ಕರ್ನಾಟಕ

karnataka

ಯುಪಿಎಸ್​ಸಿ 2023ರ ಪರೀಕ್ಷಾ ಫಲಿತಾಂಶ ಪ್ರಕಟ: ಆದಿತ್ಯ ಶ್ರೀವಾಸ್ತವ ಟಾಪರ್​ - UPSC Results

By PTI

Published : Apr 16, 2024, 3:19 PM IST

Updated : Apr 16, 2024, 5:11 PM IST

2023ರ ನಾಗರಿಕ ಸೇವಾ ಪರೀಕ್ಷೆಗಳ ಫಲಿತಾಂಶವನ್ನು ಯುಪಿಎಸ್‌ಸಿ ಇಂದು ಪ್ರಕಟಿಸಿದೆ.

ಯುಪಿಎಸ್​ಸಿ ಪರೀಕ್ಷಾ ಫಲಿತಾಂಶ ಪ್ರಕಟ: ಆದಿತ್ಯ ಶ್ರೀವತ್ಸವ ಟಾಪರ್​
UPSC Civil Services 2023 results declared, Aditya Srivastava secures top rank

ನವದೆಹಲಿ: ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್​ಸಿ) 2023ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಗಳ ಫಲಿತಾಂಶವನ್ನು ಇಂದು ಪ್ರಕಟಿಸಿದೆ. ಆದಿತ್ಯ ಶ್ರೀವಾಸ್ತವ ಪ್ರಥಮ ರ‍್ಯಾಂಕ್​ ಪಡೆದಿದ್ದಾರೆ. ಅನಿಮೇಶ್​ ಪ್ರಧಾನ್ ಎರಡನೇ ಮತ್ತು ಅನನ್ಯ ರೆಡ್ಡಿ ಮೂರನೇ ಸ್ಥಾನ ಗಳಿಸಿದ್ದಾರೆ.

ಪರೀಕ್ಷೆಯಲ್ಲಿ ಒಟ್ಟು 1,016 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ. ಇವರಲ್ಲಿ 664 ಪುರುಷರು ಮತ್ತು 352 ಮಹಿಳೆಯರು ಉನ್ನತ ಹುದ್ದೆಗಳಿಗೆ ಅರ್ಹತೆ ಪಡೆದಿದ್ದಾರೆ.

ಸಾಮಾನ್ಯ ವರ್ಗ - 347, ಆರ್ಥಿಕವಾಗಿ ಹಿಂದುಳಿದ ವರ್ಗ (ಇಡಬ್ಲ್ಯೂಎಸ್​) - 115, ಒಬಿಸಿ - 303, ಎಸ್​ಸಿ - 165, ಎಸ್​ಟಿ ಕೋಟಾದಲ್ಲಿ 86 ಅಭ್ಯರ್ಥಿಗಳು ನೇಮಕವಾಗಿದ್ದಾರೆ.

ಐಎಎಸ್​ ಹುದ್ದೆಗಳಿಗೆ 180, ಎಎಫ್​ಎಸ್​ ಹುದ್ದೆಗಳಿಗೆ - 37, ಐಪಿಎಸ್​ ಹುದ್ದೆಗಳಿಗೆ 200 ಅಭ್ಯರ್ಥಿಗಳು ನೇಮಕಗೊಂಡಿದ್ದಾರೆ.

ಟಾಪರ್​ ಅಭ್ಯರ್ಥಿಗಳು:ಅಗ್ರ ಐದು ಅಭ್ಯರ್ಥಿಗಳಲ್ಲಿ ಮೂವರು ಪುರುಷರು ಮತ್ತು ಇಬ್ಬರು ಮಹಿಳೆಯರು ಸೇರಿದ್ದಾರೆ. ಟಾಪರ್​ ಆಗಿ ಹೊರಹೊಮ್ಮಿರುವ ಶ್ರೀವಾಸ್ತವ ಕಾನ್ಪುರ ಐಐಟಿಯಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ತಮ್ಮ ಪದವಿ ಪಡೆದಿದ್ದಾರೆ. ನಾಗರಿಕ ಸೇವಾ ಪರೀಕ್ಷೆಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ​ಅನ್ನು ಇವರು ಐಚ್ಛಿಕ ವಿಷಯವಾಗಿ ತೆಗೆದುಕೊಂಡಿದ್ದರು.

