ETV Bharat / bharat

G20 Summit: ಬ್ರಿಟನ್​ ಪ್ರಧಾನಿಯಾಗಿ ಮೊದಲ ಬಾರಿಗೆ ಭಾರತಕ್ಕೆ ಆಗಮಿಸಿದ ರಿಷಿ ಸುನಕ್

author img

By ANI

Published : Sep 8, 2023, 3:47 PM IST

G20 Summit: ಜಿ-20 ಶೃಂಗಸಭೆ ಹಿನ್ನೆಲೆಯಲ್ಲಿ ಬ್ರಿಟನ್​ ಪ್ರಧಾನಿ ರಿಷಿ ಸುನಕ್ ಹಾಗೂ ಪತ್ನಿ ಅಕ್ಷತಾ ಮೂರ್ತಿ ದೆಹಲಿಗೆ ಆಗಮಿಸಿದ್ದಾರೆ.

g20-summit-uk-pm-rishi-sunak-his-wife-arrive-in-india
G20 Summit: ಬ್ರಿಟನ್​ ಪ್ರಧಾನಿಯಾಗಿ ಮೊದಲ ಬಾರಿಗೆ ಭಾರತಕ್ಕೆ ಆಗಮಿಸಿದ ರಿಷಿ ಸುನಕ್

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸೆಪ್ಟೆಂಬರ್ 9 ಮತ್ತು 10ರಂದು ನಡೆಯಲಿರುವ ಜಿ-20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಬ್ರಿಟನ್​ ಪ್ರಧಾನಿ ರಿಷಿ ಸುನಕ್ ಇಂದು ಭಾರತಕ್ಕೆ ಬಂದಿಳಿದಿದ್ದಾರೆ. ತಮ್ಮ ಪತ್ನಿ ಅಕ್ಷತಾ ಮೂರ್ತಿ ಅವರೊಂದಿಗೆ ರಿಷಿ ಸುನಕ್ ಆಗಮಿಸಿದ್ದಾರೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಬ್ರಿಟನ್​ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ರಿಷಿ ಸುನಕ್ ಮೊದಲ ಬಾರಿಗೆ ಭಾರತಕ್ಕೆ ಬಂದಿದ್ದಾರೆ.

ಇಲ್ಲಿನ ವಿಮಾನ ನಿಲ್ದಾಣದಲ್ಲಿ ರಿಷಿ ಸುನಕ್ ಹಾಗೂ ಪತ್ನಿ ಅಕ್ಷತಾ ಮೂರ್ತಿ ಅವರನ್ನು ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಬರಮಾಡಿಕೊಂಡರು. ಅಲ್ಲದೇ, ಸುನಕ್ ದಂಪತಿಯನ್ನು ಭಾರತೀಯ ಸಾಂಪ್ರದಾಯಿಕ ನೃತ್ಯಗಳೊಂದಿಗೆ ಕಲಾ ತಂಡಗಳು ಸ್ವಾಗತಿಸಿದವು.

G20 Summit: ಬ್ರಿಟನ್​ ಪ್ರಧಾನಿಯಾಗಿ ಮೊದಲ ಬಾರಿಗೆ ಭಾರತಕ್ಕೆ ಆಗಮಿಸಿದ ರಿಷಿ ಸುನಕ್

ದೆಹಲಿಗೆ ಆಗಮಿಸುವ ಮುನ್ನ ಟ್ವೀಟ್​ ಮಾಡಿದ್ದ ರಿಷಿ ಸುನಕ್, ನಾನು ಸ್ಪಷ್ಟ ಗಮನದೊಂದಿಗೆ ಜಿ20 ಶೃಂಗಸಭೆಗೆ ಹೋಗುತ್ತಿದ್ದೇನೆ. ಜಾಗತಿಕ ಆರ್ಥಿಕತೆಯನ್ನು ಸ್ಥಿರಗೊಳಿಸುವುದು. ಅಂತಾರಾಷ್ಟ್ರೀಯ ಸಂಬಂಧಗಳನ್ನು ನಿರ್ಮಿಸುವುದು ಹಾಗೂ ಅತ್ಯಂತ ದುರ್ಬಲರನ್ನು ಬೆಂಬಲಿಸುವುದು ಶೃಂಗಸಭೆಯ ಭಾಗವಾಗಿದೆ ಎಂದು ತಿಳಿಸಿದ್ದರು.

