ಕರ್ನಾಟಕ

karnataka

ಕಾಂಗ್ರೆಸ್​​ಗೆ ಗುಡ್​ಬೈ: ಬಿಜೆಪಿಗೆ ಮರಳಿದ ಜಗದೀಶ್ ಶೆಟ್ಟರ್

By ETV Bharat Karnataka Team

Published : Jan 25, 2024, 1:20 PM IST

Updated : Jan 25, 2024, 5:55 PM IST

ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್​ಗೆ ಸೇರಿದ್ದ ಮಾಜಿ ಸಿಎಂ ಜಗದೀಶ್​ ಶೆಟ್ಟರ್​ ಇಂದು ಮರಳಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

Jagadish Shettar
ಜಗದೀಶ್​ ಶೆಟ್ಟರ್​

ನವದೆಹಲಿ: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಬಿಜೆಪಿಗೆ ಮರಳಿದ್ದಾರೆ. ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಪಕ್ಷದ ವರಿಷ್ಠರ ಜೊತೆ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಜೊತೆಗಿದ್ದರು.

ಶೆಟ್ಟರ್ ಘರ್ ವಾಪಸಿ ಕುರಿತಂತೆ ಹಲವು ದಿನಗಳಿಮದ ಚರ್ಚೆ ನಡೆಯುತ್ತಲೇ ಇತ್ತು. ಆದರೆ ಶೆಟ್ಟರ್ ಬಿಜೆಪಿಗೆ ಮರಳುವ ಪ್ರಶ್ನೆ ಇಲ್ಲ ಎಂದಿದ್ದರು. ಮತ್ತೊಂದೆಡೆ ಕೆಲ ಬಿಜೆಪಿಯ ನಾಯಕರು, ಈ ವಿಚಾರವಾಗಿ ಪಕ್ಷದ ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳುತ್ತಿದ್ದರು. ಇದೀಗ ದೆಹಲಿಯಲ್ಲಿ ಬಿಜೆಪಿ ಕಚೇರಿಯಲ್ಲಿ ಪಕ್ಷದ ಪ್ರಮುಖರ ಸಮ್ಮುಖದಲ್ಲಿ ಶೆಟ್ಟರ್ ಬಿಜೆಪಿ ಸೇರಿದರು.

ಶೆಟ್ಟರ್ ಮರಳಿ ಪಕ್ಷಕ್ಕೆ ಸೇರ್ಪಡೆಯಾಗಿದ್ದು, ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಇದೊಂದು ಮಹತ್ವದ ಬೆಳವಣಿಗೆಯಾಗಿದೆ. ಕಳೆದ ವಿಧಾನಸಭೆ ಚುನಾವಣೆ ವೇಳೆ ಹುಬ್ಬಳ್ಳಿ ಕೇಂದ್ರ ಕ್ಷೇತ್ರದಿಂದ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಶೆಟ್ಟರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಆ ಬಳಿಕ ಕಾಂಗ್ರೆಸ್​​ನಿಂದ ಟೆಕಟ್ ಪಡೆದು ಸ್ಪರ್ಧಿಸಿದ್ದ ಶೆಟ್ಟರ್ ಅವರು ತಮ್ಮ ಶಿಷ್ಯ ಮಹೇಶ್ ತೆಂಗಿನಕಾಯಿ ವಿರುದ್ಧವೇ ಸೋಲನುಭವಿಸಿದ್ದರು.

ವಿಧಾನಸಭೆ ಚುನಾವಣೆಯಲ್ಲಿ ಸೋತ ಬಳಿಕ ಜಗದೀಶ್ ಶೆಟ್ಟರ್ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಕಾಂಗ್ರೆಸ್ ಆಯ್ಕೆ ಮಾಡಿತ್ತು. ಇದೀಗ ಶೆಟ್ಟರ್ ಅವರು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವ ಹಾಗೂ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೂ ರಾಜಿನಾಮೆ ನೀಡಿದ್ದಾರೆ.

ಇದನ್ನೂ ಓದಿ:ಯಾರು ಎಷ್ಟೇ ಪ್ರಯತ್ನ ಮಾಡಿದರು ಜಗದೀಶ್ ಶೆಟ್ಟರ್ ಬಿಜೆಪಿಗೆ ಹೋಗಲ್ಲ: ಸಿಎಂ ಸಿದ್ದರಾಮಯ್ಯ

ಇದಕ್ಕೂ ಮುನ್ನ ಹುಬ್ಬಳ್ಳಿಯಲ್ಲಿ ಮಾತನಾಡಿದ್ದ ಶಾಸಕ ಮಹೇಶ್​ ಟೆಂಗಿನಾಯಿ, ಬಿಜೆಪಿಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮಾತ್ರವಲ್ಲ, ಯಾರೂ ಕೂಡ ಅನಿವಾರ್ಯವಲ್ಲ. ಶೆಟ್ಟರ್​ ಅವರನ್ನು ಬಿಜೆಪಿಗೆ ಕರೆತರುವ ಯಾವುದೇ ಪ್ರಯತ್ನವನ್ನು ಮಾಡಿಲ್ಲ ಎಂದು ಹೇಳಿದ್ದರು. ಶೆಟ್ಟರ್ ಬಿಜೆಪಿಗೆ ಬರುತ್ತಿದ್ದಾರೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, "ಬಿಜೆಪಿಗೆ ಜಗದೀಶ್ ಶೆಟ್ಟರ್ ಅನಿವಾರ್ಯತೆ ಇಲ್ಲ. ನಾನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಶಾಸಕ ಅರವಿಂದ ಬೆಲ್ಲದ ಅವರೊಂದಿಗೆ ಮಾತನಾಡಿದ್ದೇನೆ. ಶೆಟ್ಟರ್ ಅವರನ್ನು ಕರೆತರುವ ಯಾವುದೇ ಪ್ರಯತ್ನ ಮಾಡಿಲ್ಲ" ಎಂದಿದ್ದರು.

