ಕರ್ನಾಟಕ

karnataka

ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಪಿಎಸ್​​ಐ ಒಬ್ಬರಿಂದ ವಂಚನೆ.. ವಿಜಯಪುರ ಯುವಕನ ಆರೋಪ

By

Published : Sep 17, 2022, 6:02 PM IST

Updated : Sep 17, 2022, 7:43 PM IST

Sangamesh Jhalaki, a young man who was cheated

ಸಂಗಮೇಶ ಅವರಿಗೆ ಅರ್ಜಿ ಹಾಕಲು ಹೇಳಿದ್ದ ಪಿಎಸ್​ಐ ಪರಿಚಯಸ್ಥರಿಂದ ಹುದ್ದೆ ಕೊಡಿಸುವೆ ಮೊದಲು 2ಲಕ್ಷ ರೂ. ಹೊಂದಾಣಿಕೆ ಮಾಡಲು ಹೇಳಿದ್ದರು. ಹುದ್ದೆ ದೊರೆತ ಮೇಲೆ 15 ಲಕ್ಷದವರೆಗೆ ಹಣ ನೀಡಬೇಕು ಎಂದಿದ್ದರು ಎಂಬ ಆರೋಪ ಕೇಳಿ ಬಂದಿದೆ.

ವಿಜಯಪುರ: ಪಿಎಸ್​ಐ ನೇಮಕಾತಿ ಹಗರಣ ಇನ್ನೂ ತನಿಖಾ ಹಂತದಲ್ಲಿ ಇರುವಾಗಲೇ, ಕೆಪಿಎಸ್​ಸಿ ಕರೆದಿದ್ದ ಎಫ್​ಡಿಎ ಪ್ರಥಮ‌ ದರ್ಜೆ ಸಹಾಯಕ ಹುದ್ದೆ‌ ಕೊಡಿಸುವುದಾಗಿ ಮಹಿಳಾ ಪಿಎಸ್​ಐ ಒಬ್ಬರು ಅವರ ಸಂಬಂಧಿಕ ಯುವಕನಿಗೆ ವಂಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ‌ ಚಿಕ್ಕಲಕಿ ಗ್ರಾಮದ ಸದ್ಯ ಮೈಸೂರಿನ‌ ಎನ್. ಆರ್. ಪೊಲೀಸ್ ಠಾಣೆಯ ಸಂಚಾರಿ ವಿಭಾಗದ ಪಿಎಸ್​ಐ, ಎಫ್​ಡಿಎ ಹುದ್ದೆ ಕೊಡಿಸುವುದಾಗಿ ವಂಚನೆ ಮಾಡಿದ್ದಾರೆ ಎಂದು ಯುವಕ ಸಂಗಮೇಶ ಝಳಕಿ ಎಂಬುವವರು ಆರೋಪಿಸಿದ್ದಾರೆ. ಈ ಯುವಕ ಪಿಎಸ್​ಐ ಸಂಬಂಧಿಕ ಎನ್ನಲಾಗುತ್ತಿದೆ.

ವಂಚನೆಗೊಳಗಾದ ಯುವಕ ಸಂಗಮೇಶ ಝಳಕಿ

ಅಷ್ಟಕ್ಕೂ ಏನಿದರ ಹಿನ್ನೆಲೆ:2020 ಮಾರ್ಚ್​ನಲ್ಲಿ ಎಫ್​ಡಿಎ ಹುದ್ದೆಗಾಗಿ ಕೆಪಿಎಸ್​ಸಿ ಅರ್ಜಿ ಆಹ್ವಾನಿಸಲಾಗಿತ್ತು. ಇದೇ ಪಿಎಸ್​ಐ ತಮ್ಮ ಸಂಬಂಧಿಕ ಸಂಗಮೇಶ ಅವರಿಗೆ ಅರ್ಜಿ ಹಾಕಲು ಹೇಳಿದ್ದರು. ತಮಗೆ ಪರಿಚಯಸ್ಥರಿಂದ ಹುದ್ದೆ ಕೊಡಿಸುವೆ ಮೊದಲು 2 ಲಕ್ಷ ರೂ. ಹೊಂದಾಣಿಕೆ ಮಾಡಲು ಹೇಳಿದ್ದರು.

