ಕರ್ನಾಟಕ

karnataka

ರೋಗ ಬಾಧೆಯಿಂದ ವಾಣಿಜ್ಯ ಬೆಳೆಯಲ್ಲಿ ನಷ್ಟ : ಕಾಫಿ, ಮೆಣಸು ಫಸಲು ಕೈಸೇರಿದರೂ ಸಿಗದ ಲಾಭ

By

Published : Jan 30, 2023, 8:26 PM IST

ಅಕಾಲಿಕ ಮಳೆಯಿಂದ ಬೇಗ ಹಣ್ಣಾಗುತ್ತಿರುವ ಕಾಫಿ - ಇಳುವರಿ ಇದ್ದರೂ ಗುಣಮಟ್ಟದ ಕೊರತೆಯಿಂದ ಬೆಲೆ ಕಡಿಮೆ - ರಾಸಾಯನಿಕ ಗೊಬ್ಬರ ಮತ್ತು ಔಷಧಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ರೈತರು

Black pepper and coffee disease farmers are loss
ಕಾಫಿ, ಮೆಣಸು ಫಸಲು ಕೈಸೇರಿದರೂ ಇರದ ಲಾಭ

ರೋಗ ಬಾಧೆಯಿಂದ ವಾಣಿಜ್ಯ ಬೆಳೆಯಲ್ಲಿ ನಷ್ಟ: ರೈತರಿಗೆ ಸಂಕಷ್ಟ

ಕೊಡಗು:ವಾಣಿಜ್ಯ ಬೆಳೆ ಕರಿ ಮೆಣಸು ಮತ್ತು ಕಾಫಿ ನಂಬಿ ಜೀವನ ಕಟ್ಟಿಕೊಂಡ ಕೊಡಗು ಭಾಗದ ರೈತರು ಬೆಳೆಗೆ ರೋಗ ಬಂದು ನಷ್ಟವಾಗುತ್ತಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೆಣಸಿಗೆ ರೋಗ ಬಂದು ನಷ್ಟವಾದರೆ ಹವಮಾನ‌ ವೈಪರೀತ್ಯದಿಂದ ಕಾಫಿ ಫಸಲು ಉತ್ತಮ‌ ಗುಣಮಟ್ಟ ಇಲ್ಲದ ಕಾರಣ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ದೊರೆಯುತ್ತಿಲ್ಲ. ಬೆಳೆಗಾಗಿ ವ್ಯಯಿಸಿದ ಹಣವೂ ಸಿಗದೇ ಕೊಡಗು ಭಾಗದ ರೈತರು ಗೋಳಾಡುವ ಪರಿಸ್ಥಿತಿಗೆ ಬಂದಿದ್ದಾರೆ.

ಹೌದು, ಕೊಡಗು ಜಿಲ್ಲೆಯ ಕೆಲವು ಭಾಗದ ರೈತರು ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಗೋಣಿಕೊಪ್ಪ ಪೊನ್ನಂಪೇಟೆ ಭಾಗದಲ್ಲಿ ಕಾಫಿ, ಮೆಣಸಿಗೆ ರೋಗ ಬಂದು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ವಾಣಿಜ್ಯ ಬೆಳೆ ನಂಬಿ ಬದುಕು ಕಟ್ಟಿಕೊಂಡ ಕೊಡಗು ಭಾಗದ ರೈತರಿಗೆ ಈ ಬಾರಿ ಮೆಣಸು ಮತ್ತು ಕಾಫಿಯಿಂದ ಭಾರಿ ನಷ್ಟವಾಗಿದೆ.

