ಕರ್ನಾಟಕ

karnataka

ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾದ ಬಜೆಟ್; ಜಗದೀಶ್ ಶೆಟ್ಟರ್

By ETV Bharat Karnataka Team

Published : Feb 1, 2024, 7:28 PM IST

ಶಿಕ್ಷಣ, ಆರೋಗ್ಯ, ಕೈಗಾರಿಕೆ, ಪ್ರವಾಸೋದ್ಯಮಕ್ಕೆ ಬಜೆಟ್​ನಲ್ಲಿ ಒತ್ತು ಕೊಡಲಾಗಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.

ಮಾಜಿ ಸಿಎಂ ಜಗದೀಶ್ ಶೆಟ್ಟರ್, ಮಹೇಶ ಟೆಂಗಿನಕಾಯಿ
ಮಾಜಿ ಸಿಎಂ ಜಗದೀಶ್ ಶೆಟ್ಟರ್, ಮಹೇಶ ಟೆಂಗಿನಕಾಯಿ

ಹುಬ್ಬಳ್ಳಿ :ನಿರ್ಮಲಾ ಸೀತಾರಾಮನ್ ಅವರು ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾದ ಬಜೆಟ್ ಮಂಡನೆ ಮಾಡಿದ್ದಾರೆ. ಯುವ ಸಬಲೀಕರಣಕ್ಕೆ, ರೈತರ ಕ್ಷೇಮಾಭಿವೃದ್ಧಿ, ಬಡವರ ಕಲ್ಯಾಣ, ಮಹಿಳೆಯರ ಅಭಿವೃದ್ಧಿಗೆ ಬಜೆಟ್​ ಪೂರಕವಾಗಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಬಜೆಟ್ ಕುರಿತಂತೆ ಪ್ರತಿಕ್ರಿಯೆ ನೀಡಿದ ಅವರು, ಸ್ಕಿಲ್ ಇಂಡಿಯಾ, ಆಯುಷ್ಮಾನ್ ಭಾರತ, ರಾಷ್ಟ್ರೀಯ ಶಿಕ್ಷಣ ನೀತಿಗೆ ಆದ್ಯತೆ ಕೊಟ್ಟಿದ್ದಾರೆ. ಕನಿಷ್ಠ ಬೆಂಬಲ ಬೆಲೆಗೆ ಒತ್ತು ಕೊಡುವ ಕೆಲಸವಾಗಿದೆ. ಶಿಕ್ಷಣ, ಆರೋಗ್ಯ, ಕೈಗಾರಿಕೆ, ಪ್ರವಾಸೋದ್ಯಮಕ್ಕೆ ಒತ್ತು ಕೊಡಲಾಗಿದೆ. ಅಭಿವೃದ್ಧಿ ಹೊಂದಿದ ಭಾರತ ಮಾಡಲು ಮೋದಿಯವರ ಸರ್ಕಾರ ಎಲ್ಲಾ ಕೆಲಸ ಮಾಡುತ್ತಿದೆ. ಎಲ್ಲಾ ರಾಜ್ಯಗಳಿಗೆ ಆಗಿರುವ ರೀತಿ ಕರ್ನಾಟಕಕ್ಕೂ ಅನುದಾನ ಹಂಚಿಕೆಯಾಗಿದೆ. ಕಡಿಮೆ ಹಣ ಬಂದಿದೆ ಅನಿಸಿದ್ರೆ ಅದನ್ನು ಚರ್ಚಿಸಲು ವೇದಿಕೆಯಿದೆ. ನೀತಿ ಆಯೋಗದಲ್ಲಿ ಕಾಂಗ್ರೆಸ್‌ನವರೂ ಇದ್ದು, ಅಲ್ಲಿ ಚರ್ಚೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.

ನಾನು ಪಕ್ಷ ಕೊಡುವ ಯಾವುದೇ ಜವಾಬ್ದಾರಿಯನ್ನಾದರೂ ನಿರ್ವಹಿಸಲು ಸಿದ್ಧ. ಪಕ್ಷ ಹೇಳಿದ್ರೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಸಿದ್ಧ. ಬಿಜೆಪಿ ವರಿಷ್ಠರು ಗೌರವಯುತ ಸ್ಥಾನ ಕೊಡುತ್ತೇವೆ ಅನ್ನುವಂತಹ ಭರವಸೆ ನೀಡಿದ್ದಾರೆ. ಮೋದಿಯವರನ್ನು ಮತ್ತೊಮ್ಮೆ ಪ್ರಧಾನಮಂತ್ರಿ ಮಾಡಬೇಕು ಎನ್ನುವುದೇ ನಮ್ಮ ಗುರಿ. ನನ್ನ ಜೊತೆ ಕಾಂಗ್ರೆಸ್ ಸೇರಿದವರು ಎಲ್ಲರೂ ವಾಪಸ್ ಬಿಜೆಪಿಗೆ ಬರ್ತಾರೆ. ಬೇರೆ ಬೇರೆ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಕೂಡ ಬಿಜೆಪಿ ಸೇರಲು ಇಚ್ಛೆ ವ್ಯಕ್ತಪಡಿಸುತ್ತಿದ್ದಾರೆ ಎಂದು ಶೆಟ್ಟರ್​ ತಿಳಿಸಿದ್ದಾರೆ.

