ಕರ್ನಾಟಕ

karnataka

ಕೋಲಾರಕ್ಕೆ ಇಂದು ಸಿದ್ದರಾಮಯ್ಯ: ಎರಡು ಬಣಗಳ ಹಗ್ಗಜಗ್ಗಾಟಕ್ಕೆ ತೆರೆ ಎಳೆಯುವರೇ ಸಿಎಂ? - Kolar Lok Sabha Constituency

By ETV Bharat Karnataka Team

Published : Mar 31, 2024, 7:32 AM IST

Updated : Mar 31, 2024, 9:08 AM IST

ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್​ ಫೈನಲಾಗಿದೆ. ಟಿಕೆಟ್​ ನಿರೀಕ್ಷೆಯಲ್ಲಿದ್ದ ಎರಡು ಬಣಗಳ ನಾಯಕರು ಅಸಮಾಧಾನಗೊಂಡಿದ್ದಾರೆ.
ಕೋಲಾರ ಕ್ಷೇತ್ರಕ್ಕೆ ಸಿದ್ದರಾಮಯ್ಯ ಭೇಟಿ
ಕೋಲಾರ ಕ್ಷೇತ್ರಕ್ಕೆ ಸಿದ್ದರಾಮಯ್ಯ ಭೇಟಿ

ಬೆಂಗಳೂರು:ಬಣ ರಾಜಕೀಯಕ್ಕೆ ಸಾಕ್ಷಿಯಾಗಿರುವ ಕೋಲಾರ ಕ್ಷೇತ್ರದಲ್ಲಿ ಅಚ್ಚರಿಯ ಅಭ್ಯರ್ಥಿ ಕೆ.ವಿ.ಗೌತಮ್​ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ಎರಡೂ ಬಣಗಳನ್ನು ವಿಶ್ವಾಸಕ್ಕೆ ಪಡೆದು ಮುನ್ನಡೆಯುವಂತೆ ಅಭ್ಯರ್ಥಿಗೆ ಸಿಎಂ‌ ಸಿದ್ದರಾಮಯ್ಯ ಈಗಾಗಲೇ ಸೂಚಿಸಿದ್ದಾರೆ. ಇದರ ಬೆನ್ನಲ್ಲೇ ಇಂದು ಸಿಎಂ ಕೋಲಾರ ಅಖಾಡಕ್ಕೆ ಇಳಿಯಲಿದ್ದಾರೆ.

ಕಾಂಗ್ರೆಸ್​ ಹೈಕಮಾಂಡ್ ಕೋಲಾರ ಕ್ಷೇತ್ರಕ್ಕೆ ಬಣಗಳ ಹೊರತಾದ ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಆ ಮೂಲಕ ರಮೇಶ್ ಕುಮಾರ್ ಹಾಗೂ ಸಚಿವ ಕೆ.ಹೆಚ್.ಮುನಿಯಪ್ಪ ನಡುವಿನ ಬಣ ಬಡಿದಾಟಕ್ಕೆ ತೆರೆ ಎಳೆದಿದೆ. ಮುನಿಯಪ್ಪ ತಮ್ಮ ಅಳಿಯನಿಗೆ ಟಿಕೆಟ್ ಕೊಡಿಸಲು ಪಟ್ಟು ಹಿಡಿದಿದ್ದರು. ಮುನಿಯಪ್ಪ ಅಳಿಯನಿಗೆ ಟಿಕೆಟ್ ನೀಡುವ ಬಗ್ಗೆ ಮಾಜಿ ಸಚಿವ ರಮೇಶ್ ಕುಮಾರ್ ಬಣ ವಿರೋಧ ವ್ಯಕ್ತಪಡಿಸಿತ್ತು.

