ETV Bharat / bharat

ಒಂದೇ ದಿನ ಅಫ್ಘಾನಿಸ್ತಾನ, ತಜಕಿಸ್ತಾನ, ಮಣಿಪುರದಲ್ಲಿ ನಡುಗಿದ ಭೂಮಿ

author img

By

Published : Feb 28, 2023, 7:14 AM IST

ಅಫ್ಘಾನಿಸ್ತಾನ, ತಜಕಿಸ್ತಾನ, ಭಾರತದಲ್ಲಿ ಭೂಕಂಪನ- ಮಣಿಪುರದಲ್ಲಿ ಕಂಪಿಸಿದ ಭೂಮಿ- ಕಡಿಮೆ ಪ್ರಮಾಣದ ಕಂಪನಗಳು- ಸಾವು ನೋವಿನ ಬಗ್ಗೆ ಮಾಹಿತಿ ಸಿಕ್ಕಿಲ್ಲ

ಮಣಿಪುರದಲ್ಲಿ ನಡುಗಿದ ಭೂಮಿ
ಮಣಿಪುರದಲ್ಲಿ ನಡುಗಿದ ಭೂಮಿ

ಮಣಿಪುರ, ಕಾಬೂಲ್​: ಭೀಕರ ಭೂಕಂಪನಕ್ಕೆ ಸಿಲುಕಿರುವ ಟರ್ಕಿ ಮತ್ತು ಸಿರಿಯಾದಲ್ಲಿ 45 ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಭಾನುವಾರ ಮತ್ತೊಮ್ಮೆ ಅಲ್ಲಿ 5.6 ತೀವ್ರತೆಯ ಭೂಕಂಪನ ಸಂಭವಿಸಿ ಮತ್ತೊಬ್ಬರು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಅಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಈ ನಡುವೆ ಭಾರತದ ಮಣಿಪುರ, ಅಪ್ಘಾನಿಸ್ತಾನ ಮತ್ತು ತಜಕಿಸ್ತಾನದಲ್ಲಿ ಇಂದು ನಸುಕಿನ ಜಾವವೇ ಭೂಮಿ ನಡುಗಿದೆ. 3.1 ರಿಂದ 4.3 ಪ್ರಮಾಣದಲ್ಲಿ ಭೂಕಂಪನ ಉಂಟಾಗಿದೆ. ಈವರೆಗೂ ಯಾವುದೇ ಸಾವು ನೋವಿನ ಬಗ್ಗೆ ಮಾಹಿತಿ ಸಿಕ್ಕಿಲ್ಲ.

ಮಂಗಳವಾರ ಮುಂಜಾನೆ ಮಣಿಪುರದ ನೋನಿ ಜಿಲ್ಲೆಯಲ್ಲಿ 3.2 ತೀವ್ರತೆಯ ಭೂಕಂಪ ಸಂಭವಿಸಿದೆ. ನಸುಕಿನ ಜಾವ 2.46 ರ ಸುಮಾರಿಗೆ 25 ಕಿ.ಮೀ ಆಳದಲ್ಲಿ ಭೂಕಂಪ ಅಲೆಗಳು ಎದ್ದಿವೆ. ಇದು 93 ಕಿಮೀ ವ್ಯಾಪ್ತಿಯಲ್ಲಿ ಉಂಟಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್​ಸಿಎಸ್​​) ತಿಳಿಸಿದೆ.

ಫೆಬ್ರವರಿ 19 ರಂದು ಆಂಧ್ರಪ್ರದೇಶದ ಎನ್​​ಟಿಆರ್ ಜಿಲ್ಲೆಯ ನಂದಿಗಾಮ ಪಟ್ಟಣದಲ್ಲಿ ಭೂಕಂಪ ಸಂಭವಿಸಿತ್ತು. ಯಾವುದೇ ಪ್ರಾಣ ಹಾನಿ ವರದಿಯಾಗಿಲ್ಲ. ಭಾನುವಾರ ಬೆಳಗ್ಗೆ 7.13ರ ಸುಮಾರಿಗೆ ಭೂಕಂಪ ಸಂಭವಿಸಿದ್ದು, 3.4 ಸೆಕೆಂಡ್​​ಗಳ ಕಾಲ ಭೂಕಂಪನ ಸಂಭವಿಸಿದೆ. ಭಯಭೀತರಾದ ಜನರು ತಮ್ಮ ಮನೆಗಳಿಂದ ಹೊರಗೆ ಓಡಿ ಬಂದಿದ್ದರು. ಅದೇ ದಿನ ಮಧ್ಯಪ್ರದೇಶದಲ್ಲಿ ರಿಕ್ಟರ್ ಮಾಪಕದಲ್ಲಿ 3.0 ತೀವ್ರತೆಯ ಭೂಕಂಪ ಸಂಭವಿಸಿರುವುದು ದಾಖಲಾಗಿದೆ.

