ETV Bharat / bharat

ವಿಶೇಷ ಅಂಕಣ: 'ಮುಂಬೈ ಭಾರತಕ್ಕೆ ಸೇರಿದ್ದು, ಶಿವಸೇನೆಗಲ್ಲ'

author img

By

Published : Sep 22, 2020, 10:57 AM IST

ಶಿವಸೇನೆ
ಶಿವಸೇನೆ

ಬಾಲಿವುಡ್‌ ನಟಿ ಕಂಗನಾ ರಾನೌತ್ ಅವರನ್ನು ಬೆದರಿಸಲು ಮತ್ತು ಅವರ ಕಟ್ಟಡವನ್ನು ಕೆಡವಲು ಶಿವಸೇನೆ ಮಾಡಿದ ಅಡ್ಡದಾರಿ ಪ್ರಯತ್ನವನ್ನು ದೇಶದಲ್ಲಿ ಪ್ರಜಾಪ್ರಭುತ್ವ ಮತ್ತು ಕಾನೂನಿನ ಆಡಳಿತವನ್ನು ಗೌರವಿಸುವ ಎಲ್ಲರೂ ಖಂಡಿಸಬೇಕು ಎಂದು ಲೇಖಕ ಎ. ಸೂರ್ಯ ಪ್ರಕಾಶ್ ತಮ್ಮ ವಿಶೇಷ ಅಂಕಣದಲ್ಲಿ ಹೇಳಿದ್ದಾರೆ.

ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಬಾಲಿವುಡ್‌ ನಟಿ ಕಂಗನಾ ರಾನೌತ್ ಅವರನ್ನು ಬೆದರಿಸಲು ಮತ್ತು ಅವರ ಕಟ್ಟಡವನ್ನು ಕೆಡವಲು ಶಿವಸೇನೆ ಮಾಡಿದ ಅಡ್ಡದಾರಿ ಪ್ರಯತ್ನವನ್ನು ದೇಶದಲ್ಲಿ ಪ್ರಜಾಪ್ರಭುತ್ವ ಮತ್ತು ಕಾನೂನಿನ ಆಡಳಿತವನ್ನು ಗೌರವಿಸುವ ಎಲ್ಲರೂ ಖಂಡಿಸಬೇಕು. ಮುಂಬೈ ನಗರ ಶಿವಸೇನೆಗೆ ಸೇರಿದ್ದಲ್ಲ ಮತ್ತು ಆ ನಗರಕ್ಕೆ ಪ್ರವೇಶ ನೀಡಲು ವೀಸಾ ನೀಡುವ ಅಧಿಕಾರವನ್ನು ಶಿವಸೇನೆಗೆ ಯಾವುದೇ ಭಾರತೀಯರು ನೀಡುವುದಿಲ್ಲ ಎಂದು ಒತ್ತಿ ಹೇಳುವ ಸಮಯ ಇದು. ಜೊತೆಗೆ ಮುಂಬೈ ಭಾರತಕ್ಕೆ ಸೇರಿದೆ ಎಂಬುದನ್ನು ತಿಳಿಸಬೇಕಿದೆ.

ಅಕ್ರಮವಾಗಿ ನಿರ್ಮಿಸಲಾದ ಕಟ್ಟಡ ಎಂಬ ಆರೋಪದಡಿ ಸೆಪ್ಟೆಂಬರ್ 9ರಂದು ಪಾಲಿ ಹಿಲ್ ಪ್ರದೇಶದಲ್ಲಿನ ನಟಿಯ ಕಟ್ಟಡವನ್ನು ಕೇವಲ ಒಂದು ದಿನದ ನೋಟಿಸ್‌ ನೀಡಿ ಉರುಳಿಸಲಾಗಿದೆ. ಹಿಮಾಚಲ ಪ್ರದೇಶದಿಂದ ಮುಂಬೈನಲ್ಲಿರುವ ತಮ್ಮ ಮನೆಗೆ ಮರಳದಂತೆ ಪದೇ ಪದೇ ಶಿವಸೇನೆ ಪಕ್ಷದ ಮುಖಂಡರು ಮತ್ತು ಪಕ್ಷದ ಗೂಂಡಾಗಳು ನಟಿಗೆ ಬೆದರಿಕೆ ಹಾಕುತ್ತಿದ್ದರು. ನಟಿಗೆ ಬೆದರಿಕೆಗಳನ್ನು ಹಾಕಿದ ಶಿವಸೇನೆ ಮುಖಂಡರ ಪಟ್ಟಿಯಲ್ಲಿ ಮಹಾರಾಷ್ಟ್ರ ರಾಜ್ಯದ ಗೃಹ ಸಚಿವರು ಕೂಡ ಇದ್ದರು. ಇದಲ್ಲದೆ, ಪಕ್ಷದ ಮುಖಂಡರು ನಟಿಯ ಮೇಲೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ. ಈ ರೀತಿಯ ಅನಾಗರಿಕ ಗೂಂಡಾ ವರ್ತನೆಯನ್ನು ಭಾರತವು ಒಪ್ಪಿಕೊಂಡರೆ, ದೇಶವು ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗುತ್ತದೆ.

ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಅವರು ಕಂಗನಾ ರನೌತ್ ಪರವಾಗಿ ನಿಂತಿದ್ದು, ಮಹಾರಾಷ್ಟ್ರ ಸರ್ಕಾರದ ವರ್ತನೆ ಖಂಡನೀಯ ಮತ್ತು ಸೇಡಿನ ರಾಜಕೀಯ ಎಂದು ತೀವ್ರವಾಗಿ ಟೀಕಿಸಿದ್ದಾರೆ. ಹಿಮಾಚಲದ ಮಗಳಿಗೆ ಅಗೌರವ ತೋರಿದರೆ ಅದು ಅಸಹನೀಯ ಎಂದು ಎಚ್ಚರಿಕೆ ನೀಡಿದ್ದಾರೆ.

ಶಿವಸೇನೆ ಪಕ್ಷದ ಗೂಂಡಾಗಳನ್ನು ನಟಿಯ ವಿರುದ್ಧ ಪ್ರಯೋಗಿಸಿದಾಗ, ಹಿಮಾಚಲ ಪ್ರದೇಶ ಸರ್ಕಾರವು ಸೆಪ್ಟೆಂಬರ್ 9 ರಂದು ಮುಂಬೈಗೆ ಹಿಂದಿರುಗಿದಾಗ ನಟಿಗೆ Y Plus ಭದ್ರತೆ ಒದಗಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕಾಯಿತು. ಇನ್ನು ಈ ಘಟನೆ ಕುರಿತಾಗಿ ಮಹಾರಾಷ್ಟ್ರ ಮುಖ್ಯಮಂತ್ರಿಯ ಗಮನ ಸೆಳೆಯಬೇಕು. ಏಕೆಂದರೆ, ಇತರ ರಾಜ್ಯಗಳಿಂದ ಬಂದ ನಾಗರಿಕರನ್ನು ಶಿವಸೇನೆ ನಾಯಕರು ನಡೆಸುವ ಈ ರೀತಿಯ ನಡವಳಿಕೆಯನ್ನು ಯಾರೂ ಸಹಿಸುವುದಿಲ್ಲ.

