ETV Bharat / bharat

ಉತ್ತರ ಪ್ರದೇಶದಲ್ಲಿ ರೈಲು ಅವಘಡ: ತಪ್ಪಿದ ಅನಾಹುತ

author img

By ETV Bharat Karnataka Team

Published : Oct 5, 2023, 12:58 PM IST

goods train derailed in sonbhadra, uttar pradesh
ಉತ್ತರ ಪ್ರದೇಶದಲ್ಲಿ ಬೆಳ್ಳಂಬೆಳಗ್ಗೆ ರೈಲು ಅವಘಡ: ತಪ್ಪಿದ ಅನಾಹುತ

ಗೂಡ್ಸ್ ರೈಲಿನ ಇಂಜಿನ್ ಸಹಿತ ಮೂರು ಬೋಗಿಗಳು ಹಳಿ ತಪ್ಪಿದ ಘಟನೆ ಉತ್ತರ ಪ್ರದೇಶದ ಸೋನಭದ್ರ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ನಡೆದಿದೆ.

ಸೋನಭದ್ರ (ಉತ್ತರ ಪ್ರದೇಶ): ಉತ್ತರ ಪ್ರದೇಶದಲ್ಲಿ ಗುರುವಾರ ಬೆಳಗ್ಗೆ ರೈಲು ಅವಘಡ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ. ಸೋನಭದ್ರ ಜಿಲ್ಲೆಯಲ್ಲಿ ಗೂಡ್ಸ್ ರೈಲಿನ ಇಂಜಿನ್ ಸಹಿತ ಮೂರು ಬೋಗಿಗಳು ಹಳಿ ತಪ್ಪಿವೆ. ಇದರಿಂದ ರೈಲು ಸಂಚಾರದಲ್ಲಿ ಅಡಚಣೆ ಉಂಟಾಗಿದೆ. ಅಲ್ಲದೇ, ಘಟನೆ ಬಳಿಕ ಸಮೀಪದ ರೈಲ್ವೆ ಕ್ರಾಸಿಂಗ್​ಅನ್ನು ಎರಡು ಗಂಟೆಗಳ ಕಾಲ ಮುಚ್ಚಲಾಗಿತ್ತು. ಹೀಗಾಗಿ ಟ್ರಾಫಿಕ್ ಜಾಮ್​ ಉಂಟಾಗಿ​ ವಾಹನಗಳ ಸವಾರರು ಕೂಡ ತೊಂದರೆ ಅನುಭವಿಸಬೇಕಾಯಿತು.

ಇಂದು ಬೆಳಗ್ಗೆ ಗೂಡ್ಸ್​ ರೈಲೊಂದು ಜಾರ್ಖಂಡ್​ನ ಗರ್ವಾ ನಿಲ್ದಾಣದಿಂದ ಡಾಲಮೈಟ್ ಸೋಲಿಂಗ್ (ಜಲ್ಲಿ ಕಲ್ಲು) ತುಂಬಿಕೊಂಡು ಬರುತ್ತಿತ್ತು. ಈ ವೇಳೆ, ಬೆಳಗ್ಗೆ 7 ಗಂಟೆ ಸುಮಾರಿಗೆ ಸೋನಭದ್ರ ಜಿಲ್ಲೆಯ ದುದ್ದಿನಗರ ರೈಲು ನಿಲ್ದಾಣದ ಸಮೀಪ ರೈಲಿನ ಇಂಜಿನ್ ಸಹಿತ ಮೂರು ಬೋಗಿಗಳು ಹಳಿ ತಪ್ಪಿವೆ. ಈ ವಿಷಯ ತಿಳಿದ ರೈಲ್ವೆ ಅಧಿಕಾರಿಗಳು ಹಾಗೂ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಹಳಿ ತಪ್ಪಿದ ಮೆಟ್ರೋ ರೀ ರೈಲ್... ಹೈಡ್ರಾಲಿಕ್ ಪವರ್ ಲಿಫ್ಟ್ ಬಳಸಿ ಕಾರ್ಯಾಚರಣೆ