5 ತಿಂಗಳು ಎಡೆಬಿಡದೇ ಸುರಿದ ಮಳೆಗೆ ಕಾಳು ಮೆಣಸಿನ ಗಿಡಗಳಿಗೆ ತಂಡಿ ಆಗಿ ರೋಗ ಹೆಚ್ಚಾಗಿದೆ. ಭೂಮಿ ಹೆಚ್ಚಾಗಿ ತಂಪಾಗಿದ್ದರಿಂದ ಮೆಣಸಿನ ಬಳ್ಳಿಯ ಎಲೆಗಳು ಹಳದಿ ರೂಪಕ್ಕೆ ತಿರುಗಿ ಉದುರಲು ಆರಂಭವಾಗಿವೆ. ಇನ್ನೇನು ಫಸಲು ಕೈ ಸೇರಬೇಕು ಎನ್ನುವಷ್ಟರಲ್ಲಿ ಸಂಪೂರ್ಣ ಬಳ್ಳಿಯೇ ಸತ್ತು ಮೆಣಸು ಉದಿರಿ ಹೋಗುತ್ತಿದೆ ಎಂದು ರೈತರು ಅಳಲನ್ನು ತೋಡಿಕೊಂಡಿದ್ದಾರೆ.

ರವಿ ಎಂಬ ಬೆಳಗಾರರು ಹೇಳುವ ಪ್ರಕಾರ "ಪ್ರತಿ ವರ್ಷ ಎಕರೆಗೆ 2 ರಿಂದ 3 ಕ್ವಿಂಟಲ್ ಮೆಣಸು ಸಿಗುತ್ತಿತ್ತು. ಆದರೆ ಈ ಬಾರಿ 1 ಕ್ವಿಂಟಲ್​ಗೂ ಕಡಿಮೆಯಾಗಿದೆ. ಗೊಬ್ಬರ ಮತ್ತು ರೋಗ ಬಾಧೆಯಿಂದ ತಪ್ಪಿಸಲು ಔಷಧಗಳಿಗೆ ಖರ್ಚು ಮಾಡಿದ ಹಣವೂ ಈ ಬಾರಿಯ ಫಸಲಿನಲ್ಲಿ ಸಿಕ್ಕಿಲ್ಲ. ಮೊದಲು ಬೆಳೆ ಇಲ್ಲದಿದ್ದರೂ ಗಿಡ ಚೆನ್ನಾಗಿತ್ತು. ಈ ಬಾರಿ ಬೆಳೆ ಜೊತೆಗೆ ಗಿಡಗಳು ಬೆಳೆವಣಿಗೆಯಾಗಿಲ್ಲ. ಮುಂದಿನ ವರ್ಷದ ಮೆಣಸಿಗೂ ಕೊರತೆ ಇದೆ. ದುರಂತ ಎಂದರೆ ಮೆಣಸಿಗೆ ಯಾವ ರೋಗ ಬಂದಿದೆ ಅಂತ ಪತ್ತೆಯಾಗುತ್ತಿಲ್ಲ. ಜಿಲ್ಲಾಡಳಿತ ಕೂಡ ಗಮನ ಹರಿಸುತ್ತಿಲ್ಲ" ಎಂದರು.

ತೋಟದಲ್ಲಿ ಮೆಣಸು ಕಾಫಿ ಎರಡನ್ನೂ ಬೆಳೆಯುವುದರಿಂದ ಒಂದಲ್ಲ ಒಂದು ರೈತನಿಗೆ ಆದಾಯ ಕೊಡುತ್ತಿತ್ತು‌. ಈ ಬಾರಿ ಎರಡು ಬೆಳೆಯೂ ನಷ್ಟವಾಗಿದೆ. ಇನ್ನು, ಕಾಫಿ ಆದರೂ ರೈತನ ಕೈ ಹಿಡಿಯುತ್ತೆ, ಆದಾಯ ಬರುತ್ತೆ ಅಂತ ನಂಬಿದ ರೈತರಿಗೆ ಕೂಡ ನಷ್ಟವಾಗಿದೆ. ಗಿಡದಲ್ಲಿ ಫಸಲು ಬಂದಿದೆ. ಆದರೆ ಕಾಫಿಬೀಜಗಳು ಸಣ್ಣದಾಗಿದ್ದು, ಮೇಲಿನ‌ ಸಿಪ್ಪೆ ದಪ್ಪವಾಗಿದೆ. ಇದರಿಂದ ತೂಕ ಕಡಿಮೆ ಬರುತ್ತಿದ್ದು, ಔಟ್ ಟರ್ನ್ ಪರೀಕ್ಷೆಯಲ್ಲಿ ಸಹ ರೈತರಿಗೆ ನಷ್ಟವಾಗುತ್ತಿದೆ ಎಂದು ಹೇಳಿದರು.

