ETV Bharat / bharat

ಅನಂತ್‌ನಾಗ್‌ನಲ್ಲಿ 3ನೇ ದಿನವೂ ಮುಂದುವರಿದ ಎನ್​ಕೌಂಟರ್​: ಯೋಧ ನಾಪತ್ತೆ, ಇಬ್ಬರಿಗೆ ಗಾಯ

author img

By ETV Bharat Karnataka Team

Published : Sep 15, 2023, 3:13 PM IST

Updated : Sep 15, 2023, 5:08 PM IST

encounter continues for third day in anantnag
ಮೂರನೇ ದಿನವೂ ಮುಂದುವರಿದ ಎನ್​ಕೌಂಟರ್

ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನೆ ವಿರೋಧಿ ಮಿಲಿಟರಿ ಕಾರ್ಯಾಚರಣೆ ಮುಂದುವರೆದಿದೆ. ಅನಂತ್‌ನಾಗ್‌ನಲ್ಲಿ ಸತತ ಮೂರನೇ ದಿನವೂ ಭಾರತೀಯ ಸೇನೆ ಮತ್ತು ಅಡಗಿ ಕುಳಿತ ಉಗ್ರರ ನಡುವೆ ಗುಂಡಿನ ಚಕಮಕಿ ಮುಂದುವರೆದಿದೆ.

ಅನಂತ್‌ನಾಗ್‌ನಲ್ಲಿ 3ನೇ ದಿನವೂ ಮುಂದುವರಿದ ಎನ್​ಕೌಂಟರ್

ಅನಂತ್​ನಾಗ್​ (ಜಮ್ಮು ಮತ್ತು ಕಾಶ್ಮೀರ): ದಕ್ಷಿಣ ಕಾಶ್ಮೀರದ ಅನಂತ್​ನಾಗ್​ ಜಿಲ್ಲೆಯ ಕೋಕರ್​ನಾಗ್​ ಪ್ರದೇಶದಲ್ಲಿ ಭಾರತೀಯ ಸೇನೆ ಹಾಗೂ ಭಯೋತ್ಪಾದಕರ ನಡುವೆ ನಡೆಯುತ್ತಿರುವ ಗುಂಡಿನ ಚಕಮಕಿಯಲ್ಲಿ ಯೋಧರೊಬ್ಬರು ನಾಪತ್ತೆಯಾಗಿದ್ದಾರೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ ಎಂದು ಸೇನೆ ತಿಳಿಸಿದೆ.

ಬುಧವಾರ ಸಂಜೆ ಆರಂಭವಾದ ಎನ್​ಕೌಂಟರ್​ ಶುಕ್ರವಾರವೂ ಮುಂದುವರಿದಿದೆ. ಜಿಲ್ಲೆಯ ಗುಡ್ಡಗಾಡು ಪ್ರದೇಶಗಳಲ್ಲಿ ಅಡಗಿರುವ ಭಯೋತ್ಪಾದಕರ ಸ್ಥಳಗಳನ್ನು ಪತ್ತೆ ಹಚ್ಚಲು ಸೇನಾ ಪಡೆಗಳು ಡ್ರೋನ್​ ಕ್ಯಾಮರಾಗಳನ್ನು ಹಾಗೂ ಕ್ವಾಡ್​ಕಾಪ್ಟರ್​ಗಳನ್ನು ಬಳಸುತ್ತಿದೆ. ಸ್ಥಳಗಳ ಮೇಲೆ ಸೇನಾ ಪಡೆಗಳು ಮೋರ್ಟರ್​ ಶೆಲ್‌ಗಳಿಂದ ದಾಳಿ ಮಾಡುತ್ತಿವೆ. ಈ ಪ್ರದೇಶಗಳಲ್ಲಿ ವ್ಯಾಪಕ ಬಂದೋಬಸ್ತ್​ ಮಾಡಲಾಗಿದೆ ಎಂದು ಮಾಹಿತಿ ನೀಡಿದೆ.

