ಕರ್ನಾಟಕ

karnataka

ಚುನಾವಣಾ ಬಾಂಡ್​ ವಿಶ್ವದ ದೊಡ್ಡ ಹಗರಣ, ಬಿಜೆಪಿ 150 ಸೀಟಿಗೆ ಸೀಮಿತವಾಗುತ್ತೆ: ರಾಹುಲ್​ ಗಾಂಧಿ ಭವಿಷ್ಯ - Rahul Gandhi prediction

By PTI

Published : Apr 17, 2024, 1:09 PM IST

ಉತ್ತರಪ್ರದೇಶದ ಗಾಜಿಯಾಬಾದ್​ ಮೈತ್ರಿ ಪಕ್ಷದ ಸಮಾಜವಾದಿ ಪಾರ್ಟಿಯ ಮುಖ್ಯಸ್ಥ ಅಖಿಲೇಶ್​ ಯಾದವ್​ ಜೊತೆ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರು ಜಂಟಿ ಸುದ್ದಿಗೋಷ್ಠಿ ನಡೆಸಿದರು.

ರಾಹುಲ್​ ಗಾಂಧಿ
ರಾಹುಲ್​ ಗಾಂಧಿ

ಗಾಜಿಯಾಬಾದ್‌ (ಉತ್ತರಪ್ರದೇಶ):"ಚುನಾವಣಾ ಬಾಂಡ್​ ಯೋಜನೆ ವಿಶ್ವದ ಅತಿದೊಡ್ಡ ಹಗರಣ, ಬಿಜೆಪಿ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ 150 ಸ್ಥಾನಗಳಲ್ಲಿ ಮಾತ್ರ ಗೆಲ್ಲಲಿದೆ. ವಿಪಕ್ಷಗಳ I.N.D.I.A ಮೈತ್ರಿಕೂಟ ನಿಚ್ಚಳ ಬಹುಮತ ಸಾಧಿಸಿ ಸರ್ಕಾರ ರಚನೆ ಮಾಡಲಿದೆ" ಎಂದು ಕಾಂಗ್ರೆಸ್​ನ ಅಗ್ರ ನೇತಾರ ರಾಹುಲ್​ ಗಾಂಧಿ ಅವರು ಭವಿಷ್ಯ ನುಡಿದಿದ್ದಾರೆ.

ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರೊಂದಿಗೆ ನಡೆದ ಜಂಟಿ ಮಾಧ್ಯಮಗೋಷ್ಠಿ ಮಾತನಾಡಿದ ರಾಹುಲ್​ ಕೇಂದ್ರ ಸರ್ಕಾರವನ್ನು ಟೀಕಿಸಿದರು.

"ಚುನಾವಣಾ ನಿಧಿಯಲ್ಲಿ ಪಾರದರ್ಶಕತೆ ತರಲು ಚುನಾವಣಾ ಬಾಂಡ್ ಯೋಜನೆ ತಂದಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಹೇಳುತ್ತಾರೆ. ಹಾಗಿದ್ದಲ್ಲಿ ಸುಪ್ರೀಂ ಕೋರ್ಟ್ ಏಕೆ ಈ ಯೋಜನೆಯನ್ನು ರದ್ದುಗೊಳಿಸಿತು ಎಂದು ರಾಹುಲ್ ಪ್ರಶ್ನಿಸಿದರು. ಈ ಯೋಜನೆಯು ವಿಶ್ವದಲ್ಲೇ ಅತಿ ದೊಡ್ಡ ಹಗರಣವಾಗಿದೆ. ಇದರ ಒಳಸುಳಿವು ಭಾರತೀಯ ಸಿರಿವಂತರಿಗೆ ಚೆನ್ನಾಗಿ ತಿಳಿದಿತ್ತು. ಈ ಬಗ್ಗೆ ಪ್ರಧಾನಿ ಏನೇ ಹೇಳಿದರೂ, ವ್ಯರ್ಥ. ಕಾರಣ ಈ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಪ್ರಧಾನಿಯೇ ಕಾರಣ ಎಂಬುದು ಇಡೀ ದೇಶಕ್ಕೆ ಗೊತ್ತಿದೆ" ಎಂದು ಅವರು ಜರಿದರು.

ಸಿರಿವಂತರಿಗೆ ಯೋಜನೆ ನೆರವು:"ಚುನಾವಣಾ ಬಾಂಡ್​ ಯೋಜನೆಯು ಸಿರಿವಂತರಿಗೆ ಮಾತ್ರ ನೆರವು ನೀಡಿದೆ. ಅಕ್ರಮವಾಗಿ ಗಳಿಸಿದ ಹಣವನ್ನು ಇಲ್ಲಿ ವಿನಿಯೋಗಿಸಲಾಗಿದೆ ಎಂದು ಆರೋಪಿಸಿದರು. ದೇಶದಲ್ಲಿ ಬಡತನವನ್ನು ಒಮ್ಮೆಲೆ ನಿರ್ಮೂಲನೆ ಮಾಡಲು ಕಾಂಗ್ರೆಸ್​ ಮುಂದಾಗಿದೆ ಎಂಬ ಪ್ರಧಾನಿ ಮೋದಿ ಅವರ ವ್ಯಂಗ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಡತನವನ್ನು ಏಕಕಾಲಕ್ಕೆ ನೀಗಿಸಲು ಸಾಧ್ಯವಿಲ್ಲ. ಅದನ್ನು ತಗ್ಗಿಸಲು ಪ್ರಬಲವಾದ ಯತ್ನಗಳು ಮಾಡಬೇಕು. ಅದನ್ನು ನಮ್ಮ ಪಕ್ಷ ಮಾಡುತ್ತದೆ" ಎಂದರು.