ನಟಿಯ ಮನೆ ಕೆಡವುವಲ್ಲಿ ಬೃಹನ್‌ ಮುಂಬೈ ಕಾರ್ಪೊರೇಶನ್‌ ನಡೆದುಕೊಂಡ ರೀತಿ ಬಗ್ಗೆ ಬಾಂಬೆ ಹೈಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಕಂಗನಾ ಮನೆ ಕೆಡವಿದ ಪ್ರಕರಣ "ಶೋಚನೀಯ" ಎಂದು ಬಣ್ಣಿಸಿದೆ. ಪಾಲಿಕೆಯ ಕ್ರಮವು "ಸ್ಮಾಕ್ಸ್ ಆಫ್ ಮಾಲಾಫೈಡ್" ಎಂದು ನ್ಯಾಯಾಲಯ ಹೇಳಿದೆ. ಪಾಲಿಕೆ "ಅನಧಿಕೃತ" ನಿರ್ಮಾಣ ಎಂದು ಹೇಳುವ ನಟಿಯ ಕಟ್ಟಡವು ರಾತ್ರೋರಾತ್ರಿ ಉದ್ಭವವಾಗಲಿಲ್ಲ ಎಂಬುದನ್ನ ಕೋರ್ಟ್‌ ಗಮನಿಸಿದೆ. ಅಷ್ಟು ದಿನದಿಂದ ಸುಮ್ಮನಿದ್ದ ಪಾಲಿಕೆ ಏಕಾಏಕಿ ನಡೆಸಿದ ಕಾರ್ಯಾಚರಣೆಯ ಹಿಂದೆ ದ್ವೇಷದ ರಾಜಕಾರಣ ಇರುವುದನ್ನು ಕೋರ್ಟ್‌ ಪತ್ತೆ ಮಾಡಿದೆ. ಇದ್ದಕ್ಕಿದ್ದಂತೆ ಎಚ್ಚೆತ್ತ ಮುಂಬೈ ಪಾಲಿಕೆಯು ಕಂಗನಾ ರನೌತ್ ಅವರು ನಗರದಿಂದ ಹೊರಗಿದ್ದಾಗ ನೋಟಿಸ್ ನೀಡಿದ್ದಾರೆ. ಜೊತೆಗೆ, ಕೇವಲ 24 ಗಂಟೆಗಳ ಕಾಲಾವಕಾಶವನ್ನು ನೀಡಿದ ನಂತರ ಕಟ್ಟಡ ಉರುಳಿಸಲು ಆರಂಭ ಮಾಡಿದ್ದಾರೆ. ಪಾಲಿಕೆಯ ಕ್ರಮವು "ಸ್ಮಾಕ್ಸ್ ಆಫ್ ಮಾಲಾಫೈಡ್" ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ. ಪಾಲಿಕೆಯ ಪರ ವಕೀಲರು ಸೂಕ್ತ ಸಮಯಕ್ಕೆ ನ್ಯಾಯಾಲಯಕ್ಕೆ ಹಾಜರಾಗಲಿಲ್ಲ ಮತ್ತು ನ್ಯಾಯಾಲಯವು ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಪುರಸಭೆ ಆಯುಕ್ತರ ಸೆಲ್ ಫೋನ್ ನಿರಂತರವಾಗಿ ಸ್ವಿಚ್ ಆಫ್ ಆಗಿತ್ತು ಎಂದು ನ್ಯಾಯಾಲಯವು ಗಮನಿಸಿದೆ. ಅಷ್ಟರಲ್ಲಿ ಮನೆ ಉರುಳಿಸುವ ಪ್ರಕ್ರಿಯೆ ಮುಂದುವರೆದಿದೆ. ಇದಲ್ಲದೆ, ಇತರ ಹಲವಾರು ಅನಧಿಕೃತ ನಿರ್ಮಾಣಗಳಿಗೆ ಸಂಬಂಧಿಸಿದಂತೆ ಮುಂಬೈ ಪಾಲಿಕೆಯು ಇದೇ ರೀತಿಯ ವೇಗದಿಂದ ಕಾರ್ಯನಿರ್ವಹಿಸುತ್ತದೆಯೇ ಎಂದು ನ್ಯಾಯಾಲಯವು ಪ್ರಶ್ನಿಸಿದೆ.

ಸೆಪ್ಟೆಂಬರ್ 9ರ ತನ್ನ ಆದೇಶದಲ್ಲಿ, ನ್ಯಾಯಾಲಯವು ವಿಚಾರಣೆಯನ್ನು ಸ್ಥಗಿತಗೊಳಿಸಲು ಮತ್ತು ಕಟ್ಟಡವನ್ನು ನೆಲಸಮಗೊಳಿಸುವವರೆಗೆ ಕಂಗನಾ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತುಕೊಳ್ಳುವುದನ್ನು ತಡೆಯಲು ನಗರಸಭೆ ಮಾಡಿದ ಪ್ರಯತ್ನಗಳನ್ನು ವಿವರವಾಗಿ ದಾಖಲಿಸಿದೆ. ಇದು ಆಡಳಿತ ವರ್ಗದ ದುರಹಂಕಾರ ಮತ್ತು ನ್ಯಾಯಾಂಗಕ್ಕೆ ಅಗೌರವವನ್ನು ಸೂಚಿಸುತ್ತದೆ.

