ETV Bharat / assembly-elections

Explained: ಚುನಾವಣಾ ನೀತಿ ಸಂಹಿತೆ ಎಂದರೇನು? ತಿಳಿಯಬೇಕಾದ 10 ನಿಯಮಗಳು

author img

By

Published : Mar 29, 2023, 12:12 PM IST

ದೇಶದಲ್ಲಿ ಯಾವುದೇ ಚುನಾವಣೆ ಘೋಷಣೆಯಾದಾಗ ಅದರೊಂದಿಗೆ ಚುನಾವಣಾ ನೀತಿ ಸಂಹಿತೆಯೂ ಘೋಷಣೆಯಾಗುತ್ತದೆ. ಚುನಾವಣಾ ನೀತಿ ಸಂಹಿತೆಯ ಬಗ್ಗೆ ಇಲ್ಲಿದೆ ಒಂದಿಷ್ಟು ಮುಖ್ಯವಾದ ಮಾಹಿತಿ.

Explained: ಚುನಾವಣಾ ನೀತಿ ಸಂಹಿತೆ ಎಂದರೇನು? ತಿಳಿಯಬೇಕಾದ 10 ನಿಯಮಗಳು
Explained: What is Model Code of Conduct? 10 rules you must know

ಬೆಂಗಳೂರು: ಭಾರತದ ಚುನಾವಣಾ ಆಯೋಗವು ಕರ್ನಾಟಕ ವಿಧಾನಸಭೆ ಚುನಾವಣೆ 2023ರ ದಿನಾಂಕವನ್ನು ಪ್ರಕಟಿಸಿದೆ. ಕರ್ನಾಟಕದಲ್ಲಿ ಮೇ 10, 2023 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ ಮತ್ತು ಮೇ 13 ರಂದು ಮತ ಎಣಿಕೆ ನಡೆಯಲಿದೆ.

ಚುನಾವಣಾ ದಿನಾಂಕಗಳ ಘೋಷಣೆಯೊಂದಿಗೆ, ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದೆ. ಅಂದರೆ ನಾಯಕರು, ರಾಜಕೀಯ ಪಕ್ಷಗಳು ಮತ್ತು ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿದ ಎಲ್ಲರೂ ಈ ಸಂಹಿತೆಗೆ ಬದ್ಧರಾಗಿರುತ್ತಾರೆ.

ಹಾಗಾದರೆ ದೇಶದಲ್ಲಿ ಚುನಾವಣೆ ಸಂದರ್ಭದಲ್ಲಿ ಪ್ರಸ್ತಾಪಿಸುವ ಈ ಮಾದರಿ ನೀತಿ ಸಂಹಿತೆ ಎಂದರೆ ಏನು? ನೀತಿ ಸಂಹಿತೆ ಜಾರಿಯಾದಾಗ ಏನು ಮಾಡಬಹುದು ಹಾಗೂ ಏನು ಮಾಡುವ ಹಾಗಿಲ್ಲ? ಬನ್ನಿ ಈ ವಿಚಾರಗಳ ಬಗ್ಗೆ ಒಂದಿಷ್ಟು ತಿಳಿಯೋಣ.

ಸರಳವಾಗಿ ಹೇಳುವುದಾದರೆ, ಇದು ಮುಕ್ತ ಮತ್ತು ನ್ಯಾಯಸಮ್ಮತವಾದ ಚುನಾವಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ಚುನಾವಣಾ ಆಯೋಗವು ಸೂಚಿಸಿದ ನಿಯಮಗಳ ಪಟ್ಟಿಯಾಗಿದೆ. ಈ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಮಾಡಿದಲ್ಲಿ ಮತದಾನ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡುವ ಚುನಾವಣಾ ಆಯೋಗದಿಂದ ಕಠಿಣ ಶಿಕ್ಷೆಗೆ ಗುರಿಯಾಗುವ ಸಾಧ್ಯತೆಯಿರುತ್ತದೆ. ಚುನಾವಣಾ ಆಯೋಗವು ಸುಗಮ ಮತ್ತು ನ್ಯಾಯಯುತ ಮತದಾರರ ಪ್ರಕ್ರಿಯೆಯನ್ನು ಹೇಗೆ ಖಾತ್ರಿಪಡಿಸುತ್ತದೆ ಎಂಬುದರ ಕುರಿತು ನಿಮಗೆ ಸ್ಪಷ್ಟವಾದ ತಿಳುವಳಿಕೆಯನ್ನು ನೀಡಲು ಹತ್ತು ಪ್ರಮುಖ ಮಾನದಂಡಗಳು ಇಲ್ಲಿವೆ.

