ಕರ್ನಾಟಕ

karnataka

ಕಾವೇರಿ ವಿವಾದಕ್ಕೆ ಶಾಶ್ವತ ಪರಿಹಾರ ಹುಡುಕುವ ಕೆಲಸವಾಗಬೇಕು: ಸಂಸದೆ ಸುಮಲತಾ

By ETV Bharat Karnataka Team

Published : Oct 11, 2023, 7:35 PM IST

ಕಾವೇರಿ ನೀರು ಹಂಚಿಕೆ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕುವ ಕೆಲಸವಾಗಬೇಕು ಎಂದು ಸಂಸದೆ ಸುಮಲತಾ ಅಂಬರೀಶ್​ ಹೇಳಿದರು.

ಸಂಸದೆ ಸುಮಲತಾ ಅಂಬರೀಶ್
ಸಂಸದೆ ಸುಮಲತಾ ಅಂಬರೀಶ್

ಸಂಸದೆ ಸುಮಲತಾ ಅಂಬರೀಶ್

ಮಂಡ್ಯ :ಮತ್ತೆ 15 ದಿನಗಳ ಕಾಲ 3 ಸಾವಿರ ಕ್ಯೂಸೆಕ್ ನೀರು ಬಿಡಲು ಕಾವೇರಿ ನೀರು ನಿಯಂತ್ರಣಾ ಸಮಿತಿ ಆದೇಶಿಸಿದ ಹಿನ್ನೆಲೆಯಲ್ಲಿ ಮಂಡ್ಯದ ಕೆ.ಆರ್.ಪೇಟೆಯಲ್ಲಿಂದು ಸಂಸದೆ ಸುಮಲತಾ ಅಂಬರೀಶ್ ಪ್ರತಿಕ್ರಿಯಿಸಿದರು. ಸಮಿತಿಯ ಶಿಫಾರಸು ನಿರೀಕ್ಷಿತ. ನಮ್ಮ ಅಧಿಕಾರಿಗಳಿಗೆೆ ಯಾಕೆ ಪರಿಸ್ಥಿತಿಯನ್ನು ಸರಿಯಾಗಿ ಮನವರಿಕೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದರು.

ದೇವರ ದಯೆಯಿಂದ ಮಳೆ ಬಂದು ಕೆಆರ್​ಎಸ್​ ನೂರಡಿ ತಲುಪಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕುವ ಕೆಲಸ ಆಗಲೇಬೇಕು. ತಮಿಳುನಾಡು ಒತ್ತಡ ಹೇರುವ ಹಾಗೆ ನಮ್ಮವರು ಹೋರಾಟ ಮಾಡಬೇಕು. ಸರ್ಕಾರದ ಸಭೆಗಳಲ್ಲೂ ಭಾಗಿಯಾಗಿ ಸಲಹೆಗಳನ್ನು ಕೊಟ್ಟಿದ್ದೇವೆ. ತಮಿಳುನಾಡು, ಕರ್ನಾಟಕ ಸರ್ಕಾರ ಪರಸ್ಪರ ಕುಳಿತು ಮಾತನಾಡಬೇಕು. ಹಾಗಾದರೆ ಮಾತ್ರ ಸಮಸ್ಯೆ ಬಗೆಹರಿಸಬಹುದು. ನಮ್ಮ ಸರ್ಕಾರದ ಪ್ರಯತ್ನ ರಾಜ್ಯದ ಹಿತ ಕಾಯಲು ಸಾಕಾಗುತ್ತಿಲ್ಲ. ನೀರಿನ ವಿಚಾರವನ್ನು ನಮ್ಮ‌ ಜನರು ಭಾವನಾತ್ಮಕವಾಗಿ ತೆಗೆದುಕೊಳ್ತಾರೆ. ಆದರೆ, ನಾವು ವಾಸ್ತವಿಕವಾಗಿ ಮಾತನಾಡಬೇಕು. ನೀರು ಬಿಡಲ್ಲ ಎಂದು ಹೇಳುವ ವಾದವನ್ನು ಸುಪ್ರೀಂ ಕೋರ್ಟ್ ತಕ್ಷಣ ವಜಾ ಮಾಡಿಬಿಡುತ್ತದೆ. ಇಲ್ಲಿ ಒಂದು ಹನಿ ನೀರು ಬಿಡಲ್ಲ ಎಂದು ಹೇಳುವುದು ಸುಲಭ. ಆದರೆ ಹರಿಯುವ ನೀರನ್ನು ಬಿಡಲ್ಲ ಎಂದು ಹೇಳಲು ಆಗುವುದಿಲ್ಲ ಎಂದರು.

ಜೆಡಿಎಸ್ ಬಿಜೆಪಿ ಮೈತ್ರಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಬಿಜೆಪಿಗೆ ನನ್ನ ಬೆಂಬಲ ಕೊಟ್ಟಿದ್ದೇನೆ. ಆ ಬೆಂಬಲ‌ ಈಗಲೂ ಇದೆ. ಮುಂದೆಯೂ ಇರುತ್ತೆ ನೋಡೋಣ. ಸೀಟು ಕೊಡುವಾಗ ಪಕ್ಷ ಸ್ಥಳೀಯ ಕಾರ್ಯಕರ್ತರು ಮುಖಂಡರ ಅಭಿಪ್ರಾಯ ಸಂಗ್ರಹ ಮಾಡಬೇಕು ಎಂದು ಹೇಳಿದರು.

