ಕರ್ನಾಟಕ

karnataka

ಬೆಂಗಳೂರಿನ ಜೈಲಿನಲ್ಲಿ ಲಷ್ಕರ್-ಎ-ತೊಯ್ಬಾಗಾಗಿ ಖೈದಿಗಳ ಒಗ್ಗೂಡಿಸುವಿಕೆ ಪ್ರಕರಣ; ಎನ್ಐಎ ದಾಳಿ ವೇಳೆ ನಗದು, ಡಿಜಿಟಲ್ ದಾಖಲೆಗಳು ಜಪ್ತಿ

By ETV Bharat Karnataka Team

Published : Mar 5, 2024, 9:31 PM IST

ಎಲ್‌ಇಟಿ ಸಂಘಟನೆಗೆ ಬೆಂಗಳೂರಿನ ಜೈಲಿನಲ್ಲಿನ ಖೈದಿಗಳ ನೇಮಕ ಪ್ರಕರಣದಲ್ಲಿ ಮಂಗಳವಾರ ಆರು ರಾಜ್ಯಗಳ ಅನೇಕ ಸ್ಥಳಗಳ ಮೇಲೆ ದಾಳಿ ಮಾಡಿದ್ದ ಎನ್​ಐಎ ಅಧಿಕಾರಿಗಳು ನಗದು ಸಹಿತ ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಂಡಿದ್ದಾರೆ.

ಎನ್ಐಎ
ಎನ್ಐಎ

ಬೆಂಗಳೂರು :ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಸಂಘಟನೆಗೆ ಬೆಂಗಳೂರಿನ ಜೈಲಿನಲ್ಲಿ ಖೈದಿಗಳ ನೇಮಕ ಪ್ರಕರಣದಲ್ಲಿ ಮಂಗಳವಾರ ಆರು ರಾಜ್ಯಗಳ ಅನೇಕ ಸ್ಥಳಗಳ ಮೇಲೆ ದಾಳಿ ಮಾಡಿದ್ದ ಎನ್ಐಎ ಅಧಿಕಾರಿಗಳು ನಗದು ಸಹಿತ ಡಿಜಿಟಲ್ ಸಾಧನಗಳನ್ನ ವಶಪಡಿಸಿಕೊಂಡಿದ್ದಾರೆ. ಇಂದು ಬೆಳಗ್ಗೆ ಕರ್ನಾಟಕ, ತಮಿಳುನಾಡು, ತೆಲಂಗಾಣ, ಪಂಜಾಬ್, ಗುಜರಾತ್ ಮತ್ತು ಪಶ್ಚಿಮ ಬಂಗಾಳದ ವಿವಿಧೆಡೆ ಶಂಕಿತರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಎನ್ಐಎ ಅಧಿಕಾರಿಗಳು ದಾಳಿ ನಡೆಸಿದ್ದರು.

ಮಂಗಳೂರಿನ ನವೀದ್, ಬೆಂಗಳೂರಿನ ಸೈಯದ್ ಖೈಲ್, ದಕ್ಷಿಣ ಕನ್ನಡದ ಬಿಜ್ಜು, ಪಶ್ಚಿಮ ಬಂಗಾಳದ ಮಯೂರ್ ಚಕ್ರವರ್ತಿ, ಪಂಜಾಬಿನ ಗುರುದಾಸ್ ಪುರದ ನವಜೋತ್ ಸಿಂಗ್, ಗುಜರಾತ್‌ನ ಹಾರ್ದಿಕ್ ಕುಮಾರ್, ಅಹಮದಾಬಾದಿನ ಕರಣ್ ಕುಮಾರ್, ಕೇರಳದ ಕಾಸರಗೋಡಿನ ಜಾನ್ಸನ್, ತಮಿಳುನಾಡಿನ ರಾಮನಾಥಪುರಂನ ಮುಸ್ತಾಕ್ ಅಹ್ಮದ್ ಸಾತಿಕಾಲಿ ಮತ್ತು ಮುಬಿತ್, ಚೆನ್ನೈನ ಹಸ್ಸನ್ ಅಲ್ ಬಸ್ಸಮ್ ಎಂಬಾತನಿಗೆ ಸೇರಿದ ಸ್ಥಳಗಳಲ್ಲಿ ದಾಳಿ ನಡೆಸಲಾಗಿತ್ತು. ಆರೋಪಿತರ ಬಳಿ ವಿವಿಧ ದೇಶಗಳ ಕರೆನ್ಸಿ ನೋಟುಗಳು, 25 ಮೊಬೈಲ್ ಫೋನ್‌ಗಳು, 6 ಲ್ಯಾಪ್‌ಟಾಪ್‌ಗಳು ಮತ್ತು 4 ಸ್ಟೋರೇಜ್ ಡಿವೈಸ್, ವಿವಿಧ ದಾಖಲೆಗಳು ಮತ್ತು ನಗದು ವಶಪಡಿಸಿಕೊಳ್ಳಲಾಗಿದೆ.