ಭೂಕಂಪವು ಇಂದೋರ್‌ನಿಂದ ಸುಮಾರು 151 ಕಿ. ಮೀ. ನೈಋತ್ಯಕ್ಕೆ ಮಧ್ಯಾಹ್ನ 1 ಗಂಟೆ ಸುಮಾರಿಗೆ ಧಾರ್‌ಗೆ ಅಪ್ಪಳಿಸಿತು. ಭೂಕಂಪದ ಕೇಂದ್ರಬಿಂದುವು ಭೂಮಿಯ ಮೇಲ್ಮೈಯಿಂದ 10 ಕಿಮೀ ಆಳದಲ್ಲಿದೆ ಎಂದು ಭೂಕಂಪನದ ರಾಷ್ಟ್ರೀಯ ಕೇಂದ್ರದ ತಿಳಿಸಿದೆ.

ಅಫ್ಘಾನಿಸ್ತಾನದಲ್ಲಿ ನಡುಕ: ಅಫ್ಘಾನಿಸ್ತಾನದಲ್ಲಿ ಇಂದು ಬೆಳಗ್ಗೆ 4.1 ತೀವ್ರತೆಯ ಭೂಕಂಪ ಸಂಭವಿಸಿದೆ. 04:05 ನಿಮಿಷದ ವೇಳೆ ದೇಶದ ವಿವಿಧೆಡೆ 10 ಕಿಮೀ ಆಳದಲ್ಲಿ ಕಂಪನದ ಅಲೆಗಳು ಕೇಂದ್ರಿಕೃತವಾಗಿವೆ. 36.38 ಅಕ್ಷಾಂಶ ಮತ್ತು 70.94 ರೇಖಾಂಶದಲ್ಲಿ ಈ ಭೂಕಂಪನ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.

ಇದೇ ರೀತಿ ತಜಕಿಸ್ತಾನದಲ್ಲೂ ಭೂಮಿ ಕಂಪಿಸಿದ ಅನುಭವವಾಗಿದೆ. ತುಸು ಹೆಚ್ಚು ಅಂದರೆ 4.3 ತೀವ್ರತೆಯಲ್ಲಿ ಭೂಮಿ ಕಂಪಿಸಿದೆ. ರಿಕ್ಟರ್​ ಮಾಪಕದಲ್ಲಿ ಇದು ದಾಖಲಾಗಿದೆ. ಯಾವುದೇ ದೇಶಗಳಲ್ಲಿ ಸಾವು ನೋವಾದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಟರ್ಕಿ, ಸಿರಿಯಾ ದುರಂತ: ಟರ್ಕಿ, ಸಿರಿಯಾದಲ್ಲಿ ಭೀಕರ ಭೂಕಂಪನ ಉಂಟಾಗಿ 50 ಸಾವಿರಕ್ಕೂ ಅಧಿಕ ಜನರು ಸಾವನ್ನಪ್ಪಿದರೆ, ಲಕ್ಷಾಂತರ ಜನರು ಗಾಯಗೊಂಡಿದ್ದಾರೆ. 12 ಲಕ್ಷ ಮನೆಗಳು ಭಾಗಶಃ, ಪೂರ್ಣ ಹಾನಿಗೀಡಾಗಿವೆ ಎಂದು ಅಲ್ಲಿನ ಸರ್ಕಾರಗಳು ತಿಳಿಸಿವೆ.

ಟರ್ಕಿಯ ಸುಮಾರು 95% ಭೂಪ್ರದೇಶವು ಭೂಕಂಪನ ಉಂಟಾಗುವ ಶಿಲಾಪದರದ ಮೇಲಿದೆ. ದೇಶದ ಮೂರನೇ ಒಂದು ಭಾಗ ಹೆಚ್ಚಿನ ಅಪಾಯದಲ್ಲಿದೆ. ಇದಲ್ಲದೇ, ಇಸ್ತಾನ್‌ಬುಲ್, ಇಜ್ಮಿರ್ ಕೂಡ ಇದೇ ಆತಂಕ ಎದುರಿಸುತ್ತಿದೆ. ಟರ್ಕಿಯಲ್ಲಿ 2020 ರಲ್ಲಿ ಸುಮಾರು 33,000 ಭೂಕಂಪಗಳು ಉಂಟಾಗಿವೆ. ಇವುಗಳಲ್ಲಿ 332 ಭೂಕಂಪಗಳು 4.0 ಮತ್ತು ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿರುವುದು ದಾಖಲಾಗಿವೆ.

ಓದಿ: ನಡುಕ ನಿಲ್ಲಿಸದ ಟರ್ಕಿ: ಮತ್ತೆ 5.6 ತೀವ್ರತೆಯ ಕಂಪನ; ಧರೆಗುರುಳಿದ ಕಟ್ಟಡಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.