ETV Bharat / assembly-elections

ಬಿಜೆಪಿಗೆ ವರ್ಕೌಟ್ ಆಗದ ಡಬಲ್ ಎಂಜಿನ್ ಸರಕಾರದ ಸಾಧನೆಗಳ ವ್ಯಾಪಕ ಪ್ರಚಾರ..!

author img

By

Published : May 13, 2023, 2:25 PM IST

BJP Double engine Government Campaign did not worked
BJP Double engine Government Campaign did not worked

ಮೋದಿ ಸೇರಿದಂತೆ ಎಲ್ಲ ನಾಯಕರು ಅಭಿವೃದ್ಧಿಗಾಗಿ ಡಬಲ್ ಇಂಜಿನ್ ಸರ್ಕಾರಕ್ಕೆ ಬೆಂಬಲ ಕೊಡಿ ಎಂದು ಪ್ರಚಾರ ನಡೆಸಿದರೂ ಇವು ಬಿಜೆಪಿ ಕೈ ಹಿಡಿಯಲಿಲ್ಲ

ಬೆಂಗಳೂರು: ರಾಜ್ಯದಲ್ಲಿ ಚುನಾವಣಾ ಕಾವು ಆರಂಭಗೊಂಡ ದಿನದಿಂದ ಬಹಿರಂಗ ಪ್ರಚಾರ ಅಂತ್ಯಗೊಳ್ಳುವವರೆಗೂ ಬಿಜೆಪಿ ನಾಯಕರು ಡಬಲ್ ಇಂಜಿನ್ ಸರ್ಕಾರದ ಸಾಧನೆಗಳ ಬಗ್ಗೆ ವ್ಯಾಪಕ ಪ್ರಚಾರ ಮಾಡಿದರು. ಮೋದಿ ಸೇರಿದಂತೆ ಎಲ್ಲ ನಾಯಕರು ಅಭಿವೃದ್ಧಿಗಾಗಿ ಡಬಲ್ ಇಂಜಿನ್ ಸರ್ಕಾರಕ್ಕೆ ಬೆಂಬಲ ಕೊಡಿ ಎಂದು ಜನತೆಗೆ ಮನವಿ ಮಾಡಿದರು. ಆದರೆ ಅಗತ್ಯ ವಸ್ತುಗಳ ಬೆಲೆ ಎರಿಕೆ,ಆಡಳಿತ ವಿರೋಧಿ ಅಲೆಯಲ್ಲಿ ಡಬಲ್ ಇಂಜಿನ್ ಸರ್ಕಾರದ ಸಾಧನೆಗಳು ಕೊಚ್ಚಿ ಹೋಗಿದ್ದು, ಹೈಕಮಾಂಡ್ ನಾಯಕರು ಡಬಲ್ ಇಂಜಿನ್ ಸರ್ಕಾರದ ಮಂತ್ರ ರಾಜ್ಯ ಬಿಜೆಪಿಗೆ ವರ್ಕೌಟ್ ಆಗಲಿಲ್ಲ.

2022ರ ನವೆಂಬರ್ ನಲ್ಲಿ ರಾಜ್ಯ ಪ್ರವಾಸ ಕೈಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವ ವೇಳೆ ಪದೇ ಪದೇ ಡಬಲ್ ಇಂಜಿನ್ ಸರ್ಕಾರದ ಹೆಸರನ್ನು ಪ್ರಸ್ತಾಪಿಸಿ ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರದ ಸಾಧನೆಗಳ ಪ್ರಚಾರ ಕಾರ್ಯಕ್ಕೆ ಮುನ್ನುಡಿ ಬರೆದರು. ಅದಾದ ನಂತರ ಮೋದಿ, ಅಮಿತ್ ಶಾ, ಜೆಪಿ ನಡ್ಡ ಸೇರಿದಂತೆ ಹೈಕಮಾಂಡ್ ನಾಯಕರು, ಯಡಿಯೂರಪ್ಪ,ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ,ನಳಿನ್ ಕುಮಾರ್ ಕಟೀಲ್ ಸೇರಿದಂತೆ ರಾಜ್ಯ ನಾಯಕರು ಪ್ರತಿಯೊಂದು ಸಭೆ ಸಮಾರಂಭದಲ್ಲಿಯೂ ಡಬಲ್ ಇಂಜಿನ್ ಸರ್ಕಾರದ ಸಾಧನೆಗಳನ್ನು ಪ್ರಸ್ತಾಪಿಸಿ ಬೆಂಬಲ ಕೋರುವ ಕೆಲಸ ಮಾಡಿದರು.

