ಕರ್ನಾಟಕ

karnataka

ಸೋಂಕಿತನಿದ್ದ ಮನೆಗೆ ಅಘೋಷಿತ ಬಹಿಷ್ಕಾರ.. ನರಳಾಡುತ್ತಿದ್ದ ಮಹಿಳೆಗೆ ಆಸರೆಯಾದ ಆರೋಗ್ಯ ಕವಚ ಸಿಬ್ಬಂದಿ

By

Published : May 24, 2021, 9:00 PM IST

ಗ್ರಾಮೀಣ ಭಾಗದಲ್ಲಿ ಕೋವಿಡ್ ಸೋಂಕಿತ ಬಡವರ ಪರಿಸ್ಥಿತಿ ಎಷ್ಟು ಗಂಭೀರವಾಗಿರುತ್ತದೆ ಎಂಬುದಕ್ಕೆ ಮುದ್ದೇ ಬಿಹಾಳ ತಾಲೂಕಿನಲ್ಲಿ ನಡೆದ ಒಂದು ಘಟನೆ ಸಾಕ್ಷಿಯಾಗಿದೆ. ಮಹಿಳೆ ಹೊಟ್ಟೆನೋವಿನಿಂದ ಬಳಲುತ್ತಿದ್ದರೂ ಕೊರೊನಾ ಸೋಂಕಿತರ ಮನೆಯವರೆಂದು ಗ್ರಾಮಸ್ಥರು ಅವರ ಸಹಾಯಕ್ಕೆ ಬರಲು ನಿರಾಕರಿಸಿ ಅಮಾನವೀಯತೆ ಪ್ರದರ್ಶಿಸಿರುವ ಘಟನೆ ನಡೆದಿದೆ.

muddebihala
muddebihala

ಮುದ್ದೇಬಿಹಾಳ: ಮನೆಯಲ್ಲಿ ಕೋವಿಡ್ ಪೀಡಿತನಿದ್ದಾನೆ ಎಂದು ಅವರ ಮನೆಯಲ್ಲಿ ಮಹಿಳೆಯೊಬ್ಬರು ಬೇರೆ ಕಾಯಿಲೆಯಿಂದ ಬಳಲುತ್ತಿದ್ದರೂ ಆಕೆಯನ್ನು ಆ್ಯಂಬುಲೆನ್ಸ್​ ಹತ್ತಿಸಿ ಆಸ್ಪತ್ರೆಗೆ ದಾಖಲಿಸಲು ಹಿಂದೇಟು ಹಾಕಿರುವ ಘಟನೆ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.

ತಂಗಡಗಿ ಗ್ರಾಮದ ಈ ಮನೆಯಲ್ಲಿ ಮಹಿಳೆಯ ಮಗಳು ಮತ್ತು ಅಳಿಯ ವಾಸವಿದ್ದಾರೆ. ಅಳಿಯನಿಗೆ ಕೋವಿಡ್ ಪಾಸಿಟಿವ್‌ ಬಂದಿದ್ದು, ಮನೆಯಲ್ಲೇ ಐಸೋಲೇಷನ್‌ ಆಗಿದ್ದಾರೆ. ಚಿಕ್ಕ ಮನೆಯಾದ್ದರಿಂದ ಪ್ರತ್ಯೇಕವಾಗಿ ಮನೆಯ ಇತರ ಸದಸ್ಯರು ವಾಸಿಸಲು ಸಾಧ್ಯವಿರಲಿಲ್ಲ. ಕೋವಿಡ್ ಸೋಂಕಿತನ ಮನೆಯಾಗಿರುವುದರಿಂದ ಯಾರೂ ಸಹ ಇವರ ಬಳಿ ಬರುತ್ತಿರಲಿಲ್ಲ. ಇವರೊಂದಿಗೆ ಮಾತನಾಡಲೂ ಸಹ ಹಿಂದೇಟು ಹಾಕುವಂತ ಸ್ಥಿತಿ ನಿರ್ಮಾಣವಾಗಿತ್ತು. ಈ ಮಧ್ಯೆ ಕಳೆದ ಶುಕ್ರವಾರ ಮನೆಯ ಯಜಮಾನಿ ತೀವ್ರ ಹೊಟ್ಟೆ ನೋವಿನಿಂದ ಒದ್ದಾಡುತ್ತಿದ್ದರು. ಮನೆಯಲ್ಲಿ ಪಾಸಿಟಿವ್ ಸೋಂಕಿತ ಇದ್ದಿದ್ದರಿಂದ ಯಾರೂ ನೆರವಿಗೆ ಬರಲಿಲ್ಲ. ಗ್ರಾಪಂ ಪಿಡಿಒ, ಆಶಾ, ಅಂಗನವಾಡಿ ಕಾರ್ಯಕರ್ತರಿಗೆ ಮಾಹಿತಿ ತಿಳಿಸಿದರೂ ಅವರು ತಕ್ಷಣಕ್ಕೆ ಸ್ಪಂದಿಸಿರಲಿಲ್ಲ ಎನ್ನಲಾಗ್ತಿದೆ.

