ETV Bharat / bharat

'ಮಹಾ' ಗದ್ದುಗೆ ಗುದ್ದಾಟ: 15 ಬಂಡಾಯ ಶಿವಸೇನೆ ಶಾಸಕರಿಗೆ ಕೇಂದ್ರದಿಂದ 'Y+' ಭದ್ರತೆ

author img

By

Published : Jun 26, 2022, 1:39 PM IST

Updated : Jun 26, 2022, 2:29 PM IST

'ಮಹಾ' ಕದನ  : 15 ಬಂಡಾಯ ಶಿವಸೇನೆ ಶಾಸಕರಿಗೆ ಕೇಂದ್ರದಿಂದ 'Y+' ಭದ್ರತೆ
'ಮಹಾ' ಕದನ : 15 ಬಂಡಾಯ ಶಿವಸೇನೆ ಶಾಸಕರಿಗೆ ಕೇಂದ್ರದಿಂದ 'Y+' ಭದ್ರತೆ

ಶಿವಸೇನೆಯ ಸಂಜಯ್ ರಾವತ್ ಮತ್ತು ಸಚಿವ ಆದಿತ್ಯ ಠಾಕ್ರೆ ಅವರು ಶಾಸಕರನ್ನು ಮುಂಬೈಗೆ ಹಿಂತಿರುಗುವಂತೆ ಎಚ್ಚರಿಸಿದ ಬೆನ್ನಲ್ಲೇ ಈ ಬೆಳವಣಿಗೆ ಕಂಡುಬಂದಿದೆ.

ನವದೆಹಲಿ: ಮಹಾರಾಷ್ಟ್ರದಲ್ಲಿ ಅಧಿಕಾರದ ಚುಕ್ಕಾಣಿಗಾಗಿ ನಡೆಯುತ್ತಿರುವ ಹಣಾಹಣಿಯ ನಡುವೆ ಬಂಡಾಯ ಶಾಸಕರಾಗಲಿ ಅಥವಾ ಭಾರತೀಯ ಜನತಾ ಪಕ್ಷವಾಗಲಿ ಪರಸ್ಪರ ಬೆಂಬಲ ಸೂಚಿಸಿರುವುದನ್ನು ಈವರೆಗೂ ದೃಢಪಡಿಸಿಲ್ಲ. ಆದರೆ ಈ ಮಧ್ಯೆ ಕೇಂದ್ರ ಸರ್ಕಾರ 15 ಮಂದಿ ಬಂಡಾಯ ಶಾಸಕರಿಗೆ 'ವೈ+' ವರ್ಗದ ಭದ್ರತೆ ಒದಗಿಸಿದೆ.

ಶಿವಸೇನೆ ಶಾಸಕಾಂಗ ಪಕ್ಷದ ನಾಯಕತ್ವದಿಂದ ಬಂಡಾಯ ಶಾಸಕರನ್ನು ಅಮಾನತುಗೊಳಿಸುವ ಸಂಬಂಧ ನೀಡಲಾದ ನೋಟಿಸ್‌ಗೆ​ ಕಾನೂನು ಅಭಿಪ್ರಾಯ ಕೇಳಿರುವ ಶಿಂದೆ ಬಣ, ನ್ಯಾಯಾಲಯದ ಮೊರೆ ಹೋಗಲಿದೆ ಎಂದು ತಿಳಿದುಬಂದಿದೆ. ಈ ನೋಟಿಸ್‌ಗೆ ಉತ್ತರಿಸಲು ಶಾಸಕರಿಗೆ ಉಪಸಭಾಧ್ಯಕ್ಷರು ಕನಿಷ್ಠ 7 ದಿನಗಳ ಕಾಲಾವಕಾಶ ನೀಡಬೇಕಿತ್ತು ಎಂದು ಶಿಂದೆ ಬಣ ಹೇಳಿದೆ.

ಅಸ್ಸೋಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಪ್ರಸ್ತುತ ಬಂಡಾಯ ಶಾಸಕರಿರುವ ಗುವಾಹಟಿಯ ರಾಡಿಸನ್ ಬ್ಲೂ ಆವರಣದಲ್ಲಿ ಕಾಣಿಸಿಕೊಂಡಿದ್ದು, ಮಹಾರಾಷ್ಟ್ರದಲ್ಲಿ ಮತ್ತೆ ಅಧಿಕಾರ ಹಿಡಿಯಲು ಕೇಸರಿ ಪಕ್ಷವು ಶಿಂದೆ ಬಣವನ್ನು ಬೆಂಬಲಿಸುತ್ತಿದೆ ಎಂದು ಹೇಳಲಾಗುತ್ತಿದೆ.

