ಕರ್ನಾಟಕ

karnataka

ಮೈಸೂರಿನ ಸಿಎಫ್​ಟಿಆರ್​ಐ ಆವರಣದಲ್ಲಿ ಎರಡು ಚಿರತೆ ಪ್ರತ್ಯಕ್ಷ: ಅರಣ್ಯಾಧಿಕಾರಿಗಳ ಕಾರ್ಯಾಚರಣೆ ಚುರುಕು

By

Published : Jan 4, 2023, 3:37 PM IST

ಸಿಎಫ್​​ಟಿಆರ್​ಐ ಆವರಣದಲ್ಲಿ ಚಿರತೆಗಳು ಪ್ರತ್ಯಕ್ಷ - ಅರಣ್ಯಾಧಿಕಾರಿಗಳ ಕಾರ್ಯಾಚರಣೆ ಚುರುಕು - ಸಿಎಫ್​​ಟಿಆರ್​ಐ ಆವರಣದಲ್ಲಿರುವ ಶಾಲೆಗೆ ರಜೆ ಘೋಷಣೆ.

Two leopards in Mysore
ಮೈಸೂರಿನಲ್ಲಿ ಚಿರತೆಗಳು ಪ್ರತ್ಯಕ್ಷ

ಚಿರತೆ ಕಾಣಿಸಿಕೊಂಡಿರುವ ಬಗ್ಗೆ ಭದ್ರತಾ ಸಿಬ್ಬಂದಿ ಪ್ರಭಾಕರ್​ ಮಾಹಿತಿ ನೀಡಿದರು

ಮೈಸೂರು: ನಗರದಲ್ಲಿ ನಿನ್ನೆ ತಡ ತಾತ್ರಿ ಎರಡು ಚಿರತೆಗಳು ಕಾಣಿಸಿಕೊಂಡಿದ್ದು, ಭಯದ ವಾತಾವರಣ ಸೃಷ್ಟಿಯಾಗಿದೆ. ವಿಷಯ ತಿಳಿದ ಕೂಡಲೇ ಅರಣ್ಯಾಧಿಕಾರಿಗಳು ಕಾರ್ಯಾಚರಣೆ ಆರಂಭಿಸಿದ್ದಾರೆ. ಈ ಹಿನ್ನೆಲೆ ನಗರದಲ್ಲಿ ಎಚ್ಚರಿಕೆ ವಹಿಸಲಾಗಿದ್ದು, ಹೊರಗೆ ಬರದಂತೆ ಜನರಿಗೆ ಸೂಚನೆ ನೀಡಲಾಗಿದೆ.

ಚಿರತೆ ಪ್ರತ್ಯಕ್ಷ ಘಟನೆ:ಮೈಸೂರಿನ ಹೃದಯ ಭಾಗದಲ್ಲಿರುವ ಕೇಂದ್ರೀಯ ಆಹಾರ ಸಂಶೋಧನಾ ಕೇಂದ್ರದ (Central Food Technological Research Institute) ಆವರಣದಲ್ಲಿ ಮಂಗಳವಾರ ಮಧ್ಯರಾತ್ರಿ 1 ಗಂಟೆ 30 ನಿಮಿಷ ಸಮಯದಲ್ಲಿ ಎರಡು ಚಿರತೆಗಳು ಕಾಣಿಸಿಕೊಂಡಿವೆ. ''ಚಿರತೆಗಳನ್ನು ನೋಡಿದೆ, ಭಯ ಆಯಿತು, ತಕ್ಷಣ ಚಿರತೆಗಳು ಒಳಕ್ಕೆ ಬರದ ಹಾಗೆ ಒಳಗಿದ್ದ ಎರಡು ಗೇಟ್​ಗಳನ್ನು ಹಾಕಿಕೊಂಡು ತಕ್ಷಣ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು'' ಎಂದು ಆ ಎರಡು ಚಿರತೆಗಳನ್ನು ನೋಡಿದ ಭದ್ರತಾ ಸಿಬ್ಬಂದಿ ಪ್ರಭಾಕರ್​ ಅವರು ಈಟಿವಿ ಭಾರತಗೆ ಮಾಹಿತಿ ನೀಡಿದರು.