25ನೇ ಅಕ್ಟೋಬರ್ 2023ರಿಂದ ಪ್ರಕರಣದ ತನಿಖೆ ನಡೆಸುತ್ತಿರುವ ಎನ್ಐಎ 12 ಜನವರಿ 2024 ರಂದು ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳಾದ ಜುನೈದ್ ಅಹ್ಮದ್ ಮತ್ತು ಸಲ್ಮಾನ್ ಖಾನ್ ಸೇರಿದಂತೆ ಎಂಟು ಆರೋಪಿಗಳ ವಿರುದ್ಧ IPC, UA(P) Act, 1967; ಆರ್ಮ್ಸ್ ಆಕ್ಟ್, 1959 ಮತ್ತು ಸ್ಫೋಟಕ ವಸ್ತುಗಳ ಕಾಯಿದೆ, 1884 ನಡಿ ಚಾರ್ಜ್ ಶೀಟ್ ಸಲ್ಲಿಸಿತ್ತು. ಪರಾರಿಯಾಗಿರುವ ಆರೋಪಿಗಳು ಭಾರತದಲ್ಲಿ ಲಷ್ಕರ್ - ಎ - ತೊಯ್ಬಾದ ಚಟುವಟಿಕೆಗಳನ್ನು ಉತ್ತೇಜಿಸಲು ಮತ್ತು ಹಣವನ್ನು ರವಾನಿಸಲು ಭಾರತದಾದ್ಯಂತ ಜಾಲವನ್ನು ಸ್ಥಾಪಿಸಿರುವುದನ್ನ ಎನ್ಐಎ ತನಿಖೆ ಬಹಿರಂಗಪಡಿಸಿತ್ತು.

ಕಳೆದ ವರ್ಷ ಜುಲೈ 18 ರಂದು ಆರೋಪಿಗಳು ವಾಸವಿದ್ದ ಮನೆಯೊಂದರ ಮೇಲೆ ದಾಳಿ ಮಾಡಿದ್ದ ಬೆಂಗಳೂರಿನ ಸಿಸಿಬಿ ಪೊಲೀಸರು ಶಸ್ತ್ರಾಸ್ತ್ರ, ಹ್ಯಾಂಡ್ ಗ್ರೆನೇಡ್, ವಾಕಿ ಟಾಕಿಗಳ ಸಹಿತ 7 ಜನ ಆರೋಪಿಗಳನ್ನ ಬಂಧಿಸಿದ್ದರು. ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿನ‌ ಖೈದಿಗಳನ್ನ ಲಷ್ಕರ್ - ಎ - ತೊಯ್ಬಾದ ಪರ ಚಟುವಟಿಕೆಗಳಿಗೆ ಒಗ್ಗೂಡಿಸುತ್ತಿದ್ದುದು ಕಂಡು ಬಂದ ಬಳಿಕ ಪ್ರಕರಣದ ಹೆಚ್ಚಿನ ತನಿಖೆಯನ್ನ ಎನ್ಐಎ ಕೈಗೆತ್ತಿಕೊಂಡಿತ್ತು.

ಇದನ್ನೂ ಓದಿ :ಬೆಂಗಳೂರಿನ ಜೈಲಿನಲ್ಲಿ ಖೈದಿಗಳಿಗೆ ಉಗ್ರವಾದಕ್ಕೆ ಪ್ರೇರಣೆ; 7 ರಾಜ್ಯಗಳ 17 ಸ್ಥಳಗಳಲ್ಲಿ ಎನ್ಐಎ ಶೋಧ

ABOUT THE AUTHOR

...view details