ಕರ್ನಾಟಕ

karnataka

ಸಂದೇಶಖಾಲಿಯಲ್ಲಿ ಇಂದು ನಡೆಯಬೇಕಿದ್ದ ತೃಣಮೂಲ ಕಾಂಗ್ರೆಸ್ ಸಾರ್ವಜನಿಕ ಸಭೆ ರದ್ದು

By ETV Bharat Karnataka Team

Published : Feb 18, 2024, 1:36 PM IST

ಸಂದೇಶಖಾಲಿಯಲ್ಲಿ ಭಾನುವಾರದಂದು ನಡೆಯಬೇಕಿದ್ದ ಸಾರ್ವಜನಿಕ ಸಭೆಯನ್ನು ತೃಣಮೂಲ ಕಾಂಗ್ರೆಸ್ ರದ್ದುಪಡಿಸಿದೆ.

Trinamool Congress cancels public meeting at Sandeshkhali today
Trinamool Congress cancels public meeting at Sandeshkhali today

ಕೋಲ್ಕತಾ: ಪಶ್ಚಿಮ ಬಂಗಾಳದ ಸಂದೇಶಖಾಲಿಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ದೂರುಗಳ ಬಗ್ಗೆ ಹೆಚ್ಚುತ್ತಿರುವ ವಿವಾದಗಳ ಮಧ್ಯೆ, ತೃಣಮೂಲ ಕಾಂಗ್ರೆಸ್ ಭಾನುವಾರ ಇಲ್ಲಿ ನಡೆಸಲು ಉದ್ದೇಶಿಸಿದ್ದ ತನ್ನ ಸಾರ್ವಜನಿಕ ಸಭೆಯನ್ನು ರದ್ದುಗೊಳಿಸಿದೆ. ಸಾರ್ವಜನಿಕ ಸಭೆಯ ಬದಲಿಗೆ ರಾಜ್ಯ ಸಚಿವ ಸಂಪುಟದ ಇಬ್ಬರು ಸದಸ್ಯರಾದ ನೀರಾವರಿ ಸಚಿವ ಪಾರ್ಥ ಭೌಮಿಕ್ ಮತ್ತು ಅಗ್ನಿಶಾಮಕ ಸೇವೆಗಳ ಸಚಿವ ಸುಜಿತ್ ಬೋಸ್ ಮಧ್ಯಾಹ್ನ ಸಂದೇಶಖಾಲಿಗೆ ತೆರಳಲಿದ್ದಾರೆ. ಸ್ಥಳೀಯ ಜನರೊಂದಿಗೆ ಮಾತನಾಡಿದ ನಂತರ, ಇಬ್ಬರೂ ಸಾರ್ವಜನಿಕ ಸಭೆಯ ದಿನಾಂಕವನ್ನು ನಿರ್ಧರಿಸಲಿದ್ದಾರೆ.

ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ಮತ್ತು ಹಿಂಸಾಚಾರದ ಆರೋಪ ಹೊತ್ತಿರುವ ತೃಣಮೂಲ ಕಾಂಗ್ರೆಸ್​ನ ನಾಯಕ ಶಿಬು ಹಜ್ರಾ ಅವರನ್ನು ರಾಜ್ಯ ಪೊಲೀಸರು ಬಂಧಿಸಿದ ಕೆಲವೇ ಗಂಟೆಗಳ ನಂತರ, ಸಂದೇಶಖಾಲಿಯಲ್ಲಿ ಭಾನುವಾರ ನಡೆಯಬೇಕಿದ್ದ ಸಾರ್ವಜನಿಕ ಸಭೆಯನ್ನು ರದ್ದುಗೊಳಿಸುವ ನಿರ್ಧಾರವನ್ನು ಶನಿವಾರ ರಾತ್ರಿ ತೆಗೆದುಕೊಳ್ಳಲಾಗಿದೆ ಎಂದು ಪಕ್ಷದ ಆಂತರಿಕ ಮೂಲಗಳು ತಿಳಿಸಿವೆ.