ಭದ್ರತಾ ಸಿಬ್ಬಂದಿ ಪ್ರಭಾಕರ್​ ಮಾತನಾಡಿ, ಕಳೆದ ರಾತ್ರಿ ನನ್ನ ಪಾಳಯ ಇತ್ತು. ಗೇಟ್​ ಬಳಿ ಚಿರತೆ ಬರುತ್ತಿರುವುದನ್ನು ಗಮನಿಸಿದೆ. ಸ್ವಲ್ಪ ಭಯ ಆಯಿತು. ಎರಡೂ ಕೂಡ ದೊಡ್ಡ ಚಿರತೆಗಳೇ. ಈ ಹಿಂದೆ ಚಿರತೆಗಳನ್ನು ಈ ಪ್ರದೇಶದಲ್ಲಿ ನೋಡಿರಲಿಲ್ಲ. ಇಲ್ಲಿ ಇದೇ ಮೊದಲ ಬಾರಿ ಚಿರತೆ ಕಂಡಿದ್ದು. ಕೂಡಲೇ ಗೇಟ್​ ಬಂದ್​ ಮಾಡಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದೆ. ಇಂದು ಅರಣ್ಯಾಧಿಕಾರಿಗಳು ಕಾರ್ಯಾಚರಣೆ ಆರಂಭಿಸಿದ್ದಾರೆ. ಶಾಲೆಗೂ ರಜೆ ಕೊಡಲಾಗಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಸಿಎಫ್​​ಟಿಆರ್​ಐ ಆವರಣದಲ್ಲಿರುವ ಶಾಲೆಗೆ ರಜೆ: ಚಿರತೆಗಳಿರುವ ಹಿನ್ನೆಲೆ ಕೇಂದ್ರೀಯ ಆಹಾರ ಸಂಶೋಧನಾ ಕೇಂದ್ರದ ಆವರಣದಲ್ಲಿ ಇರುವ ಶಾಲೆಗೆ ರಜೆ ಘೋಷಿಸಲಾಗಿದೆ. ಬೆಳಗ್ಗೆ ಶಾಲೆಗೆ ಬಂದ ಮಕ್ಕಳಿಗೆ ರಜೆ ನೀಡಿ ವಾಪಸ್ ಮನೆಗೆ ಕಳುಹಿಸಲಾಗಿದೆ. ಚಿರತೆಗಳಿರುವ ಹಿನ್ನೆಲೆ ಶಾಲಾ ಆವರಣದಲ್ಲಿ ಭಯದ ವಾತಾವರಣ ಏರ್ಪಟ್ಟಿತ್ತು. ಶಾಲಾ ಮಕ್ಕಳ ಪೋಷಕರು ಕೂಡ ಭಯಭೀತರಾಗಿದ್ದರು.

ಚಿರತೆ ಸೆರೆಗೆ ಕಾರ್ಯಾಚರಣೆ: ಕೇಂದ್ರೀಯ ಆಹಾರ ಸಂಶೋಧನಾ ಕೇಂದ್ರದ ಆವರಣದಲ್ಲಿ ಚಿರತೆ ಪ್ರತ್ಯಕ್ಷವಾದ ಹಿನ್ನೆಲೆಯಲ್ಲಿ ಕೂಡಲೇ ಅಧಿಕಾರಿಗಳು ಪೊಲೀಸರಿಗೆ ಹಾಗೂ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದರು. ಬೆಳಗ್ಗೆ ಅರಣ್ಯಾಧಿಕಾರಿಗಳು ಚಿರತೆ ಸೆರೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ. 150 ಎಕರೆ ವಿಸ್ತೀರ್ಣದಲ್ಲಿ ಇರುವ ಸಿಎಫ್​ಟಿಆರ್​ಐ ಆವರಣದಲ್ಲಿ ಸುಮಾರು 50 ಎಕರೆ ಪ್ರದೇಶದ ಅರಣ್ಯವಿದೆ. ಈ ಪ್ರದೇಶದಲ್ಲಿ ನವಿಲು, ಮೊಲ, ಮುಂಗುಸಿ ಸೇರಿದಂತೆ ಹಲವು ಪ್ರಾಣಿಗಳಿದ್ದು, ಸುತ್ತ ದೊಡ್ಡ ಕಾಂಪೌಂಡ್ ಇದೆ.

