ಕರ್ನಾಟಕ

karnataka

500 ಟಿ20 ಪಂದ್ಯಗಳನ್ನಾಡಿದ ಆಟಗಾರರ ಕ್ಲಬ್​ಗೆ ಸೇರಿದ ಸುನಿಲ್ ನರೈನ್ - IPL 2024

By ETV Bharat Karnataka Team

Published : Mar 29, 2024, 9:04 PM IST

ipl-2024-sunil-narine-becomes-first-kkr-player-with-500-t20-appearances
500 ಟಿ20 ಪಂದ್ಯಗಳನ್ನಾಡಿದ ಆಟಗಾರರ ಕ್ಲಬ್​ಗೆ ಸೇರಿದ ಸುನಿಲ್ ನರೈನ್

ಟಿ20 ಕ್ರಿಕೆಟ್​ನಲ್ಲಿ 500 ಪಂದ್ಯಗಳನ್ನಾಡಿದ ಆಟಗಾರರ ಪಟ್ಟಿಗೆ ಕೆರಿಬಿಯನ್ ಕ್ರಿಕೆಟಿಗ ಸುನಿಲ್ ನರೈನ್ ಸೇರಿದ್ದಾರೆ.

ಬೆಂಗಳೂರು:ಟಿ-20 ಕ್ರಿಕೆಟ್​ನಲ್ಲಿ ವೆಸ್ಟ್​ ಇಂಡೀಸ್​ ಆಟಗಾರ ಸುನಿಲ್ ನರೈನ್ ಹೊಸ ದಾಖಲೆ ಬರೆದಿದ್ದಾರೆ. ಇಂದು ರಾಯಲ್ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ವಿರುದ್ಧ ಐಪಿಎಲ್​ ಪಂದ್ಯದಲ್ಲಿ ಮೈದಾನಕ್ಕೆ ಇಳಿಯುವ ಮೂಲಕ 500 ಪಂದ್ಯಗಳನ್ನಾಡಿದ ಆಟಗಾರರ ಪಟ್ಟಿಯಲ್ಲಿ ಕೆರಿಬಿಯನ್ ಕ್ರಿಕೆಟಿಗ ತಮ್ಮ ಹೆಸರು ದಾಖಲಿಸಿದ್ದಾರೆ. ಅಲ್ಲದೇ, ಐನೂರು ಪಂದ್ಯಗಳಲ್ಲಿ ಕಾಣಿಸಿಕೊಂಡ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶುಕ್ರವಾರ ಆರ್​ಸಿಬಿ ಮತ್ತು ಕೆಕೆಆರ್​ ತಂಡಗಳು ಮುಖಾಮುಖಿಯಾಗಿವೆ. ಕೆಕೆಆರ್​ ಪರ ಆಲ್​ರೌಂಡರ್​ ಸುನಿಲ್ ನರೈನ್ ಮೈದಾನಕ್ಕೆ ಇಳಿದಿದ್ದಾರೆ. ನರೇನ್ ಐಪಿಎಲ್, ಬಿಗ್ ಬ್ಯಾಷ್ ಲೀಗ್ (ಬಿಬಿಎಲ್), ದಿ ಹಂಡ್ರೆಡ್ ಅಂಡ್ ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್)ನಂತಹ ಪ್ರಮುಖ ಲೀಗ್‌ಗಳು ಸೇರಿದಂತೆ ವಿಶ್ವದಾದ್ಯಂತ ವಿವಿಧ ಟಿ-20 ಟೂರ್ನಿಗಳನ್ನು ಆಡಿದ್ದಾರೆ.

