ETV Bharat / bharat

2024ರಲ್ಲಿ ಮತ್ತೊಂದು ರೈತ ಆಂದೋಲನ: ರಾಕೇಶ್​ ಟಿಕಾಯತ್

author img

By

Published : Dec 12, 2022, 9:19 AM IST

rakesh-tikait
ರಾಕೇಶ್​ ಟಿಕಾಯತ್

ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ರೈತ ಮುಖಂಡ ರಾಕೇಶ್​ ಟಿಕಾಯತ್​ ಕಿಡಿಕಾರಿದ್ದಾರೆ. 2024 ರಲ್ಲಿ ಮತ್ತೊಂದು ದೊಡ್ಡ ರೈತ ಆಂದೋಲನ ನಡೆಯಲಿದೆ ಎಂದು ಹೇಳಿದ್ದಾರೆ.

ಬಸ್ತಿ (ಉತ್ತರ ಪ್ರದೇಶ): ಕೇಂದ್ರ ಸರ್ಕಾರ ಜಾರಿ ಮಾಡಿದ್ದ ನೂತನ ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯಲ್ಲಿ ಹೋರಾಡಿ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿದ್ದ ರೈತ ಮುಖಂಡ ರಾಕೇಶ್​ ಟಿಕಾಯತ್​ ಮತ್ತೊಂದು ಬೃಹತ್​ ಹೋರಾಟದ ಮುನ್ಸೂಚನೆ ನೀಡಿದ್ದಾರೆ. ಸರ್ಕಾರಗಳಿಂದ ರೈತರು ಯಾವುದೇ ಲಾಭ ಪಡೆದಿಲ್ಲ. ಇದು ಕೆರಳಿಸಿದ್ದು 2024ರ ವೇಳೆಗೆ ಮತ್ತೊಂದು ದೊಡ್ಡ ಆಂದೋಲನ ನಡೆಯಲಿದೆ ಎಂದು ಹೇಳಿದ್ದಾರೆ.

ಉತ್ತರ ಪ್ರದೇಶದ ಬಸ್ತಿಯಲ್ಲಿ ಭಾನುವಾರ ನಡೆದ ಕಿಸಾನ್ ಸಮ್ಮೇಳನದಲ್ಲಿ ರಾಕೇಶ್ ಟಿಕಾಯತ್​, ನೀರಾವರಿ ಬೆಳೆಗಳಿಗೆ ಸರ್ಕಾರ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡುವುದರಲ್ಲಿ ಸೋತಿದೆ. ಇದರಿಂದ ರೈತರಿಗೆ ಅನ್ಯಾಯವಾಗಿದೆ. ಉಚಿತ ವಿದ್ಯುತ್ ಹೆಸರಲ್ಲಿ ಮೀಟರ್ ಅಳವಡಿಸಿ ರೈತರನ್ನು ಶೋಷಣೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಭತ್ತ ಮತ್ತು ಕಬ್ಬು ಬೆಳೆದ ರೈತರು ಉತ್ಪನ್ನಗಳಿಗೆ ಸಮರ್ಪಕ ಬೆಲೆ ಸಿಗದೇ ಕಂಗಾಲಾಗಿದ್ದಾರೆ. ಬೆಳೆಯನ್ನು ಮಾರಾಟ ಮಾಡಲಾಗದೇ ನಷ್ಟ ಅನುಭವಿಸುತ್ತಿದ್ದಾರೆ. ರೈತರ ಹಿತದೃಷ್ಟಿಯಿಂದಾಗಿ ಸರ್ಕಾರ ಕೂಡಲೇ ಎಂಎಸ್‌ಪಿ ಕಾನೂನು ಜಾರಿ ಮಾಡಬೇಕು. ಆಗ ಮಾತ್ರ ರೈತರ ಉದ್ಧಾರ ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಪ್ರತಿಪಕ್ಷಗಳಿಗೂ ತರಾಟೆ: ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ ಟಿಕಾಯತ್​, ಪ್ರತಿಪಕ್ಷಗಳ ಬಗ್ಗೆಯೂ ಚಕಾರ ಎತ್ತಿದ್ದಾರೆ. ಸರ್ಕಾರದ ವಿರುದ್ಧ ಮಾತನಾಡಲು ಪ್ರತಿಪಕ್ಷಗಳಿಗೆ ಭಯವಿದೆ. ಸದನದಲ್ಲಿ ರೈತರ ಬಗ್ಗೆ ಮಾತನಾಡುವುದಿಲ್ಲ. ರೈತರೇ ತಮ್ಮ ಕಷ್ಟಗಳ ಪರಿಹಾರಕ್ಕಾಗಿ 2024 ರಲ್ಲಿ ಬೃಹತ್ ಆಂದೋಲನವನ್ನು ಪ್ರಾರಂಭಿಸಲಿದ್ದಾರೆ. ಅದರ ನಂತರ ಎಲ್ಲವೂ ಬದಲಾವಣೆಯಾಗಲಿದೆ ಎಂದರು.

ಪ್ರಧಾನಿ ಮೋದಿ ಸರ್ವಾಧಿಕಾರಿ: ಪ್ರಧಾನಿ ನರೇಂದ್ರ ಮೋದಿ ಅವರ ಕಡುವೈರಿಯಾಗಿರುವ ರಾಕೇಶ್​ ಟಿಕಾಯತ್​ ಸರ್ವಾಧಿಕಾರಿ ಎಂದು ಬಣ್ಣಿಸಿದ್ದಾರೆ. 2024ರಲ್ಲಿ ಕೇಂದ್ರದಲ್ಲಿ ಮತ್ತೆ ಬಿಜೆಪಿ ಸರ್ಕಾರ ಬಂದರೆ, ಸರ್ವಾಧಿಕಾರಿ ನಾಯಕತ್ವ ಬೆಳೆಯಲಿದೆ. ನರೇಂದ್ರ ಮೋದಿ ಅವರು ಸರ್ವಾಧಿಕಾರಿಯಾಗಲಿದ್ದಾರೆ. ಇದು ದೇಶದ ಮಟ್ಟಿಗೆ ಒಳ್ಳೆಯದಲ್ಲ. ಗುಜರಾತ್ ಚುನಾವಣೆಯಲ್ಲಿ ನ್ಯಾಯಯುತವಾಗಿ ಮತದಾನ ನಡೆದಿಲ್ಲ. ಬಿಜೆಪಿ ಅಧಿಕಾರಲ್ಲಿರುವ ರಾಜ್ಯಗಳಲ್ಲಿ ಇದು ಸಾಮಾನ್ಯ ಎಂದು ಆರೋಪಿಸಿದರು.

ಓದಿ: ಗುಜರಾತ್​ ಸಿಎಂ ಆಗಿ ಭೂಪೇಂದ್ರ ಪಟೇಲ್​ ಇಂದು ಪದಗ್ರಹಣ.. ಪ್ರಧಾನಿ ಮೋದಿ, ಅಮಿತ್​ ಶಾ ಭಾಗಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.