ಸಚಿವರ ಅಳಿಯನಿಗೆ ಟಿಕೆಟ್ ಬಹುತೇಕ ಫಿಕ್ಸ್ ಎಂಬ ಮಾಹಿತಿ ಬಂದ ಹಿನ್ನೆಲೆಯಲ್ಲಿ ಕೋಲಾರ ಶಾಸಕರು ರಾಜೀನಾಮೆ ನೀಡುವ ಹಂತದವರೆಗೂ ಹೋಗಿ ಮುನಿಯಪ್ಪ ಅಳಿಯನಿಗೆ ಟಿಕೆಟ್ ನೀಡದಂತೆ ಬಂಡಾಯ ಎದ್ದಿದ್ದರು.‌ ಎರಡೂ ಕಡೆಯಿಂದ 'ನಾ ಕೊಡೆ ನಾ ಬಿಡೆ' ಎಂಬಂತಾದ ಕಾರಣ ಕೊನೆಯದಾಗಿ ಮೂರನೇ ಅಭ್ಯರ್ಥಿಗೆ ಹೈಕಮಾಂಡ್ ಮಣೆ ಹಾಕಿದೆ.

ಕೋಲಾರದಲ್ಲಿ ಮುನಿಯಪ್ಪ ಅಳಿಯನಿಗೆ ಅಥವಾ ಮಾಜಿ ಸಚಿವ ರಮೇಶ್​ ಕುಮಾರ್ ಬಣಕ್ಕೆ ಟಿಕೆಟ್​ ನೀಡಿದರೆ ಎರಡೂ ಬಣದವರು ಒಳ ಏಟು ನೀಡುವ ಸಾಧ್ಯತೆ ಹೆಚ್ಚಿದೆ ಎಂಬ ಆತಂಕ ಇತ್ತು. ಇಬ್ಬರ ಬಣ ರಾಜಕೀಯದ ಪರಿಣಾಮ ಕೈ ಅಭ್ಯರ್ಥಿಗಳ ಮೇಲಾಗುವುದು ಬೇಡ ಎಂಬ ಉದ್ದೇಶದಿಂದ ಯಾವುದೇ ಬಣದಿಂದ ಗುರುತಿಸಲ್ಪಡದ ಮೂರನೇ ವ್ಯಕ್ತಿಗೆ ಟಿಕೆಟ್ ನೀಡಲಾಗಿದೆ.

ಟಿಕೆಟ್ ಘೋಷಣೆಯಾದ ಕೂಡಲೇ ಅಭ್ಯರ್ಥಿ ಕೆ.ವಿ.ಗೌತಮ್ ಸಚಿವ ಎಂ.ಸಿ.ಸುಧಾಕರ್​ ಜೊತೆಗೂಡಿ ಸಿಎಂರನ್ನು ಭೇಟಿಯಾಗಿ ಕೆಲ ಸಲಹೆಗಳನ್ನು ಪಡೆದುಕೊಂಡರು. ಸಿಎಂ ಎಲ್ಲರನ್ನೂ ಒಗ್ಗಟ್ಟಾಗಿ ಕರೆದೊಯ್ದು ಕೆಲಸ ಮಾಡುವಂತೆ ಸೂಚನೆ ನೀಡಿದ್ದಾರೆ. ಭಾನುವಾರ ಸ್ವತಃ ಸಿಎಂ ಸಿದ್ದರಾಮಯ್ಯ ಕೋಲಾರಕ್ಕೆ ಭೇಟಿ ನೀಡಲಿದ್ದು, ಬಣ ರಾಜಕೀಯಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಲಿದ್ದಾರೆ. ಎರಡೂ ಬಣಗಳು ಮೂರನೇ ಅಭ್ಯರ್ಥಿಯ ಗೆಲುವಿಗೆ ಒಗ್ಗಟ್ಟಿನಿಂದ ಕೆಲಸ ಮಾಡುತ್ತಾ? ಎಂಬುದೇ ಹಲವರ ಅನುಮಾನವಾಗಿದೆ.

