ಕರ್ನಾಟಕ

karnataka

ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶಿವಕುಮಾರ ಸ್ವಾಮೀಜಿ ಗದ್ದುಗೆಗೆ ಪೂಜೆ ಸಲ್ಲಿಸಿದ ಜಗದೀಶ್ ಶೆಟ್ಟರ್

By ETV Bharat Karnataka Team

Published : Jan 28, 2024, 8:46 PM IST

Updated : Jan 28, 2024, 9:12 PM IST

ಕಳೆದ 35ರಿಂದ 40 ವರ್ಷಗಳಿಂದ ಬಿಜೆಪಿ ಪಕ್ಷವನ್ನು ಸಂಘಟನೆ ಮೂಲಕ ಕಟ್ಟಿದ್ದೇನೆ. ಪಕ್ಷದ ಕಾರ್ಯಕರ್ತರ ಆಶಯಗಳಿಗೆ ಸ್ಪಂದಿಸಿ ನಾನು ನನ್ನ ಮನೆಗೆ ವಾಪಸ್ ಬಂದಿದ್ದೇನೆ ಎಂದು ಜಗದೀಶ್​ ಶೆಟ್ಟರ್​ ಹೇಳಿದರು.

jagdish-shettar-visited-siddaganga-mutt-and-offered-pooja-in-tumakur
ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶಿವಕುಮಾರ ಸ್ವಾಮೀಜಿ ಗದ್ದುಗೆ ಪೂಜೆ ಸಲ್ಲಿಸಿದ ಜಗದೀಶ್ ಶೆಟ್ಟರ್

ಜಗದೀಶ್ ಶೆಟ್ಟರ್

ತುಮಕೂರು:ಬಿಜೆಪಿ ಪಕ್ಷಕ್ಕೆ ಮರು ಸೇರ್ಪಡೆಗೊಂಡಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು, ಇಂದು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಈಗಾಗಲೇ ಬಿಜೆಪಿಗೆ ಪುನರ್ ಸೇರ್ಪಡೆ ಆಗಿದ್ದೇನೆ, ಅಲ್ಲದೆ ನಿನ್ನೆ ನಡೆದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿಯೂ ಕೂಡ ನಾನು ಭಾಗವಹಿಸಿದ್ದೇನೆ. ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಸ್ವಾಮೀಜಿಗಳ ಆಶೀರ್ವಾದ ಪಡೆಯಲು ಬಂದಿದ್ದೇನೆ" ಎಂದರು.

"ರಾಜ್ಯದ ಎಲ್ಲಾ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ನನ್ನನ್ನು ಬಿಜೆಪಿಗೆ ಆತ್ಮೀಯವಾಗಿ ಹಾಗೂ ಗೌರವಯುತವಾಗಿ ಬರಮಾಡಿಕೊಂಡಿದ್ದಾರೆ. ನಾನು ಈ ಹಿಂದೆ ಬಿಜೆಪಿಯನ್ನು ಬಿಟ್ಟು ಹೊರ ಹೋಗಿದ್ದೆ. ಆದರೆ ನಂತರ ದಿನಗಳಲ್ಲಿ ನಾನು ಯಾವುದೇ ಜಿಲ್ಲೆಗೆ ಹೋದರು ಕೂಡ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ನೀವು ಪುನಃ ಬಿಜೆಪಿಗೆ ವಾಪಸ್ ಬರಬೇಕೆಂಬ ಆಶಯವನ್ನು ವ್ಯಕ್ತಪಡಿಸುತ್ತಿದ್ದರು. ಇದಕ್ಕೆ ರಾಜ್ಯ ನಾಯಕರು ಕೂಡ ಒತ್ತುಕೊಟ್ಟಿದ್ದರು. ಅಲ್ಲದೆ ರಾಷ್ಟ್ರೀಯ ನಾಯಕರು ಕೂಡ ಇದಕ್ಕೆ ಕರೆಕೊಟ್ಟಿದ್ದರು. ಅವರೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿ ನಾನು ಬಿಜೆಪಿ ಪಕ್ಷಕ್ಕೆ ಪುನರ್ ಸೇರ್ಪಡೆಗೊಂಡಿದ್ದೇನೆ" ಎಂದು ಹೇಳಿದರು.