ಐಪಿಎಲ್​ನಲ್ಲಿ ಇಂದಿನ ಪಂದ್ಯವನ್ನು ಹೊರತುಪಡಿಸಿ ಕೆರಿಬಿಯನ್ ಆಟಗಾರ ನರೈನ್ ಒಟ್ಟಾರೆ 172 ಪಂದ್ಯಗಳನ್ನಾಡಿದ್ದಾರೆ. 158.46 ಸ್ಟ್ರೈಕ್ ರೇಟ್‌ನಲ್ಲಿ ನಾಲ್ಕು ಅರ್ಧಶತಕಗಳ ಸಮೇತ 1,048 ರನ್​ ಬಾರಿಸಿದ್ದಾರೆ. ಅಲ್ಲದೇ, ಬೌಲಿಂಗ್​ನಲ್ಲಿ 6.74 ಎಕಾನಮಿಯಲ್ಲಿ 182 ವಿಕೆಟ್​ಗಳನ್ನು ಪಡೆದಿದ್ದಾರೆ. ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್​)ನಲ್ಲೂ ನರೇನ್ ಕಾಣಿಸಿಕೊಂಡಿದ್ದು, ಇದು 50ಕ್ಕೂ ಹೆಚ್ಚು ಪಂದ್ಯಗಳನ್ನು ಅವರು ಆಡಿರುವ ಮತ್ತೊಂದು ಪಂದ್ಯಾವಳಿಯಾಗಿದೆ. ಟ್ರಿನ್‌ಬಾಗೊ ನೈಟ್ ರೈಡರ್ಸ್‌ ತಂಡದ ಪರವಾಗಿ ಆಡಿರುವ ಈ ಸ್ಪಿನ್ನರ್ 79 ಪಂದ್ಯಗಳಲ್ಲಿ 80 ವಿಕೆಟ್​ಗಳನ್ನು ಕಿತ್ತಿದ್ದಾರೆ.

ಸರ್ರೆ ಲಯನ್ಸ್‌ ತಂಡಕ್ಕಾಗಿ 29 ಪಂದ್ಯಗಳನ್ನು ಆಡಿದ್ದು, ಟಿ20 ಪಂದ್ಯಗಳಲ್ಲಿ 34 ವಿಕೆಟ್‌ಗಳನ್ನು ಪಡೆದಿದ್ದಾರೆ. ಇಂಗ್ಲಿಷ್ ಕ್ಲಬ್ ತಂಡಕ್ಕಾಗಿ ಆಡಿದಾಗ ಉತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ನರೈನ್​ ನೀಡಿದ್ದರು. ಈ ತಂಡಗಳ ಹೊರತಾಗಿಯೂ ನರೈನ್ ಗಯಾನಾ ಅಮೆಜಾನ್ ವಾರಿಯರ್ಸ್, ಮೆಲ್ಬೋರ್ನ್ ರೆನೆಗೇಡ್ಸ್, ಓವಲ್ ಇನ್ವಿನ್ಸಿಬಲ್ಸ್ ಮತ್ತು ಢಾಕಾ ಡೈನಮೈಟ್ಸ್‌ ತಂಡಗಳಲ್ಲೂ ಕಾಣಿಸಿಕೊಂಡಿದ್ದಾರೆ. ತಮ್ಮ ಸ್ಪಿನ್‌ ದಾಳಿಯ ಮೂಲಕವೇ ಬ್ಯಾಟರ್‌ಗಳನ್ನು ಬೆವರು ಸುರಿಸುವಂತೆ ಮಾಡಿದ್ದಾರೆ.

ಕಳೆದ ಕೆಲ ತಿಂಗಳ ಹಿಂದೆಯಷ್ಟೇ ಸುನಿಲ್ ನರೈನ್ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಘೋಷಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವರಿಗೆ ಹೆಸರು ಸಿಕ್ಕಿದ್ದು ಐಪಿಎಲ್‌ನಿಂದ ಎಂಬುವುದೇ ವಿಶೇಷ. 2014ರ ಕೆರಿಬಿಯನ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಸೂಪರ್ ಓವರ್ ​ಅನ್ನು ಮೇಡನ್ ಆಗಿ ಪರಿವರ್ತಿಸುವ ಮೂಲಕ ಇತಿಹಾಸ ಬರೆದಿದ್ದರು.

ಇದನ್ನ ಓದಿ:ಐಪಿಎಲ್​ 2024: ವರ್ಷದ ಬಳಿಕ ಮೈದಾನಕ್ಕಿಳಿದು ಹೊಸ ದಾಖಲೆ ಬರೆದ​ ರಿಷಭ್​​ ಪಂತ್​

ABOUT THE AUTHOR

...view details