ETV Bharat / state

ಹಾಸನ ಅಶ್ಲೀಲ ವಿಡಿಯೋ ವಿಚಾರ: ಬಿಜೆಪಿ ರಾಜಕೀಯ ನಿಲುವೇನು ಎಂಬುದನ್ನು ಬಹಿರಂಗಪಡಿಸಿ- ಲಕ್ಷ್ಮೀ ಹೆಬ್ಬಾಳ್ಕರ್ - Lakshmi Hebbalkar

author img

By ETV Bharat Karnataka Team

Published : Apr 29, 2024, 1:50 PM IST

Prajwal Revanna  Belagavi  Amit Shah  Lakshmi Hebbalkar
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

''ಹಾಸನ ವೈರಲ್​ ವಿಡಿಯೋ ಬಗ್ಗೆ ಬಿ.ವೈ. ವಿಜಯೇಂದ್ರ, ಅಮಿತ್ ಶಾ ಅವರಿಗೆ ಮೊದಲೇ ಗೊತ್ತಿತ್ತು. ಆದ್ರೂ ಬಿಜೆಪಿ ನಾಯಕರು ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡಿದ್ದಾರೆ'' ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಿಡಿಕಾರಿದರು.

ಹಾಸನ ವಿಡಿಯೋ ವಿಚಾರ: ಬಿಜೆಪಿ ರಾಜಕೀಯ ನಿಲುವೇನು ಎಂಬುದನ್ನು ಬಹಿರಂಗಪಡಿಸಿ- ಲಕ್ಷ್ಮೀ ಹೆಬ್ಬಾಳ್ಕರ್

ಬೆಳಗಾವಿ: ''ಹಾಸನ ಅಶ್ಲೀಲ ವಿಡಿಯೋ ವೈರಲ್​ ಬಗ್ಗೆ ಗೊತ್ತಿದ್ದರೂ ಸಹ ಬಿಜೆಪಿಯವರು ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡಿದ್ದಾರೆ. ಇಡೀ ರಾಜ್ಯ, ದೇಶ, ವಿಶ್ವವೇ ತಲೆ ತಗ್ಗಿಸುವ ಈ ಘಟನೆಯ ಬಗ್ಗೆ ಬಿಜೆಪಿಯವರು ತಮ್ಮ ನಿಲುವು ಸ್ಪಷ್ಟ ಪಡಿಸಬೇಕು'' ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆಗ್ರಹಿಸಿದರು.

ತಮ್ಮ ಗೃಹ ಕಚೇರಿಯಲ್ಲಿಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ''ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ವಿಡಿಯೋ ತುಣುಕುಗಳು ಹರಿದಾಡುತ್ತಿವೆ. ಇಡೀ ರಾಜ್ಯ ತಲೆ ತಗ್ಗಿಸುವ ಕೆಲಸವನ್ನು ಅವರು ಮಾಡಿದ್ದಾರೆ. ಈ ಎಲ್ಲ ವಿಚಾರಗಳನ್ನು ಮುಂಚೆಯೇ ಹಾಸನದ ಬಿಜೆಪಿ ನಾಯಕ ದೇವರಾಜಗೌಡ ಅವರು, ಮೈತ್ರಿ ಮಾಡಿಕೊಳ್ಳುವುದು ಬೇಡ, ಅವರಿಂದ ಪಕ್ಷಕ್ಕೆ ಹಾನಿಯಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ತಿಳಿಸಿದ್ದರು. ಇದೆಲ್ಲಾ ಬಿಜೆಪಿ ಅವರಿಗೆ ಮುಂಚೆಯೇ ಗೊತ್ತಿದ್ದರೂ ಕೂಡ ತಮ್ಮ ರಾಜಕೀಯ ಲಾಭಕ್ಕಾಗಿ, ಬೇಟಿ ಬಚಾವೊ- ಬೇಟಿ ಪಡಾವೊ, ನಾರಿ ಶಕ್ತಿ ನಾರಿ ಸನ್ಮಾನ್ ಎನ್ನುವ ಬಿಜೆಪಿ ನಾಯಕರು ಮೈತ್ರಿ ಮಾಡಿಕೊಂಡರು'' ಎಂದು ಆಕ್ರೋಶ ವ್ಯಕ್ತಪಡಿಸಿದರು.

