ETV Bharat / bharat

'ಯುವ ರಾಜ್ಯ' ತೆಲಂಗಾಣದ 119 ಕ್ಷೇತ್ರಗಳಿಗೆ ನಾಳೆ ಮತದಾನ: 2,290 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ

author img

By ETV Bharat Karnataka Team

Published : Nov 29, 2023, 10:02 PM IST

assembly-elections-2023-telangana-braces-for-a-triangular-contest
'ಯುವ ರಾಜ್ಯ' ತೆಲಂಗಾಣದ 119 ಕ್ಷೇತ್ರಗಳಿಗೆ ನಾಳೆ ಮತದಾನ

Telangana Assembly Elections 2023: ತೆಲಂಗಾಣ ವಿಧಾನಸಭೆಯ 119 ಕ್ಷೇತ್ರಗಳಿಗೆ ನಾಳೆ ಮತದಾನ ನಡೆಯಲಿದೆ. ಆಡಳಿತಾರೂಢ ಬಿಆರ್‌ಎಸ್​ಗೆ ಕಾಂಗ್ರೆಸ್ ಮತ್ತು ಬಿಜೆಪಿ ಪ್ರಬಲ ಸ್ಪರ್ಧಿಗಳಾಗಿ ಹೊರಹೊಮ್ಮಿದ್ದು, ಚುನಾವಣಾ ಕಣದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ಹೈದರಾಬಾದ್ (ತೆಲಂಗಾಣ): ದೇಶದ 'ಅತ್ಯಂತ ಯುವ ರಾಜ್ಯ' ತೆಲಂಗಾಣವು ತನ್ನ ಮೂರನೇ ವಿಧಾನಸಭಾ ಚುನಾವಣೆಗೆ ಸಜ್ಜಾಗಿದೆ. ನಾಳೆ, ನವೆಂಬರ್​ 30ರಂದು 119 ಕ್ಷೇತ್ರಗಳಿಗೆ ಏಕಕಾಲಕ್ಕೆ ಮತದಾನ ನಡೆಯಲಿದೆ. ಈ ಮೂಲಕ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್​ಗಢ, ಮಿಜೋರಾಂ ಸೇರಿ​ ಪಂಚರಾಜ್ಯಗಳ ಚುನಾವಣೆಗೆ ತೆರೆ ಬೀಳಲಿದೆ. ಲೋಕಸಭೆ ಚುನಾವಣೆಗೆ ಸೆಮಿಫೈನಲ್​ ಎಂದೇ ಬಿಂಬಿತವಾಗಿರುವ ಈ ಐದು ರಾಜ್ಯಗಳ ಚುನಾವಣಾ ಫಲಿತಾಂಶವು ಡಿಸೆಂಬರ್​ 3ರಂದು ಹೊರಬರಲಿದೆ.

ತೆಲಂಗಾಣ ಚುನಾವಣೆ: ಪಕ್ಷವಾರು ಕೋಟ್ಯಾಧಿಪತಿ ಅಭ್ಯರ್ಥಿಗಳ ಮಾಹಿತಿ
ತೆಲಂಗಾಣ ಚುನಾವಣೆ: ಪಕ್ಷವಾರು ಕೋಟ್ಯಾಧಿಪತಿ ಅಭ್ಯರ್ಥಿಗಳ ಮಾಹಿತಿ

ಇದನ್ನೂ ಓದಿ: ತೆಲಂಗಾಣ ಚುನಾವಣಾ ಕಣದಲ್ಲಿ ಕೋಟ್ಯಾಧೀಶರು; ಕಾಂಗ್ರೆಸ್​ ರಾಜ್ಯಾಧ್ಯಕ್ಷರ ವಿರುದ್ಧ 89 ಕೇಸ್!

