ಕರ್ನಾಟಕ

karnataka

ನಾಳೆ ಲೋಕಸಭೆ ಚುನಾವಣೆಗೆ ಮತದಾನ: ಮತಗಟ್ಟೆಗಳತ್ತ ಇವಿಎಂ ಹಿಡಿದು ತೆರಳಿದ ಸಿಬ್ಬಂದಿ - Lok Sabha Election 2024

By ETV Bharat Karnataka Team

Published : Apr 25, 2024, 4:25 PM IST

Updated : Apr 25, 2024, 7:21 PM IST

ರಾಜ್ಯದಲ್ಲಿ 14 ಲೋಕಸಭಾ ಕ್ಷೇತ್ರಗಳಿಗೆ ನಾಳೆ ಮತದಾನ ನಡೆಯಲಿದೆ. ಚುನಾವಣಾ ಸಿಬ್ಬಂದಿ ಸಕಲ ರೀತಿಯಲ್ಲಿ ಸಜ್ಜುಗೊಂಡಿದ್ದಾರೆ.

Lok Sabha polls
ನಾಳೆ ಲೋಕಸಭೆ ಮತದಾನ: ಮತಗಟ್ಟೆಗಳತ್ತ ಇವಿಎಂ ಹಿಡಿದು ತೆರಳಿದ ಸಿಬ್ಬಂದಿ

ಬೆಂಗಳೂರು:ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ನಾಳೆ ನಡೆಯಲಿದೆ ಈ ನಿಟ್ಟಿನಲ್ಲಿ ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದೆ. ಎಲ್ಲಾ ಕ್ಷೇತ್ರಗಳ ಮತಗಟ್ಟೆಗಳಿಗೂ ಚುನಾವಣಾ ಹಾಗೂ ಭದ್ರತಾ ಸಿಬ್ಬಂದಿ ಗುರುವಾರ ಮಧ್ಯಾಹ್ನ ತೆರಳಿದರು.

ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಬೆಂಗಳೂರಿನ ಡಾ.ಬಿ.ಆರ್.ಅಂಬೇಡ್ಕರ್ ಕಾಲೇಜಿನ ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತರಿಂದ ಬಿಇಎಲ್ ಪ್ರೈಮರಿ ಸ್ಕೂಲ್ ಮಸ್ಟರಿಂಗ್ ಕೇಂದ್ರದಲ್ಲಿ ಮೆಡಿಕಲ್ ಕಿಟ್ ಹಾಗೂ ಇನ್ನಿತರೆ ಸಾಮಗ್ರಿಗಳ ಪರಿಶೀಲನೆ ನಡೆಸಿದರು.

ನಾಳೆ ಲೋಕಸಭೆ ಮತದಾನ

ಬೆಳಿಗ್ಗೆಯಿಂದಲೇ ಆಯಾ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮಸ್ಟರಿಂಗ್ ಕೇಂದ್ರಗಳಲ್ಲಿ ಚುನಾವಣಾ ಸಿಬ್ಬಂದಿ ಸೇರಿಕೊಂಡು ನಿಗದಿಪಡಿಸಿದ ಮತಗಟ್ಟೆಗಳಿಗೆ ಮತಯಂತ್ರ ಹಾಗೂ ಇತರ ಸಾಮಗ್ರಿಗಳೊಂದಿಗೆ ತೆರಳಿದರು. ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಉಡುಪಿ-ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು-ಕೊಡಗು, ಚಾಮರಾಜನಗರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಕ್ಷೇತ್ರಗಳಲ್ಲಿ ಒಟ್ಟು 30,602 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಮತಗಟ್ಟೆಯ 200 ಮೀಟರ್ ದೂರದಲ್ಲಿ ಅಭ್ಯರ್ಥಿಗಳ ತಾತ್ಕಾಲಿಕ ಕಚೇರಿಗಳನ್ನು ಸ್ಥಾಪಿಸಲು ಅಭ್ಯರ್ಥಿಗಳಿಗೆ ಚುನಾವಣಾ ಆಯೋಗ ಅವಕಾಶ ಮಾಡಿಕೊಟ್ಟಿದೆ. ರಾಜ್ಯದ ಮೊದಲ ಹಂತದ 14 ಕ್ಷೇತ್ರಗಳಿಗೆ ನಾಳೆ ಮತದಾನ ನಡೆಯಲಿದ್ದು, 2,88,19,342 ಮತದಾರರು ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ. 1,44,17,530 ಪುರುಷ, 1,43,87,585 ಮಹಿಳಾ, 3,067 ಇತರೆ, 11,160 ಸೇವಾ ಮತದಾರರು ಇದ್ದಾರೆ.