1. ಯಾವುದೇ ಪಕ್ಷ ಅಥವಾ ಅಭ್ಯರ್ಥಿಯು ಅಸ್ತಿತ್ವದಲ್ಲಿರುವ ಭಿನ್ನಾಭಿಪ್ರಾಯಗಳನ್ನು ಉಲ್ಬಣಗೊಳಿಸುವಂತಹ ಅಥವಾ ಪರಸ್ಪರ ದ್ವೇಷವನ್ನು ಉಂಟುಮಾಡುವ ಅಥವಾ ವಿವಿಧ ಜಾತಿಗಳು ಮತ್ತು ಸಮುದಾಯಗಳ ನಡುವೆ, ಧಾರ್ಮಿಕ ಅಥವಾ ಭಾಷಿಕ ನಡುವೆ ಉದ್ವಿಗ್ನತೆಯನ್ನು ಉಂಟುಮಾಡುವ ಯಾವುದೇ ಚಟುವಟಿಕೆಯನ್ನು ಕೈಗೊಳ್ಳಬಾರದು.

2. ರಾಜಕೀಯ ಪಕ್ಷಗಳು ಮತ್ತು ಅವರ ಅಭ್ಯರ್ಥಿಗಳು ತಮ್ಮ ಪ್ರತಿಸ್ಪರ್ಧಿಗಳ ಟೀಕೆಗಳನ್ನು ರಾಜಕೀಯ, ಕಾರ್ಯಕ್ರಮಗಳು, ಹಿಂದಿನ ದಾಖಲೆ ಮತ್ತು ಕೆಲಸಗಳಿಗೆ ಸೀಮಿತಗೊಳಿಸಬೇಕು. ಯಾವುದೇ ಅಭ್ಯರ್ಥಿ ಅಥವಾ ರಾಜಕೀಯ ಪಕ್ಷವು ವೈಯಕ್ತಿಕ ಟೀಕೆಗಳನ್ನು ಅಥವಾ ನಾಯಕರು ಅಥವಾ ಕಾರ್ಯಕರ್ತರ ಸಾರ್ವಜನಿಕ ಚಟುವಟಿಕೆಗಳಿಗೆ ಸಂಬಂಧಿಸದ ಯಾವುದೇ ಹೇಳಿಕೆಗಳನ್ನು ನೀಡುವಂತಿಲ್ಲ.

3. ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಅಥವಾ ಇತರ ನಾಯಕರು ಜಾತಿ ಅಥವಾ ಕೋಮು ಆಧಾರದ ಮೇಲೆ ಮತ ಕೇಳುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಧಾರ್ಮಿಕ ಕ್ಷೇತ್ರಗಳನ್ನು ಚುನಾವಣಾ ಪ್ರಚಾರದ ವೇದಿಕೆಯಾಗಿ ಬಳಸಿಕೊಳ್ಳಬಾರದು.

4. ಎಲ್ಲಾ ಪಕ್ಷಗಳು ಮತ್ತು ಅಭ್ಯರ್ಥಿಗಳು ಮತದಾರರಿಗೆ ಲಂಚ ನೀಡುವುದು, ಮತದಾರರಿಗೆ ಬೆದರಿಕೆ ಹಾಕುವುದು, ಮತಗಟ್ಟೆಗಳ 100 ಮೀಟರ್ ವ್ಯಾಪ್ತಿಯಲ್ಲಿ ಪ್ರಚಾರ ನಡೆಸುವುದು, 48 ಗಂಟೆಗಳ ಅವಧಿಯಲ್ಲಿ ಹಾಗೂ ಮತದಾನದ ಮುಕ್ತಾಯಕ್ಕೆ ನಿಗದಿತ ಗಂಟೆ ಇತ್ಯಾದಿ ಸಮಯಾವಧಿಯಲ್ಲಿ ಸಾರ್ವಜನಿಕ ಸಭೆಗಳನ್ನು ನಡೆಸುವುದು ಮುಂತಾದ ಪದ್ಧತಿಗಳನ್ನು ತಪ್ಪಿಸಬೇಕು ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.