ಟಿಕೆಟ್ ಸಿಕ್ಕಿರುವ ಬಗ್ಗೆ ಮಾತನಾಡಿರುವ ಕೆ.ವಿ.ಗೌತಮ್,"ಕೋಲಾರ ಕ್ಷೇತ್ರಕ್ಕೆ ಚಿಕ್ಕಪೆದ್ದಣ್ಣ ಟಿಕೆಟ್ ಬೇಡ ಎಂದಿದ್ದಕ್ಕೆ ನಮಗೆ ಸಿಕ್ಕಿದ್ದಲ್ಲ. ಪಕ್ಷವೇ ಗುರುತಿಸಿ ಅವಕಾಶ ನೀಡಿದೆ. ಕ್ಷೇತ್ರ ಹೊಸದಲ್ಲ. ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾಗಿನಿಂದಲೂ ಕ್ಷೇತ್ರದಲ್ಲಿ ಸಂಘಟನೆಯಲ್ಲಿ ತೊಡಗಿದ್ದೇನೆ. ಪಕ್ಷದ ಅಭ್ಯರ್ಥಿಯಾಗಿದ್ದೇನೆ. ಎಲ್ಲರನ್ನೂ ಒಟ್ಟಾಗಿ ಕರೆದೊಯ್ಯುತ್ತೇನೆ. ಎಲ್ಲರ ಜತೆ ಮಾತುಕತೆ ನಡೆಸಿ ಬಗೆಹರಿಸಿಕೊಳ್ಳುತ್ತೇನೆ. ಹಿರಿಯರು, ಕಿರಿಯರು, ಎಲ್ಲರ ಜತೆ ಚೆರ್ಚೆ ನಡೆಸುತ್ತೇನೆ. ನಾನು ಪಕ್ಷದ ಅಭ್ಯರ್ಥಿ. ಯಾವುದೋ ಬಣದ ಅಭ್ಯರ್ಥಿ ಅಲ್ಲ. ನನಗೆ ಮುನಿಯಪ್ಪ ಬಣ, ರಮೇಶ್ ಕುಮಾರ್ ಬಣ, ಡಿ.ಕೆ.ಶಿವಕುಮಾರ್​, ಸಿಎಂ ಸಿದ್ದರಾಮಯ್ಯ ಎಲ್ಲರ ಬೆಂಬಲ ವಿಶ್ವಾಸದಿಂದ ಕೆಲಸ ಮಾಡುತ್ತೇನೆ. ಕೋಲಾರ ಕ್ಷೇತ್ರದ ಬಗ್ಗೆ ಹಲವು ಕನಸುಗಳಿವೆ. ಅದನ್ನೆಲ್ಲಾ ಸಾಧ್ಯವಾದಷ್ಟು ಪೂರೈಸುವ ಕೆಲಸ ಮಾಡ್ತೇನೆ" ಎಂದು ಭರವಸೆ ನೀಡಿದರು.

ಎಲ್ಲರೂ ಸೇರಿ ಅಭ್ಯರ್ಥಿ‌ ಪರ ಕೆಲಸ ಮಾಡುತ್ತೇವೆ: ಅಚ್ಚರಿ ಅಭ್ಯರ್ಥಿಗೆ ಟಿಕೆಟ್ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಕೆ.ಹೆಚ್.ಮುನಿಯಪ್ಪ, "ಹೈಕಮಾಂಡ್ ಏನು ನಿರ್ಧಾರ ಮಾಡಿದೆಯೋ ಅದಕ್ಕೆ ನಾವು ಬದ್ಧ. ಎಲ್ಲರೂ ಸೇರಿ ಅಭ್ಯರ್ಥಿ‌ ಪರ ಕೆಲಸ ಮಾಡುತ್ತೇವೆ. ನಮ್ಮ ಬೆಂಬಲಿಗರಿಗೆ ಟಿಕೆಟ್ ಸಿಗಲಿಲ್ಲ ಎಂಬ ಅಸಮಾಧಾನ‌ ಇಲ್ಲ. ಚಿಕ್ಕಬಳ್ಳಾಪುರ ಸೇರಿ ಕೋಲಾರದಲ್ಲಿ ಕಾಂಗ್ರೆಸ್ ಪಕ್ಷ‌ ಗೆಲ್ಲಿಸುವ ಕೆಲಸ ಮಾಡುತ್ತೇವೆ" ಎಂದು ತಿಳಿಸಿದರು.

ಇದನ್ನೂ ಓದಿ:ಕೋಲಾರದಲ್ಲಿ ಇಬ್ಬರ ಜಗಳದಲ್ಲಿ ಮೂರನೇಯವರಿಗೆ ಲಾಭ; ಕಾಂಗ್ರೆಸ್​ನಿಂದ​ ಕೆ. ವಿ. ಗೌತಮ್​ಗೆ ಟಿಕೆಟ್ - KOLAR LOK SABHA CONSTITUENCY

Last Updated :Mar 31, 2024, 9:08 AM IST

ABOUT THE AUTHOR

...view details