ETV Bharat / bharat

ಚುನಾವಣೆ ಹೊತ್ತಲ್ಲಿ ಶಾಸಕ ಜಮೀರ್​ಗೆ ಸಂಕಷ್ಟ: ಇಡಿ ಮುಂದೆ ವಿಚಾರಣೆಗೆ ಹಾಜರ್

author img

By

Published : Mar 9, 2023, 1:05 PM IST

Updated : Mar 9, 2023, 1:22 PM IST

ಚುನಾವಣೆ ಹೊತ್ತಲ್ಲಿ ಶಾಸಕ ಜಮೀರ್​ಗೆ ಸಂಕಷ್ಟ
ಚುನಾವಣೆ ಹೊತ್ತಲ್ಲಿ ಶಾಸಕ ಜಮೀರ್​ಗೆ ಸಂಕಷ್ಟ

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಶಾಸಕ ಜಮೀರ್​ ಅಹ್ಮದ್​ ಇಡಿ ಮುಂದೆ ಇಂದು ವಿಚಾರಣೆ ಒಳಗಾಗಿದ್ದಾರೆ. ಇನ್ನೊಂದೆಡೆ ದೆಹಲಿ ಮಾಜಿ ಸಚಿವ ಮನೀಶ್​ ಸಿಸೋಡಿಯಾರನ್ನು ತಿಹಾರ್​ ಜೈಲಿನಲ್ಲಿ ಅಧಿಕಾರಿಗಳು ಪ್ರಶ್ನಿಸುತ್ತಿದ್ದಾರೆ.

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಅವರು ಇಲ್ಲಿನ ಜಾರಿ ನಿರ್ದೇಶನಾಲಯ (ಇಡಿ) ಕಚೇರಿಗೆ ಆಗಮಿಸಿದ್ದಾರೆ. ಇನ್ನೊಂದೆಡೆ ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಬಂಧಿತರಾಗಿರುವ ದೆಹಲಿ ಸರ್ಕಾರದ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾರನ್ನು ತಿಹಾರ್ ಜೈಲಿನಲ್ಲಿ ಇಡಿ ವಿಚಾರಣೆ ಆರಂಭಿಸಿದೆ.

ಕರ್ನಾಟಕದಲ್ಲಿ ಇನ್ನು ಕೆಲವೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಈ ಹೊತ್ತಲ್ಲಿ ಶಾಸಕ ಜಮೀರ್​ ಅಹಮದ್​ಗೆ ಇಡಿ ವಿಚಾರಣೆಗೆ ಕರೆದಿದೆ. ಜಮೀರ್​ ಅವರು ಉದ್ಯಮಿ ಕೆಜಿಎಫ್​ ಬಾಬು ಅವರಿಂದ ಸಾಲ ಪಡೆದಿದ್ದರು ಎಂಬ ಆರೋಪ ಕೇಳಿಬಂದಿತ್ತು. ಅಲ್ಲದೇ, ಇಡಿ ಅಧಿಕಾರಿಗಳು ಇತ್ತೀಚೆಗೆ ಶಾಸಕರ ಮನೆಯ ಮೇಲೆ ದಾಳಿ ಮಾಡಿ ಶೋಧ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಹೆಚ್ಚಿನ ವಿಚಾರಣೆಗಾಗಿ ಕಚೇರಿಗೆ ಹಾಜರಾಗಲು ಸೂಚಿಸಲಾಗಿತ್ತು. ಅದರಂತೆ ಶಾಸಕ ಜಮೀರ್​ ಇಂದು ದೆಹಲಿಯ ಅಬ್ದುಲ್​ ಕಲಾಂ ರಸ್ತೆಯಲ್ಲಿರುವ ಜಾರಿ ನಿರ್ದೇಶನಾಲಯದ ಕಚೇರಿಗೆ ಆಗಮಿಸಿ ವಿಚಾರಣೆಗೆ ಒಳಗಾಗಿದ್ದಾರೆ ಎಂದು ಹೇಳಲಾಗಿದೆ.

2021ರಲ್ಲಿ ಜಮೀರ್ ವಿರುದ್ಧ ತನಿಖೆ ಕೈಗೊಂಡಿದ್ದ ಜಾರಿ ನಿರ್ದೇಶನಾಲಯ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದ ಸಮೀಪದ ಅವರ ಭವ್ಯವಾದ ಬಂಗಲೆಯನ್ನು ಶೋಧ ನಡೆಸಿತ್ತು. ಮನೆಯ ಮೌಲ್ಯವನ್ನು ಜಮೀರ್ 40 ಕೋಟಿ ರೂ. ಎಂದು ಘೋಷಿಸಿಕೊಂಡಿದ್ದರು. ಆದರೆ, ಮಾರುಕಟ್ಟೆ ದರದಲ್ಲಿ ಅದೀಗ ಸುಮಾರು 80 ಕೋಟಿ ರೂ.ಗೂ ಹೆಚ್ಚು ಬೆಲೆ ಬಾಳುತ್ತದೆ ಎಂದು ಮೌಲ್ಯಮಾಪಕರು ವರದಿ ನೀಡಿದ್ದರು.