ನಂತರ ಹುದ್ದೆ ದೊರೆತ ಮೇಲೆ 15 ಲಕ್ಷದವರೆಗೆ ಹಣ ನೀಡಬೇಕು ಎಂದರು. ನಿರುದ್ಯೋಗಿಯಾಗಿದ್ದ ಸಂಗಮೇಶ ನೌಕರಿ ಸಿಗುವ ಆಸೆಯಿಂದ ಮೊದಲು 1.80ಲಕ್ಷ ರೂ.ಗಳನ್ನು ಪಿಎಸ್​ಐ ಖಾತೆಗೆ ಜಮಾ ಮಾಡಿದ್ದಂತೆ. ನಂತರ ಹಣದ ಅವಶ್ಯಕತೆ ಇದೆ ಎಂದು ಹೇಳಿ ಮತ್ತೆ 30 ಸಾವಿರ ತೆಗೆದುಕೊಂಡಿದ್ದರು ಎಂದು ಸಂಗಮೇಶ್​ ದೂರಿದ್ದಾನೆ.

ಪರೀಕ್ಷೆ ಮಾಹಿತಿ ನೀಡಿದ್ದ ಪಿಎಸ್​ಐ: ಎಫ್​ಡಿಎ ಪರೀಕ್ಷೆಗೆ ಹಾಜರಾದಾಗ ಮಾಡಬೇಕಾದ ಕೆಲಸವನ್ನು ವಿವರಿಸಿದ್ದರು. ನಿನಗೆ ಬರುವ ಉತ್ತರ ಮಾತ್ರ ಬರೆದು ಉಳಿದ ಪ್ರಶ್ನೆಗಳನ್ನು ಖಾಲಿ ಬಿಡು ನಂತರ ಒಎಂಆರ್ ಶೀಟ್ ಭರ್ತಿ ಮಾಡಿ ಪರೀಕ್ಷೆ ಪಾಸ್ ಮಾಡಿ ಉದ್ಯೋಗ ಕೊಡಿಸುವುದಾಗಿ ಸಂಗಮೇಶಗೆ ತಿಳಿಸಿದ್ದಳು. ಅದರಂತೆ ಸಂಗಮೇಶ‌ ನಡೆದುಕೊಂಡಿದ್ದನು.

ಪರೀಕ್ಷೆ ಫಲಿತಾಂಶ ಬಂದಾಗ ಅಲ್ಲಿ ಯುವಕನ ಹೆಸರು ಇರಲಿಲ್ಲ. ಈ ಬಗ್ಗೆ ಪಿಎಸ್ಐ ಅವರಿಗೆ ಸಂಗಮೇಶ ಪೋನ್‌ ಮಾಡಿ ವಿಚಾರಿಸಿದ್ದಾರೆ. ಆಗ ನೀನು ಯಾರು ಎಂದು ಪ್ರಶ್ನಿಸಿ ಪೋನ್ ಕಟ್​ ಮಾಡಿದ್ದರಂತೆ. ನಂತರ ಅವರ ತಂದೆಯನ್ನು ವಿಚಾರಿಸಿದರೆ ನೀವು ನಮಗೆ ಸಾಲ‌ ಕೊಡಬೇಕಾಗಿತ್ತು, ಅದನ್ನು ಪಡೆದುಕೊಂಡಿದ್ದೇವೆ ಎಂದು ಜಾರಿ ಕೊಂಡಿದ್ದಾರೆ ಎಂದು ಯುವಕ ಹೇಳುತ್ತಿದ್ದಾನೆ.

ಈಗ ಉದ್ಯೋಗ ಇಲ್ಲ, ಅತ್ತ ನೀಡಿದ ಹಣ ವಾಪಸ್ ಆಗದೇ ಹುದ್ದೆಯ ನಿರೀಕ್ಷೆಯಲ್ಲಿದ್ದ ಸಂಗಮೇಶನಿಗೆ ದಿಕ್ಕು ತೋಚದಂತಾಗಿದೆ. ಸದ್ಯ‌‌ ಮಾಧ್ಯಮದ ಎದುರು ಬಂದಿರುವ ಸಂಗಮೇಶ ತಮಗೆ ಜೀವ ಬೆದರಿಕೆಯಿದೆ ರಕ್ಷಣೆ ನೀಡಬೇಕು. ಹಾಗೂ ತಾನು ನೀಡಿದ ಹಣ ಮರಳಿಸಬೇಕು ಎಂದು ಮನವಿ ಮಾಡಿದ್ದಾನೆ.

ಇದನ್ನೂ ಓದಿ:ಸಬ್​ಇನ್ಸ್​ಪೆಕ್ಟರ್​ ನೇಮಕಾತಿ ಅಕ್ರಮ: ತಲೆಮರೆಸಿಕೊಂಡಿರುವ ಪಿಎಸ್​ಐ ನವೀನ್​ಗಾಗಿ ಸಿಐಡಿ ಹುಡುಕಾಟ

Last Updated :Sep 17, 2022, 7:43 PM IST

ABOUT THE AUTHOR

...view details