ಮುಂಬೈ ಶಿವಸೇನೆಯ ಸ್ವಂತ ಆಸ್ತಿ ಅಲ್ಲ ಎಂದು ಹೇಳಬೇಕಾಗಿದೆ. ಅವರು ಇದೇ ಭ್ರಮೆಯಲ್ಲಿ ಬಹಳ ಕಾಲ ಬದುದ್ದಾರೆ. ವಾಸ್ತವವಾಗಿ, ಪ್ರತ್ಯೇಕ ಮರಾಠಿ ಮಾತನಾಡುವ ರಾಜ್ಯವನ್ನು ರಚಿಸಲು ಆಂದೋಲನವು ನಿರ್ಮಾಣವಾಗುತ್ತಿದ್ದಾಗ, ಮರಾಠಿಗರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದ ಗುಜರಾತಿಗಳು ಮತ್ತು ಇತರರು ಬಾಂಬೆಯನ್ನ ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸುವಂತೆ ಒತ್ತಾಯಿಸಿದಾಗ ಮರಾಠಿಗರು ಆ ನಿರ್ಧಾರವನ್ನು ಕೈಬಿಟ್ಟಿದ್ದರು. ಅಂದಿನಿಂದ, ಈ ನಗರದ ಜನಸಂಖ್ಯಾಶಾಸ್ತ್ರವು ಕಾಸ್ಮೋಪಾಲಿಟನ್ ಆಗಿ ಉಳಿದಿದೆ. ಇದರ ಜೊತೆಗೆ, ಶಿವಸೇನೆಯು ಮುಂಬೈ ನಗರಕ್ಕೆ ಪದೇ ಪದೇ ಕೋಮುವಾದದ ಚುಚ್ಚುಮದ್ದು ನೀಡಲು ಪ್ರಯತ್ನಿಸಿದರೂ, ನಗರವು ತನ್ನ ಅಂತಾರಾಷ್ಟ್ರೀಯ ಸಂಪರ್ಕವನ್ನು ಕಳೆದುಕೊಳ್ಳದೆ ಅದೇ ಹಾದಿಯಲ್ಲಿ ಮುಂದುವರೆದಿದೆ.

