ETV Bharat / bharat

ಬಿಜೆಪಿಯಿಂದ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ದಾಳಿ: ರಾಹುಲ್ ಗಾಂಧಿ ಆರೋಪ

author img

By

Published : Mar 5, 2023, 1:25 PM IST

Structures of our democracy under brutal attack alleges Rahul Gandhi
Structures of our democracy under brutal attack alleges Rahul Gandhi

ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯು ಕ್ರೂರ ದಾಳಿಗೆ ಒಳಗಾಗುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಲಂಡನ್​ನಲ್ಲಿ ಭಾರತೀಯ ಪತ್ರಕರ್ತರ ಸಂಘ (IJA) ಆಯೋಜಿಸಿದ್ದ ಇಂಡಿಯಾ ಇನ್​ಸೈಟ್ಸ್​ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಲಂಡನ್ : ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯು ಕ್ರೂರ ದಾಳಿಗೆ ಒಳಗಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದು, ದೇಶಕ್ಕೆ ಪರ್ಯಾಯ ವ್ಯವಸ್ಥೆ ಒದಗಿಸಲು ಪ್ರತಿಪಕ್ಷಗಳೊಳಗೆ ಮಾತುಕತೆಗಳು ನಡೆಯುತ್ತಿವೆ ಎಂದು ಶನಿವಾರ ಹೇಳಿದ್ದಾರೆ. ಬಿಬಿಸಿ ವಿರುದ್ಧ ಇತ್ತೀಚಿನ ತೆರಿಗೆ ಸಮೀಕ್ಷೆ ಕ್ರಮವು ದೇಶದಾದ್ಯಂತ ವಿರೋಧದ ಧ್ವನಿಯನ್ನು ನಿಗ್ರಹಿಸಲಾಗುತ್ತಿದೆ ಎಂಬುದರ ಉದಾಹರಣೆಯಾಗಿದೆ. ಅದಕ್ಕಾಗಿಯೇ ತಾವು ದೇಶದ ಧ್ವನಿಯನ್ನು ಉಡುಗಿಸುವ ಆಡಳಿತಾರೂಢ ಬಿಜೆಪಿಯ ಪ್ರಯತ್ನಗಳ ವಿರುದ್ಧದ ಧ್ವನಿಯ ಅಭಿವ್ಯಕ್ತಿಯಾಗಿ 'ಭಾರತ್ ಜೋಡೋ ಯಾತ್ರೆ' ಕೈಗೊಳ್ಳಬೇಕಾಯಿತು ಎಂದು ಹೇಳಿದರು.

ನಮ್ಮ ಪ್ರಜಾಪ್ರಭುತ್ವದ ರಚನೆಗಳು ಗಂಭೀರ ದಾಳಿಗೆ ಒಳಗಾಗಿರುವುದರಿಂದ ಯಾತ್ರೆ ನಡೆಸುವುದು ಅಗತ್ಯವಾಗಿತ್ತು ಎಂದು ರಾಹುಲ್ ಹೇಳಿದರು. ಭಾರತೀಯ ಪತ್ರಕರ್ತರ ಸಂಘ (IJA) ಆಯೋಜಿಸಿದ್ದ ಇಂಡಿಯಾ ಇನ್​ಸೈಟ್ಸ್​ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಾಧ್ಯಮ, ಸಾಂಸ್ಥಿಕ ಚೌಕಟ್ಟುಗಳು, ನ್ಯಾಯಾಂಗ, ಸಂಸತ್ತು ಎಲ್ಲವೂ ದಾಳಿಗೆ ಒಳಗಾಗಿವೆ ಮತ್ತು ಸಾಮಾನ್ಯ ಮಾರ್ಗಗಳ ಮೂಲಕ ಜನರ ಧ್ವನಿಯನ್ನು ಎತ್ತಿ ತೋರಿಸಲು ನಮಗೆ ತುಂಬಾ ಕಷ್ಟವಾಗುತ್ತಿದೆ ಎಂದು ಅವರು ಹೇಳಿದರು.