"ಪಕ್ಷ ಸೇರ್ಪಡೆ ಸಂದರ್ಭದಲ್ಲಿ ನಾನು ಯಾವುದೇ ರೀತಿಯ ಬೇಡಿಕೆಯನ್ನು ಇರಿಸಿಲ್ಲ. ಆದರೆ ರಾಷ್ಟ್ರೀಯ ನಾಯಕರು ಗೌರವಯುತವಾಗಿ ನಿಮಗೆ ಸಿಗಬೇಕಾದ ಸ್ಥಾನವನ್ನು ನೀಡುತ್ತೇವೆ ಎಂಬ ಭರವಸೆಯನ್ನು ನೀಡಿದ್ದಾರೆ. ನಾನು ಕಾಂಗ್ರೆಸ್​ನವರ ಮೇಲೆ ಯಾವುದೇ ಆರೋಪಗಳನ್ನು ಮಾಡುವುದಿಲ್ಲ. ನಾನು ನನ್ನ ಮನೆಗೆ ವಾಪಸ್ ಬಂದಿದ್ದೇನೆ. ಕಾಂಗ್ರೆಸ್​ನವರು ಗೌರವ ಸ್ಥಾನಮಾನಗಳನ್ನು ನೀಡಿಲ್ಲ ಎಂದು ಹೇಳುವುದಿಲ್ಲ. ಅವರಿಗೆ ಧನ್ಯವಾದ ಹೇಳಿಯೇ ಬಂದಿದ್ದೇನೆ" ಎಂದರು.

"ಕಳೆದ 35ರಿಂದ 40 ವರ್ಷಗಳಿಂದ ಬಿಜೆಪಿ ಪಕ್ಷವನ್ನು ಸಂಘಟನೆ ಮೂಲಕ ಕಟ್ಟಿದ್ದೇನೆ. ಎರಡು ಬಾರಿ ವಿಧಾನಸಭೆ ವಿರೋಧ ಪಕ್ಷದ ನಾಯಕನಾಗಿ 10 ವರ್ಷಗಳ ಕಾಲ ರಾಜ್ಯವನ್ನು ಸುತ್ತಿದ್ದೇನೆ. ಹೀಗಾಗಿ ಪಕ್ಷದ ಕಾರ್ಯಕರ್ತರ ಆಶಯಗಳಿಗೆ ಸ್ಪಂದಿಸಿ ಪುನಃ ಪಕ್ಷವನ್ನು ಸೇರ್ಪಡೆಗೊಂಡಿದ್ದೇನೆ. ನಾನು ಪಕ್ಷ ಸೇರ್ಪಡೆಗೊಳ್ಳುವ ಕುರಿತು ಸಮಾಲೋಚನೆ ನಡೆಸುವ ಸಂದರ್ಭದಲ್ಲಿ ತುರ್ತಾಗಿ ರಾಷ್ಟ್ರೀಯ ನಾಯಕರು ಪಕ್ಷಕ್ಕೆ ಸೇರ್ಪಡೆಗೊಳಿಸಿಕೊಂಡಿದ್ದಾರೆ ಎಂದು ಹೇಳಿದರು.

ಮೋದಿ ಅವರನ್ನು ಪ್ರಧಾನಮಂತ್ರಿ ಮಾಡಲು ಶೆಟ್ಟರ್​ ಪಕ್ಷಕ್ಕೆ ಬಂದಿದ್ದಾರೆ: ಮತ್ತೊಂದೆಡೆ, ತುಮಕೂರಿನಲ್ಲಿ ಮಾಜಿ ಸಚಿವ ಎಂ ಪಿ ರೇಣುಕಾಚಾರ್ಯ ಮಾತನಾಡಿ, "ಜಗದೀಶ್ ಶೆಟ್ಟರ್ ಪಕ್ಷ ಬಿಟ್ಟಾಗ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು ಸತ್ಯ. ಹಾಗಂತ ಪ್ರತಿದಿನವು ಯುದ್ಧ ಮಾಡಲಿಕ್ಕೆ ಆಗುತ್ತಾ?. ಸಂಘರ್ಷದ ನಂತರ ಸಾಮರಸ್ಯ ಇರಬೇಕಲ್ವಾ, ಹಳೆಯದನ್ನು ಮರಿಯಬೇಕಲ್ವಾ. ಜಗದೀಶ್ ಶೆಟ್ಟರ್ ಅವರು ಯಾವುದೋ ಕಾರಣಕ್ಕೆ ಪಕ್ಷ ಬಿಟ್ಟು ಹೋಗಿದ್ದರು. ದೇಶದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಪ್ರಧಾನಮಂತ್ರಿ ಮಾಡಬೇಕು ಎಂಬ ಉದ್ದೇಶದಿಂದ ಸಂಘಟನೆ ಮಾಡಲು ಅವರು ಬಂದಿದ್ದಾರೆ" ಎಂದರು.

ಇದನ್ನೂ ಓದಿ:ಹುಬ್ಬಳ್ಳಿಯಲ್ಲಿ ಜಗದೀಶ್ ಶೆಟ್ಟರ್​ಗೆ ಅದ್ಧೂರಿ ಸ್ವಾಗತ ಕೋರಿದ ಬಿಜೆಪಿ ಕಾರ್ಯಕರ್ತರು

Last Updated :Jan 28, 2024, 9:12 PM IST

ABOUT THE AUTHOR

...view details