ವಾಸ್ತವವಾಗಿ, ಪ್ರತ್ಯೇಕ ಮರಾಠಿ ಮಾತನಾಡುವ ರಾಜ್ಯದ ಪ್ರಸ್ತಾಪ ಹುಟ್ಟಿದ ಸಮಯದಲ್ಲಿ ಬಾಂಬೆಯನ್ನು ಅದರ ಕಾಸ್ಮೋಪಾಲಿಟನ್ ದೃಷ್ಟಿಕೋನ ಮತ್ತು ಕಾರ್ಯತಂತ್ರದ ಸ್ಥಳದ ದೃಷ್ಟಿಯಿಂದ ಕೇಂದ್ರ ಪ್ರದೇಶವನ್ನಾಗಿ ಮಾಡುವ ಪರವಾಗಿ ಬಲವಾದ ವಾದವಿತ್ತು. ಗುಜರಾತ್ ರಿಸರ್ಚ್ ಸೊಸೈಟಿಯ ಅಧ್ಯಕ್ಷರು “ಮಹಾ ಗುಜರಾತ್‌ನ ಭಾಷಾ ಮಿತಿಗಳು” ಕುರಿತು 1948ರಲ್ಲಿ ಭಾಷಾ ಪ್ರಾಂತ್ಯಗಳ ಆಯೋಗಕ್ಕೆ ಒಂದು ಜ್ಞಾಪಕ ಪತ್ರವನ್ನು ಸಲ್ಲಿಸಿದರು ಮತ್ತು ಮರಾಠಿ ಮಾತನಾಡುವ ರಾಜ್ಯವು ವಾಸ್ತವವಾಗಬೇಕಾದರೆ, ಬಾಂಬೆಯನ್ನು ಕೇಂದ್ರೀಯವಾಗಿ ನಿರ್ವಹಿಸಬೇಕು ಎಂದು ವಾದಿಸಿದರು. ಭಾಷಾ ರಾಜ್ಯಗಳ ಬೇಡಿಕೆಯನ್ನು ಪರಿಶೀಲಿಸಲು ಈ ಆಯೋಗವನ್ನು ಭಾರತದ ಸಂವಿಧಾನ ಸಭೆ ನೇಮಿಸಿತು. ಜ್ಞಾಪಕ ಪತ್ರದಲ್ಲಿ “ಬಾಂಬೆ ನಗರ, ಅದರ ಬಂದರು ಮತ್ತು ಉಪನಗರಗಳನ್ನು ಕೇಂದ್ರ ಸರ್ಕಾರದ ಅಡಿಯಲ್ಲಿ ಪ್ರತ್ಯೇಕ ಸ್ವಾವಲಂಬಿ ಪ್ರಾಂತ್ಯವಾಗಿ ರಚಿಸಬೇಕು. ಬಾಂಬೆ ಅಂತಾರಾಷ್ಟ್ರೀಯ ದೃಷ್ಟಿಕೋನ ಮತ್ತು ವಿಶಿಷ್ಟವಾದ ಪ್ರಾಂತೀಯೇತರ ಸಂಸ್ಕೃತಿಯನ್ನು ಹೊಂದಿರುವ ಎಲ್ಲ ಭಾರತೀಯರ ನಗರವಾಗಿದ್ದು, ಇದರಲ್ಲಿ ಭಾರತದ ಎಲ್ಲಾ ಪ್ರಾಂತ್ಯಗಳ ಜನರು ಮತ್ತು ವಿದೇಶಿಯರು ಸಹ ತಮ್ಮ ಪಾತ್ರವನ್ನು ವಹಿಸುತ್ತಾರೆ .ಆದ್ದರಿಂದ ಬಾಂಬೆಯಂತಹ ಅಂತಾರಾಷ್ಟ್ರೀಯ ಬಂದರನ್ನು ಮಹಾರಾಷ್ಟ್ರ ಪ್ರಾಂತ್ಯಕ್ಕೆ ವರ್ಗಾಯಿಸುವುದು ಅನ್ಯಾಯವಾಗುತ್ತದೆ, ಅಲ್ಲಿ ಪ್ರಾಂತವನ್ನು ಪ್ರಾಂತೀಯ ಭಾಷೆಯ ಸಂಕುಚಿತ ದೃಷ್ಟಿಕೋನದಲ್ಲಿ ರಚಿಸಲು ಪ್ರಯತ್ನಿಸಲಾಗುತ್ತದೆ ಎಂದು ಹೇಳಲಾಗಿತ್ತು.