ತಿಹಾರ್​ ಜೈಲಿನಲ್ಲಿ ಸಿಸೋಡಿಯಾ ವಿಚಾರಣೆ: ಇನ್ನು ದೆಹಲಿ ಅಬಕಾರಿ ಹಗರಣದಲ್ಲಿ ತಿಹಾರ್​ ಜೈಲು ಪಾಲಾಗಿರುವ ಮನೀಶ್​ ಸಿಸೋಡಿಯಾರನ್ನು ಇಂದು ಇಡಿ ಅಧಿಕಾರಿಗಳು ಜೈಲಿನಲ್ಲೇ ವಿಚಾರಣೆ ನಡೆಸುತ್ತಿದ್ದಾರೆ. ಇದಕ್ಕೂ ಮುನ್ನ ಅಂದರೆ ಮಂಗಳವಾರ ಇಡಿ ವಿಚಾರಣೆ ನಡೆಸಿ ಸಿಸೋಡಿಯಾ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿತ್ತು. ಪ್ರಕರಣದಲ್ಲಿ ಹೆಚ್ಚಿನ ಮಾಹಿತಿ ಅಗತ್ಯವಿರುವ ಕಾರಣ ಇಂದು ಕೂಡ ವಿಚಾರಣೆ ಮುಂದುವರಿಸಿದ್ದು, ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುತ್ತಿದೆ.

ದೆಹಲಿಯಲ್ಲಿ ಅಬಕಾರಿ ನೀತಿಯ ರಚನೆ ಮತ್ತು ಅನುಷ್ಠಾನದಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಸಿಸೋಡಿಯಾರನ್ನು ಫೆಬ್ರವರಿ 26 ರಂದು ಬಂಧಿಸಲಾಗಿದೆ. ರೂಸ್ ಅವೆನ್ಯೂ ಕೋರ್ಟ್ ಮಾರ್ಚ್ 20 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ.

ಜಾರಿ ನಿರ್ದೇಶನಾಲಯ ಕಳೆದ ವರ್ಷ ಇದೇ ಪ್ರಕರಣದಲ್ಲಿ ಮೊದಲ ಆರೋಪಪಟ್ಟಿ ಸಲ್ಲಿಸಿತ್ತು. ದೆಹಲಿ ಲೆಫ್ಟಿನೆಂಟ್ ಗವರ್ನರ್ ಅವರ ಶಿಫಾರಸಿನ ಮೇರೆಗೆ ಸಿಬಿಐ ಪ್ರಕರಣವನ್ನು ದಾಖಲಿಸಿಕೊಂಡ ನಂತರ ಇಡಿ ಕೂಡ ಎಫ್‌ಐಆರ್ ದಾಖಲಿಸಿಕೊಂಡಿತ್ತು. ಈ ಪ್ರಕರಣದಲ್ಲಿ ಇದುವರೆಗೆ ಸುಮಾರು 200 ಶೋಧ ಕಾರ್ಯಾಚರಣೆಗಳನ್ನು ಕೈಗೊಂಡಿದೆ ಎಂದು ತನಿಖಾ ಸಂಸ್ಥೆ ಹೇಳಿದೆ.

ಕಳೆದ ವರ್ಷದ ಅಕ್ಟೋಬರ್‌ನಲ್ಲಿ ದೆಹಲಿಯ ಜೋರ್ ಬಾಗ್ ಮೂಲದ ಮದ್ಯ ವಿತರಕ ಇಂಡೋಸ್ಪಿರಿಟ್ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ಸಮೀರ್ ಮಹೇಂದ್ರು ಅವರನ್ನು ಬಂಧಿಸಿದ ನಂತರ ಇಡಿ ದೆಹಲಿ ಮತ್ತು ಪಂಜಾಬ್‌ನಲ್ಲಿ ಸುಮಾರು 32 ಕಡೆ ದಾಳಿ ನಡೆಸಿತ್ತು. ಸಿಬಿಐ ಕೂಡ ಪ್ರಕರಣದಲ್ಲಿ ತನ್ನ ಮೊದಲ ಚಾರ್ಜ್ ಶೀಟ್ ಸಲ್ಲಿಸಿದೆ.

ತೆಲಂಗಾಣ ಸಿಎಂ ಪುತ್ರಿಗೆ ವಿಚಾರಣೆಗೆ ಬುಲಾವ್​: ಇದೇ ಪ್ರಕರಣದಲ್ಲಿ ಭಾರತೀಯ ರಾಷ್ಟ್ರೀಯ ಸಮಿತಿ (ಬಿಆರ್‌ಎಸ್) ಎಂಎಲ್‌ಸಿ ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ಪುತ್ರಿ ಕೆ.ಕವಿತಾ ಅವರನ್ನು ಇಡಿ ಗುರುವಾರ ವಿಚಾರಣೆಗೆ ಕರೆದಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಕವಿತಾ ಅವರನ್ನು ಸಿಬಿಐ ವಿಚಾರಣೆ ನಡೆಸಿತ್ತು. ಇದಕ್ಕೂ ಮೊದಲು ಹೈದರಾಬಾದ್ ಮೂಲದ ಉದ್ಯಮಿ ಮತ್ತು ಕವಿತಾ ಅವರ ಆಪ್ತನನ್ನು ಕಸ್ಟಡಿಗೆ ತೆಗೆದುಕೊಂಡಿರುವ ತನಿಖಾ ಸಂಸ್ಥೆ ವಿಚಾರಣೆ ನಡೆಸುತ್ತಿದೆ.

ಇದನ್ನೂ ಓದಿ: "ಕೈ" ಕೊಟ್ಟ ಏರ್​ ಇಂಡಿಯಾ ವಿಮಾನ ಸಿಬ್ಬಂದಿ ಚಿನ್ನಸಾಗಣೆ ಕಳ್ಳಾಟ: 8 ಕೆಜಿ ಬಂಗಾರ ವಶ

Last Updated :Mar 9, 2023, 1:22 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.