''ಮೈಸೂರಿಗೆ ಅಮಿತ್ ಶಾ ಅವರು ಬಂದ ವೇಳೆ ಹಾಸನದ ಮಾಜಿ ಶಾಸಕ ಪ್ರೀತಂಗೌಡ, ಎ.ಟಿ. ರಾಮಸ್ವಾಮಿ ಅವರು ಖುದ್ದಾಗಿ ಅವರನ್ನು ಭೇಟಿಯಾಗಿ ಈ ಬಗೆಗಿನ ಎಲ್ಲ ವಿಚಾರಗಳನ್ನು ತಿಳಿಸಿದ್ದಾರೆ. ಅಮಿತ್ ಶಾ ಅವರಿಗೂ ಪ್ರಜ್ವಲ್ ರೇವಣ್ಣ ಅವರ ಬಗ್ಗೆ ಎಲ್ಲ ಮುಂಚೆಯೇ ಗೊತ್ತಿತ್ತು. ಇಷ್ಟೆಲ್ಲಾ ಆದ್ರೂ ಬಿಜೆಪಿ ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡರು'' ಎಂದು ಸಚಿವೆ ಹೆಬ್ಬಾಳ್ಕರ್​ ತೀವ್ರ ವಾಗ್ದಾಳಿ ನಡೆಸಿದರು.

ಲಕ್ಷ್ಮೀ ಹೆಬ್ಬಾಳ್ಕರ್ ತೀವ್ರ ಅಸಮಾಧಾನ: ''ಪ್ರಜ್ವಲ್ ರೇವಣ್ಣ ಅವರನ್ನು ರಕ್ಷಣೆ ಮಾಡುತ್ತಿಲ್ಲ ಎಂದಾದರೆ ಇಂಟರ್ ಪೋಲ್ ಸಹಾಯ ಪಡೆದು ಹೊರಗಿನಿಂದ ಸ್ವದೇಶಕ್ಕೆ ಕರೆಸಲಿ. ನಮಗೆ ವಿಷಯ ಗೊತ್ತಾದ ತಕ್ಷಣ ಎಸ್ಐಟಿ ರಚನೆ ಮಾಡಿದ್ದೇವೆ. ವಿಶೇಷ ನ್ಯಾಯಾಲಯ ಸ್ಥಾಪಿಸಿದ್ದೇವೆ. ನ್ಯಾಯ ಕೊಡಿಸುವ ಜವಾಬ್ದಾರಿಯನ್ನು ನಾವು ಹೊತ್ತುಕೊಂಡಿದ್ದೇವೆ. ಸಂಸದರೊಬ್ಬರು ಅಧಿಕಾರ ದಾಹ ತೋರಿಸಿ ನೂರಾರು ಮಹಿಳೆಯರ ವಿಡಿಯೋ ಮಾಡಿದ್ದಾರೆ. ಮಹಿಳೆಯರನ್ನು ಜೀವಂತವಾಗಿ ಕೊಲೆ ಮಾಡಿದ್ದಾರೆ. ಇಷ್ಟೆಲ್ಲಾ ನಡೆದ್ರೂ ಬಿಜೆಪಿಯವರು ಬಾಯಿಮುಚ್ಚಿಕೊಂಡು ಕುಳಿತುಕೊಂಡಿದ್ದಾರೆ. ಹುಬ್ಬಳ್ಳಿಯಲ್ಲಿ ಹೋರಾಟ ಮಾಡಿದವರಿಗೆ ಈ ನೂರಾರು‌ ಮಹಿಳೆಯರ ನೋವಿನ ಕೂಗು ಏಕೆ ಕೇಳುತ್ತಿಲ್ಲ? ಏಕೆ ಮೌನವಹಿಸಿದ್ದಾರೆ? ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿ ಇದನ್ನು ಖಂಡಿಸುತ್ತೇನೆ'' ಎಂದರು.

''ವಿಪಕ್ಷದ ನಾಯಕ ಆರ್. ಅಶೋಕ ಅವರನ್ನು ಮಾಧ್ಯಮಗಳು ಪ್ರಶ್ನಿಸಿದರೆ ಅದನ್ನು ಅವರ ಪಕ್ಷ ನೋಡಿಕೊಳ್ಳುತ್ತದೆ ಎಂದು ಹಾರಿಕೆ ಉತ್ತರ ನೀಡಿದ್ದಾರೆ. ಇನ್ನು ಹುಬ್ಬಳ್ಳಿ ಘಟನೆಗೆ ತೋರಿಸಿದಷ್ಟು ಆಸಕ್ತಿಯನ್ನು ಜಗದೀಶ್ ಶೆಟ್ಟರ್ ಏಕೆ ತೋರುತ್ತಿಲ್ಲ. ನನ್ನ ಬಗ್ಗೆ ಮಾತನಾಡಿದ ಸಂಜಯ್ ಪಾಟೀಲ್ ಈ ಘಟನೆ ಬಗ್ಗೆ ಮಾತನಾಡುತ್ತಿಲ್ಲ. ಉಡುಪಿಯಲ್ಲಿ ನಡೆದ ಘಟನೆ ಬಗ್ಗೆ ರಾಷ್ಟ್ರೀಯ ಮಹಿಳಾ ಆಯೋಗ ಬಂದಿತ್ತು. ಈಗ 300- 400 ವಿಡಿಯೋಗಳು ಹರದಾಡುತ್ತಿದ್ದರೂ ಅವರೆಲ್ಲಾ ಎಲ್ಲಿದ್ದಾರೆ? ಈ ಘಟನೆ ಬಗ್ಗೆ ಬಿಜೆಪಿಯವರೇ ನಿಮ್ಮ ರಾಜಕೀಯ ನಿಲುವು ಏನು ಎಂಬುದನ್ನು ಬಹಿರಂಗಪಡಿಸಬೇಕು'' ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಸವಾಲು ಹಾಕಿದರು.