ಪಕ್ಷದ ವರ್ಚಸ್ಸು ಬೆಳೆಯುತ್ತಿಲ್ಲ: ನಿಮ್ಮ ಜೊತೆಗೆ ಬಿಜೆಪಿಗೆ ಬರುತ್ತೇವೆ ಎನ್ನುತ್ತಿದ್ದಾರೆ. ರಾಜ್ಯಾದ್ಯಂತ ಸಂಚಾರ ಮಾಡಿದಾಗ ಕಾಂಗ್ರೆಸ್​ನ ಬಹಳಷ್ಟು ಜನ ನನ್ನ ಸಂಪರ್ಕಕ್ಕೆ ಬಂದಿದ್ದಾರೆ. ಅವರೆಲ್ಲಾ ಆದಷ್ಟು ಶೀಘ್ರ ಬಿಜೆಪಿ ಸೇರಲಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿದ್ದರೂ ಪಕ್ಷದ ವರ್ಚಸ್ಸು ಬೆಳೆಯುತ್ತಿಲ್ಲ. ಹೀಗಾಗಿ ಕಾಂಗ್ರೆಸ್ ತೊರೆಯಲು ಅಲ್ಲಿನವರು ಮನಸ್ಸು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಶಾಸಕ ಬಾಲಕೃಷ್ಣ ಹೇಳಿಕೆ ಕಾಂಗ್ರೆಸ್‌ನ ಮನಸ್ಥಿತಿ ತೋರಿಸುತ್ತದೆ. ಚುನಾವಣೆಗಾಗಿ ಭಾಗ್ಯಗಳನ್ನು ಕೊಟ್ಟರು ಅನ್ನೋ ಭಾವನೆ ಜನರಲ್ಲಿ ಮೂಡಿದೆ. ಲೋಕಸಭೆ ಚುನಾವಣೆ ನಂತರ ಭಾಗ್ಯಗಳು ಇರಲ್ಲ ಅನ್ನುವ ಪರಿಸ್ಥಿತಿ ಕಾಣಿಸುತ್ತಿದೆ ಎಂದು ಶೆಟ್ಟರ್​ ಹೇಳಿದ್ದಾರೆ.

ಕೇಂದ್ರ ಸರ್ಕಾರ ಅಭಿವೃದ್ಧಿ ಪರ ಬಜೆಟ್ ಮಂಡಿಸಿದೆ- ಮಹೇಶ್ ಟೆಂಗಿನಕಾಯಿ :ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅಭಿವೃದ್ಧಿಗೆ ಪೂರಕವಾದ ಬಜೆಟ್ ಮಂಡಿಸಿದ್ದಾರೆ. ಮಹಿಳೆಯರು, ರೈತರು, ಜನಸಾಮಾನ್ಯರ ಏಳಿಗೆಯನ್ನು ಗಮನದಲ್ಲಿ ಇರಿಸಿಕೊಂಡು ಬಜೆಟ್ ಮಂಡಿಸಿದ್ದಾರೆ ಎಂದು ಶಾಸಕ ಮಹೇಶ್​ ಟೆಂಗಿನಕಾಯಿ ಹೇಳಿದ್ದಾರೆ.

ಬಜೆಟ್ ಕುರಿತಂತೆ ಪ್ರತಿಕ್ರಿಯೆ ‌ನೀಡಿದ ಅವರು, ಪ್ರಧಾನಿ ಮೋದಿಯವರ ಗುರಿಯಂತೆ 2047 ರ ವೇಳೆಗೆ ಭಾರತ ಅಭಿವೃದ್ಧಿ ಹೊಂದಿದ ದೇಶವಾಗಲಿದೆ. ವಿಪಕ್ಷಗಳು ಚುನಾವಣಾ ಬಜೆಟ್ ಆಗುತ್ತೆ ಅಂತಾ ಭಾವಿಸಿದ್ದವು. ಆದರೆ ಕೇಂದ್ರ ಸರ್ಕಾರ ಅಭಿವೃದ್ಧಿ ಪರ ಬಜೆಟ್ ಮಂಡಿಸಿದೆ. ಹೀಗಾಗಿ ವಿಪಕ್ಷಗಳು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿವೆ ಎಂದರು.

ಇದನ್ನೂ ಓದಿ :ಎನ್​ಡಿಎ ಸರ್ಕಾರದ ಬದ್ಧತೆಯನ್ನು ಸೀತಾರಾಮನ್ ಮಂಡಿಸಿದ ಬಜೆಟ್ ಪುನರುಚ್ಚರಿಸಿದೆ : ಬಿಎಸ್​ವೈ

ABOUT THE AUTHOR

...view details