ಇದನ್ನೂ ಓದಿ:ಸತತ ಮೂರು ತಿಂಗಳ ಕಾರ್ಯಾಚರಣೆ: ಕೆಆರ್​​ಎಸ್ ಬೃಂದಾವನದಲ್ಲಿ ಬೋನಿಗೆ ಬಿದ್ದ ಚಿರತೆ

ಈ ಪ್ರದೇಶದಲ್ಲಿ ಇದೇ ಮೊದಲ ಬಾರಿಗೆ ಚಿರತೆ ಕಾಣಿಸಿಕೊಂಡಿದ್ದು ಭಯದ ವಾತಾವರಣ ನಿರ್ಮಾಣವಾಗಿದೆ. ಸಿಎಫ್​​ಟಿಆರ್​ಐ ಆವರಣದಲ್ಲಿರುವ ಸಿಬ್ಬಂದಿ ಹಾಗೂ ವಸತಿ ಗೃಹದಲ್ಲಿರುವ ಕುಟುಂಬದವರು ಭಯಭೀತರಾಗಿದ್ದು, ಯಾರೂ ಕೂಡ ಹೊರಗೆ ಬರದಂತೆ ಸೂಚನೆ ನೀಡಲಾಗಿದೆ ಎಂದು ಸಿಎಫ್​​ಟಿಆರ್​ಐ ಪ್ರಭಾರಿ ನಿರ್ದೇಶಕ ಸತೀಶ್ ಮಾಹಿತಿ ನೀಡಿದರು.

ಕೆಆರ್​ಎಸ್​ ಬೃಂದಾವನದಲ್ಲಿ ಚಿರತೆ ಸೆರೆ: ಕೆಆರ್​ಎಸ್​ ಭಾಗದಲ್ಲಿ ಕಳೆದ ಮೂರು ತಿಂಗಳು ಕಾಲ ಮಂಡ್ಯ ಜನರ ನಿದ್ದೆಗೆಡಿಸಿದ್ದ ಚಿರತೆ ಇತ್ತೀಚೆಗೆ ಸೆರೆಯಾಗಿದೆ. ಕಳೆದ ಗುರುವಾರ ಬೆಳಗಿನ ಜಾವ ಅರಣ್ಯ ಇಲಾಖೆ ಇಟ್ಟಿದ್ದ ಬೋನಿನಲ್ಲಿ ಸುಮಾರು 5 ವರ್ಷದ ಹೆಣ್ಣು ಚಿರತೆ ಬಿದ್ದಿತ್ತು. ಅಕ್ಟೋಬರ್ ತಿಂಗಳಿನಲ್ಲಿ ಈ ಚಿರತೆಯು ನಾಲ್ಕು ಬಾರಿ ಕಾಣಿಸಿಕೊಂಡಿತ್ತು. ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಕಾವೇರಿ ನೀರಾವರಿ ನಿಗಮ ನವೆಂಬರ್ 6 ರಿಂದ ಸುಮಾರು ಒಂದು ತಿಂಗಳ ಕಾಲ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಿತ್ತು. ಈ ಭಾಗದಲ್ಲಿ ಇನ್ನೂ ಎರಡು ಚಿರತೆಗಳಿರುವ ಹಿನ್ನೆಲೆ ಕೆಲ ದಿನಗಳ ಕಾಲ ಬೋನ್ ಇಟ್ಟು ಮತ್ತೆ ಕಾರ್ಯಾಚರಣೆ ಮುಂದುವರೆಸುವುದಾಗಿ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ABOUT THE AUTHOR

...view details