ರೈಲ್ವೆ ಯೋಜನೆಗಳು, ನೀರಾವರಿ ಯೋಜನೆಗಳು, ಹೆದ್ದಾರಿ ಯೋಜನೆಗಳು, ವಿಮಾನ ನಿಲ್ದಾಣಗಳು, ಎಕ್ಸ್ ಪ್ರೆಸ್ ವೇ ಇತ್ಯಾದಿ ಯೋಜನೆಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವ ಅಗತ್ಯ. ಎರಡೂ ಕಡೆ ಒಂದೇ ಸರ್ಕಾರ ಇದ್ದಲ್ಲಿ, ಈ ಯೋಜನೆಗಳಿಗೆ ವೇಗ ಸಿಗಲಿದೆ ಎನ್ನುವ ವಿಚಾರಗಳನ್ನು ಜನರ ಮುಂದಿಟ್ಟು ಡಬಲ್ ಇಂಜಿನ್ ಸರ್ಕಾರಕ್ಕೆ ಬೆಂಬಲ ನೀಡುವಂತೆ ಒತ್ತಿ ಒತ್ತಿ ಹೇಳಿದರು.

ರಾಜ್ಯ ಮತ್ತು ಕೇಂದ್ರದ ಬಿಜೆಪಿ ಸರ್ಕಾರದ ಪ್ರಯತ್ನದ ಫಲವಾಗಿ, ದಶಕಗಳಿಂದ ನನೆಗುದಿಯಲ್ಲಿದ್ದ ಕಳಸಾ ಬಂಡೂರಿ ಡಿ.ಪಿ.ಆರ್ ಗೆ ಒಪ್ಪಿಗೆ, ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ನೀಡಿರುವುದರಿಂದ ರಾಜ್ಯದ ನೀರಾವರಿ, ಕೃಷಿ ಕ್ಷೇತ್ರದ ಚಿತ್ರಣವೇ ಬದಲಾಗಲಿದೆ. ಬೆಂಗಳೂರು ಅಭಿವೃದ್ಧಿಗೆ ಪೂರಕವಾಗಿ ಮೆಟ್ರೋ, ಸಬ್ ಅರ್ಬನ್ ರೈಲು, ಸ್ಯಾಟಲೈಟ್ ಟೌನ್ ರಿಂಗ್ ರೋಡ್, ಭೂ ಸಾರಿಗೆ ಪ್ರಾಧಿಕಾರ ಸ್ಥಾಪನೆಗೆ ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಮಹತ್ವದ ಕೊಡುಗೆಗಳನ್ನು ನೀಡಲಾಗಿದ್ದು, ಡಬಲ್ ಎಂಜಿನ್ ಸರ್ಕಾರದ ಅಭಿವೃದ್ಧಿಯ ಮಾದರಿಗೆ ಇದು ಸಾಕ್ಷಿ ಎಂದು ಮತದಾರರ ಸೆಳೆಯುವ ಪ್ರಯತ್ನ ನಡೆಸಲಾಯಿತು.