ಈ ಭಾವನೆಯು ಇಂದಿಗೂ ಉತ್ತಮವಾಗಿದೆ. ಮುಂಬೈ ನಗರವು ಕೀಳು, ಸಂಕುಚಿತ ರಾಜಕೀಯ ಮನೋಭಾವದ ಶಿವಸೇನೆಗೆ ಸೇರಿಲ್ಲ. ಮುಂಬೈ, ಮಹಾರಾಷ್ಟ್ರ ಮತ್ತು ಮರಾಠಿ ಜನರ ಬಗ್ಗೆ ಕಂಗನಾ ರಾನೌತ್ ಅವರು ದುರ್ಭಾವನೆ ಹೊಂದಿದ್ದಾರೆ ಎಂಬುವಂತೆ ಕೆಟ್ಟದಾಗಿ ಚಿತ್ರಿಸಲು ಶಿವಸೇನೆ ಪ್ರಯತ್ನಿಸುತ್ತಿದೆ. ಇದು ಸಂಪೂರ್ಣವಾಗಿ ಆಧಾರ ರಹಿತವಾಗಿದೆ. ನಟಿ ಕಂಗನಾ ಮರಾಠಿ ಭಾಷೆಯಾಗಲಿ, ರಾಜ್ಯದ ಮೇಲಾಗಲಿ ವಾಗ್ದಾಳಿ ಮಾಡಿಲ್ಲ. ಆಕೆ ಶಿವಸೇನೆ ಮೇಲೆ ಮತ್ತು ಈ ಪಕ್ಷವು ಉತ್ತೇಜಿಸುವ ಗೂಂಡಾ ರಾಜ್ ವರ್ತನೆ, ಭಾರತದ ಅತ್ಯಂತ ಉದಾರವಾದ ಮತ್ತು ಪ್ರವರ್ಧಮಾನಕ್ಕೆ ಬರುತ್ತಿರುವ ನಗರವಾದ ಮುಂಬೈಯನ್ನು ದ್ವೇಷದ ಸೈನ್ಯವಾಗಿ ಪರಿವರ್ತಿಸುವ ಶಿವಸೇನೆಯ ವರ್ತನೆ ವಿರುದ್ಧ ಮಾತನಾಡಿದ್ದಾಳೆ. ಭಾರತದ ಮತ್ತು ಮುಂಬೈ ನಗರದ ಕೀಲಿಗಳನ್ನು ಜನರು ಶಿವಸೇನೆಗೆ ಕೊಡುವುದಿಲ್ಲ. ಛತ್ರಪತಿ ಶಿವಾಜಿಯ ಪರಂಪರೆಯ ಏಕೈಕ ಭಂಡಾರವೂ ಸೇನಾ ಅಲ್ಲ. ಛತ್ರಪತಿ ಶಿವಾಜಿಯನ್ನು ಭಾರತ ನಿರ್ಮಿಸಿದ ಶ್ರೇಷ್ಠ ರಾಜರಲ್ಲಿ ಒಬ್ಬರು ಮತ್ತು ಭಾರತೀಯ ರಾಷ್ಟ್ರೀಯತೆಯ ಪ್ರತಿಮೆಯೆಂದು ಪರಿಗಣಿಸುತ್ತಾರೆ. ಅವರ ಶೌರ್ಯಕ್ಕಾಗಿ ಮತ್ತು ಭಾರತದ ನಾಗರಿಕ ಮೌಲ್ಯಗಳನ್ನು ಕಾಪಾಡಿಕೊಳ್ಳಲು ಹಲವು ಶತಮಾನಗಳ ಹಿಂದೆ ಅವರು ನೀಡಿದ ಅಮೂಲ್ಯ ಕೊಡುಗೆಗಾಗಿ ಅವರನ್ನು ಭಾರತೀಯರು ಆರಾಧಿಸುತ್ತಾರೆ. ಅಂತಹ ಮಹಾನ್‌ ಸಾಮ್ರಾಟನನ್ನ ಶಿವಸೇನೆ ತನ್ನ ಬೇಳೆ ಬೇಯಿಸಿಕೊಳ್ಳಲು ಮರಾಠಿ ಪ್ರತಿಷ್ಠೆ ಎಂಬಂತೆ ಬಿಂಬಿಸಲು ಮಾಡುವ ಪ್ರಯತ್ನಗಳನ್ನು ವಿರೋಧಿಸಬೇಕು.

