ETV Bharat / bharat

ಪೆಟ್​​ ಕ್ಲಿನಿಕ್​ನಲ್ಲಿ ಲ್ಯಾಬ್ರಡಾರ್ ಶ್ವಾನ ಸಾವು: ವೈದ್ಯರು ಸೇರಿ ನಾಲ್ವರ ವಿರುದ್ಧ ಕೇಸ್

author img

By ETV Bharat Karnataka Team

Published : Nov 23, 2023, 6:45 PM IST

Dog dies at pet clinic; Case filed against four persons including doctors in Pune
ಪೆಟ್​​ ಕ್ಲಿನಿಕ್​ನಲ್ಲಿ ಲ್ಯಾಬ್ರಡಾರ್ ಶ್ವಾನ ಸಾವು: ವೈದ್ಯರು ಸೇರಿ ನಾಲ್ವರ ವಿರುದ್ಧ ಕೇಸ್

Dog Dies at Pet Clinic: ಮಹಾರಾಷ್ಟ್ರದ ಪುಣೆಯ ಪೆಟ್ ಕ್ಲಿನಿಕ್​ನಲ್ಲಿ ಲ್ಯಾಬ್ರಡಾರ್ ಶ್ವಾನ ಸಾವನ್ನಪ್ಪಿದ ಘಟನೆ ಸಂಬಂಧ ಇಬ್ಬರು ವೈದ್ಯರು ಸೇರಿದಂತೆ ನಾಲ್ವರ ವಿರುದ್ಧ ಶ್ವಾನದ ಮಾಲಕಿ ಕೇಸ್​ ದಾಖಲಿಸಿದ್ದಾರೆ.

ಪುಣೆ (ಮಹಾರಾಷ್ಟ್ರ): ಸಾಕು ಪ್ರಾಣಿಗಳ ಕ್ಲಿನಿಕ್​ (Pet Clinic)ನಲ್ಲಿ ಸಾಕು ನಾಯಿಯೊಂದು ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಪುಣೆಯಲ್ಲಿ ಇಬ್ಬರು ವೈದ್ಯರು ಸೇರಿದಂತೆ ನಾಲ್ವರ ವಿರುದ್ಧ ಪೊಲೀಸ್​ ಕೇಸ್​ ದಾಖಲಾಗಿದೆ. ಶ್ವಾನದ ಮಾಲಕಿ ನೀಡಿದ ದೂರಿನ ಮೇರೆಗೆ ಪೊಲೀಸರು ಪೆಟ್ ಕ್ಲಿನಿಕ್​ನ ವೈದ್ಯರನ್ನು ವಿಚಾರಣೆಗೂ ಒಳಪಡಿಸಿದ್ದಾರೆ.

ಇಲ್ಲಿನ ಪಾಶಾನ್‌ ಉಪನಗರದಲ್ಲಿರುವ ಪೆಟ್ ಕ್ಲಿನಿಕ್‌ಗೆ ನವೆಂಬರ್ 17ರಂದು ಸಂಜೆ 35 ವರ್ಷದ ಮಹಿಳೆಯೊಬ್ಬರು ತಮ್ಮ 'ಹನಿ' ಎಂಬ ಲ್ಯಾಬ್ರಡಾರ್ ಶ್ವಾನವನ್ನು ಕರೆತಂದಿದ್ದರು. ವಾರ್ಷಿಕ ವ್ಯಾಕ್ಸಿನೇಷನ್ ಹಾಗೂ ಉಗುರು ಟ್ರಿಮ್ಮಿಂಗ್​ಗೆಂದು ಶ್ವಾನವನ್ನು ಪೆಟ್ ಕ್ಲಿನಿಕ್‌ನ ವೈದ್ಯರಿಗೆ ಮಾಲಕಿ ಒಪ್ಪಿಸಿದ್ದರು. ಡಾ. ಶುಭಂ ರಜಪೂತ್ ಹಾಗೂ ಇತರ ಇಬ್ಬರು ಸೇರಿಕೊಂಡು ಶ್ವಾನವನ್ನು ಮರಕ್ಕೆ ಕಟ್ಟಲು ಪ್ರಯತ್ನಿಸುತ್ತಿದ್ದರು. ಆದರೆ, ಡಾ. ರಜಪೂತ್ ಕಟ್ಟಿದ್ದ ಬೆಲ್ಟ್​ ಶ್ವಾನದ ಕುತ್ತಿಗೆಗೆ ಬಿಗಿದುಕೊಂಡಿದೆ. ಪರಿಣಾಮ ಶ್ವಾನ ಕುಸಿದು ಕೆಳಗೆ ಬಿದ್ದಿದೆ.