ಸಾಧನೆಗಳ ಪ್ರಚಾರ: ಕಳೆದ 5 ವರ್ಷಗಳಲ್ಲಿ ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ, ರೈಲ್ವೆ ಗೆ 3420 ಕೋಟಿ, ಸ್ಮಾರ್ಟ್ ಸಿಟಿ ಯೋಜನೆಗೆ 2500 ಕೋಟಿ, ಕಿಸಾನ್ ಸಮ್ಮಾನ್ ಯೋಜನೆಗೆ 11 ಸಾವಿರ ಕೋಟಿ, ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಹೆಚ್ಚಿನ ಅನುದಾನ, ಮನೆ ಮನೆಗೆ ನಲ್ಲಿ ನೀರಿನ ಸಂಪರ್ಕ, ಬೆಂಗಳೂರು ಮೆಟ್ರೋ ಮಾರ್ಗ 70 ಕಿಲೋಮೀಟರ್ ಗೆ ವಿಸ್ತರಣೆ,1,16,000 ಕೋಟಿ ರೂ.ಗಳ 4 ಸಾವಿರ ಕಿಮೀಗೂ ಅಧಿಕ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾರ್ಯ, ರೈಲ್ವೇ ಆಧುನೀಕರಣ, ರಾಜ್ಯದ 55 ರೈಲು ನಿಲ್ದಾಣಗಳನ್ನು ವಿಶ್ವದರ್ಜೆಗೆ ಏರಿಸುವುದರೊಂದಿಗೆ, ದಕ್ಷಿಣ ಭಾರತದ ಪ್ರಥಮ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲನ್ನು ಮೈಸೂರು, ಬೆಂಗಳೂರು ಮತ್ತು ಚೆನ್ನೈ ನಡುವೆ ಒದಗಿಸಿದ್ದು, ಬೆಂಗಳೂರು ಏರ್ ಪೋರ್ಟ್ ಟರ್ವಿುನಲ್ -2 ನಿರ್ಮಾಣ ಕಾಮಗಾರಿ ಕೇವಲ 3 ವರ್ಷಗಳ ಅವಧಿಯಲ್ಲಿ ಕಾರ್ಯಸೇವೆಗೆ ಸಿದ್ದಗೊಂಡಿದ್ದು, ಬಿಎಂಟಿಸಿಗೆ ಫೇಮ್ ಯೋಜನೆ ಅಡಿಯಲ್ಲಿ ನಗರಕ್ಕೆ ಪರಿಸರಸ್ನೇಹಿ 1500 ಬಸ್ ಗಳನ್ನು ಕೇಂದ್ರ ಸರ್ಕಾರ ಒದಗಿಸಿದ್ದು, ಬೆಂಗಳೂರು ಸಬ್ ಅರ್ಬನ್ ರೈಲಿನ ಕುರಿತು ಕಳೆದ 40 ವರ್ಷಗಳಿಂದ ಕೇವಲ ಪೊಳ್ಳು ಭರವಸೆಗಳನ್ನು ಕೇಳಿದ್ದ ಬೆಂಗಳೂರಿನ ನಾಗರಿಕರಿಗೆ ಪ್ರಧಾನಿ ನರೇಂದ್ರ ಮೋದಿ, ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ, ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಡಬಲ್ ಎಂಜಿನ್ ಸರ್ಕಾರ ಕೇವಲ 40 ತಿಂಗಳ ಅವಧಿಯಲ್ಲಿ ಈ ಯೋಜನೆ ಸಂಪೂರ್ಣ ಸಾಕಾರಗೊಳ್ಳುತ್ತಿದೆ ಎನ್ನುವ ಪ್ರಚಾರ ಮಾಡಲಾಯಿತು.

ಧಾರವಾಡಕ್ಕೆ ಐಐಟಿ, ರಾಯಚೂರಿಗೆ ಐಐಐಟಿ, ತುಮಕೂರಿಗೆ ಹೆಚ್ಎಎಲ್ ಫ್ಯಾಕ್ಟರಿ, ಮೈಸೂರಿಗೆ ಸೆಮಿ ಕಂಡಕ್ಟರ್ ಫ್ಯಾಬ್ ಯೂನಿಟ್, ಬೆಂಗಳೂರಿಗೆ ಬಹುಆಯಾಮದ ಲಾಜಿಸ್ಟಿಕ್ಸ್ ಪಾರ್ಕ್, ರಾಜ್ಯದ 11 ಲಕ್ಷ ಕುಟುಂಬಗಳಿಗೆ ಪಿಎಂ ಆವಾಸ್ ಯೋಜನೆಯಲ್ಲಿ ಗೃಹ ನಿರ್ವಣ, 50 ಲಕ್ಷ ಫಲಾನುಭವಿಗಳಿಗೆ ಪಿ.ಎಂ ಕಿಸಾನ್ ನಿಧಿಯಲ್ಲಿ ಪರಿಹಾರ ನೀಡಿದ್ದನ್ನು ಉಲ್ಲೇಖಿಸಿ ಡಬಲ್ ಇಂಜಿನ್ ಸರ್ಕಾರದ ಸಾಧನೆಗಳನ್ನು ಹೇಳಿಕೊಂಡು ಜನತೆಯ ಮುಂದೆ ನಿಂತರು.