ಸಂಸದೆ ಸುಮಲತಾ ಅಂಬರೀಶ್ ಹೇೇಳಿಕೆ

ಚುನಾವಣೆ ಬಂದಾಗ ಕಾರ್ಯಕರ್ತರು ಮತ್ತು ಮುಖಂಡರು ಮುಖ್ಯ. ಸೀಟು ಹಂಚಿಕೆ ವಿಚಾರದಲ್ಲಿ ಎಲ್ಲರ ಅಭಿಪ್ರಾಯ ಸಂಗ್ರಹ ಮಾಡಬೇಕು. ಇಲ್ಲವಾದರೆ ವ್ಯತಿರಿಕ್ತವಾಗುವ ಸಾಧ್ಯತೆ ಇದೆ. 2019 ರ ಚುನಾವಣೆಯೇ ಇದಕ್ಕೆ ಉದಾಹರಣೆ. ಆಗ ಎಲ್ಲಾ ಕಡೆ ಜೆಡಿಎಸ್‌ನವರೇ ಇದ್ದರು. ಆದರೆ ಕಾರ್ಯಕರ್ತರ ಅಭಿಪ್ರಾಯ ತೆಗೆದುಕೊಳ್ಳದ ಕಾರಣ ವ್ಯತಿರಿಕ್ತ ಫಲಿತಾಂಶ ಬಂತು. ಹೀಗಾಗಿ ಇದನ್ನು ರಾಷ್ಟ್ರೀಯ ನಾಯಕರು ಗಂಭೀರವಾಗಿ ತೆಗೆದುಕೊಳ್ಳಬೇಕು.

ಮೈತ್ರಿ ಎನ್ನುವುದು ಬೆಂಬಲ ಅಷ್ಟೇ. ಎನ್‌ಡಿಎಯಲ್ಲಿ ಕೇವಲ ಜೆಡಿಎಸ್ ಮಾತ್ರ ಇಲ್ಲ. ಸಾಕಷ್ಟು ಪಕ್ಷಗಳಿವೆ. ಮೈತ್ರಿಯೇ ಬೇರೆ, ಸೀಟು ಹಂಚಿಕೆಯೇ ಬೇರೆ. ನನ್ನ ಸ್ಪರ್ಧೆಯ ವಿಚಾರ ಈಗಲೇ ಹೇಳಲ್ಲ. ಕೆಲವರಿಗೆ ನನ್ನ ನಿರ್ಧಾರದ ಬಗ್ಗೆ ಭಯ ಇದೆ. ಮುಂದೆ ನಿರ್ಧಾರ ಹೇಳುತ್ತೇನೆ. ಅದನ್ನು ಸಸ್ಪೆನ್ಸ್ ಆಗಿಯೇ ಇಡುತ್ತೇನೆ. ಮಂಡ್ಯ ಚುನಾವಣೆ ಅಂದ್ರೆ ಸಸ್ಪೆನ್ಸ್​ ಥ್ರಿಲ್ಲರ್ ಆಗಿಯೇ ಇರುತ್ತೆ. ಈಗಲೂ ಆ ಸಸ್ಪೆನ್ಸ್​ ಥ್ರಿಲ್ಲರ್ ಆಗಿಯೇ ಇರಲಿ. ಎಲ್ಲರ ಆಶೀರ್ವಾದ ಇದ್ದರೆ ನಾನು ಮತ್ತೆ ಮಂಡ್ಯದಿಂದ ಸ್ಪರ್ಧೆ ಮಾಡ್ತೀನಿ ಎಂದರು.

ಕಾವೇರಿ ವಿಚಾರದಲ್ಲಿ ಪಿಎಂ ಮಧ್ಯಪ್ರವೇಶಿಸಲು ಆಗಲ್ಲ ಎಂಬ ಸುಮಲತಾ ಹೇಳಿಕೆಗೆ ಸಚಿವ ಚಲುವರಾಯಸ್ವಾಮಿ ಟೀಕಿಸಿದ್ದಕ್ಕೆ, ಚಲುವಣ್ಣನ ಬಗ್ಗೆ ನನಗೆ ಗೌರವವಿದೆ. ಅವರ ಬಗ್ಗೆ ನಾನು ರಾಜಕೀಯವಾಗಿ ಮಾತನಾಡಲ್ಲ. ಕಾವೇರಿಗಾಗಿ ಅಂಬರೀಶ್​ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ರು. ಅಂದು ಕಾಂಗ್ರೆಸ್​ನಲ್ಲಿಯೇ ಸಚಿವರಾಗಿದ್ದು, ಅಂದು ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಯಾಕೆ ಮಧ್ಯಪ್ರವೇಶ ಮಾಡಲಿಲ್ಲ? ಎಂದರು.

ಇದನ್ನೂ ಓದಿ:Cauvery water dispute issue: ರೈತರ ಹಿತಕ್ಕಾಗಿ ಎರಡೂ ರಾಜ್ಯ ಕೂತು ಪರಸ್ಪರ ಮಾತನಾಡಬೇಕು.. ಸಂಸದೆ ಸುಮಲತಾ

ABOUT THE AUTHOR

...view details