ನಂತರ ಚಿಕಿತ್ಸೆಗಾಗಿ ವೈದ್ಯರ ಕೊಠಡಿಗೆ ಶ್ವಾನವನ್ನು ಎತ್ತಿಕೊಂಡು ಹೋಗಲಾಗಿದೆ. ಆಗ 15 ನಿಮಿಷಗಳ ಬಳಿಕ ಮತ್ತೊಬ್ಬ ವೈದ್ಯ ಶ್ವಾನ ಮೃತಪಟ್ಟಿದೆ ಎಂದು ಮಾಲಕಿಗೆ ತಿಳಿಸಿದ್ದಾರೆ. ಆದರೆ, ಶ್ವಾನದ ಸಾವಿನ ಕಾರಣದ ಕುರಿತು ಸರಿಯಾದ ಮಾಹಿತಿಯನ್ನು ಈ ವೈದ್ಯರು ನೀಡಿಲ್ಲ. ಹೀಗಾಗಿ ಈ ಘಟನೆಯ ನಂತರ ಮಾಲಕಿ ಚತುರ್ಶೃಂಗಿ ಪೊಲೀಸ್ ಠಾಣೆಗೆ ಬಂದು ಡಾ.ಸಜೀನ್ ರಾಜಾಧ್ಯಕ್ಷ (60), ಡಾ.ಶುಭಂ ರಜಪೂತ್ (35) ಮತ್ತು ಇಬ್ಬರು ಅಪರಿಚಿತ ವ್ಯಕ್ತಿಗಳು ಸೇರಿ ಒಟ್ಟು ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ದೂರುದಾರ ಮಾಲಕಿಯು ಲ್ಯಾಬ್ರಡಾರ್ ಶ್ವಾನ 'ಹನಿ'ಯನ್ನು ಕಳೆದ 12 ವರ್ಷಗಳಿಂದ ಸಾಕುತ್ತಿದ್ದರು. ಅದನ್ನು 40 ದಿನಗಳ ಮರಿಯಾಗಿದ್ದಾಗಲೇ ಮನೆಗೆ ತರಲಾಗಿತ್ತು. ಕ್ಲಿನಿಕ್​ನಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಶ್ವಾನ ಮೃತಪಟ್ಟಿದೆ ಎಂದು ತಮ್ಮ ದೂರಿನಲ್ಲಿ ಅವರು ಉಲ್ಲೇಖಿಸಿದ್ದಾರೆ.

ಈ ಕುರಿತು ಚತುರ್ಶೃಂಗಿ ಠಾಣೆಯ ಹಿರಿಯ ಪೊಲೀಸ್ ನಿರೀಕ್ಷಕ ಬಾಲಾಜಿ ಪಾಂಡೆ ಪ್ರತಿಕ್ರಿಯಿಸಿ, ಶ್ವಾನವನ್ನು ಉಪಚರಿಸಲೆಂದು ಪೆಟ್ ಕ್ಲಿನಿಕ್‌ಗೆ ಕರೆದೊಯ್ದಾಗ ಅದು ಮೃತಪಟ್ಟಿದೆ ಎಂಬ ಕುರಿತು ದೂರು ಸ್ವೀಕರಿಸಲಾಗಿದೆ. ಈ ಸಂಬಂಧ ಸಂಬಂಧಪಟ್ಟ ಪೆಟ್ ಕ್ಲಿನಿಕ್​ನ ವೈದ್ಯರಿಗೆ ಕರೆ ಮಾಡಿ ವಿಚಾರಿಸಲಾಗಿದೆ. ಆದರೆ, ಅವರಿಂದ ಯಾವುದೇ ರೀತಿಯ ಸೂಕ್ತ ಪ್ರತಿಕ್ರಿಯೆ ಬಂದಿಲ್ಲ. ಸದ್ಯಕ್ಕೆ ಕುತ್ತಿಗೆ ಬಿಗಿದುಕೊಂಡು ಶ್ವಾನ ಸಾವನ್ನಪ್ಪಿದೆ ಎಂಬ ದೂರಿನ ಕಾರಣ ಕಲಂ 429ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ವಿವರಿಸಿದ್ದಾರೆ.

ಇದನ್ನೂ ಓದಿ: ಮಹಿಳೆಗೆ ಸಾಕು ನಾಯಿ ಕಚ್ಚಿದ ಪ್ರಕರಣ: ಠಾಣಾ ವಿಚಾರಣೆಗೆ ಹಾಜರಾದ ನಟ ದರ್ಶನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.