ETV Bharat / bharat

ದೇಶದಲ್ಲಿ 1,300 ಹೊಸ ಕೋವಿಡ್​ ಪ್ರಕರಣ: 140 ದಿನಗಳಲ್ಲೇ ಅತಿ ಹೆಚ್ಚು

author img

By

Published : Mar 23, 2023, 1:28 PM IST

daily-covid-cases-in-india-highest-in-140-days
1300 ಕೋವಿಡ್​ ಪ್ರಕರಣ : 140 ದಿನಗಳಲ್ಲಿ ಅತಿ ಹೆಚ್ಚು​​ ಪ್ರಕರಣ ದಾಖಲಿಸಿದ ಭಾರತ

ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ ಒಟ್ಟು 1300 ಕೋವಿಡ್​ ಪ್ರಕರಣಗಳು ವರದಿಯಾಗಿದ್ದು, ಇದು ಕಳೆದ 140 ದಿನಗಳಲ್ಲೇ ಅತಿ ಹೆಚ್ಚು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

ನವದೆಹಲಿ : ಭಾರತದಲ್ಲಿ ದಿನೇ ದಿನೇ ಕೋವಿಡ್​ ಪ್ರಕರಣಗಳು ಹೆಚ್ಚುತ್ತಿದ್ದು, ಕಳೆದ 24 ಗಂಟೆಗಳಲ್ಲಿ 140 ದಿನಗಳಲ್ಲೇ ಅತಿ ಹೆಚ್ಚು ಕೋವಿಡ್​ ಪ್ರಕರಣಗಳು ದಾಖಲಾಗಿವೆ. ಒಟ್ಟು 1,300 ಹೊಸ ಕೋವಿಡ್​ ಪ್ರಕರಣಗಳು ವರದಿಯಾಗಿದ್ದು, ಈ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 7,605ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಕೊರೊನಾದಿಂದಾಗಿ ಒಟ್ಟು ಮೂವರು ಸಾವನ್ನಪ್ಪಿದ್ದು ಕರ್ನಾಟಕ, ಮಹಾರಾಷ್ಟ್ರ, ಗುಜರಾತ್​ನಲ್ಲಿ ತಲಾ ಒಂದೊಂದು ಸಾವು ಸಂಭವಿಸಿದೆ. ಈ ಮೂಲಕ ಒಟ್ಟು ಸಾವಿನ ಸಂಖ್ಯೆ 5,30,816ಕ್ಕೆ ಏರಿಕೆ ಆಗಿದೆ. ಒಟ್ಟು ಇದುವರೆಗೆ 4.46 ಕೋಟಿ (4,46,99,418) ಕೋವಿಡ್​ ಪ್ರಕರಣಗಳು ದಾಖಲಾಗಿವೆ ಎಂದು ಸಚಿವಾಲಯ ಅಂಕಿಅಂಶ ಬಿಡುಗಡೆ ಮಾಡಿದೆ.

ದೈನಂದಿನ ಪಾಸಿಟಿವಿಟಿ ದರವು ಶೇ.1.46 ಇದ್ದು, ವಾರದ ಪಾಸಿಟಿವಿಟಿ ದರ ಶೇ.1.08 ದಾಖಲಾಗಿದೆ. ಒಟ್ಟು ಕೋವಿಡ್​ ಪ್ರಕರಣದ ಶೇ 0.02 ಸಕ್ರಿಯ ಪ್ರಕರಣಗಳಿವೆ. ರಾಷ್ಟ್ರೀಯ ಕೋವಿಡ್​ ಚೇತರಿಕೆ ದರವು ಶೇ. 98.79ರಷ್ಟಿದೆ.