ಆ್ಯಪ್‌ ಸೌಲಭ್ಯ:ಲೋಕಸಭಾ ಚುನಾವಣೆಯಲ್ಲಿ ಎಡಗೈ ತೋರು ಬೆರಳಿಗೆ ಅಳಿಸಲಾಗದ ಶಾಹಿಯನ್ನು ಹಾಕಲಾಗುತ್ತದೆ. ಶಾಂತಿಯುತ ಹಾಗೂ ಸುಗಮ ಮತದಾನ ನಡೆಯಲು ಚುನಾವಣಾ ಆಯೋಗ ಎಲ್ಲ ತಯಾರಿ ನಡೆಸಿದ್ದು, ಮತಗಟ್ಟೆ ಕೆಲಸಕ್ಕಾಗಿ ಸುಮಾರು 1.40 ಲಕ್ಷ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ನಾಳೆ ಬೆಳಗ್ಗೆ 7ರಿಂದ ಸಂಜೆ 6 ಗಂಟೆವರೆಗೂ ಮತದಾನ ನಡೆಯಲಿದ್ದು, ಮತದಾರರು ತಮ್ಮ ಮತಗಟ್ಟೆಗಳನ್ನು ತಿಳಿದುಕೊಳ್ಳಲು ಚುನಾವಣಾ ಆ್ಯಪ್‌ ಡೌನ್‌ಲೋಡ್ ಮಾಡಿಕೊಳ್ಳಬಹುದು. ಈ ಆ್ಯಪ್‌ನಲ್ಲಿ ಮತದಾರರಿಗೆ ಅವರ ಮತಗಟ್ಟೆ ಯಾವುದು ಮತ್ತು ವಾಹನಗಳನ್ನು ಎಲ್ಲಿ ನಿಲ್ಲಿಸಬೇಕು, ಅವರ ಮತದಾನ ಗುರುತಿನ ಚೀಟಿ ಎಲ್ಲದರ ಮಾಹಿತಿ ಸಿಗಲಿದೆ.

ನಾಳೆ ಲೋಕಸಭೆ ಮತದಾನ

ಮತದಾನದ ವೇಳೆ ಯಾವುದೇ ಅಹಿತಕರ ಘಟನೆಯಾಗದಂತೆ ಕಟ್ಟೆಚ್ಚರ ವಹಿಸಲಾಗಿದ್ದು, ಬಂದೋಬಸ್ತ್‌ಗಾಗಿ ಸುಮಾರು 50 ಸಾವಿರ ಪೊಲೀಸ್ ಸಿಬ್ಬಂದಿ ಹಾಗೂ 65 ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿದೆ. ಮತದಾನ ನಡೆಯಲಿರುವ ಮತಗಟ್ಟೆಗಳ ಪೈಕಿ ಸುಮಾರು 19,701 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ಸಿದ್ಧತೆ ಮಾಡಲಾಗಿದ್ದು, 1,370 ಬೂತ್‌ಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಮತಗಟ್ಟೆಗಳಿಗೆ ಹೆಚ್ಚಿನ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ.

