ETV Bharat / bharat

"ಕೈ" ಕೊಟ್ಟ ಏರ್​ ಇಂಡಿಯಾ ವಿಮಾನ ಸಿಬ್ಬಂದಿ ಚಿನ್ನಸಾಗಣೆ ಕಳ್ಳಾಟ: 8 ಕೆಜಿ ಬಂಗಾರ ವಶ

author img

By

Published : Mar 9, 2023, 12:41 PM IST

ಕೇರಳ ಮತ್ತು ಚೆನ್ನೈನಲ್ಲಿ ನಡೆದ ಪ್ರತ್ಯೇಕ ದಾಳಿಯಲ್ಲಿ 8 ಕೆಜಿ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ. ಕೊಚ್ಚಿಯಲ್ಲಿ ವಿಮಾನ ಸಿಬ್ಬಂದಿಯೇ ಕಳ್ಳಸಾಗಣೆಯಲ್ಲಿ ಸಿಕ್ಕಿಬಿದ್ದಿದ್ದಾನೆ.

ಏರ್​ ಇಂಡಿಯಾ ವಿಮಾನ ಸಿಬ್ಬಂದಿ ಚಿನ್ನಸಾಗಣೆ ಕಳ್ಳಾಟ
ಏರ್​ ಇಂಡಿಯಾ ವಿಮಾನ ಸಿಬ್ಬಂದಿ ಚಿನ್ನಸಾಗಣೆ ಕಳ್ಳಾಟ

ಕೊಚ್ಚಿ (ಕೇರಳ): ವಿಮಾನ ನಿಲ್ದಾಣದಲ್ಲಿ ಚಿನ್ನ ಕಳ್ಳಸಾಗಣೆ ಮಾಡುವ ಆರೋಪಿಗಳನ್ನು ಕಸ್ಟಮ್ಸ್​ ಅಧಿಕಾರಿಗಳು ದಾಳಿ ಮಾಡಿ ಬಂಧಿಸಿದ ಸುದ್ದಿಗಳನ್ನು ನೋಡಿದ್ದೇವೆ. ಆದರೆ, ಇಲ್ಲಿ ಏರ್​ ಇಂಡಿಯಾ ವಿಮಾನ ಸಿಬ್ಬಂದಿಯೇ ಈ ದುಷ್ಕೃತ್ಯದಲ್ಲಿ ತೊಡಗಿದ್ದು ಬೆಳಕಿಗೆ ಬಂದಿದೆ. ಚಾಲಾಕಿ ಆರೋಪಿಯನ್ನು ಬಂಧಿಸಿ ಆತನಿಂದ 1487 ಗ್ರಾಂ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ.

ವಯನಾಡು ಮೂಲದ ಶಫಿ ಬಂಧಿತ ಆರೋಪಿ. ಬಹ್ರೇನ್- ಕೋಝಿಕೋಡ್- ಕೊಚ್ಚಿಗೆ ಸಂಪರ್ಕ ಕಲ್ಪಿಸುವ ಏರ್​ ಇಂಡಿಯಾ ವಿಮಾನದ ಕ್ಯಾಬಿನ್ ಸಿಬ್ಬಂದಿಯಾಗಿದ್ದ ಶಫಿ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದಾನೆ ಎಂಬ ಗೌಪ್ಯ ಮಾಹಿತಿ ಕಸ್ಟಮ್ಸ್ ಪ್ರಿವೆಂಟಿವ್ ಕಮಿಷನರೇಟ್​ಗೆ ಸಿಕ್ಕ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿತ್ತು.