ಸಿನಿ ಮತ್ತು ದೂರದರ್ಶನ ಜಗತ್ತಿನ ನಟರು, ನಿರ್ದೇಶಕರು ಮತ್ತು ಇತರರು ಸೇರಿದಂತೆ ವಿವಿಧ ವೃತ್ತಿಪರರಿಗೆ ಮುಂಬೈ ಏನು ನೀಡಿದೆ ಎಂಬುದರ ಬಗ್ಗೆ ಶಿವಸೇನೆ ನಾಯಕರು ಮಾತನಾಡುತ್ತಿದ್ದಾರೆ. ಈ ವ್ಯಕ್ತಿಗಳು ಮುಂಬೈಗೆ ನೀಡಿದ್ದನ್ನು ಅವರು ಮರೆತಂತೆ ಕಾಣುತ್ತದೆ. ಮುಂಬೈ ನಗರ ಆಕರ್ಷಿತವಾದ ವ್ಯಾಪಾರ ಕೇಂದ್ರವಾಗಿಸುವಲ್ಲಿ ಅವರ ಪಾತ್ರವಿದೆ. ವ್ಯಾಪಾರ, ಉತ್ಪಾದನೆ, ಮನರಂಜನೆ ಮತ್ತು ಆತಿಥ್ಯ ಉದ್ಯಮಗಳಲ್ಲಿನ ಅತ್ಯುತ್ತಮ ಪ್ರತಿಭೆಗಳು ಇಲ್ಲಿಗೆ ಬಂದು ನೆಲೆಸಿ ಅದನ್ನು ತಮ್ಮ ಮನೆಯನ್ನಾಗಿ ಮಾಡಿಕೊಂಡು, ಕೋಟಿ ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಿ ಮತ್ತು ಲಕ್ಷಾಂತರ ಜನರಿಗೆ ಉದ್ಯೋಗವನ್ನು ಸೃಷ್ಟಿಸಿದ್ದಾರೆ. ನೂರಾರು ಕನಸುಗಳನ್ನ ಹೊತ್ತು ಗುಜರಾತ್, ಪಂಜಾಬ್, ಉತ್ತರ ಪ್ರದೇಶ, ಬಿಹಾರ, ಕರ್ನಾಟಕ, ತಮಿಳುನಾಡು, ಜಮ್ಮು ಮತ್ತು ಕಾಶ್ಮೀರ ಮತ್ತು ಕೇರಳ ಮುಂತಾದ ರಾಜ್ಯಗಳಿಂದ ಬಂದು ಮುಂಬೈನಲ್ಲಿ ದುಡಿದ ಜನರು ಮುಂಬೈ ನಗರದ ಇಂದಿನ ಪ್ರತಿಷ್ಠೆಗೆ ಕಾರಣರಾಗಿದ್ದಾರೆ. ಉದಾಹರಣೆಗೆ, ನೀವು ಗುಜರಾತಿಗಳನ್ನು ಹೊರಗೆ ಕಳುಹಿಸಿದರೆ ಮುಂಬೈ ವ್ಯಾಪಾರ ಮತ್ತು ಉದ್ಯಮ ಹೇಗಿರುತ್ತದೆ? ಅಥವಾ, ಪಂಜಾಬಿಗಳಿಲ್ಲದೆ ಬಾಲಿವುಡ್ ಹೇಗಿರುತ್ತದೆ?.

ಶಿವಸೇನೆಯ ಫೈರ್‌ ಬ್ರಾಂಡ್ ಬಾಲಾ ಸಾಹೇಬ್ ಠಾಕ್ರೆಯವರ ಜೀವನದಲ್ಲಿ ಭಾರತೀಯ ರಾಷ್ಟ್ರೀಯತಾವಾದಿ ಕಾರಣಗಳಿಗಾಗಿ ದೃಢವಾಗಿ ನಿಂತ ಶಿವಸೇನೆ ಈಗ ಸ್ವತಃ ವ್ಯಂಗ್ಯಚಿತ್ರವಾಗಿ ಮಾರ್ಪಟ್ಟಿದೆ ಮತ್ತು ತನ್ನನ್ನು “ಸೋನಿಯಾ ಸೇನಾ” ಎಂದು ಸೀಮಿತಗಿಳಿಸಿಕೊಂಡಿರುವುದು ನಿಜಕ್ಕೂ ದುರಂತದ ಸಂಗತಿ. ಅದು ತನ್ನ ದುರ್ಬುದ್ಧಿಯನ್ನು ನಿಲ್ಲಿಸದಿದ್ದರೆ, ಇನ್ನೂ ಅನೇಕ ರಾಜ್ಯಗಳು ಮತ್ತು ಮುಖ್ಯಮಂತ್ರಿಗಳು ಸಿಡಿದೇಳುತ್ತಾರೆ. ಭಾರತ ಮಾತೆ ತನ್ನ ಕಿರೀಟದಲ್ಲಿರುವ ರತ್ನ ಮುಂಬೈ ನಗರವನ್ನು ಅನರ್ಹರ ಕೈಗೆ ಬೀಳಲು ಎಂದಿಗೂ ಅನುಮತಿಸುವುದಿಲ್ಲ.

-ಎ. ಸೂರ್ಯ ಪ್ರಕಾಶ್, ಲೇಖಕರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.