4. ವ್ಯಕ್ತಿಗಳ ಅಭಿಪ್ರಾಯಗಳು ಅಥವಾ ಚಟುವಟಿಕೆಗಳ ವಿರುದ್ಧ ಪ್ರತಿಭಟಿಸುವ ಮೂಲಕ ಅವರ ಮನೆಗಳ ಮುಂದೆ ಪ್ರದರ್ಶನಗಳು ಅಥವಾ ಪಿಕೆಟಿಂಗ್ ಅನ್ನು ಚುನಾವಣಾ ಸಮಿತಿಯು ನಿಷೇಧಿಸುತ್ತದೆ. ಇದಲ್ಲದೆ, ಯಾವುದೇ ರಾಜಕೀಯ ಪಕ್ಷಗಳು ಅಥವಾ ಅಭ್ಯರ್ಥಿಗಳು ಯಾವುದೇ ವ್ಯಕ್ತಿಯ ಜಮೀನು, ಕಟ್ಟಡವನ್ನು ಅನುಮತಿಯಿಲ್ಲದೆ ಧ್ವಜಗಳು, ಬ್ಯಾನರ್‌ಗಳು, ಸೂಚನೆಗಳು ಮತ್ತು ಘೋಷಣೆಗಳನ್ನು ಬರೆಯಲು ಅವರ ಅನುಯಾಯಿಗಳಿಗೆ ಬಳಸಲು ಅನುಮತಿ ಇರುವುದಿಲ್ಲ.

5. ರಾಜಕೀಯ ಪಕ್ಷ ಅಥವಾ ಅಭ್ಯರ್ಥಿಯು ಯಾವುದೇ ಸಭೆ ನಡೆಸುವುದಾಗಿದ್ದರೆ ಸಾಕಷ್ಟು ಮುಂಚೆಯೇ ಅದರ ಬಗ್ಗೆ ಮಾಹಿತಿ ನೀಡಿ ಚುನಾವಣಾ ಆಯೋಗದಿಂದ ಅನುಮತಿ ಪಡೆದುಕೊಳ್ಳಬೇಕಾಗುತ್ತದೆ. ಉದ್ದೇಶಿತ ಸಭೆಯ ಸ್ಥಳ ಮತ್ತು ಸಮಯವನ್ನು ಸಾಕಷ್ಟು ಮುಂಚಿತವಾಗಿ ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೆ ತಿಳಿಸಬೇಕು. ಧ್ವನಿವರ್ಧಕ ಬಳಸಲು ಸ್ಥಳೀಯ ಪ್ರಾಧಿಕಾರವು ಸೂಚಿಸಿದಂತೆ ಸರಿಯಾದ ಅನುಮತಿಯನ್ನು ಪಡೆಯಬೇಕು.

6. ಸಂಘಟಿತ ಮೆರವಣಿಗೆಯ ಬಗ್ಗೆ ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೆ ಸಾಕಷ್ಟು ಮುಂಚಿತವಾಗಿ ಸೂಚನೆಯನ್ನು ನೀಡಬೇಕು, ಚುನಾವಣಾ ಆಯೋಗದ ಮಾದರಿ ನೀತಿ ಸಂಹಿತೆ ಅಂತಹ ಪ್ರಚಾರದ ಸಮಯದಲ್ಲಿ ನೆನಪಿನಲ್ಲಿಟ್ಟುಕೊಳ್ಳಬೇಕಾದ ನಿಯಮಗಳನ್ನು ರೂಪಿಸಿದೆ. ಸಂಚಾರಕ್ಕೆ ಯಾವುದೇ ಅಡಚಣೆಯಾಗದಂತೆ ಸಂಘಟಕರು ಮುಂಚಿತವಾಗಿಯೇ ಕ್ರಮಕೈಗೊಳ್ಳಬೇಕು. ರಾಜಕೀಯ ಪಕ್ಷಗಳು ಅಥವಾ ಅಭ್ಯರ್ಥಿಗಳು ಇಂಥ ಸಂದರ್ಭಗಳಲ್ಲಿ ಗರಿಷ್ಠ ಪ್ರಮಾಣದಲ್ಲಿ ಹಿಡಿತ ಸಾಧಿಸಬೇಕು. ದುರುಪಯೋಗವಾಗಬಹುದಾದ ಭಿತ್ತಿ ಪತ್ರಗಳನ್ನು ಕೊಂಡೊಯ್ಯುವುದು ಅಥವಾ ವಿರೋಧ ಪಕ್ಷಗಳು ಮತ್ತು ನಾಯಕರ ಪ್ರತಿಕೃತಿಗಳನ್ನು ಒಯ್ಯುವುದನ್ನು ಅನುಮತಿಸಲಾಗುವುದಿಲ್ಲ