ಕಣದಲ್ಲಿ 247 ಅಭ್ಯರ್ಥಿಗಳು: ನಾಳೆ ನಡೆಯಲಿರುವ ಚುನಾವಣೆಯಲ್ಲಿ 14 ಕ್ಷೇತ್ರಗಳಿಂದ 247 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದು, ಈ ಪೈಕಿ 226 ಮಂದಿ ಪುರುಷರು ಹಾಗೂ 21 ಮಹಿಳಾ ಅಭ್ಯರ್ಥಿಗಳಿದ್ದಾರೆ. ಕಾಂಗ್ರೆಸ್ ಪಕ್ಷ ಎಲ್ಲ 14 ಕ್ಷೇತ್ರಗಳಲ್ಲೂ ಅಭ್ಯರ್ಥಿ ನಿಲ್ಲಿಸಿದ್ದು, ಈ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿರುವ ಬಿಜೆಪಿ 11, ಜೆಡಿಎಸ್ 3 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಅತ್ಯಧಿಕ ಅಂದರೆ 29 ಅಭ್ಯರ್ಥಿಗಳು ಕಣದಲ್ಲಿದ್ದರೆ, ಅತಿ ಕಡಿಮೆ ಅಂದರೆ ದಕ್ಷಿಣ ಕನ್ನಡದಲ್ಲಿ ಅಂದರೆ 9 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ನಾಳೆ ಲೋಕಸಭೆ ಮತದಾನ

ಚಾಮರಾಜನಗರದಲ್ಲಿ ಸಕಲ ಸಿದ್ಧತೆ:ಜಿಲ್ಲೆಯಲ್ಲಿ ಮತದಾನದ ಮಸ್ಟರಿಂಗ್ ಕಾರ್ಯ ಮುಗಿಸಿ, ಚುನಾವಣಾ ಸಿಬ್ಬಂದಿ ಮತಗಟ್ಟೆಗಳತ್ತ ತೆರಳಿದ್ದಾರೆ. ಚಾಮರಾಜನಗದ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಸ್ಟರಿಂಗ್ ಕಾರ್ಯ ನಡೆಯಿತು. ಇವಿಎಂ ಹಿಡಿದು ನಿಗದಿಪಡಿಸಿದ ಮತಗಟ್ಟೆಗಳತ್ತ ಚುನಾವಣಾ ಸಿಬ್ಬಂದಿ ಬಸ್​ಗಳಲ್ಲಿ ತೆರಳಿದರು.

ಚಾಮರಾಜನಗರ ಜಿಲ್ಲೆಯಲ್ಲಿ 2,000 ಮತಗಟ್ಟೆ ಸ್ಥಾಪನೆ ಮಾಡಲಾಗಿದ್ದು, 1196 PRO, 1196 APRO, 2392 PO ಸೇರಿದಂತೆ 4784 ಸಿಬ್ಬಂದಿಯು ಚುನಾವಣಾ ಕರ್ತವ್ಯ ನಿರ್ವಹಿಸಲಿದ್ದಾರೆ. 197 ಮತಗಟ್ಟೆಗಳನ್ನು ಕ್ರಿಟಿಕಲ್ ಮತಗಟ್ಟೆಗಳು ಎಂದು ಗುರುತಿಸಲಾಗಿದೆ. ಶಾಂತಿಯುತ ಮತದಾನ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು 4 ಡಿವೈಎಸ್ಪಿ, 13 ಪಿಐ, 41 ಪಿಎಸ್ಐ, 67 ಎಎಸ್ಐ, 936 ಕಾನ್ಸ್‌ಟೇಬಲ್, 600 ಹೋಂ ಗಾರ್ಡ್ ಸೇರಿದಂತೆ 1667 ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.

ಇದನ್ನೂ ಓದಿ:ಭಯಬೇಡ.. ವೋಟಿಂಗ್​​ ಕಾರ್ಡ್ ಇಲ್ಲದಿದ್ದರೂ ಮತದಾನ ಮಾಡಲು ಈ ದಾಖಲೆಗಳು‌ ಇದ್ದರೆ ಸಾಕು? - How to vote without Voter ID Card

Last Updated :Apr 25, 2024, 7:21 PM IST

ABOUT THE AUTHOR

...view details