ಅಮೇಠಿ ಬಗ್ಗೆ ಇನ್ನೂ ಸಸ್ಪೆನ್ಸ್​:"ಒಂದೊಮ್ಮೆ ಕಾಂಗ್ರೆಸ್​ನ ಭದ್ರಕೋಟೆಯಾಗಿದ್ದ ಉತ್ತರಪ್ರದೇಶದ ಅಮೇಠಿ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂಬುದಾಗಿ ರಾಹುಲ್​ ತಿಳಿಸಿದರು. ಈ ಬಗ್ಗೆ ಪಕ್ಷದ ಚುನಾವಣಾ ಸಮಿತಿಯ ನಿರ್ಧಾರವೇ ಅಂತಿಮವಾಗಿರಲಿದೆ. ಸಮಿತಿಯೇ ಈ ಬಗ್ಗೆ ಅಂತಿಮ ತೀರ್ಮಾನ ಮಾಡಲಿದೆ" ಎಂದು ಆ ಕ್ಷೇತ್ರದ ಮಾಜಿ ಸಂಸದರು ಹೇಳಿದರು.

ಬಿಜೆಪಿಗೆ 150 ಸೀಟು:"15-20 ದಿನಗಳ ಹಿಂದೆ 180 ಸ್ಥಾನಗಳಲ್ಲಿ ಬಿಜೆಪಿ ಗೆಲ್ಲುತ್ತದೆ ಎಂದು ನಾನು ಭಾವಿಸಿದ್ದೆ. ಈಗಿನ ಪರಿಸ್ಥಿತಿಯನ್ನು ನೋಡಿದರೆ, 150 ಸ್ಥಾನಗಳನ್ನು ಮಾತ್ರ ಪಡೆಯುತ್ತಾರೆ. ಉತ್ತರ ಪ್ರದೇಶದಲ್ಲಿ ಪ್ರಬಲ ವಿರೋಧ ಪಕ್ಷದ ಮೈತ್ರಿ ಇದೆ. ಮುಂಬರುವ ಚುನಾವಣೆಗಳು ಸಿದ್ಧಾಂತದ ಮೇಲೆ ನಡೆಯಲಿವೆ. ಒಂದೆಡೆ ಆರೆಸ್ಸೆಸ್ ಮತ್ತು ಬಿಜೆಪಿ ಸಂವಿಧಾನವನ್ನು ಬದಲಿಸಲು ಪ್ರಯತ್ನಿಸುತ್ತಿದ್ದರೆ, ಕಾಂಗ್ರೆಸ್ ಅದನ್ನು ರಕ್ಷಿಸಲು ಹೋರಾಟ ಮಾಡಲಿದೆ" ಎಂದರು.

"ದೇಶದಲ್ಲಿ ನಿರುದ್ಯೋಗ, ಆರ್ಥಿಕ ಬಿಕ್ಕಟ್ಟು ದೊಡ್ಡ ಸಮಸ್ಯೆಗಳಾಗಿವೆ. ಇದರಿಂದ ಜನರ ಗಮನವನ್ನು ಬೇರೆಡೆ ತಿರುಗಿಸಲು ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಯತ್ನಿಸುತ್ತಿದ್ದಾರೆ. ಕಳೆದ 10 ವರ್ಷಗಳಲ್ಲಿ ಪ್ರಧಾನಿ ಮೋದಿ ಅವರು ಕೈಗೊಂಡ ನೋಟು ಪ್ರತಿಬಂಧಕ, ಜಿಎಸ್​ಟಿ ಜಾರಿಯಂತಹ ಕ್ರಮಗಳಿಂದ ಅದಾನಿಯಂತಹ ದೊಡ್ಡ ಉದ್ಯಮಿಗಳಿಗೆ ಒಳಿತಾಗಿದೆ. ದೇಶದ ಬಡವರಿಗೆ ಏನೂ ಲಾಭವಾಗಿಲ್ಲ" ಎಂದು ರಾಹುಲ್ ಗಾಂಧಿ ಮತ್ತೆ ಮತ್ತೆ ಟೀಕಿಸಿದರು.

ಇದನ್ನೂ ಓದಿ:ದೇಶದ ಸಂವಿಧಾನ ಬದಲಿಸಲು ಆರ್​ಎಸ್​ಎಸ್​, ಬಿಜೆಪಿ ಸಂಚು: ರಾಹುಲ್​ ಗಾಂಧಿ ಆರೋಪ - Rahul Gandhi roadshow

ABOUT THE AUTHOR

...view details