಟೈರ್ ಸ್ಫೋಟಗೊಂಡ ಕಾರಣ ಜೀಪ್ ರಸ್ತೆಯಲ್ಲಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ. ಮೃತರನ್ನು ಸಂಜುಬೆನ್ ಫುಲ್ವಾಡಿ (50), ದೂದಾಭಾಯಿ ಸೇಜಾಭಾಯಿ ರಾಥೋರ್ (50), ರಾಧಾಬೆನ್ ಪರ್ಮಾರ್ (35), ಕಾಜಲ್​ಬೆನ್ ಪರ್ಮಾರ್ (59), ಅಮೃತಾಬೆನ್ ವಂಜಾರಾ (15) ಹಾಗೂ ಪೀನಲ್ ವಂಜಾರ (7) ಎಂದು ಗುರುತಿಸಲಾಗಿದೆ.

ರಾಜಸ್ಥಾನದಿಂದ ಸುಮಾರು 15 ಜನ ಕೂಲಿ ಕಾರ್ಮಿಕರನ್ನು ವಾರಾಹಿ ಗ್ರಾಮಕ್ಕೆ ಜೀಪ್​ ಕರೆದುಕೊಂಡು ಬರುತ್ತಿತ್ತು. ಆದರೆ, ಈ ವೇಳೆ ಹೆದ್ದಾರಿಯಲ್ಲಿ ಜೀಪಿನ ಏಕಾಏಕಿ ಟೈರ್ ಸ್ಫೋಟಗೊಂಡಿದೆ. ಪರಿಣಾಮವಾಗಿ ಚಾಲಕ ನಿಯಂತ್ರಣ ಕಳೆದುಕೊಂಡು ಮುಂದೆ ರಸ್ತೆಯಲ್ಲಿ ನಿಂತಿದ್ದ ಲಾರಿ ಡಿಕ್ಕಿ ಹೊಡೆದಿದೆ. ಇದರಿಂದ ಆರು ಜನರು ಸಾವಿಗೀಡಾಗಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್​ ವರಿಷ್ಠಾಧಿಕಾರಿ ಕೆ.ಕೆ.ಪಾಂಡ್ಯ ತಿಳಿಸಿದ್ದಾರೆ.

ಈ ಅಪಘಾತದ ಬಗ್ಗೆ ಮಾಹಿತಿ ಪಡೆದ ಪೊಲೀಸರು ತಕ್ಷಣವೇ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ನಂತರ ಸ್ಥಳೀಯರು ನೆರವಿನೊಂದಿಗೆ ವಾಹನದಲ್ಲಿ ಸಿಕ್ಕಿಬಿದ್ದ ಗಾಯಾಳುಗಳನ್ನು ಹೊರತೆಗೆಯಲಾಯಿತು. ಸದ್ಯ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸ್​ ಸಿಬ್ಬಂದಿ ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ತೆಲಂಗಾಣದಲ್ಲಿ ಪ್ರತ್ಯೇಕ ರಸ್ತೆ ಅಪಘಾತಗಳು: ಮತ್ತೊಂದೆಡೆ, ತೆಲಂಗಾಣದಲ್ಲಿ ಮೂರು ಪ್ರತ್ಯೇಕ ರಸ್ತೆ ಅಪಘಾತಗಳು ನಡೆದಿವೆ. ಜಗ್ತಿಯಾಲ್ ಜಿಲ್ಲೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಟಿಎಸ್‌ಆರ್‌ಟಿಸಿ) ಬಸ್ ಕಂಡಕ್ಟರ್ ಮೃತಪಟ್ಟಿದ್ದು, ಇತರ ಐವರು ಪ್ರಯಾಣಿಕರು ಗಾಯಗೊಂಡಿದ್ದಾರೆ. ಸಾರಿಗೆ ಬಸ್‌ಗೆ ಎದುರಿನಿಂದ ಬರುತ್ತಿದ್ದ ಟ್ರಕ್‌ ಡಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ. ಜಗ್ತಿಯಾಲ್ ಡಿಪೋದ ಬಸ್ ವಾರಂಗಲ್ ಕಡೆಗೆ ತೆರಳುತ್ತಿತ್ತು. ಈ ವೇಳೆ ಎದುರಿನಿಂದ ಬರುತ್ತಿದ್ದ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಬಸ್​ ಪಲ್ಟಿಯಾಗಿದೆ. ಇದರಿಂದ ಕಂಡಕ್ಟರ್ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಗಾಯಾಳು ಐವರು ಪ್ರಯಾಣಿಕರನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸಿದ್ದಿಪೇಟೆ ಜಿಲ್ಲೆಯ ಇಬ್ರಾಹಿಂ ನಗರದಲ್ಲಿ ಮತ್ತೊಂದು ಘಟನೆ ನಡೆದಿದೆ. ಈ ಘಟನೆಯಲ್ಲಿ ಕಾರು ಪಲ್ಟಿಯಾಗಿ ಚಾಲಕ ಸಾವನ್ನಪ್ಪಿದ್ದು, ಇತರ ನಾಲ್ವರು ಗಾಯಗೊಂಡಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಇದೇ ಸ್ಥಳದ ಸಮೀಪವೇ ನಡೆದ ಮತ್ತೊಂದು ಅಪಘಾತದಲ್ಲಿ ಮೂವರು ಶಾಲಾ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಕಾರೊಂದು ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದು, ಇದರಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಈ ವಿಷಯ ತಿಳಿದ ಆರೋಗ್ಯ ಸಚಿವ ಟಿ.ಹರೀಶ್ ರಾವ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ.

ಇದನ್ನೂ ಓದಿ: ಆಂಬ್ಯುಲೆನ್ಸ್ ಮತ್ತು ಟೆಂಪೋ ನಡುವೆ ಅಪಘಾತ: ಎಂಟು ಜನರಿಗೆ ಗಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.