ಕರ್ನಾಟಕ

karnataka

ಹುಕ್ಕಾ ಬಾರ್​​, ಕ್ಯಾಸಿನೋ ಕ್ಲಬ್​​​ ಮುಚ್ಚಿಸುತ್ತೇನೆ: ನೂತನ ಶಾಸಕ ಹರೀಶ್ ಗೌಡ

By

Published : May 18, 2023, 6:03 PM IST

Updated : May 18, 2023, 10:36 PM IST

ಚಾಮರಾಜ ಕ್ಷೇತ್ರದ ನೂತನ ಕಾಂಗ್ರೆಸ್​ ಶಾಸಕ ಹರೀಶ್​​ ಗೌಡ ಅವರಿಂದು ಮೈಸೂರಿನ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

will-close-casino-club-in-mysore-new-mla-harish-gowda
ಹುಕ್ಕಾ ಬಾರ್​​, ಕ್ಯಾಸಿನೋ ಕ್ಲಬ್​​​ ಮುಚ್ಚಿಸುತ್ತೇನೆ: ನೂತನ ಶಾಸಕ ಹರೀಶ್ ಗೌಡ

ನೂತನ ಶಾಸಕ ಹರೀಶ್ ಗೌಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು

ಮೈಸೂರು:ಮೈಸೂರು ನಗರದಲ್ಲಿ ಮೂರ್ನಾಲ್ಕು ಕಡೆ ಕ್ಯಾಸಿನೊ ಕ್ಲಬ್ ನಡೆಯುತ್ತಿದ್ದು. ಬಿಜೆಪಿಯವರೇ ಈ ಪರಂಪರೆಯನ್ನು ಬೆಳೆಸುತ್ತಿದ್ದಾರೆ. ರಾಜ್ಯದಲ್ಲಿ ಕ್ಯಾಸಿನೊ ಶುರು ಮಾಡಿದ್ದೇ ಬಿಜೆಪಿಯವರು. ನಾನು ಖಂಡಿತವಾಗಿ ಕ್ಯಾಸಿನೊ ಕ್ಲಬ್​ಗಳನ್ನು ಮುಚ್ಚಿಸುತ್ತೇನೆ ಎಂದು ನೂತನ ಚಾಮರಾಜ ಕ್ಷೇತ್ರದ ಶಾಸಕ ಹರೀಶ್ ಗೌಡ ಆರೋಪಿಸಿದ್ದಾರೆ.

ಇಂದು ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಕಾಂಗ್ರೆಸ್​ನ ಚಾಮರಾಜ ಕ್ಷೇತ್ರದ ನೂತನ ಶಾಸಕ ಹರೀಶ್ ಗೌಡ, ಶಾಸಕನಾಗಿ ಆಯ್ಕೆ ಮಾಡಿದ ಕ್ಷೇತ್ರದ ಮತದಾರರಿಗೆ ಹಾಗೂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಖರ್ಗೆಯವರಿಗೆ ಅಭಿನಂದನೆ ಸಲ್ಲಿಸಿದರು. ಮೈಸೂರು ನಗರದಲ್ಲಿ ಹುಕ್ಕಾ ಬಾರ್ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ನಗರದ ಕೆಲವು ಭಾಗಗಳಲ್ಲಿ ಹುಕ್ಕಾ ಬಾರ್ ಇದೆ. ಆದರೆ, ಇದರ ಜೊತೆಗೆ ಮೈಸೂರು ನಗರದಲ್ಲಿ ಮೂರ್ನಾಲ್ಕು ಕಡೆ ಕ್ಯಾಸಿನೊ ನಡೆಯುತ್ತಿದ್ದು. ರಾಜ್ಯದಲ್ಲಿ ಬಿಜೆಪಿಯವರು ಕ್ಯಾಸಿನೊ ಪರಂಪರೆ ಬೆಳೆಸಿದ್ದಾರೆ ಎಂದು ಆರೋಪಿಸಿದರು.

ಮಾಜಿ ಮಂತ್ರಿ ಅಶ್ವಥ್ ನಾರಾಯಣ್ ಅವರು ಒಮ್ಮೆ ಕರೆ ಮಾಡಿ ನನ್ನ ಕುಟುಂಬದ ಸದಸ್ಯರು ಇಲ್ಲಿ ಕ್ಯಾಸಿನೊ ನಡೆಸುತ್ತಿದ್ದಾರೆ, ಅವರಿಗೆ ತೊಂದರೆ ಕೊಡಬೇಡ ಎಂದು ಹೇಳಿದ್ದರು ಎಂದು ಆರೋಪಿಸಿದ ಶಾಸಕರು, ರಾಜ್ಯದಲ್ಲಿ ಕಳೆದ 5 ವರ್ಷಗಳಲ್ಲಿ ಜೂಜು ಅಡ್ಡೆ ಹೆಚ್ಚಾಗಿದ್ದು, ಖಂಡಿತವಾಗಿಯೂ ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ಅವುಗಳನ್ನು ಮುಚ್ಚಿಸುವ ಕೆಲಸ ಮಾಡುತ್ತೇನೆ ಎಂದು ನೂತನ ಶಾಸಕ ಹರೀಶ್ ಗೌಡ ಹೇಳಿದರು.