ಎರಡನೇ ರ‍್ಯಾಂಕ್ ಪಡೆದ ಅನಿಮೇಶ್ ಪ್ರಧಾನ್, ರೂರ್ಕೆಲಾದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎನ್‌ಐಟಿ)ಯಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಪದವೀಧರ (ಬಿ.ಟೆಕ್) ಆಗಿದ್ದಾರೆ. ಇವರು ಪರೀಕ್ಷೆಯಲ್ಲಿ ಸಮಾಜಶಾಸ್ತ್ರವನ್ನು ತಮ್ಮ ಐಚ್ಛಿಕ ವಿಷಯವಾಗಿ ತೆಗೆದುಕೊಂಡಿದ್ದರು. ಮೂರನೇ ರ‍್ಯಾಂಕ್ ಗಳಿಸಿರುವ ಡೋಣೂರು ಅನನ್ಯ ರೆಡ್ಡಿ ದೆಹಲಿ ವಿಶ್ವವಿದ್ಯಾಲಯದ ಮಿರಾಂಡಾ ಹೌಸ್‌ ಕಾಲೇಜಿನಿಂದ ಬ್ಯಾಚುಲರ್ ಆಫ್ ಆರ್ಟ್ಸ್ (ಆನರ್ಸ್) ಪದವೀಧರರಾಗಿದ್ದು, ಇವರು ಮಾನವಶಾಸ್ತ್ರವನ್ನು ಐಚ್ಛಿಕ ವಿಷಯವಾಗಿ ತೆಗೆದುಕೊಂಡಿದ್ದರು.

ಪಿ.ಕೆ.ಸಿದ್ಧಾರ್ಥ್ ರಾಮ್‌ಕುಮಾರ್ ಮತ್ತು ರುಹಾನಿ ಕ್ರಮವಾಗಿ ನಾಲ್ಕು ಮತ್ತು ಐದನೇ ರ‍್ಯಾಂಕ್ ಪಡೆದಿದ್ದಾರೆ. ರಾಮ್‌ಕುಮಾರ್​ ತಿರುವನಂತಪುರದ ಆರ್ಕಿಟೆಕ್ಚರ್ ಕಾಲೇಜಿನಲ್ಲಿ ಬ್ಯಾಚುಲರ್ ಆಫ್ ಆರ್ಕಿಟೆಕ್ಚರ್ ಪದವಿ ಪಡೆದಿದ್ದು, ಮಾನವಶಾಸ್ತ್ರವನ್ನು ಐಚ್ಛಿಕ ವಿಷಯವಾಗಿ ತೆಗೆದುಕೊಂಡಿದ್ದರು. ರುಹಾನಿ ದೆಹಲಿ ವಿಶ್ವವಿದ್ಯಾಲಯದ ಸೇಂಟ್ ಸ್ಟೀಫನ್ಸ್ ಕಾಲೇಜಿನ ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದು, ಅರ್ಥಶಾಸ್ತ್ರವನ್ನು ಐಚ್ಛಿಕ ವಿಷಯವಾಗಿ ತೆಗೆದುಕೊಂಡಿದ್ದರು.

ಸೃಷ್ಟಿ ದಾಬಾಸ್ (6ನೇ ರ‍್ಯಾಂಕ್) ರ‍್ಯಾಂಕ್, ಅನ್ಮೋಲ್ ರಾಥೋಡ್ (7ನೇ ರ‍್ಯಾಂಕ್), ಆಶಿಶ್ ಕುಮಾರ್ (8ನೇ ರ‍್ಯಾಂಕ್), ನೌಶೀನ್ (9ನೇ ರ‍್ಯಾಂಕ್) ಮತ್ತು ಐಶ್ವರ್ಯಂ ಪ್ರಜಾಪತಿ (10ನೇ ರ‍್ಯಾಂಕ್) ಗಳಿಸಿದ್ದಾರೆ. ಟಾಪ್​ 25 ಅಭ್ಯರ್ಥಿಗಳಲ್ಲಿ 10 ಮಹಿಳೆಯರು ಹಾಗೂ 15 ಪುರುಷರು ಉತ್ತೀರ್ಣರಾಗಿದ್ದಾರೆ.

ಇದನ್ನೂ ಓದಿ:ನಾಗರಿಕ ಸೇವಾ ಪರೀಕ್ಷೆಗಳಿಗೆ ಯುಪಿಎಸ್​ಸಿ ಅಧಿಸೂಚನೆ

Last Updated :Apr 16, 2024, 5:11 PM IST

ABOUT THE AUTHOR

...view details