'ನಿಮಗೆ ಧೈರ್ಯವಿದ್ದರೆ ಶಿವಸೇನೆ ಬಿಟ್ಟು ಹೋರಾಡಿ': ಮಹಾರಾಷ್ಟ್ರದ ಸಚಿವ ಆದಿತ್ಯ ಠಾಕ್ರೆ ಅವರು ಶಿವಸೇನೆ ಬಂಡಾಯಗಾರರಿಗೆ ಪಕ್ಷ ತೊರೆದು ಚುನಾವಣೆ ಎದುರಿಸುವ ಧೈರ್ಯ ಮಾಡಿ ಎಂದು ಸವಾಲು ಹಾಕಿದ್ದಾರೆ. "ನಿಮಗೆ ಧೈರ್ಯವಿದ್ದರೆ ಶಿವಸೇನೆ ಬಿಟ್ಟು ಹೋರಾಡಿ. ನಾವು ಮಾಡಿದ್ದು ತಪ್ಪು ಎಂದು ನೀವು ಭಾವಿಸಿದರೆ ರಾಜೀನಾಮೆ ನೀಡಿ ಚುನಾವಣೆ ಎದುರಿಸಿ. ನಾವು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ". ಇದರ ನಡುವೆ ಶಿವಸೇನೆ ನಾಯಕ ಸಂಜಯ್ ರಾವತ್ ಸಹ ಟ್ವೀಟ್​ ಮಾಡಿ ವ್ಯಂಗ್ಯ ಮಾಡಿದ್ದು, ಬಂಡಾಯಗಾರರು ಅಂತಿಮವಾಗಿ ಗುವಾಹಟಿಯನ್ನು ತೊರೆದು ಚೌಪಾಟಿಗೆ ಮರಳಬೇಕಾಗುತ್ತದೆ ಎಂದಿದ್ದಾರೆ.

ಯಾರಿಗೆಲ್ಲಾ ಭದ್ರತೆ: ರಮೇಶ್ ಬೋರ್ನಾರೆ, ಮಂಗೇಶ್ ಕುಡಾಲ್ಕರ್, ಸಂಜಯ್ ಶಿರ್ಸಾತ್, ಲತಾಬಾಯಿ ಸೋನಾವಾನೆ, ಪ್ರಕಾಶ್ ಸುರ್ವೆ, ಸದಾನಂದ್ ಸರಣಾವಂಕರ್, ಯೋಗೇಶ್ ದಾದಾ ಕದಂ, ಪ್ರತಾಪ್ ಸರನಾಯಕ್, ಯಾಮಿನಿ ಜಾಧವ್, ಪ್ರದೀಪ್ ಜೈಸ್ವಾಲ್, ಸಂಜಯ್ ರಾಥೋಡ್, ದಾದಾಜಿ ಭೂಸೆ, ದಿಲೀಪ್ ಲಾಂಡೆ, ಬಾಲಾಜಿ ಕಲ್ಯಾಣ್ಕರ್ ಅವರಿಗೆ ಭದ್ರತೆ ಒದಗಿಸಲಾಗಿದೆ.

15 ಬಂಡಾಯ ಶಿವಸೇನೆ ಶಾಸಕರಿಗೆ ಕೇಂದ್ರದಿಂದ 'Y+' ಭದ್ರತೆ

ಶಿಂದೆ ಪತ್ರ: ಶಾಸಕರ ರಕ್ಷಣೆಯ ಹೊಣೆ ರಾಜ್ಯ ಸರ್ಕಾರದ್ದು. ಆದರೆ, ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಗೃಹ ಸಚಿವ ದಿಲೀಪ್ ವಾಲ್ಸೆ ಪಾಟೀಲ್ ಅವರ ಆದೇಶದ ಮೇರೆಗೆ ನಮ್ಮ ಭದ್ರತೆಯನ್ನು ತೆಗೆದುಹಾಕಲಾಗಿದೆ ಎಂದು ಏಕನಾಥ್ ಶಿಂದೆ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