ಕಾಫಿ ಹೂ ಬಿಡುವ ಸಮಯದಲ್ಲಿ ಅಕಾಲಿಕ ಮಳೆ ಬಿದ್ದು ನಷ್ಟವಾಗಿತ್ತು. ಸಾಕಷ್ಟು ಕಾಫಿ ಬೀಜ ಗಿಡದಲ್ಲಿಯೇ ಕೊಳೆಯುತ್ತಿದೆ. ಭೂಮಿಯಲ್ಲಿ ತೇವಾಂಶ ಜಾಸ್ತಿಯಾದ ಪರಿಣಾಮ ಬೀಜಗಳು ಬಲಿಯುವ ಮುನ್ನವೇ ಉದುರಿಹೋಗುತ್ತಿದ್ದು, ಅಳಿದು ಉಳಿದ ಬೆಳೆಯಿಂದ ಆದಾಯದ ನಿರೀಕ್ಷೆಯಲ್ಲಿದ್ದು, ಬ್ಯಾಂಕ್​ನಲ್ಲಿ ಕೃಷಿಗಾಗಿ ಮಾಡಿದ ಸಾಲ ಪಾವತಿಯದ್ದೇ ಚಿಂತೆ ಆಗಿದೆ ಎಂದು ತಮ್ಮ ಸಂಕಷ್ಟದ ಬಗ್ಗೆ ಹೇಳಿಕೊಂಡರು.

2018 ಪ್ರಕೃತಿ ವಿಕೋಪ ಸಂಭವಿಸಿದ ನಂತರ ಈ ಭಾಗದಲ್ಲಿ ರೈತರು ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಬೆಳೆಗಳು ಕೈಗೆ ಸಿಕ್ಕದೆ ನಷ್ಟವಾಗುತ್ತಿದ್ದರೆ, ವರ್ಷದಿಂದ ವರ್ಷಕ್ಕೆ ಗೊಬ್ಬರ ಔಷಧಿಗಳ ಬೆಲೆ ಹೆಚ್ಚಾಗುತ್ತಿದೆ. ಬ್ಯಾಂಕ್​ನಲ್ಲಿ ಸಾಲ ತಂದು ಕೃಷಿ ಮಾಡಿದರೆ ಆದಾಯ ಮಾತ್ರ ಬರುತ್ತಿಲ್ಲ. ಪರಿಹಾರ ಅಂತ ಸರ್ಕಾರ ಕೊಡುತ್ತಿದೆ. ಆದರೆ, ಅದು ಯಾವುದಕ್ಕೂ ಸಾಲುವುದಿಲ್ಲ. ಮೆಣಸು ಮತ್ತು ಕಾಫಿ ರೋಗ ಬರುವುದನ್ನು ತಡೆಯಲು ಸಂಬಂಧ ಪಟ್ಟ ಇಲಾಖೆ ಕ್ರಮ ಕೈಗೊಂಡು ಸಂಶೋಧನೆ ನಡೆಸಿ ಪರಿಹಾರ ತಿಳಿಸಬೇಕಿದೆ. ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂದು ಬೆಳಗಾರರು ಮನವಿ ಮಾಡಿದ್ದಾರೆ.

ಇದನ್ನೂ ಓದಿ:ಕುರಿ ಸಾಕಣೆ ಮಾಡುವುದು ಹೇಗೆ, ಸರ್ಕಾರದಿಂದ ಸಿಗುವ ನೆರವು ಏನು? ಇಲ್ಲಿದೆ ಸಂಪೂರ್ಣ ಮಾಹಿತಿ

ABOUT THE AUTHOR

...view details