ಇನ್ನೂ ಬಿಜೆಪಿ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ಶೆಟ್ಟರ್ ಅವರನ್ನು ಭೇಟಿ ಮಾಡಿರುವ ಬಗ್ಗೆ ಮಾತನಾಡಿದ ಅವರು, "ಇದೆಲ್ಲಾ ಶುದ್ಧ ಸುಳ್ಳು. ಇಂತಹ ಯಾವುದೇ ಬೆಳವಣಿಗೆ ಕೂಡ ನಡೆದಿಲ್ಲ. ನಮ್ಮ ನಾಯಕರು ಕೂಡ ಎಲ್ಲಿಯೂ ಈ ರೀತಿ ಹೇಳಿಲ್ಲ. ಇಂತಹ ಬೆಳವಣಿಗೆ ನಡೆದಿದ್ದೇ ಆದರೇ, ಅವರೇ ಬಹಿರಂವಾಗಿ ಹೇಳಲಿ" ಎಂದು ಹೇಳಿದ್ದರು.

ಇನ್ನೂ ಮೋದಿ ಭೇಟಿಯ ಕುರಿತು ಪ್ರತಿಕ್ರಿಯಿಸಿ, "ಇದೆಲ್ಲವೂ ಕಟ್ಟು ಕಥೆಯಾಗಿದೆ. ನಾವು ಯಾವುದೇ ರೀತಿಯಲ್ಲಿ ಪಕ್ಷ ತೊರೆದು ಹೋದವರನ್ನು ಪಕ್ಷಕ್ಕೆ ಕರೆತರುವ ಪ್ರಯತ್ನ ಮಾಡಿಲ್ಲ. ಒಂದು ವೇಳೆ ಪಕ್ಷಕ್ಕೆ ಬಂದಿದ್ದೇ ಆದರೆ, ಹೈಕಮಾಂಡ್ ನಿರ್ಧಾರಕ್ಕೆ ಬದ್ಧವಾಗಿ ನಾವು ಕೆಲಸ ಮಾಡುತ್ತೇವೆ" ಎಂದಿದ್ದರು.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ ಸುನೀಲ್ ಕುಮಾರ್, "ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನು ಮರಳಿ ಬಿಜೆಪಿಗೆ ಕರೆತರುವ ವಿಚಾರದ ಕುರಿತು ನಮ್ಮ ಹೈಕಮಾಂಡ್ ನಾಯಕರು ಮಾತುಕತೆ ನಡೆಸಲಿದ್ದಾರೆ" ಎಂದಿದ್ದರು.

ಅವರು, "ಜಗದೀಶ್ ಶೆಟ್ಟರ್ ಮರಳಿ ಬಿಜೆಪಿಗೆ ಬರಲಿದ್ದಾರಾ ಎನ್ನುವ ಕುರಿತು ಕಳೆದ ಕೆಲ ದಿನಗಳಿಂದ ಮಾತುಗಳು ಕೇಳಿಬರುತ್ತಿವೆ. ಆದರೆ ಪಕ್ಷ ಬಿಟ್ಟವರನ್ನು ಕರೆತರುವ ವಿಚಾರದಲ್ಲಿ ವರಿಷ್ಠರು ನಿರ್ಧಾರ ಕೈಗೊಳ್ಳಲಿದ್ದಾರೆ. ಲೋಕಸಭಾ ಚುನಾವಣೆ ಗೆಲ್ಲುವ ದೃಷ್ಟಿಯಿಂದ ಯಾರು ಪಕ್ಷದಿಂದ ದೂರವಾಗಿದ್ದಾರೋ ಅವರನ್ನು ಮರಳಿ ಕರೆ ತರುವ ಕೆಲಸ ಮಾಡುತ್ತೇವೆ. ಎಲ್ಲರನ್ನೂ ಕರೆ ತಂದು ಒಟ್ಟಾಗಿ ಹೋಗುವ ಕೆಲಸ ಮಾಡುತ್ತೇವೆ. ಜಗದೀಶ್ ಶೆಟ್ಟರ್ ಅವರ ಜೊತೆ ಹೈಕಮಾಂಡ್ ನಾಯಕರು ಮಾತನಾಡುತ್ತಾರೆ"ಎಂದಿದ್ದರು.

ಜಗದೀಶ್ ಶೆಟ್ಟರ್ ಮತ್ತೆ ಬಿಜೆಪಿಗೆ ಬರುವ ವಿಚಾರದ ಕುರಿತು ಪ್ರತಿಪಕ್ಷ ನಾಯಕ ಆರ್ ಅಶೋಕ್ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದರು. "ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ ಸವದಿ ಮೇಲೆ ನಮಗೆ ಕರುಣೆ ಇದೆ. ಅವರು ಅಲ್ಲಿ ಹೋಗಿ ನಮ್ಮ ಕಥೆ ಏನಾಯ್ತು ಅಂತಾ ಯೋಚಿಸಲಿ, ಅವರು ಮತ್ತೆ ಬಿಜೆಪಿಗೆ‌ ಬರುವ ಬಗ್ಗೆ ಕೇಂದ್ರದ ವರಿಷ್ಠರು ತೀರ್ಮಾನ ಮಾಡುತ್ತಾರೆ" ಎಂದಿದ್ದರು.

Last Updated :Jan 25, 2024, 5:55 PM IST

ABOUT THE AUTHOR

...view details