ಮುಖ್ಯಮಂತ್ರಿ, ಗೃಹ ಸಚಿವರು, ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆಯುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾವು ಶಾಸಕರಾಗಿದ್ದು, ಸೇಡು ತೀರಿಸಿಕೊಳ್ಳಲು ಸರ್ಕಾರ ನಮಗೆ ಮತ್ತು ನಮ್ಮ ಕುಟುಂಬಗಳಿಗೆ ನೀಡಿದ್ದ ಭದ್ರತೆಯನ್ನು ಕಸಿದುಕೊಂಡಿದೆ. ಇದರಿಂದ ಕುಟುಂಬಸ್ಥರ ಪ್ರಾಣಕ್ಕೆ ಅಪಾಯ ಉಂಟಾಗಿದೆ. ಕಾಂಗ್ರೆಸ್ ಮತ್ತು ಎನ್‌ಸಿಪಿ ಗೂಂಡಾಗಳು ನಮ್ಮ ಕುಟುಂಬಗಳಿಗೆ ಬೆದರಿಕೆ ಹಾಕುತ್ತಿದ್ದಾರೆ. ಮಹಾವಿಕಾಸ ಅಘಾಡಿ ನಾಯಕರ ಬೆದರಿಕೆಗಳು ನಮ್ಮ ಜೀವಕ್ಕೆ ಅಪಾಯ ತಂದೊಡ್ಡಿವೆ. ಹಾಗಾಗಿ ನಮ್ಮ ಕುಟುಂಬ ಸದಸ್ಯರ ಪ್ರಾಣಕ್ಕೆ ಅಪಾಯವಿದೆ ಎಂದು ಏಕನಾಥ್ ಶಿಂಧೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಏನಿದು Y+?: ಭಾರತದಲ್ಲಿ ಪೊಲೀಸ್ ಮತ್ತು ಸ್ಥಳೀಯ ಸರ್ಕಾರದಿಂದ ಹೆಚ್ಚಿನ ಅಪಾಯವಿರುವ ವ್ಯಕ್ತಿಗಳಿಗೆ ವಿಶೇಷ ಭದ್ರತೆ ಒದಗಿಸಲಾಗುತ್ತದೆ. ವ್ಯಕ್ತಿಗೆ ಬೆದರಿಕೆಯ ಗ್ರಹಿಕೆಗೆ ಅನುಗುಣವಾಗಿ ವರ್ಗವನ್ನು ಆರು ಹಂತಗಳಾಗಿ ವಿಂಗಡಿಸಲಾಗಿದೆ: SPG, Z+ (ಉನ್ನತ ಮಟ್ಟ), Z, Y+, Y ಮತ್ತು X. ಈ ಭದ್ರತೆಗಳ ಅಡಿಯಲ್ಲಿ ರಾಷ್ಟ್ರಪತಿ, ಪ್ರಧಾನಮಂತ್ರಿ, ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಾಧೀಶರು, ಭಾರತೀಯ ಸಶಸ್ತ್ರ ಪಡೆಗಳ ಸೇವಾ ಮುಖ್ಯಸ್ಥರು, ರಾಜ್ಯಪಾಲರು, ಮುಖ್ಯಮಂತ್ರಿಗಳು ಮತ್ತು ಕ್ಯಾಬಿನೆಟ್ ಮಂತ್ರಿಗಳು, ನಟರು ಮತ್ತು ಇತರ ವಿಐಪಿಗಳು ಇರಲಿದ್ದಾರೆ.

  • SPG: ಇದು ಒಂದು ಗಣ್ಯ ಪಡೆಯಾಗಿದ್ದು, ಭಾರತದ ಪ್ರಧಾನ ಮಂತ್ರಿಗೆ ಮಾತ್ರ ಈ ಮೂಲಕ ಭದ್ರತೆ ಒದಗಿಸಲಾಗುತ್ತದೆ .
  • Z+ ವರ್ಗವು 10+ NSG ಕಮಾಂಡೋಗಳು ಮತ್ತು ಪೊಲೀಸ್ ಸಿಬ್ಬಂದಿ ಸೇರಿದಂತೆ 150 ಸಿಬ್ಬಂದಿಗಳ ತಂಡ ಇರಲಿದೆ.
  • Z ವರ್ಗವು 4-6 NSG ಕಮಾಂಡೋಗಳು ಮತ್ತು ಪೊಲೀಸ್ ಸಿಬ್ಬಂದಿ ಸೇರಿದಂತೆ 55 ಸಿಬ್ಬಂದಿಗಳ ಭದ್ರತಾ ತಂಡ ಇರಲಿದೆ.
  • Y+ ವರ್ಗವು 2-4 ಕಮಾಂಡೋಗಳು ಮತ್ತು ಪೊಲೀಸ್ ಸಿಬ್ಬಂದಿ ಸೇರಿದಂತೆ 39 ಸಿಬ್ಬಂದಿಯ ಭದ್ರತಾ ತಂಡವಾಗಿದೆ.
  • Y ವರ್ಗವು 1 ಅಥವಾ 2 ಕಮಾಂಡೋಗಳು ಮತ್ತು ಪೊಲೀಸ್ ಸಿಬ್ಬಂದಿ ಸೇರಿದಂತೆ 28 ಸಿಬ್ಬಂದಿಯ ಭದ್ರತಾ ತಂಡವಾಗಿದೆ.
  • X ವರ್ಗವು 12 ಸಿಬ್ಬಂದಿ ಭದ್ರತಾ ವಿವರವಾಗಿದೆ. ಇದರಲ್ಲಿ ಯಾವುದೇ ಕಮಾಂಡೋಗಳು ಇರುವುದಿಲ್ಲ. ಆದರೆ ಶಸ್ತ್ರಸಜ್ಜಿತ ಪೊಲೀಸ್ ಸಿಬ್ಬಂದಿ ಇರಲಿದ್ದಾರೆ.

ಇದನ್ನೂ ಓದಿ: ಶಿವಸೇನೆಯ ನಿಜವಾದ ಭಕ್ತರು ಬಾಳಾಸಾಹೇಬರ ಬೆನ್ನಿಗೆ ಚೂರಿ ಹಾಕುವುದಿಲ್ಲ: ಸಂಜಯ್ ರಾವತ್

Last Updated :Jun 26, 2022, 2:29 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.