ಚುನಾವಣೆಗೆ ಯಾರಿಂದಲೂ ಹಣ ಪಡೆದಿಲ್ಲ:ನನ್ನ ಕ್ಷೇತ್ರ ಕಾಂಗ್ರೆಸ್​ನ ಭದ್ರಕೋಟೆ, ಇಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮಾತ್ರ ಗೆಲ್ಲುತ್ತದೆ. ಆದರೆ ಕಳೆದ ಬಾರಿ ಗೊಂದಲದಿಂದ ಬಿಜೆಪಿ ಗೆದ್ದಿತ್ತು ಎಂದರು. ನಾನು ಪಬ್ ಹಾಗೂ ಹುಕ್ಕಾ ಬಾರ್​​ಗಳಿಂದ ಹಣ ಪಡೆದಿದ್ದೇನೆ ಎಂಬ ಮಾಜಿ ಶಾಸಕ ನಾಗೇಂದ್ರ ಹೇಳಿಕೆಗೆ ತಿರುಗೇಟು ನೀಡಿದ ಹರೀಶ್ ಗೌಡ, ನಾನು ಹುಕ್ಕಾ ಬಾರ್​​ಗಳಿಂದ ಹಣ ಪಡೆದಿದ್ದೇನೆ ಎಂಬುದು ಸುಳ್ಳು, ನಾನು ಚುನಾವಣೆಗಾಗಿ ಯಾರಿಂದಲೂ ಹಣ ಪಡೆದಿಲ್ಲ. ನನಗೆ ಪಕ್ಷ ನೀಡಿದ ಹಣದಿಂದಲೇ ಚುನಾವಣೆ ಮಾಡಿದ್ದೇನೆ.

ಯಾವ ಪಬ್, ಬಾರ್, ಹುಕ್ಕಾ ಬಾರ್​​ಗಳಿಂದ ಹಣ ಪಡೆದಿಲ್ಲ. ಇವುಗಳನ್ನು ನೂರಕ್ಕೆ ನೂರರಷ್ಟು ಮುಚ್ಚಿಸುತ್ತೇನೆ. ನನಗೆ ಮೂರು ಪಕ್ಷದ ಕಾರ್ಯಕರ್ತರು ಸಹಾಯ ಮಾಡಿ, ಬೆಂಬಲಕ್ಕೆ ನಿಂತು ಗೆಲ್ಲಿಸಿದ್ದಾರೆ ಅವರಿಗೆ ಧನ್ಯವಾದ ಎಂದರು. ಮೈಸೂರಿಗೆ ಕ್ಯಾಸಿನೊ ತಂದಿದ್ದರಿಂದ ನಮ್ಮ ಮಕ್ಕಳು ಹಾಳಾಗುತ್ತಾರೆ ಎಂದು ಆ ವೇಳೆಯಲ್ಲಿ ನಗರ ಪೋಲಿಸ್ ಆಯುಕ್ತರ ಗಮನಕ್ಕೆ ನಾನೇ ತಂದಿದ್ದೆ. ಆ ಸಮಯದಲ್ಲಿ ಪೋಲಿಸ್ ಆಯುಕ್ತರು ಕ್ಯಾಸಿನೊ ಬಂದ್ ಮಾಡುವಂತೆ ಕೆಲಸ ಮಾಡಿದ್ದರು. ಆದರೆ ಇದು ಹಿಂದಿನ ಬಿಜೆಪಿ ಶಾಸಕರಿಗೆ ಗೊತ್ತಿಲ್ಲವೇ ಎಂದು ನೂತನ ಶಾಸಕ ಹರೀಶ್ ಗೌಡ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕರಿಗೆ ತಿರುಗೇಟು ನೀಡಿದರು.

ಇದನ್ನೂ ಓದಿ:91ನೇ ಜನ್ಮದಿನದ ಸಂಭ್ರಮದಲ್ಲಿ ದೇವೇಗೌಡರು.. ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಮಾಜಿ ಪ್ರಧಾನಿ

Last Updated :May 18, 2023, 10:36 PM IST

ABOUT THE AUTHOR

...view details