ಅಖಂಡ ಆಂಧ್ರಪ್ರದೇಶದಿಂದ ವಿಭಜನೆಗೊಂಡು ಪ್ರತ್ಯೇಕ ರಾಜ್ಯವಾಗಿ ರೂಪಗೊಂಡಿರುವ ತೆಲಂಗಾಣ ಇದುವರೆಗೆ ಎರಡು ವಿಧಾನಸಭಾ ಚುನಾವಣೆಗಳನ್ನು ಎದುರಿಸಿದೆ. ಎರಡು ಚುನಾವಣೆಗಳಲ್ಲೂ ಕೆ.ಚಂದ್ರಶೇಖರ್ ರಾವ್ ನೇತೃತ್ವದ ಟಿಆರ್​ಎಸ್​ (ಈಗ ಬಿಆರ್‌ಎಸ್) ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿತ್ತು. ಇದೀಗ ಮೂರನೇ ಚುನಾವಣೆಯಲ್ಲಿ ಹಾಲಿ ಸಿಎಂ ಕೆಸಿಆರ್​ ಹಾಗೂ ಬಿಆರ್‌ಎಸ್​ಗೆ ಕಾಂಗ್ರೆಸ್ ಮತ್ತು ಬಿಜೆಪಿ ಪ್ರಬಲ ಸ್ಪರ್ಧಿಗಳಾಗಿ ಹೊರಹೊಮ್ಮಿವೆ. ಇದರಿಂದಾಗಿ ಈ ಬಾರಿ ಚುನಾವಣಾ ಕಣದಲ್ಲಿ ತ್ರಿಕೋನ ಸ್ಪರ್ಧೆ ಕಂಡು ಬಂದಿದೆ. ಪ್ರಧಾನಿ ಮೋದಿ, ಕಾಂಗ್ರೆಸ್​ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಾಯಕ ರಾಹುಲ್ ಗಾಂಧಿ ಅವರಿಂದ ರಾಷ್ಟ್ರಮಟ್ಟದ ನಾಯಕರ ಅಬ್ಬರದ ಪ್ರಚಾರಕ್ಕೆ ಮಂಗಳವಾರದವರೆಗೆ ರಾಜ್ಯ ಸಾಕ್ಷಿಯಾಗಿತ್ತು.

ತೆಲಂಗಾಣ ಚುನಾವಣೆ: ಪಕ್ಷವಾರು ಅಭ್ಯರ್ಥಿಗಳ ಮೇಲಿನ ಪ್ರಕರಣಗಳ ವಿವರ
ತೆಲಂಗಾಣ ಚುನಾವಣೆ: ಪಕ್ಷವಾರು ಅಭ್ಯರ್ಥಿಗಳ ಮೇಲಿನ ಪ್ರಕರಣಗಳ ವಿವರ

119 ಕ್ಷೇತ್ರ - 3.26 ಕೋಟಿ ಮತದಾರರು: ತೆಲಂಗಾಣ ವಿಧಾನಸಭೆಯ 119 ಸದಸ್ಯರ ಆಯ್ಕೆಗೆ ಗುರುವಾರ ಮತದಾನ ನಡೆಯಲಿದೆ. ಚುನಾವಣಾ ಆಯೋಗವು ಮತದಾನಕ್ಕೆ ಎಲ್ಲ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ಎಲ್ಲೆಡೆ ಭಾರೀ ಭದ್ರತಾ ಬಂದೋಬಸ್ತ್ ಏರ್ಪಡಿಸಲಾಗಿದೆ. ಚುನಾವಣೆಯ ಆಮಿಷಗಳಿಗೆ ಕಡಿವಾಣ ಹಾಕಲು ರಾಜ್ಯದ ಎಲ್ಲೆಡೆ ಚೆಕ್ ಪೋಸ್ಟ್​ಗಳನ್ನು ನಿರ್ಮಿಸಲಾಗಿದೆ.

ತೆಲಂಗಾಣ ಚುನಾವಣೆ: ಅಭ್ಯರ್ಥಿಗಳ ವಯಸ್ಸಿನ ವಿವರ
ತೆಲಂಗಾಣ ಚುನಾವಣೆ: ಅಭ್ಯರ್ಥಿಗಳ ವಯಸ್ಸಿನ ವಿವರ

ಇದನ್ನೂ ಓದಿ: ಕಾಂಗ್ರೆಸ್​ ಸೋಲಿಸಲು ಬಿಆರ್‌ಎಸ್​, ಬಿಜೆಪಿ, ಎಐಎಂಐಎಂ ಒಟ್ಟಾಗಿ ಕುತಂತ್ರ ನಡೆಸಿವೆ: ರಾಹುಲ್​ ಗಾಂಧಿ

ರಾಜ್ಯಾದ್ಯಂತ 35,655 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಒಟ್ಟಾರೆ 3.26 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. 106 ಕ್ಷೇತ್ರಗಳಲ್ಲಿ ಬೆಳಗ್ಗೆ 7 ರಿಂದ ಸಂಜೆ 5 ರವರೆಗೆ ಮತ್ತು 13 ಎಡಪಂಥೀಯ ಪೀಡಿತ ಪ್ರದೇಶಗಳಲ್ಲಿ ಬೆಳಗ್ಗೆ 7ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದೆ. ಈ ಚುನಾವಣೆಯಲ್ಲಿ 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಮನೆಯಲ್ಲಿಯೇ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. 2.5 ಲಕ್ಷ ಸಿಬ್ಬಂದಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

ತೆಲಂಗಾಣ ಚುನಾವಣೆ: ಅತಿ ಹೆಚ್ಚು - ಅತಿ ಕಡಿಮೆ ಆಸ್ತಿ ಹೊಂದಿದ ಅಭ್ಯರ್ಥಿಗಳು
ತೆಲಂಗಾಣ ಚುನಾವಣೆ: ಅತಿ ಹೆಚ್ಚು - ಅತಿ ಕಡಿಮೆ ಆಸ್ತಿ ಹೊಂದಿದ ಅಭ್ಯರ್ಥಿಗಳು