"ಸಂದೇಶಖಾಲಿಯಲ್ಲಿನ ಪರಿಸ್ಥಿತಿ ಇನ್ನೂ ಸಂಪೂರ್ಣ ಸಾಮಾನ್ಯ ಸ್ಥಿತಿಗೆ ಬಂದಿಲ್ಲ. ಅಲ್ಲಿ ಈಗಲೂ ಸೆಕ್ಷನ್ 144 ಜಾರಿಯಲ್ಲಿದೆ. ಈ ಸಮಯದಲ್ಲಿ ರಾಜ್ಯ ಕೌನ್ಸಿಲ್ ನಡೆಸುವ ಹೈಯರ್ ಸೆಕೆಂಡರಿ ಪರೀಕ್ಷೆಗಳು ಕೂಡ ನಡೆಯುತ್ತಿವೆ. ಈ ಮಧ್ಯೆ ನಡೆಯುವ ಯಾವುದೇ ಸಾರ್ವಜನಿಕ ಸಭೆ ಪರೀಕ್ಷಾರ್ಥಿಗಳಿಗೆ ಅನಾನುಕೂಲತೆಯನ್ನು ಉಂಟುಮಾಡಬಹುದು. ಈ ಎಲ್ಲ ಅಂಶಗಳನ್ನು ಪರಿಗಣಿಸಿ ಮತ್ತು ಜವಾಬ್ದಾರಿಯುತ ರಾಜಕೀಯ ಪಕ್ಷವಾಗಿ ನಾವು ಭಾನುವಾರ ನಮ್ಮ ಸಾರ್ವಜನಿಕ ಸಭೆಯನ್ನು ರದ್ದುಗೊಳಿಸಲು ನಿರ್ಧರಿಸಿದ್ದೇವೆ" ಎಂದು ರಾಜ್ಯ ಸಚಿವ ಸಂಪುಟದ ಹಿರಿಯ ಸದಸ್ಯರೊಬ್ಬರು ತಿಳಿಸಿದ್ದಾರೆ.

ಹೈಯರ್ ಸೆಕೆಂಡರಿ ಪರೀಕ್ಷೆಗಳು ಮುಗಿದ ನಂತರ ಮಾರ್ಚ್ 4 ರಂದು ಸಂದೇಶಖಾಲಿಯಲ್ಲಿ ಸಾರ್ವಜನಿಕ ಸಭೆ ನಡೆಸಬಹುದು ಎಂದು ಅವರು ಹೇಳಿದರು.

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣದ ಇಬ್ಬರು ಪ್ರಮುಖ ಆರೋಪಿಗಳಾದ ಶಿಬು ಹಜ್ರಾ ಮತ್ತು ಉತ್ತಮ್ ಸರ್ದಾರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಇವರಿಬ್ಬರ ರಾಜಕೀಯ ಮಾರ್ಗದರ್ಶಕ ಮತ್ತು ಜನವರಿ 5 ರಂದು ಇಡಿ ಮತ್ತು ಸಿಎಪಿಎಫ್ ಸಿಬ್ಬಂದಿಯ ಮೇಲಿನ ದಾಳಿಯ ಹಿಂದಿನ ಆರೋಪಿ ಮಾಸ್ಟರ್ ಮೈಂಡ್ ಶೇಖ್ ಶಹಜಹಾನ್ ಇನ್ನೂ ಪರಾರಿಯಾಗಿದ್ದಾರೆ.

ಸಂದೇಶಖಾಲಿಯಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿರುವ ಆರೋಪಗಳ ಬಗ್ಗೆ ಇತ್ತೀಚೆಗೆ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶಹಜಹಾನ್ ಅವರಿಗೆ ಕ್ಲೀನ್ ಚಿಟ್ ನೀಡಿದ್ದರು. ಸಂದೇಶಖಾಲಿಯಲ್ಲಿ ಇಡಿ ಉದ್ವಿಗ್ನತೆ ಸೃಷ್ಟಿಸಲು ಯತ್ನಿಸುತ್ತಿದೆ ಎಂದು ಅವರು ಆರೋಪಿಸಿದ್ದರು.

ಇದನ್ನೂ ಓದಿ : ಪಶ್ಚಿಮ ಬಂಗಾಳ: ಸಂದೇಶಖಾಲಿಗೆ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ಭೇಟಿ

ABOUT THE AUTHOR

...view details