ಸಿದ್ದರಾಮಯ್ಯ ನೇತೃತ್ವದ ಹಿಂದಿನ ಕಾಂಗ್ರೆಸ್ ಸರ್ಕಾರ ಪಿಎಫ್ಐ ಮೇಲಿನ 1600 ಕೇಸ್ ಗಳನ್ನು ಹಿಂಪಡೆದ ಪರಿಣಾಮ ದೇಶದಲ್ಲಿ ಹಿಂಸಾತ್ಮಕ ಕಾರ್ಯಗಳು ವೃದ್ಧಿಗೊಂಡಿದ್ದನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರವು ನರೇಂದ್ರ ಮೋದಿ, ಅಮಿತ್ ಶಾ ದಿಟ್ಟ ನೇತೃತ್ವದಲ್ಲಿ ಪಿಎಫ್ಐ ಅನ್ನು ನಿಷೇಧಿಸಿದೆ ಎಂದು ಉಗ್ರ ಸಂಘಟನೆಗಳ ನಿಗ್ರಹದ ಮಾತುಗಳನ್ನು ಹೇಳಿ ಕೇಂದ್ರ-ರಾಜ್ಯದ ಬಿಜೆಪಿ ನೇತೃತ್ವದ ಡಬಲ್ ಇಂಜಿನ್ ಸರ್ಕಾರಗಳ ಸಮರ್ಪಕ, ಜನಪರ ನೀತಿಗಳ ಕಾರಣದಿಂದಾಗಿ ಕರ್ನಾಟಕವು ದೇಶದ ಅತ್ಯಂತ ಪ್ರಗತಿಶೀಲ ರಾಜ್ಯವಾಗಿದ್ದು, ಅತಿ ಹೆಚ್ಚು ವಿದೇಶಿ ಬಂಡವಾಳ ಹೂಡಿಕೆ ಆಕರ್ಷಿಸಬಲ್ಲ, ಹೆಚ್ಚು ಸಾರ್ಟಪ್, ಯೂನಿಕಾರ್ನ್ ಳನ್ನು ಹೊಂದಿರುವ ಅಗ್ರಗಣ್ಯ ರಾಜ್ಯವಾಗಿದ್ದು, ದೇಶದ ಆರ್ಥಿಕತೆಗೆ ಹೆಚ್ಚಿನ ಕೊಡುಗೆ ನೀಡಬಲ್ಲ ಕರ್ನಾಟಕದ ಅಭಿವೃದ್ಧಿ ಬಿಜೆಪಿ ಸರ್ಕಾರದಿಂದ ಮಾತ್ರ ಸಾಧ್ಯ ಎಂಬುದು ಸ್ಪಷ್ಟವಾಗಿದ್ದು, ರಾಜ್ಯದ ಸಮಗ್ರ, ಸರ್ವಾಂಗೀಣ ಪ್ರಗತಿಗೆ ಪೂರಕವಾಗಿ ಕಾರ್ಯನಿರ್ವಹಿಸಬಲ್ಲ ಡಬಲ್ ಇಂಜಿನ್ ಸರ್ಕಾರಕ್ಕೆ ಬೆಂಬಲ ನೀಡಿ ಎಂದು ಇಡೀ ಚುನಾವಣಾ ಪ್ರಚಾರದಲ್ಲಿ ಕೇಳಿಕೊಂಡು ಬಿಜೆಪಿ ನಾಯಕರು ಮತ ಯಾಚನೆ ಮಾಡಿದ್ದರು.