ಸಹಾಯಕ್ಕೆ ನಿರಾಕರಿಸಿದ ನೆರೆಹೊರೆಯವರು

ಮಹಿಳೆಯ ಪರಿಸ್ಥಿತಿ ಅರಿತವರು ಆ್ಯಂಬುಲೆನ್ಸ್ ಹೆಲ್ಪ್​ಲೈನ್‌ಗೆ ಕರೆ ಮಾಡಿ ತಂಗಡಗಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಆ್ಯಂಬುಲೆನ್ಸ್​ ಕರೆಸಿದ್ದಾರೆ. ಆದರೆ ಕೋವಿಡ್ ಸೋಂಕಿತರ ಮನೆಯವರು ಅನ್ನುವ ಕಾರಣಕ್ಕೆ ಆಕೆಯನ್ನು ಆ್ಯಂಬುಲೆನ್ಸ್​ಗೆ ಹತ್ತಿಸಲು ಆ್ಯಂಬುಲೆನ್ಸ್ ಸಿಬ್ಬಂದಿ ನಿರಾಕರಿಸಿದರು. ಅಲ್ಲದೇ ನಮಗೆ ಪಿಪಿಇ ಕಿಟ್ ಕೊಟ್ಟಿಲ್ಲ, ಮನೆಯವರೇ ಅವರನ್ನು ವಾಹನಕ್ಕೆ ಹತ್ತಿಸಬೇಕೆಂದು ಹೇಳಿದ್ದಾರೆ ಎನ್ನಲಾಗ್ತಿದೆ. ಅಳಿಯ ಪಾಸಿಟಿವ್‌ನಿಂದ ನಿಶ್ಯಕ್ತಿ ಹೊಂದಿದ್ದರಿಂದ ಅತ್ತೆಯನ್ನು ಆ್ಯಂಬುಲೆನ್ಸ್​ ಒಳಗೆ ಹೊತ್ತುಕೊಂಡು ಹೋಗಲು ಆಗಿಲ್ಲ. ಅಲ್ಲದೇ ಯಾರೊಬ್ಬರೂ ನೆರವಿಗೆ ಬರಲಿಲ್ಲ. ತೀವ್ರ ನೋವಿನಿಂದಲೇ ಆಕೆ ದಿನ ಕಳೆದಿದ್ದಾಳೆ.

ನೆರವಿಗೆ ಬಂದ ಆರೋಗ್ಯ ಕವಚ ನೌಕರರು:
ಮುದ್ದೇಬಿಹಾಳದ ಆರೋಗ್ಯ ಕವಚ ವಾಹನದ ಇಎಂಟಿ ಶ್ರೀಶೈಲ ಹೂಗಾರ, ಪೈಲಟ್ ಅಮರೇಶ ಅವರಿಗೆ ಪತ್ರಕರ್ತರ ಮೂಲಕ ವಿಷಯ ತಿಳಿದ ಕೂಡಲೇ ತಂಗಡಗಿಗೆ ಧಾವಿಸಿ ಅವರ ಮನೆ ಪತ್ತೆ ಹಚ್ಚಿದ್ದಾರೆ. ಪಿಪಿಇ ಕಿಟ್ ಧರಿಸಿ ಅನಾರೋಗ್ಯದಿಂದ ಗೋಳಾಡುತ್ತಿದ್ದ ಮಹಿಳೆಯನ್ನು ಆಕೆಯ ಮಗಳ ಸಹಾಯದಿಂದ ಸ್ಟ್ರೆಚರ್​ನಲ್ಲಿ ಮಲಗಿಸಿ ಆ್ಯಂಬುಲೆನ್ಸ್​ ಒಳಗೆ ಹಾಕಿದ್ದಾರೆ. ಸರ್ಕಾರಿ ಆಸ್ಪತ್ರೆಗೆ ಕರೆತಂದು ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಮುದ್ದೇಬಿಹಾಳದಲ್ಲಿ ತಪಾಸಣೆ ನಡೆಸಿದಾಗ ಆಕೆಗೆ ಕೋವಿಡ್ ಸೋಂಕು ತಗುಲಿರಲಿಲ್ಲ ಎಂಬುದು ತಿಳಿದು ಬಂದಿದೆ. ಅವರು ಬೇರೊಂದು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಸದ್ಯಕ್ಕೆ ಮಹಿಳೆ ಚೇತರಿಸಿಕೊಂಡಿದ್ದಾರೆ ಎಂದು ಆರೋಗ್ಯ ಕವಚ ವಾಹನದ ನೌಕರ ಶ್ರೀಶೈಲ ಹೂಗಾರ ತಿಳಿಸಿದ್ದಾರೆ.

ABOUT THE AUTHOR

...view details