ಕರ್ನಾಟಕ

karnataka

ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಿ ಬರಪೀಡಿತ ತಾಲೂಕುಗಳ ಘೋಷಣೆ: ಸಚಿವ ಹೆಚ್.ಸಿ ಮಹಾದೇವಪ್ಪ

By ETV Bharat Karnataka Team

Published : Sep 5, 2023, 5:32 PM IST

ರಾಜ್ಯದಲ್ಲಿ ಬರಪೀಡಿತ ಪ್ರದೇಶಗಳನ್ನು ಆಯ್ಕೆ ಮಾಡಲಾಗುತ್ತಿದ್ದು, ಕೂಲಂಕಷವಾಗಿ ಪರಿಶೀಲಿಸಿ ಬರಪೀಡಿತ ಪ್ರದೇಶಗಳ ಪಟ್ಟಿ ತಯಾರಿಸಲಾಗುವುದು ಎಂದು ಸಚಿವ ಹೆಚ್.ಸಿ ಮಹಾದೇವಪ್ಪ ಹೇಳಿಕೆ ನೀಡಿದರು.

ಸಚಿವ ಹೆಚ್.ಸಿ ಮಹಾದೇವಪ್ಪ
ಸಚಿವ ಹೆಚ್.ಸಿ ಮಹಾದೇವಪ್ಪ

ಮೈಸೂರು : ರಾಜ್ಯದಲ್ಲಿ ಬರ ಪೀಡಿತ ಪ್ರದೇಶಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಹಲವು ತಾಲೂಕುಗಳನ್ನು ಆಯ್ಕೆ ಮಾಡಲಾಗುತ್ತಿದೆ. ಮೈಸೂರು ಜಿಲ್ಲೆಯಲ್ಲಿ ಟಿ.ನರಸೀಪುರ ಮತ್ತು ಹೆಚ್​.ಡಿ ಕೋಟೆ ತಾಲೂಕುಗಳು ಬರಪೀಡಿತ ಪ್ರದೇಶಗಳು ಎಂದು ವರದಿ ಬಂದಿದೆ. ಅದನ್ನು ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ಮಾಡಲಾಗುವುದು ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹೆಚ್​.ಸಿ‌ ಮಹಾದೇವಪ್ಪ ಹೇಳಿದರು.

ಮೈಸೂರಿನಲ್ಲಿ ಮಾತನಾಡಿ ಅವರು, ಜಿಲ್ಲೆಯಲ್ಲಿ ಬರಪೀಡಿತ ತಾಲೂಕುಗಳನ್ನು ಮಾನದಂಡಗಳ ಮುಖೇನ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಮಳೆ ಪ್ರಮಾಣದ ಆಧಾರವನ್ನು ಗಮನದಲ್ಲಿರಿಸಿ ಸಚಿವ ಸಂಪುಟ ಸಭೆಯಲ್ಲಿ ಎಲ್ಲವನ್ನೂ ಕೂಲಂಕಷವಾಗಿ ಚರ್ಚೆ ಮಾಡಲಾಗುವುದು ಎಂದರು.

ದಸರಾ ಸಂಬಂಧ ನಗರದಲ್ಲಿ ಕಾಮಗಾರಿ ಕೈಗೊಳ್ಳಲು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅಗತ್ಯ ಅನುದಾನವನ್ನು ಬಿಡುಗಡೆಗೊಳಿಸುವಂತೆ ಆರ್ಥಿಕ ಇಲಾಖೆ ಸೂಚನೆ ನೀಡಿದ್ದಾರೆ. ಕಳೆದ ಬಾರಿ ನಾನು ಲೋಕೋಪಯೋಗಿ ಸಚಿವನಾಗಿದ್ದಾಗಲೇ ಮೈಸೂರಿನಲ್ಲಿ ಅನೇಕ ಗುಣಾತ್ಮಕ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗಿದೆ. ಅದರಂತೆ ದಸರಾಗೆ ಅಗತ್ಯವಿರುವ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಮಾನವ ಮತ್ತು ಪ್ರಾಣಿ ಸಂಘರ್ಷ ನಡೆಯುತ್ತಿರುವುದು ಗಮನದಲ್ಲಿದೆ. ಈ ಸಂಬಂಧ ಅರಣ್ಯ ಸಚಿವರೊಂದಿಗೆ ಚರ್ಚಿಸಲಾಗಿದೆ. ಸಂಘರ್ಷ ತಡೆಯಲು ಈಗಾಗಲೇ ಟಾಸ್ಕ್ ಫೋರ್ಸ್ ರಚಿಸಲಾಗಿದೆ. ಹೆಚ್​.ಡಿ ಕೋಟೆಯಲ್ಲಿ ಬಾಲಕನ ಮೇಲೆ ದಾಳಿ ಮಾಡಿರುವ ಹುಲಿಯನ್ನು ಹಿಡಿಯಲು ಸರ್ಕಾರ ಸೂಚನೆ ನೀಡಿದೆ. ಕಾಡಂಚಿನ ಜನರ ರಕ್ಷಣೆಗೆ ಹಾಗೂ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಮಹಾದೇವಪ್ಪ ಭರವಸೆ ನೀಡಿದರು.

ಗಜಪಡೆಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿದ ಸಚಿವರು : ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಗಜಪಡೆಗೆ ಹೆಚ್.ಸಿ ಮಹಾದೇವಪ್ಪ ಅವರು ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಸ್ವಾಗತಿಸಿದರು. ಜಿಲ್ಲಾಡಳಿತ ಮತ್ತು ಅರಮನೆ ಮಂಡಳಿಯಿಂದ ಮಂಗಳವಾರ ಅರಮನೆಯ ಜಯಮಾರ್ತಾಂಡ ದ್ವಾರದಲ್ಲಿ ಮಧ್ಯಾಹ್ನ 12.01 ರಿಂದ 12.51 ಗಂಟೆಯ ಅಭಿಜಿತ್ ಲಗ್ನದಲ್ಲಿ ಅಂಬಾರಿ ಆನೆ ಅಭಿಮನ್ಯು ನರೆತೃತ್ವದ ವಿಜಯ, ವರಲಕ್ಷ್ಮಿ, ಧನಂಜಯ, ಮಹೇಂದ್ರ, ಭೀಮ, ಗೋಪಿ, ಕಂಜನ್ ಒಳಗೊಂಡ ಗಜಪಡೆಗೆ ಪಾದಪೂಜೆ, ದ್ವಾರಪಾಲಕ ಪೂಜೆ, ಚಾಮರಸೇವೆ ಮಾಡಿ ಪುಷ್ಪಾರ್ಚನೆ ಅರ್ಪಿಸಲಾಯಿತು.

ಈ ಸಂದರ್ಭದಲ್ಲಿ ಜಾನಪದ ಕಲಾತಂಡಗಳ ನೃತ್ಯ, ಪೂರ್ಣಕುಂಭ ಸ್ವಾಗತ ಮತ್ತು ಮಂಗಳ ವಾದ್ಯ, ಪೊಲೀಸ್ ಬ್ಯಾಂಡ್ ನಿನಾದದೊಂದಿಗೆ ಜಯಮಾರ್ತಾಂಡ ದ್ವಾರದಿಂದ ಅರಮೆನೆಯ ಅಂಗಳಕ್ಕೆ ಬರಮಾಡಿಕೊಳ್ಳಲಾಯಿತು. ಅಭಿಮನ್ಯು ನೇತೃತ್ವದ ಗಜಪಡೆಯು ರಾಜಗಾಂಭೀರ್ಯದಿಂದ ಹೆಜ್ಜೆ ಹಾಕಿದವು. ಅರಮನೆ ಮುಂಬಾಗ ಸಚಿವರಾದ ಹೆಚ್.ಸಿ.ಮಹದೇವಪ್ಪ ಅವರು ಪುಷ್ಪಾರ್ಚನೆ ಮಾಡಿದರು. ನಂತರ ಗಜಪಡೆಯ ಕಾವಾಡಿಗರು ಮತ್ತು ಮಾವುತರಿಗೆ ಮೂಲಭೂತ ಸಾಮಗ್ರಿಗಳನ್ನು ವಿತರಿಸಿದರು. ದಸರಾವನ್ನು ಅತ್ಯುತ್ತಮವಾಗಿ ನಡೆಸಿಕೊಡುವಂತೆ ದಸರಾ ವಿಶೇಷ ಕರ್ತವ್ಯ ಅಧಿಕಾರಿಗಳಿಗೂ ಕೂಡ ಸಚಿವರು ತಾಂಬೂಲ ನೀಡಿದರು.

ದಸರಾವನ್ನು ಮೈಸೂರಿನ ಪರಂಪರೆ ಮತ್ತು ವಿಜಯನಗರದ ವೈಭವವನ್ನು ಪ್ರತಿಬಿಂಬಿಸುವಂತೆ ಅತ್ಯಂತ ಶಿಸ್ತುಬದ್ಧವಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸಲಾಗುವುದು. ಈ ಹಿನ್ನೆಲೆ ಜಿಲ್ಲಾಡಳಿತ, ಅರಮನೆ ಮಂಡಳಿ ಹಾಗೂ ಜಿಲ್ಲೆಯ ಪೊಲೀಸ್ ಇಲಾಖೆಗೆ ವಿಶೇಷ ಜವಾಬ್ದಾರಿ ನೀಡಲಾಗಿದೆ. ಪ್ರತಿನಿತ್ಯ ಪೊಲೀಸ್ ಬಂದೋಬಸ್ತ್‌ನಲ್ಲಿ ಗಜಪಡೆಗೆ ತಾಲೀಮು ನಡೆಯಲಿದೆ.

ದಸರಾ ಮಹೋತ್ಸವದಲ್ಲಿ ಭಾಗವಹಿಸುವ ಆನೆಗಳ ಮಾವುತರು ಹಾಗೂ ಕಾವಾಡಿಗಳು ಅವರ ಕುಟುಂಬಗಳ ವಾಸ್ತವ್ಯಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ. ಜೊತೆಗೆ ಅವರ ಮಕ್ಕಳಿಗೆ ತಾತ್ಕಾಲಿಕವಾಗಿ ಶಾಲೆ ಆರಂಭಿಸಲಾಗುವುದು. ಈ ಅವಧಿಯಲ್ಲಿ ಶಿಕ್ಷಕರನ್ನು ನೇಮಿಸಿ ಮಕ್ಕಳಿಗೆ ವಿದ್ಯಾಭ್ಯಾಸ ನೀಡಲಾಗುತ್ತದೆ. ಈ ಹಿನ್ನೆಲೆ ಅರಮನೆ ಅಂಗಳದಲ್ಲಿ 30ಕ್ಕೂ ಹೆಚ್ಚು ಸುಸಜ್ಜಿತ ಶೆಡ್ ನಿರ್ಮಾಣ ಮಾಡಲಾಗಿದೆ. ಅವರಿಗೆ ವಿಶೇಷ ಭೋಜನದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ :Mysore Dussehra: ಮೈಸೂರು ದಸರಾ ಮಹೋತ್ಸವದ ಗಜಪಡೆಗೆ ಪೂಜೆ.. ಅರಮನೆಗೆ ಅದ್ಧೂರಿ ಸ್ವಾಗತ..

ABOUT THE AUTHOR

...view details