ರಾಜ್ಯ ಬಿಜೆಪಿ ಸರ್ಕಾರದ ಸಾಧನೆಗಳನ್ನು ಜನರ ಮುಂದಿಡಲು ನಾಲ್ಕು ತಂಡಗಳಲ್ಲಿ ರಾಜ್ಯದಲ್ಲಿ ಜನಸಂಕಲ್ಪ ಯಾತ್ರೆ ನಡೆಸಲಾಯಿತು. ಬೂತ್ ಅಭಿಯಾನಗಳನ್ನು ನಡೆಸಲಾಯಿತು. ವಿಜಯ ಸಂಕಲ್ಪ ಅಭಿಯಾನ ನಡೆಸಲಾಯಿತು. ಎಲ್ಲಾ ಅಭಿಯಾನಗಳಲ್ಲಿಯೂ ಡಬಲ್ ಇಂಜಿನ್ ಸರ್ಕಾರದ ಸಾಧನೆಗಳನ್ನ ಪ್ರಸ್ತಾಪಿಸಿ ಭಾರಿ ಪ್ರಮಾಣದಲ್ಲಿ ಪ್ರಚಾರ ಕಾರ್ಯ ನಡೆಸಲಾಯಿತು. ರಾಜ್ಯ ಬಿಜೆಪಿಯ ಘೋಷ ವಾಕ್ಯವೇ ಡಬಲ್ ಇಂಜಿನ್ ಸರ್ಕಾರ ಎನ್ನುವಂತೆ ಪ್ರತಿಯೊಬ್ಬ ಬಿಜೆಪಿ ನಾಯಕರ ಬಾಯಲ್ಲಿಯೂ ಡಬಲ್ ಇಂಜಿನ್ ಸರ್ಕಾರದ ವಿಚಾರಗಳೇ ಬರುತ್ತಿದ್ದವು ಆದರೆ ಐದು ತಿಂಗಳ ಕಾಲ ವ್ಯಾಪಕವಾಗಿ ಡಬಲ್ ಇಂಜಿನ್ ಸರ್ಕಾರದ ಸಾಧನೆಗಳ ವ್ಯಾಪಕ ಪ್ರಚಾರ ಮಾತ್ರ ಬಿಜೆಪಿಗೆ ವರ್ಕೌಟ್ ಆಗಲಿಲ್ಲ.

ಡಬಲ್ ಇಂಜಿನ್ ಟ್ರಬಲ್ ಇಂಜಿನ್ ಆಗಲು ಕಾರಣ:
ಡಬಲ್ ಇಂಜಿನ್ ಸರ್ಕಾರಕ್ಕೆ ಡಬಲ್ ವಿರೋಧಿ ಅಲೆ ಟ್ರಬಲ್ ಗೆ ಕಾರಣವಾಗಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಬಹುಮುಖ್ಯವಾಗಿ ಬಿಜೆಪಿ ವಿರುದ್ಧ ಆಡಳಿತ ವಿರೋಧಿ ಅಲೆ, ಯಡಿಯೂರಪ್ಪ ಮುಖ್ಯಮಂತ್ರಿ ಅಭ್ಯರ್ಥಿ ಅಲ್ಲದಿರುವುದು,ಮೋದಿ ಜನಪ್ರೀಯತೆ ಕಡಿಮೆಯಾಗಿರುವುದು. ಅಗತ್ಯ ವಸ್ತುಗಳ ಬೆಲೆ ಹೆಚ್ಚಳ,ಭ್ರಷ್ಟಾಚಾರದ ಆರೋಪಗಳು ಡಬಲ್ ಇಂಜಿನ್ ಸರ್ಕಾರದ ಜನಪ್ರೀಯತೆಯನ್ನು ಮುಚ್ಚಿಹಾಕುವಲ್ಲಿ ಸಫಲವಾಗಿದೆ.