ಬಿಬಿಸಿ ಈಗ ಅದನ್ನು ಕಂಡುಹಿಡಿದಿದೆ, ಆದರೆ ಇದು ಭಾರತದಲ್ಲಿ ಕಳೆದ ಒಂಬತ್ತು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದೆ. ಪತ್ರಕರ್ತರನ್ನು ಬೆದರಿಸಲಾಗುತ್ತಿದೆ, ಅವರ ಮೇಲೆ ಹಲ್ಲೆ ಮಾಡಲಾಗುತ್ತಿದೆ ಎಂದು ಎಲ್ಲರಿಗೂ ತಿಳಿದಿದೆ. ಸರ್ಕಾರದ ಮಾತು ಕೇಳುವ ಪತ್ರಕರ್ತರಿಗೆ ಉಡುಗೊರೆಗಳನ್ನು ನೀಡಲಾಗುತ್ತಿದೆ. ಇದು ಒಂದು ನಿರ್ದಿಷ್ಟ ಮಾದರಿಯ ಭಾಗವಾಗಿರುವುದರಿಂದ ನಾನು ಇವರಿಂದ ಬೇರೆ ಏನನ್ನೂ ನಿರೀಕ್ಷಿಸುವುದಿಲ್ಲ. ಬಿಬಿಸಿ ಸರ್ಕಾರದ ವಿರುದ್ಧ ಬರೆಯುವುದನ್ನು ನಿಲ್ಲಿಸಿದರೆ, ಎಲ್ಲವೂ ಸಹಜ ಸ್ಥಿತಿಗೆ ಮರಳುತ್ತದೆ. ಎಲ್ಲಾ ಪ್ರಕರಣಗಳು ಕಣ್ಮರೆಯಾಗುತ್ತವೆ ಎಂದು ಅವರು ನುಡಿದರು.

ವಿಶ್ವದ ಬಹುದೊಡ್ಡ ಭಾಗದಲ್ಲಿ ಪ್ರಜಾಪ್ರಭುತ್ವ ಇಲ್ಲವಾಗುತ್ತಿದೆ ಎಂಬುದನ್ನು ಯುಎಸ್ ಮತ್ತು ಯುರೋಪ್ ಸೇರಿದಂತೆ ವಿಶ್ವದ ಪ್ರಜಾಪ್ರಭುತ್ವ ರಾಷ್ಟ್ರಗಳು ಗಮನಿಸಲು ವಿಫಲವಾಗಿವೆ ಎಂದು ಗಾಂಧಿ ವಿಷಾದ ವ್ಯಕ್ತಪಡಿಸಿದರು. ಭಾರತವು ಮೌನವಾಗಿರಬೇಕೆಂದು ಬಿಜೆಪಿ ಬಯಸುತ್ತದೆ. ಭಾರತ ಮಾತನಾಡಬಾರದು ಎಂದು ಅದು ಬಯಸುತ್ತದೆ. ಭಾರತದಲ್ಲಿರುವುದನ್ನು ತೆಗೆದುಕೊಂಡು ಅದನ್ನು ತಮ್ಮ ಆತ್ಮೀಯ ಸ್ನೇಹಿತರಿಗೆ ನೀಡಲು ಅವರು ಬಯಸುತ್ತಾರೆ. ಭಾರತದ ಜನರ ಗಮನವನ್ನು ಬೇರೆಡೆ ಸೆಳೆಯುವುದು ಮತ್ತು ಆ ಮೂಲಕ ಭಾರತದ ಸಂಪತ್ತನ್ನು ತಮಗೆ ಬೇಕಾದ ಮೂರು, ನಾಲ್ಕು ಅಥವಾ ಐದು ಜನರಿಗೆ ಹಸ್ತಾಂತರಿಸುವ ಆಲೋಚನೆ ಬಿಜೆಪಿಯದ್ದಾಗಿದೆ ಎಂದು ಅವರು ಹೇಳಿದರು.

ಭಾರತದ ಪ್ರಜಾಪ್ರಭುತ್ವವು ದಾಳಿಗೆ ಒಳಗಾಗಿದೆ ಮತ್ತು ತಾವೂ ಸೇರಿದಂತೆ ಹಲವಾರು ರಾಜಕಾರಣಿಗಳು ಕಣ್ಗಾವಲಿನಲ್ಲಿದ್ದಾರೆ ಎಂದು ರಾಹುಲ್ ಗಾಂಧಿ ಈ ಹಿಂದೆ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ನೀಡಿದ ಹೇಳಿಕೆಗಳಿಗೆ ಬಿಜೆಪಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ. ಪ್ರಧಾನಿ ಅವರ ಮೇಲಿನ ದ್ವೇಷವನ್ನು ನಾವು ಅರ್ಥಮಾಡಿಕೊಳ್ಳಬಹುದು. ಆದರೆ ವಿದೇಶಿ ಸ್ನೇಹಿತರ ಸಹಾಯದಿಂದ ವಿದೇಶಿ ನೆಲದಲ್ಲಿ ದೇಶದ ಹೆಸರು ಕೆಡಿಸುವ ಸಂಚು ಕಾಂಗ್ರೆಸ್​ನ ಉದ್ದೇಶಗಳ ಮೇಲೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ದೆಹಲಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಇದನ್ನೂ ಓದಿ : 'ತನಿಖಾ ಏಜೆನ್ಸಿಗಳ ದುರ್ಬಳಕೆ ನಿಲ್ಲಿಸಿ': ಪ್ರಧಾನಿ ಮೋದಿಗೆ 9 ಪಕ್ಷಗಳ ಮುಖಂಡರ ಪತ್ರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.