7. ಮತದಾನದ ದಿನದಂದು, ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಶಾಂತಿಯುತ ಮತ್ತು ಕ್ರಮಬದ್ಧವಾದ ಮತದಾನವನ್ನು ಖಚಿತಪಡಿಸಿಕೊಳ್ಳಲು ಚುನಾವಣಾ ಕರ್ತವ್ಯದಲ್ಲಿರುವ ಅಧಿಕಾರಿಗಳಿಗೆ ಸಹಕರಿಸಬೇಕು. ಅವರು ಮತದಾನದ ದಿನದಂದು ಮತ್ತು ಅದಕ್ಕೂ ಮುನ್ನ 48 ಗಂಟೆಗಳ ಅವಧಿಯಲ್ಲಿ ಮದ್ಯ ಮಾರಾಟ ಅಥವಾ ವಿತರಿಸುವುದನ್ನು ತಡೆಯಬೇಕು.

8. ಮತದಾರರನ್ನು ಹೊರತುಪಡಿಸಿ, ಚುನಾವಣಾ ಆಯೋಗದಿಂದ ಮಾನ್ಯವಾದ ಪಾಸ್ ಇಲ್ಲದ ಯಾರಿಗೂ ಮತಗಟ್ಟೆಗಳನ್ನು ಪ್ರವೇಶಿಸಲು ಅನುಮತಿಸಲಾಗುವುದಿಲ್ಲ.

9. ಕೇಂದ್ರ ಅಥವಾ ರಾಜ್ಯಗಳ ಆಡಳಿತ ಪಕ್ಷವು ಚುನಾವಣಾ ಪ್ರಚಾರದ ಉದ್ದೇಶಗಳಿಗಾಗಿ ಸರ್ಕಾರಿ ವ್ಯವಸ್ಥೆಯನ್ನು ಬಳಸುತ್ತಿಲ್ಲ ಎಂದು ಖಚಿತಪಡಿಸಿಕೊಳ್ಳಬೇಕು. ಮಂತ್ರಿಗಳು ತಮ್ಮ ಅಧಿಕೃತ ಭೇಟಿಯನ್ನು ಚುನಾವಣಾ ಪ್ರಚಾರಗಳೊಂದಿಗೆ ಸಂಯೋಜಿಸಬಾರದು ಮತ್ತು ಪ್ರಚಾರಕ್ಕಾಗಿ ಅಧಿಕೃತ ಸರ್ಕಾರಿ ವ್ಯವಸ್ಥೆಯನ್ನು ಅಥವಾ ಸಿಬ್ಬಂದಿಯನ್ನು ಬಳಸಬಾರದು.

10. ಚುನಾವಣೆಗೆ ಸಂಬಂಧಿಸಿದಂತೆ ಮೈದಾನಗಳು, ಹೆಲಿಪ್ಯಾಡ್‌ಗಳಂತಹ ಸಾರ್ವಜನಿಕ ಸ್ಥಳಗಳು ಆಡಳಿತ ಪಕ್ಷದ ಏಕಸ್ವಾಮ್ಯಕ್ಕೆ ಒಳಗಾಗಬಾರದು. ಇತರ ಪಕ್ಷಗಳು ಮತ್ತು ಅಭ್ಯರ್ಥಿಗಳು ಅಂತಹ ಸ್ಥಳಗಳು ಮತ್ತು ಸೌಲಭ್ಯಗಳನ್ನು ಆಡಳಿತ ಪಕ್ಷವು ಬಳಸುವ ಅದೇ ಷರತ್ತುಗಳು ಮತ್ತು ನಿಯಮಗಳ ಮೇಲೆ ಬಳಸಲು ಅನುಮತಿಸಬೇಕು.

ಇದನ್ನೂ ಓದಿ : ಭಾರತದಲ್ಲಿ 2,151 ಕೋವಿಡ್ ಕೇಸ್​ ಪತ್ತೆ: ಇದು 5 ತಿಂಗಳಲ್ಲೇ ಅತಿ ಹೆಚ್ಚು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.