ದುದ್ದಿನಗರ ರೈಲು ನಿಲ್ದಾಣ, ರೇಣುಕೂಟ್ ಹಾಗೂ ಚೋಪಾನ್‌ನಿಂದ ಇಂಜಿನಿಯರ್‌ಗಳು, ಗ್ಯಾಂಗ್‌ಮನ್‌ಗಳು, ಟ್ರ್ಯಾಕ್​ಮೆನ್‌ಗಳ ತಂಡ ದೌಡಾಯಿಸಿ, ದುರಸ್ತಿ ಆರಂಭಿಸಿದೆ. ಮೊದಲು ಮೂರು ಬೋಗಿಗಳು ಮಾತ್ರ ಹಳಿ ತಪ್ಪಿದ್ದು, ಹಿಂಬದಿಯ ಬೋಗಿಗಳು ಸುರಕ್ಷಿತವಾಗಿವೆ. ಇದರಿಂದಾಗಿ ಆ ಬೋಗಿಗಳನ್ನು ಬೇರ್ಪಡಿಸಿ ಸಿಬ್ಬಂದಿ ದುರಸ್ತಿ ಕಾರ್ಯ ನಡೆಸಿದ್ದಾರೆ. ಈ ಘಟನೆ ಬಳಿಕ ಒಂದು ಬದಿಯ ಮೇಲೆ ರೈಲು ಸಂಚಾರ ರದ್ದು ಮಾಡಲಾಗಿತ್ತು. ರೈಲು ಸಂಚಾರದಲ್ಲಿ ಕೊಂಚ ವ್ಯತ್ಯಯ ಉಂಟಾಗಿತ್ತು. ಆದರೆ, ಮತ್ತೊಂದು ಬದಿಯ ಹಳಿ ಮೇಲೆ ರೈಲುಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಳ್ಳಲಾಗಿತ್ತು.

ರೈಲ್ವೆ ಕ್ರಾಸಿಂಗ್ ರದ್ದು - ವಾಹನ ಸವಾರರ ಪರದಾಟ: ಗೂಡ್ಸ್​ ರೈಲು ಹಳಿ ತಪ್ಪಿದ ಅವಘಡ ನಡೆದ ಸಮೀಪವೇ ದುಡ್ಡಿನಗರ-ಆಶ್ರಮ ಮೋಡ್ ರೈಲ್ವೆ ಕ್ರಾಸಿಂಗ್ ಇದೆ. ಮುನ್ನೆಚ್ಚರಿಕೆ ಕ್ರಮವಾಗಿ ಇದನ್ನು ರದ್ದು ಮಾಡಲಾಗಿತ್ತು. ಇದರ ಪರಿಣಾಮ ರೈಲ್ವೆ ಕ್ರಾಸಿಂಗ್‌ನ ಎರಡೂ ಬದಿಗಳಲ್ಲಿ ವಾಹನಗಳು ಸರತಿ ಸಾಲಿನಲ್ಲಿ ನಿಲ್ಲುವಂತಾಗಿತ್ತು. ಹೀಗಾಗಿ ಪ್ರಯಾಣಿಕರು, ವಾಹನ ಚಾಲಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಎರಡು ಗಂಟೆಗಳ ಬಳಿಕ ಅಂದರೆ 9 ಗಂಟೆ ಸುಮಾರಿಗೆ ರೈಲ್ವೆ ಕ್ರಾಸಿಂಗ್​ ತೆರೆದು ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಯಿತು.

ದುಡ್ಡಿನಗರ ರೈಲು ನಿಲ್ದಾಣದಿಂದ 300 ಮೀಟರ್​ ದೂರದಲ್ಲಿ ಬೆಳಗ್ಗೆ 7 ಗಂಟೆ ಸುಮಾರಿಗೆ ಗೂಡ್ಸ್ ರೈಲಿನ ಇಂಜಿನ್ ಸಹಿತ ಮೂರು ಬೋಗಿಗಳು ಹಳಿ ತಪ್ಪಿವೆ. ಈ ಅವಘಡದಲ್ಲಿ ಯಾವುದೇ ಪ್ರಾಣಹಾನಿ ಉಂಟಾಗಿಲ್ಲ. ರೈಲ್ವೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಹಾರ ಕಾರ್ಯ ಕೈಗೊಂಡಿದ್ದಾರೆ. ಈಗಾಗಲೇ ಹಳಿಯನ್ನು ದುರಸ್ತಿಗೊಳಿಸಲಾಗಿದ್ದು, ಶೀಘ್ರದಲ್ಲಿಯೇ ಸಂಚಾರ ಮರುಸ್ಥಾಪಿಸಲಾಗುವುದು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಸುಮಾರು 10 ತಿಂಗಳ ಹಿಂದೆ ಕೂಡ ಇದೇ ಸ್ಥಳದಲ್ಲಿ ಗೂಡ್ಸ್​ ರೈಲು ಹಳಿತಪ್ಪಿದ ಘಟನೆ ನಡೆದಿತ್ತು.

ಇದನ್ನೂ ಓದಿ: ಮುಲ್ಲಾಪುರ ಬಳಿ ಹಳಿ ತಪ್ಪಿದ ಗೂಡ್ಸ್​ ರೈಲು: ತಪ್ಪಿದ ಭಾರಿ ಅನಾಹುತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.