ಈವರೆಗೂ ಯಡಿಯೂರಪ್ಪ ಮುಖ್ಯಮಂತ್ರಿ ಅಭ್ಯರ್ಥಿ ಎನ್ನುವ ಕಾರಣಕ್ಕೆ ಬಿಜೆಪಿಗೆ ದೊಡ್ಡ ಮಟ್ಟದ ಮುನ್ನಡೆ ಬರುತ್ತಿತ್ತು. 2008 ಮತ್ತು 2018 ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಅಭ್ಯರ್ಥಿ ಎನ್ನುವ ಕಾರಣಕ್ಕೆ ಬಿಜೆಪಿ ಮೂರಂಕಿ ತಲುಪಿತು ಆದರೆ ಈಗ ಯಡಿಯೂರಪ್ಪ ಮುಖ್ಯಮಂತ್ರಿ ಅಭ್ಯರ್ಥಿ ಅಲ್ಲ ಹಾಗಾಗಿ ಮೂರಂಕಿ ಸ್ಥಾನ ತಲುಪಲು ಬಿಜೆಪಿಗೆ ಕಷ್ಟ ಸಾಧ್ಯವಾಯಿತು.ಬಿಜೆಪಿ ಎರಡು ಕಡೆ ಆಡಳಿತ ವಿರೋಧಿ ಅಲೆ ಎದುರಿಸುತ್ತಿದೆ. ಜನರ ಬಳಿ ಹೋದರೆ ಅಡುಗೆ ಅನಿಲ,ಪೆಟ್ರೋಲ್.ಡೀಸೆಲ್ ಬೆಲೆ ಬಗ್ಗೆ ಮಾತನಾಡುತ್ತಾರೆ. ಇದು ಕೇಂದ್ರಕ್ಕೆ ಸಂಬಂಧಿಸಿದ್ದರಿಂದಾಗಿ ಕೇಂದ್ರದ ವಿರುದ್ಧವೂ ಜನ ಮಾತನಾಡುತ್ತಿದ್ದಾರೆ.40 ಪರ್ಸೆಂಟ್ ಕಮೀಷನ್ ಜನಜನಿತವಾಗಿದೆ. ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಮಾಡಿಕೊಂಡ, ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ 40 ಪರ್ಸೆಂಟ್ ಕಮೀಷನ್ ಬಗ್ಗೆ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದರು,ಇದು ಕೂಡ ರಾಜ್ಯ ಸರ್ಕಾರದ ಆಡಳಿತ ವಿರೋಧಿ ಅಲೆಗೆ ಕಾರಣವಾಗಿ ಬಿಜೆಪಿ ಅಧಿಕಾರ ಗದ್ದುಗೆ ತಲುಪದಂತಾಯಿತು.

ಇನ್ನು ಕನ್ನಡ ಕನ್ನಡಿಗ ಕರ್ನಾಟಕ ಈ ವಿಷಯ ನಾಡಿನ ಜನತೆಗೆ ಬಹಳ ಮುಖ್ಯವಾಗಿದೆ, ರಾಜ್ಯದಲ್ಲಿ ಅನಗತ್ಯವಾಗಿ ಹಿಂದಿ ಹೇರಿಕೆ ವಿಷಯಗಳು ಕನ್ನಡಿಗರನ್ನು ಪದೇ ಪದೇ ಕೆರಳಿಸಿದ್ದವು, ಇದರ ನಡುವೆ ಅಮೂಲ್ ನಂದಿನಿ ವಿವಾದ ಕನ್ನಡಿಗರು ಬಿಜೆಪಿಯನ್ನು ದೂರವಿಡಲು ಮುಖ್ಯ ಕಾರಣಗಳಲ್ಲಿ ಒಂದಾಗಿದೆ ಎನ್ನಬಹುದಾಗಿದೆ. ಇನ್ನು ನೀಟ್,ಬ್ಯಾಂಕಿಂಗ್ ನೇಮಕದಂತಹ ಪರೀಕ್ಷೆಗಳಲ್ಲಿ ಕನ್ನಡ ಕಡೆಗಣನೆ ಅಸಮಧಾನ ಇದೆ ಈ ಎಲ್ಲಾ ಕಾರಣಗಳಿಂದಾಗಿ ಬಿಜೆಪಿಯ ಡಬಲ್ ಇಂಜಿನ್ ಸರ್ಕಾರದ ಸಾಧನೆಗಳ ವ್ಯಾಪಕ ಪ್ರಚಾರ ರಾಜ್ಯ ಬಿಜೆಪಿ ಪಾಲಿಗೆ ವರ್ಕೌಟ್ ಆಗದಂತಾಯಿತು.

ಇದನ್ನೂ ಓದಿ: ಕನಕಪುರದಲ್ಲಿ ಡಿಕೆಶಿ​ಗೆ 8ನೇ ಗೆಲುವು: ಆರ್.ಅಶೋಕ್​ ವಿರುದ್ಧ 1 ಲಕ್ಷಕ್ಕೂ ಹೆಚ್ಚು ಮತಗಳಿಂದ ಜಯ​ಭೇರಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.