ಮಾಹಿತಿಯ ಪ್ರಕಾರ, ಗುರುವಾರ ರಾತ್ರಿಯಿಡೀ ಎರಡೂ ಕಡೆಯಿಂದ ಗುಂಡಿನ ದಾಳಿ ನಿಂತಿತ್ತು. ಗಡೂಲ್​ ಪ್ರದೇಶದಲ್ಲಿ ಶುಕ್ರವಾರ ಸೂರ್ಯೋದಯಕ್ಕೂ ಮುನ್ನವೇ ಭಯೋತ್ಪಾದಕರು ಹಾಗೂ ಭದ್ರತಾ ಪಡೆಗಳ ನಡುವೆ ಗುಂಡಿನ ಮೊರೆತ ಹಾಗೂ ಸ್ಫೋಟಗಳ ಸದ್ದು ಕೇಳಿಬಂದಿದ್ದವು.

ಅನಂತ್​ನಾಗ್​ ಜಿಲ್ಲೆಯ ಎತ್ತರದ ಪ್ರದೇಶದಲ್ಲಿ ಇಬ್ಬರು ಲಷ್ಕರ್​-ಎ-ತೊಯ್ಬಾ ಭಯೋತ್ಪಾದಕರನ್ನು ಸುತ್ತುವರಿಯಲಾಗಿದೆ. ಗಡೋಲ್​ ಅರಣ್ಯದಲ್ಲಿ ಅಡಗಿರುವ ಭಯೋತ್ಪಾದಕರನ್ನು ಮಟ್ಟ ಹಾಕಲು ಶುಕ್ರವಾರ ಬೆಳಗ್ಗೆ ಹೆಚ್ಚುವರಿ ಪಡೆಗಳನ್ನು ಆ ಪ್ರದೇಶಕ್ಕೆ ಕಳುಹಿಸಲಾಗಿದೆ. ಹೆಲಿಕಾಪ್ಟರ್​ಗಳ ಮೂಲಕ ಗಡೂಲ್​ ಅರಣ್ಯಗಳ ಮೇಲೆ ಕಟ್ಟುನಿಟ್ಟಿನ ನಿಗಾ ಇರಿಸಲಾಗಿದೆ. ಈ ಪ್ರದೇಶದಲ್ಲಿ ಸೇನೆ ಮತ್ತು ಪೊಲೀಸ್​ ಸಿಬ್ಬಂದಿ ಬಿಗಿ ಬಂದೋಬಸ್ತ್​ ಮಾಡಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.

ಕೊಕೆರ್ನಾಗ್​ ಪ್ರದೇಶದ ಗಡೂಲ್​ ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿ ಅಡಗಿಕೊಂಡಿರುವ ಭಯೋತ್ಪಾದಕರನ್ನು ಸೆರೆ ಹಿಡಿಯಲು ಸೇನೆ, ಪೊಲೀಸರು ಹಾಗೂ ಅರೆಸೇನಾ ಪಡೆ, ಸಿಆರ್​ಪಿಎಫ್​ ಬುಧವಾರ ಸಂಜೆ ಜಂಟಿ ಭದ್ರತಾ ಕಾರ್ಯಾಚರಣೆ ಆರಂಭಿಸಿತ್ತು.

ಗಡೂಲ್​ ಸುತ್ತಮುತ್ತ ಎರಡರಿಂದ ಮೂವರು ಭಯೋತ್ಪಾದಕರು ಅಡಗಿಕೊಂಡಿದ್ದಾರೆ ಎನ್ನುವ ಸುಳಿವಿನ ಆಧಾರದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಮೂರು ದಿನಗಳಿಂದ ನಡೆಯುತ್ತಿರುವ ಭಯೋತ್ಪಾದಕರೊಂದಿಗಿನ ಭೀಕರ ಗುಂಡಿನ ಚಕಮಕಿಯಲ್ಲಿ ಕರ್ನಲ್​ ಮನ್​ಪ್ರೀತ್​ ಸಿಂಗ್​, 19 ರಾಷ್ಟ್ರೀಯ ರೈಫಲ್ಸ್​ನ ಮೇಜರ್​ ಆಶಿಶ್​ ಧೋಂಚಕ್​ ಹಾಗೂ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಇಳಾಖೆಯ ಡಿಎಸ್​ಪಿ ಹುಮಾಯೂನ್​ ಭಟ್​ ಹುತಾತ್ಮರಾಗಿದ್ದಾರೆ.

ಇದನ್ನೂ ಓದಿ: ಹುತಾತ್ಮ ಯೋಧರಿಗೆ ಅಂತಿಮ ನಮನ ಸಲ್ಲಿಸಿದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ

Last Updated :Sep 15, 2023, 5:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.