ಅಕ್ರಮ ಸಾಗಾಟದ ಚಿನ್ನ ವಶ
ಅಕ್ರಮ ಸಾಗಾಟದ ಚಿನ್ನ ವಶ

"ಕೈ" ಕೊಟ್ಟ ಚಾಲಾಕಿ ಸಿಬ್ಬಂದಿ ಜಾಣ್ಮೆ: ಚಾಲಾಕಿ ವಿಮಾನ ಸಿಬ್ಬಂದಿ ಚಿನ್ನ ಕಳ್ಳ ಸಾಗಣೆಗೆ ಮಾಡಿದ ಉಪಾಯ "ಕೈ" ಕೊಟ್ಟಿದೆ. ಕೈಗಳಿಗೆ ಚಿನ್ನವನ್ನು ಸುತ್ತಿ ಅದಕ್ಕೆ ಅಂಗಿಯ ತೋಳನ್ನು ಮುಚ್ಚಿಕೊಂಡಿದ್ದ. ಸಾಮಾನ್ಯವಾಗಿ ವಸ್ತ್ರ ಧರಿಸಿದಂತೆ ಆತ ವರ್ತಿಸಿದ್ದ. ಆದರೆ, ಕಿರಾತಕನ ಕಳ್ಳತನದ ಬಗ್ಗೆ ಕಸ್ಟಮ್ಸ್​ ಅಧಿಕಾರಿಗಳಿಗೆ ಮಾಹಿತಿ ಲಭ್ಯವಾಗಿತ್ತು. ಕೈಯಲ್ಲಿ ಚಿನ್ನ ಸುತ್ತಿಕೊಂಡು ಬರಲಾಗುತ್ತಿದೆ ಎಂದು ಮಾಹಿತಿ ಅರಿತಿದ್ದ ಪೊಲೀಸರು ಕೊಚ್ಚಿ ನಿಲ್ದಾಣದಲ್ಲಿ ವಿಮಾನ ಇಳಿದ ಬಳಿಕ ವಶಕ್ಕೆ ಪಡೆದು ತಪಾಸಿಸಿದಾಗ ಸಿಬ್ಬಂದಿಯ ಕಳ್ಳಾಟ ಬಹಿರಂಗವಾಗಿದೆ. ಆತನನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಲೆಗೆ ಬಿದ್ದ ಪ್ರಯಾಣಿಕರು: ಇನ್ನೊಂದೆಡೆ, ಸಿಂಗಾಪುರದಿಂದ ಚೆನ್ನೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಇಬ್ಬರು ಪ್ರಯಾಣಿಕರಲ್ಲಿ 3.32 ಕೋಟಿ ರೂ. ಮೌಲ್ಯದ 6.8 ಕೆಜಿ ತೂಕದ ಚಿನ್ನವನ್ನು ಚೆನ್ನೈ ಕಸ್ಟಮ್ಸ್ ಪೊಲೀಸರು ಬುಧವಾರ ವಶಕ್ಕೆ ಪಡೆದಿದ್ದಾರೆ. ಅಲ್ಲದೇಮ ಇಬ್ಬರನ್ನೂ ಬಂಧಿಸಿದ್ದಾರೆ. ಪ್ರಯಾಣಿಕರು ಸಿಂಗಾಪುರದಿಂದ AI-347 ಮತ್ತು 6E-52 ಮೂಲಕ ಚೆನ್ನೈಗೆ ಬಂದಿಳಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಿಖರ ಮಾಹಿತಿ ಆಧರಿಸಿ ಸಿಂಗಾಪುರದಿಂದ AI-347 ಮತ್ತು 6E-52 ವಿಮಾನದ ಮೂಲಕ ಬಂದ ಪ್ರಯಾಣಿಕರನ್ನು ತಪಾಸಣೆ ನಡೆಸಲಾಯಿತು. ಅವರಲ್ಲಿದ್ದ 2 ಪಾಕೆಟ್​ಗಳಲ್ಲಿ 6.8 ಕೆಜಿ ತೂಕದ ಚಿನ್ನವನ್ನು ಪತ್ತೆ ಮಾಡಲಾಯಿತು. ಇದು 3.32 ಕೋಟಿ ರೂ. ಮೌಲ್ಯದ್ದು ಎಂದು ಅಂದಾಜಿಸಲಾಗಿದೆ. ಎಲ್ಲವನ್ನೂ ವಶಕ್ಕೆ ಪಡೆದು ಆರೋಪಿಗಳನ್ನು ಬಂಧಿಸಲಾಗಿದೆ. ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೈದರಾಬಾದ್​ನಲ್ಲಿ ಚಿನ್ನ ವಶ: ಕೆಲ ದಿನಗಳ ಹಿಂದೆ ಹೈದರಾಬಾದ್​ನಲ್ಲಿ ನಡೆದ ದಾಳಿಯಲ್ಲಿ 7 ಕೋಟಿ ರೂಪಾಯಿ ಮೌಲ್ಯದ ಚಿನ್ನವನ್ನು ಕಸ್ಟಮ್ಸ್​ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಇಲ್ಲಿನ ಶಂಶಾಬಾದ್​ ವಿಮಾನ ನಿಲ್ದಾಣದಲ್ಲಿ ಶಾರ್ಜಾ ಮೂಲಕ ಸುಡಾನ್​ನಿಂದ ಹೈದರಾಬಾದ್​ಗೆ ಬಂದ 23 ಪ್ರಯಾಣಿಕರು​ ಅನ್ನು ಕಸ್ಟಮ್​ ಅಧಿಕಾರಿಗಳು ಪರಿಶೀಲಿಸಿದಾಗ ಅಕ್ರಮ ಚಿನ್ನ ಪತ್ತೆಯಾಗಿತ್ತು.

ವಾಯು ಗುಪ್ತಚರ ದಳದ ಅಧಿಕಾರಿಗಳ ಮಾಹಿತಿ ಮೇರೆಗೆ ಜಿ9 458 ವಿಮಾನದಲ್ಲಿ ಕಸ್ಟಮ್ಸ್‌​ ಅಧಿಕಾರಿಗಳು ತನಿಖೆ ದಾಳಿ ನಡೆಸಿದ್ದರು. ಈ ವೇಳೆ, 14.9063 ಗ್ರಾಂ ಬಂಗಾರ ಪತ್ತೆಯಾಗಿತ್ತು. 23 ಪ್ರಯಾಣಿಕರು ಶೂ, ಟೈ ಮತ್ತು ಬಟ್ಟೆಗಳಲ್ಲಿ ಚಿನ್ನವನ್ನು ಅಡಗಿಸಿ ಸಾಗಿಸುತ್ತಿದ್ದರು. ಈ ಕೃತ್ಯ ನಡೆಸಿದ ಪ್ರಮುಖ ನಾಲ್ಕು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರೆಲ್ಲರೂ ಸುಡಾನ್​ ದೇಶದವರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಒಂದು ಕ್ವಿಂಟಲ್​ಗೂ ಅಧಿಕ ಚಿನ್ನ ಜಪ್ತಿ! ಡಿಆರ್​ಐ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.