ETV Bharat / bharat

ICC Cricket World Cup 2023: ವಿಶ್ವಕಪ್ ಪಂದ್ಯಗಳ ಅನಧಿಕೃತ ಪ್ರಸಾರ, ಸ್ಟ್ರೀಮಿಂಗ್​ಗೆ ದೆಹಲಿ ಹೈಕೋರ್ಟ್ ನಿರ್ಬಂಧ

author img

By PTI

Published : Sep 29, 2023, 2:02 PM IST

Delhi HC restrains unauthorised streaming of ICC Cricket World Cup
ವಿಶ್ವಕಪ್ ಪಂದ್ಯಗಳ ಅನಧಿಕೃತ ಪ್ರಸಾರ, ಸ್ಟ್ರೀಮಿಂಗ್​ಗೆ ದೆಹಲಿ ಹೈಕೋರ್ಟ್ ನಿರ್ಬಂಧ

ICC Cricket World Cup 2023: ವಿಶ್ವಕಪ್​ ಕ್ರಿಕೆಟ್ ಪಂದ್ಯಗಳ ಯಾವುದೇ ಭಾಗವನ್ನು ಅನುಮತಿ ಅಥವಾ ಪರವಾನಗಿ ಇಲ್ಲದೆ ಪ್ರಸಾರ ಹಾಗೂ ಸ್ಟ್ರೀಮಿಂಗ್​ ಮಾಡುವುದಕ್ಕೆ ದೆಹಲಿ ಹೈಕೋರ್ಟ್ ನಿರ್ಬಂಧ ಹೇರಿದೆ.

ನವದೆಹಲಿ: ಮುಂಬರುವ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್-2023 ಟೂರ್ನಿಯನ್ನು ಅನಧಿಕೃತವಾಗಿ ಪ್ರಸಾರ ಹಾಗೂ ಸ್ಟ್ರೀಮಿಂಗ್​ ಮಾಡದಂತೆ ಆನ್‌ಲೈನ್​ ಪ್ಲಾಟ್‌ಫಾರ್ಮ್‌ಗಳಿಗೆ ದೆಹಲಿ ಹೈಕೋರ್ಟ್ ನಿರ್ಬಂಧಿಸಿ ಮಹತ್ವದ ಆದೇಶ ಹೊರಡಿಸಿದೆ. ಡಿಸ್ನಿ+ ಹಾಟ್‌ಸ್ಟಾರ್ ಪ್ಲಾಟ್‌ಫಾರ್ಮ್​ ನಿರ್ವಹಿಸುವ ಸ್ಟಾರ್​​​​ ಇಂಡಿಯಾ ಪ್ರೈವೇಟ್ ಲಿಮಿಟೆಡ್​​ ಹಾಗೂ ನೋವಿ ಡಿಜಿಟಲ್ ಎಂಟರ್​​​ಟೈನ್‌ಮೆಂಟ್​​ ಪ್ರೈವೇಟ್​​ ಲಿಮಿಟೆಡ್‌ ಹೂಡಿದ್ದ ಮೊಕದ್ದಮೆ ಪ್ರಕರಣದಲ್ಲಿ ನ್ಯಾಯಾಲಯ ಈ ಆದೇಶ ನೀಡಿದೆ.

ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ನಡೆಯಲಿರುವ ವಿಶ್ವಕಪ್‌ನಂತಹ ವಿವಿಧ ಐಸಿಸಿ ಕಾರ್ಯಕ್ರಮಗಳ ದೂರದರ್ಶನ ಮತ್ತು ಡಿಜಿಟಲ್ ಹಕ್ಕುಗಳು ಸೇರಿದಂತೆ ವಿಶೇಷ ಜಾಗತಿಕ ಮಾಧ್ಯಮ ಹಕ್ಕುಗಳನ್ನು ನಾವು ಹೊಂದಿದ್ದೇವೆ. ಕ್ರಿಕೆಟ್​ ವಿಶ್ವಕಪ್​ ಜಗತ್ತಿನ ಅತ್ಯಂತ ಜನಪ್ರಿಯ ಕ್ರೀಡಾಕೂಟಗಳಲ್ಲಿ ಒಂದಾಗಿರುವುದರಿಂದ ಹೆಚ್ಚಿನ ಸಂಖ್ಯೆಯ ವೆಬ್‌ಸೈಟ್‌ಗಳು ಅನಧಿಕೃತ ಪ್ರಸರಣದಲ್ಲಿ ತೊಡಗುವ ಸಾಧ್ಯತೆಯಿದೆ ಎಂದು ಅರ್ಜಿದಾರರು ಮೊಕದ್ದಮೆ ಹೂಡಿದ್ದರು.

ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪ್ರತಿಭಾ ಎಂ. ಸಿಂಗ್, ವಿಶ್ವಕಪ್ ಕ್ರಿಕೆಟ್ ಪಂದ್ಯಗಳು ನಿಸ್ಸಂದೇಹವಾಗಿ ವಿಶೇಷವಾಗಿ ಭಾರತೀಯ ಉಪಖಂಡದಲ್ಲಿ ಅತ್ಯಂತ ಜನಪ್ರಿಯವಾಗಿವೆ. ಈ ಹಿಂದೆ ಪೈರಸಿಯಲ್ಲಿ ತೊಡಗಿದ್ದ ರಾಕ್ಷಸ ವೆಬ್‌ಸೈಟ್‌ಗಳು ಅಧಿಕೃತ ಸ್ಟ್ರೀಮಿಂಗ್​ ಮುಂದುವರಿಸುವ ಸಾಧ್ಯತೆಯಿದೆ ಎಂಬ ಅಂಶವನ್ನು ಗಮನಿಸಿದರು.

ಆದ್ದರಿಂದ ಯಾವುದೇ ರಾಕ್ಷಸ ವೆಬ್‌ಸೈಟ್‌ಗಳು ಕ್ರಿಕೆಟ್ ಪಂದ್ಯದ ಕಾರ್ಯಕ್ರಮಗಳ ಯಾವುದೇ ಭಾಗವನ್ನು ಫಿರ್ಯಾದಿದಾರರಿಂದ ಅನುಮತಿ ಅಥವಾ ಪರವಾನಗಿ ಇಲ್ಲದೆ ಪ್ರಸಾರ ಮಾಡುವುದರಿಂದ ಮತ್ತು ಸಾರ್ವಜನಿಕರಿಗೆ ಸಂವಹನ ಮಾಡುವುದನ್ನು ನಿರ್ಬಂಧಿಸುವ ಅವಶ್ಯಕತೆಯಿದೆ ಎಂದು ನ್ಯಾಯಾಲಯವು ಇತ್ತೀಚಿನ ಆದೇಶದಲ್ಲಿ ತಿಳಿಸಿದೆ.

ಇದರ ಪ್ರಕಾರ, ಪ್ರತಿವಾದಿ ನಂ.1ರಿಂದ 9 (ಪ್ರಾಥಮಿಕವಾಗಿ ಕಾನೂನುಬಾಹಿರ ಮತ್ತು ಹಕ್ಕುಸ್ವಾಮ್ಯ ವಿಷಯವನ್ನು ಹೋಸ್ಟ್ ಮಾಡುವ ವಿವಿಧ ವೆಬ್‌ಸೈಟ್‌ಗಳು) ಐಸಿಸಿ ವಿಶ್ವಕಪ್ ಕ್ರಿಕೆಟ್ ಪಂದ್ಯಗಳ ಯಾವುದೇ ಭಾಗವನ್ನು ಯಾವುದೇ ಎಲೆಕ್ಟ್ರಾನಿಕ್ ಅಥವಾ ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ಯಾವುದೇ ರೀತಿಯಲ್ಲಿ ಸಂವಹನ, ಸ್ಕ್ರೀನಿಂಗ್ ಲಭ್ಯವಾಗುವಂತೆ ಅಥವಾ ಪ್ರಸಾರ ಮಾಡದಂತೆ ಮಧ್ಯಂತರ ಆದೇಶದ ಮೂಲಕ ನಿರ್ಬಂಧಿಸಲಾಗಿದೆ. ಈ ಹಂತದಲ್ಲಿ ತಡೆಯಾಜ್ಞೆ ನೀಡದಿದ್ದರೆ ಫಿರ್ಯಾದಿದಾರರಿಗೆ ಸರಿಪಡಿಸಲಾಗದ ಹಾನಿ ಉಂಟಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಇದೇ ವೇಳೆ, ಇಂತಹ ವೆಬ್‌ಸೈಟ್‌ಗಳನ್ನು ನಿರ್ಬಂಧಿಸಲು ಹಾಗೂ ಅಮಾನತುಗೊಳಿಸುವಂತೆ ನ್ಯಾಯಾಲಯವು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಯಾವುದೇ ಆಕ್ಷೇಪಾರ್ಹ ವೆಬ್‌ಸೈಟ್‌ಗಳು ಪತ್ತೆಯಾದರೆ, ಫಿರ್ಯಾದುದಾರರು ತಮ್ಮ ವಿವರಗಳನ್ನು ದೂರಸಂಪರ್ಕ ಇಲಾಖೆ, ಎಲೆಕ್ಟ್ರಾನಿಕ್ಸ್​ ಸಚಿವಾಲಯ ಮತ್ತು ಇಂಟರ್​ನೆಟ್ ಸೇವಾ ಪೂರೈಕೆದಾರರಿಗೆ ನಿರ್ಬಂಧಿಸುವ ಆದೇಶದ ಕುರಿತು ಸಂಪರ್ಕಿಸಬಹುದು ಎಂದೂ ಹೈಕೋರ್ಟ್​ ತಿಳಿಸಿದೆ. (ಪಿಟಿಐ)

ಇದನ್ನೂ ಓದಿ: Cricket World Cup 2023: ಕ್ರಿಕೆಟ್ ವಿಶ್ವಕಪ್​​ನ ಎಲ್ಲ 10 ತಂಡಗಳ ಆಟಗಾರರ ಹೆಸರು ಅಂತಿಮ...

ETV Bharat Logo

Copyright © 2024 Ushodaya Enterprises Pvt. Ltd., All Rights Reserved.