ಕೋವಿಡ್ ಪ್ರಕರಣ ಪತ್ತೆಗಾಗಿ ಇದುವರೆಗೆ ಒಟ್ಟು 92.06 ಕೋಟಿ ಪರೀಕ್ಷೆಗಳನ್ನು ನಡೆಸಲಾಗಿದ್ದು, ಕಳೆದ 24 ಗಂಟೆಗಳಲ್ಲಿ 89,078 ಕೋವಿಡ್​ ಪರೀಕ್ಷೆ ನಡೆಸಲಾಗಿದೆ. ಇನ್ನು,ರೋಗದಿಂದ ಚೇತರಿಸಿಕೊಂಡವರ ಸಂಖ್ಯೆ 4,41,60,997ಕ್ಕೆ ಏರಿಕೆಯಾಗಿದೆ. ಸಾವಿನ ಪ್ರಮಾಣ ಶೇ. 1.19 ರಷ್ಟಿದೆ. ಲಸಿಕೆ ಅಭಿಯಾನದ ಅಡಿಯಲ್ಲಿ ಇದುವರೆಗೆ ದೇಶದಲ್ಲಿ 220.65 ಕೋಟಿಯಷ್ಟು ಕೋವಿಡ್ ಲಸಿಕೆಗಳನ್ನು ಸಾರ್ವಜನಿಕರಿಗೆ ನೀಡಲಾಗಿದೆ ಎಂದು ಸಚಿವಾಲಯದ ವೆಬ್​ಸೈಟ್​ನಲ್ಲಿ ತಿಳಿಸಲಾಗಿದೆ.

ಕೇರಳದಲ್ಲಿ ಕೋವಿಡ್​ ಹೆಚ್ಚಳ: ಕೇರಳದಲ್ಲಿ ಕೋವಿಡ್​ ಪ್ರಕರಣಗಳು ಹೆಚ್ಚುತ್ತಿದ್ದು, ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಪ್ರತಿದಿನ ಸಾಮಾನ್ಯವಾಗಿ 200ರಷ್ಟು ಕೋವಿಡ್ ಪ್ರಕರಣಗಳು ಇಲ್ಲಿ ವರದಿಯಾಗುತ್ತಿವೆ. ಮಂಗಳವಾರ ಒಟ್ಟು 172 ಪ್ರಕರಣಗಳು ವರದಿಯಾಗಿದ್ದು, ಈ ಹಿನ್ನೆಲೆಯಲ್ಲಿ ಆರೋಗ್ಯ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಾಜ್ಯದಲ್ಲಿ ಹೈಅಲರ್ಟ್ ಘೋಷಣೆ ಮಾಡಲಾಗಿದೆ.

ಮಂಗಳವಾರದ ಅಂಕಿಅಂಶಗಳ ಪ್ರಕಾರ, ಕೇರಳದಲ್ಲಿ ಒಟ್ಟು 1,026 ಸಕ್ರಿಯ ಪ್ರಕರಣಗಳು ಮತ್ತು 111 ಜನರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ಸಂಬಂಧ ಎಲ್ಲಾ ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವಂತೆ ಆರೋಗ್ಯ ಸಚಿವೆ ವೀಣಾ ಜಾರ್ಜ್ ಸೂಚನೆ ನೀಡಿದ್ದಾರೆ. ಕೋವಿಡ್​ ಹರಡುವಿಕೆ ತಡೆಯಲು ಎಲ್ಲಾ ಜಿಲ್ಲೆಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಕೋವಿಡ್​ ತಡೆಗಟ್ಟಲು ಎಲ್ಲರೂ ಮಾಸ್ಕ್​​ ಧರಿಸಬೇಕು. ಕಾಯಿಲೆ ಇರುವವರು ವಿಶೇಷ ಕಾಳಜಿ ವಹಿಸಬೇಕು. ಸಾರ್ವಜನಿಕ ಸ್ಥಳಗಳಲ್ಲೂ ಮಾಸ್ಕ್​ ಧರಿಸಬೇಕು. ಆಸ್ಪತ್ರೆಗೆ ಬರುವವರು ಕಡ್ಡಾಯವಾಗಿ ಮಾಸ್ಕ್​ ಧರಿಸಿಯೇ ಬರುವಂತೆ ಆರೋಗ್ಯ ಇಲಾಖೆ ಸೂಚಿಸಿದೆ. ಕೇಂದ್ರ ಆರೋಗ್ಯ ಸಚಿವಾಲಯವು ಕೇರಳ ಸೇರಿದಂತೆ ಇತರ ಆರು ರಾಜ್ಯಗಳಿಗೆ ಕೋವಿಡ್ ಹಿನ್ನೆಲೆಯಲ್ಲಿ ಕೆಲವು ನಿರ್ದೇಶನಗಳನ್ನು ನೀಡಿತ್ತು.

ಇದನ್ನೂ ಓದಿ : ಕೇರಳದಲ್ಲಿ ಕೋವಿಡ್ ಉಲ್ಬಣ, ಹೈ ಅಲರ್ಟ್​.. ಕರ್ನಾಟಕಕ್ಕೆ ಎಚ್ಚರಿಕೆ ಗಂಟೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.