ಶೋಭಾ ಕರಂದ್ಲಾಜೆ, ಸ್ಮೃತಿ ಇರಾನಿ ಎಲ್ಲಿದ್ದೀರಾ?- ಲಕ್ಷ್ಮೀ ಹೆಬ್ಬಾಳ್ಕರ್: ''ನಿನ್ನೆ ಬಂದ ಪ್ರಧಾನಿಯವರು ಕೆಲವು ಅಮಾನವೀಯ ಘಟನೆಗಳನ್ನು ಖಂಡಿಸಿದ್ದಾರೆ. ನಿಮ್ಮ ಪಕ್ಕದಲ್ಲಿ ಕುಳಿತುಕೊಳ್ಳಲು ಅವಕಾಶ ಮಾಡಿಕೊಟ್ಟ ಸಂಸದರ ಬಗ್ಗೆ ನಿಮ್ಮ ನಿಲುವು ಏನು? ನಿಮ್ಮ ನಾರಿ ಸಮ್ಮಾನ್ ಇದೇನಾ? ಮಂಡ್ಯ‌ದ ಮಗಳು ಎಂದು ಹೇಳುವ ಸುಮಲತಾ ಈಗ ಎಲ್ಲಿದ್ದಾರೆ? ಏಕೆ ಇದರ ಬಗ್ಗೆ ಮಾತನಾಡುತ್ತಿಲ್ಲ? ನನಗೆ ವಿದೇಶದಿಂದ ಫೋನ್​ಗಳು ಬರುತ್ತಿವೆ. ಬೇರೆ ಬೇರೆ ರಾಜ್ಯಗಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು ಫೋನ್ ಮಾಡಿ, ಇದರ ಬಗ್ಗೆ‌ ವಿಚಾರಿಸುತ್ತಿದ್ದಾರೆ'' ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು‌.

ಮೋದಿ ಅವರು ಮಾಂಗಲ್ಯದ ಬಗ್ಗೆ ಮಾತನಾಡಿದ್ದಾರೆ. ಸದ್ಯ ಈ ಮಹಿಳೆಯರ ಮಾಂಗಲ್ಯ ಕಸಿದುಕೊಂಡಿರುವ ಬಗ್ಗೆ ಮಾತನಾಡಿ, ''ಕುಮಾರಸ್ವಾಮಿ ನಿಮ್ಮ ಬದ್ಧತೆಯನ್ನು ನಾವು ಪ್ರಶ್ನೆ ಮಾಡಲೇಬೇಕಾಗಿದೆ. ನಮ್ಮ ಇಲಾಖೆಯಿಂದ ಇದನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ನಿನ್ನೆ ಮುಖ್ಯಮಂತ್ರಿ ಹಾಗೂ ಗೃಹ ಸಚಿವರ ಜೊತೆಗೂ ಮಾತನಾಡಿದ್ದೇವೆ. ಮಹಿಳೆಯರಿಗೆ ನ್ಯಾಯ ಒದಗಿಸಿಕೊಡುತ್ತೇವೆ. ಆದರೆ, ಬಿಜೆಪಿ ಮಹಿಳಾ ಮಣಿಗಳು ಎಲ್ಲಿದ್ದಾರೆ? ಈ ಘಟನೆ ಬಗ್ಗೆ ಏಕೆ ಧ್ಚನಿ ಎತ್ತಿಲ್ಲ? ನೊಂದವರ ಪರ ಸರ್ಕಾರ ನಿಲ್ಲುತ್ತದೆ. ಅವರಿಗೆ ಸರ್ಕಾರ ರಕ್ಷಣೆ ನೀಡುತ್ತದೆ'' ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಕಿಡಿಕಾರಿದರು.

ಇದನ್ನೂ ಓದಿ: ಕೇಂದ್ರ ಸರ್ಕಾರದ ಜೊತೆ ಸಂಘರ್ಷ ಒಳ್ಳೆಯ ಬೆಳವಣಿಗೆ ಅಲ್ಲ: ಹೆಚ್.ಡಿ. ಕುಮಾರಸ್ವಾಮಿ - HD Kumaraswamy Press Meet

ETV Bharat Logo

Copyright © 2024 Ushodaya Enterprises Pvt. Ltd., All Rights Reserved.