ಪ್ರಧಾನಿ ನರೇಂದ್ರ ಮೋದಿ ಸೆಪ್ಟೆಂಬರ್ 9ರಂದು ರಿಷಿ ಸುನಕ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದೇ ವರ್ಷದ ಮೇನಲ್ಲಿ ಹಿರೋಷಿಮಾದಲ್ಲಿ ನಡೆದ ಜಿ7 ಶೃಂಗಸಭೆಯ ಸಂದರ್ಭದಲ್ಲಿ ಉಭಯ ನಾಯಕರು ಭೇಟಿಯಾಗಿದ್ದರು. ಭಾರತ - ಇಂಗ್ಲೆಂಡ್​​ ಮುಕ್ತ ವ್ಯಾಪಾರ ಒಪ್ಪಂದ, ನಾವೀನ್ಯತೆ ಮತ್ತು ವಿಜ್ಞಾನದ ಜೊತೆಗೆ ಉಭಯ ದೇಶಗಳ ನಡುವಿನ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸುವ ಮಾರ್ಗಗಳ ಬಗ್ಗೆ ಪ್ರಧಾನಿ ಮೋದಿ ಹಾಗೂ ರಿಷಿ ಸುನಕ್ ಚರ್ಚಿಸಿದ್ದರು.

ಪ್ರಸ್ತುತ ಜಿ -20 ಅಧ್ಯಕ್ಷತೆ ವಹಿಸಿರುವ ಭಾರತವು ಈ ಶೃಂಗಸಭೆ ಆಯೋಜಿಸಿದೆ. ಈ ಸಭೆಗಾಗಿ ಜಾಗತಿಕ ಮಟ್ಟದ ನಾಯಕರು ಆಗಮಿಸಲು ಆರಂಭಿಸಿದ್ದಾರೆ. ಇಂದು ಬೆಳಗ್ಗೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ, ಅರ್ಜೆಂಟೀನಾದ ಅಧ್ಯಕ್ಷ ಆಲ್ಬರ್ಟೊ ಫೆರ್ನಾಂಡಿಸ್ ಮತ್ತು ಐಎಂಎಫ್​ ಮುಖ್ಯಸ್ಥೆ ಕ್ರಿಸ್ಟಲಿನಾ ಜಾರ್ಜಿವಾ, ಯೂನಿಯನ್ ಆಫ್ ಕೊಮೊರೊಸ್ ಅಧ್ಯಕ್ಷ ಮತ್ತು ಆಫ್ರಿಕನ್ ಯೂನಿಯನ್ ಅಧ್ಯಕ್ಷ ಅಜಲಿ ಅಸ್ಸೌಮಾನಿ ಸೇರಿ ಉನ್ನತ ಜಿ-20 ನಾಯಕರು ಭಾರತಕ್ಕೆ ಬಂದಿಳಿದಿದ್ದಾರೆ.

ಜಿ20 ಶೃಂಗಸಭೆಗಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್​ ಅಮೆರಿಕದಿಂದ ಭಾರತಕ್ಕೆ ಪ್ರಯಾಣ ಬೆಳೆಸಿದ್ದಾರೆ. ಇಂದು ಸಂಜೆ 7 ಗಂಟೆ ಸುಮಾರಿಗೆ ಅವರು ದೆಹಲಿಗೆ ಬಂದಿಳಿಯಲಿದ್ದಾರೆ. ಮತ್ತೊಂದೆಡೆ, ಈ ಶೃಂಗಸಭೆಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಗೈರಾಗುತ್ತಿದ್ದಾರೆ.

ಇದನ್ನೂ ಓದಿ: ಜಿ20 ಶೃಂಗಸಭೆಗೆ ಜಾಗತಿಕ ನಾಯಕರ ಆಗಮನ: ಇಟಲಿ ಪ್ರಧಾನಿಯನ್ನು ಸ್ವಾಗತಿಸಿದ ಸಚಿವೆ ಶೋಭಾ ಕರಂದ್ಲಾಜೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.