ಯಾವ ಪಕ್ಷ ಎಷ್ಟು ಕ್ಷೇತ್ರಗಳಲ್ಲಿ ಸ್ಪರ್ಧೆ?: ಆಡಳಿತಾರೂಢ ಬಿಆರ್​ಎಸ್ ಎಲ್ಲ 119 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್ ತನ್ನ ಮಿತ್ರಪಕ್ಷವಾದ ಸಿಪಿಐಗೆ ಒಂದು ಸ್ಥಾನ ನೀಡಿದ್ದು, ಉಳಿದ 118 ಸ್ಥಾನಗಳಲ್ಲಿ ಸ್ಪರ್ಧಿಸಿದೆ. ಮತ್ತೊಂದೆಡೆ, ಸೀಟು ಹಂಚಿಕೆ ಒಪ್ಪಂದದ ಪ್ರಕಾರ, ಬಿಜೆಪಿ ಮತ್ತು ನಟ ಪವನ್ ಕಲ್ಯಾಣ್ ನೇತೃತ್ವದ ಜನಸೇನೆ ಕ್ರಮವಾಗಿ 111 ಮತ್ತು 8 ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದೆ. ಅಸಾದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂ ಹೈದರಾಬಾದ್​ ನಗರದ ಒಂಬತ್ತು ಕ್ಷೇತ್ರಗಳಲ್ಲಿ ಮಾತ್ರ ತನ್ನ ಅಭ್ಯರ್ಥಿಗಳನ್ನು ಹಾಕಿದೆ.

ಇದನ್ನೂ ಓದಿ: ಬಿಆರ್​ಎಸ್, ಕಾಂಗ್ರೆಸ್​ನಿಂದ ಜನತೆ ಮುಕ್ತಿ ಬಯಸಿದ್ದಾರೆ, ತೆಲಂಗಾಣದಲ್ಲಿ ಬಿಜೆಪಿ ಗೆಲ್ಲಲಿದೆ: ಪಿಎಂ ಮೋದಿ

ಕಣದಲ್ಲಿ ಪ್ರಮುಖರು: ಸಿಎಂ ಕೆಸಿಆರ್, ಅವರ ಸಚಿವ, ಮಗ ಕೆಟಿ ರಾಮರಾವ್, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಎ.ರೇವಂತ್ ರೆಡ್ಡಿ ಮತ್ತು ಬಿಜೆಪಿ ಲೋಕಸಭಾ ಸದಸ್ಯರಾದ ಬಂಡಿ ಸಂಜಯ್ ಕುಮಾರ್ ಮತ್ತು ಡಿ.ಅರವಿಂದ್ ಸೇರಿದಂತೆ 2,290 ಸ್ಪರ್ಧಿಗಳು ಕಣದಲ್ಲಿದ್ದಾರೆ. ಕೆಸಿಆರ್ ತನ್ನ ಹಾಲಿ ಕ್ಷೇತ್ರ ಗಜ್ವೆಲ್ ಜೊತೆಗೆ ಕಾಮರೆಡ್ಡಿ ಕ್ಷೇತ್ರದಿಂದಲೂ ಸ್ಪರ್ಧೆ ಮಾಡಿದ್ದಾರೆ. ಕಾಮರೆಡ್ಡಿಯಲ್ಲಿ ಸಿಎಂಗೆ ಸವಾಲು ಹಾಕಲು ಕಾಂಗ್ರೆಸ್ ತನ್ನ ರಾಜ್ಯಾಧ್ಯಕ್ಷ ರೇವಂತ್ ರೆಡ್ಡಿ ಅವರನ್ನು ಅಖಾಡಕ್ಕೆ ಇಳಿಸಿದೆ. ಲೋಕಸಭಾ ಸದಸ್ಯರಾಗಿರುವ ರೇವಂತ್ ರೆಡ್ಡಿ ಕೂಡ ಈ ಹಿಂದೆ ತಾವು ಪ್ರತಿನಿಧಿಸಿದ್ದ ಕೊಡಂಗಲ್‌ ಹಾಗೂ ಕಾಮರೆಡ್ಡಿ ಎರಡೂ ಕಡೆ ಸ್ಪರ್ಧಿಸಿದ್ದಾರೆ.

ಇದನ್ನೂ ಓದಿ: ಖರ್ಗೆ 50 ವರ್ಷಗಳ ಚುನಾವಣಾ ರಾಜಕೀಯದ ಕುರಿತ ಪುಸ್ತಕ ಬಿಡುಗಡೆ: 'ನಿರ್ಣಾಯಕ ಘಟ್ಟದಲ್ಲಿ ಅವರು ಅಧ್ಯಕ್ಷರಾಗಿದ್ದಾರೆ' - ಸೋನಿಯಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.