ETV Bharat / state

ಕುರಿ ಸಾಕಣೆ ಮಾಡುವುದು ಹೇಗೆ, ಸರ್ಕಾರದಿಂದ ಸಿಗುವ ನೆರವು ಏನು? ಇಲ್ಲಿದೆ ಸಂಪೂರ್ಣ ಮಾಹಿತಿ

author img

By

Published : Jan 30, 2023, 6:49 PM IST

ಕರ್ನಾಟಕದಲ್ಲಿ ಕುರಿ ಸಾಕಾಣಿಕೆ ಉದ್ಯಮಕ್ಕೆ ಹೆಚ್ಚಿನ ಬೇಡಿಕೆ-ರಾಜ್ಯ ಸರ್ಕಾರದಿಂದ ಗುಣಮಟ್ಟದ ಕುರಿ ಫಾರ್ಮ್​ಗಳ ಸ್ಥಾಪನೆ.

ಕುರಿ ಸಾಕಾಣಿಕೆ
ಕುರಿ ಸಾಕಾಣಿಕೆ

ಬೆಂಗಳೂರು : ರಾಜ್ಯದ ಗ್ರಾಮೀಣ ಭಾಗದಲ್ಲಿ ಕುರಿ, ಮೇಕೆ ಸಾಕಾಣಿಕೆ ಒಂದು ಮುಖ್ಯವಾದ ಆದಾಯ ತರುವ ಕಸುಬಾಗಿದೆ. ಸಾಮಾನ್ಯವಾಗಿ ಆಡು ಸಾಕಾಣಿಕೆ ಕಸುಬನ್ನು ಭೂರಹಿತ, ಹಿಂದುಳಿದ ವರ್ಗದವರು ಮತ್ತು ಬಡ ಕೃಷಿಕರು ಸಾಕಣೆ ಮಾಡುವುದನ್ನು ಕಾಣುತ್ತೇವೆ. ರಾಜ್ಯವು ತನ್ನಲ್ಲಿರುವ ವಾತಾವರಣ ಹಾಗೂ ಭೂಪ್ರದೇಶಗಳಿಂದಾಗಿ ಒಂದು ಆದರ್ಶಮಯ ಕುರಿ ಸಾಕಣೆ ಪ್ರದೇಶವಾಗಿ ಗಮನಸೆಳೆಯುತ್ತದೆ.

ಮೇಕೆ ಅಥವಾ ಕುರಿಗಳು ತಮ್ಮ ಗಡಸುತನ ಹಾಗೂ ವಾತಾವರಣಕ್ಕೆ ತ್ವರಿತವಾಗಿ ಹೊಂದಿಕೊಳ್ಳುವ ಸಾಮರ್ಥ್ಯದಿಂದಾಗಿ ವೈವಿಧ್ಯಮಯ ಪರಿಸರ ಪ್ರಭಾವವುಳ್ಳಂತಹ ಕರ್ನಾಟಕದಲ್ಲಿ ನಿರಾಯಾಸವಾಗಿ ಹೊಂದಿಕೊಳ್ಳುವಂತಹ ಪ್ರಾಣಿಗಳಾಗಿವೆ. ಕುರಿಗಳು ಇತರ ಜಾನುವಾರುಗಳಿಗೆ ಹೋಲಿಸಿದರೆ ಕಡಿಮೆ ಊಟದ ಜೊತೆಗೆ ಪ್ರತಿ ಪೌಂಡಿಗೆ ಹೆಚ್ಚು ಮಾಂಸ ಹಾಗೂ ಹಾಲು ನೀಡುವ ಪ್ರಾಣಿಗಳಾಗಿದ್ದು, ಉತ್ತಮ ಆದಾಯದ ಮೂಲವಾಗಿಯೂ ಗುರುತಿಸಿಕೊಳ್ಳುತ್ತವೆ.

ಕುರಿ ಸಾಕಣೆ ಮಾಡುವುದು ಹೇಗೆ? : ದನಗಳಿಗೆ ಬೇಕಾಗಿರುವಂತೆ ಕುರಿಗಳನ್ನು ಸಾಕಲು ಹೆಚ್ಚಿನ ಸ್ಥಳಾವಕಾಶದ ಅಗತ್ಯವೂ ಇರುವುದಿಲ್ಲ ಹಾಗೂ ದನಕರುಗಳನ್ನು ಬೆಳೆಸುವಾಗ ತಗಲುವ ವೆಚ್ಚಕ್ಕಿಂತಲೂ ಕಡಿಮೆ ವೆಚ್ಚದಲ್ಲಿ ಕುರಿ ಸಾಕಣೆ ಮಾಡಬಹುದಾಗಿದೆ. ರಾಜ್ಯದಲ್ಲಿ ಕುರಿಗಳನ್ನು ಅವುಗಳ ಮಾಂಸ, ಹಾಲು ಹಾಗೂ ತುಪ್ಪಳಕ್ಕಾಗಿ ಸಾಕಣೆ ಮಾಡಲಾಗುತ್ತದೆ. ಪ್ರದೇಶದಲ್ಲಿ ಕುರಿ ಮಾಂಸ ಅಥವಾ ಮಟನ್ ಜನಪ್ರಿಯ ಮಾಂಸ ಭಕ್ಷ್ಯವಾಗಿದ್ದು, ಸಾಕಷ್ಟು ಆರೋಗ್ಯಕರ ಪೋಷಕಾಂಶಗಳನ್ನೂ ಸಹ ಹೊಂದಿರುತ್ತದೆ. ಅಲ್ಲದೇ ಕುರಿ ಹಾಲಿನ ಉದ್ಯಮವು ಸಾಕಷ್ಟು ಪ್ರಸಿದ್ಧಿಯನ್ನು ಪಡೆದಿದ್ದು, ಅದರಿಂದ ಹಲವಾರು ವೈವಿಧ್ಯಮಯ ಡೈರಿ ಉತ್ಪನ್ನಗಳನ್ನು ಸಹ ಉತ್ಪಾದಿಸಲಾಗುತ್ತದೆ. ಹಾಗಾಗಿ ಕುರಿಗಳಿಗೆ ಸ್ಥಳೀಯವಾಗಿ ಮತ್ತು ವಿದೇಶಗಳಲ್ಲೂ ಸಾಕಷ್ಟು ಬೇಡಿಕೆಯಿದೆ.

ರಾಜ್ಯದಲ್ಲಿ ಕುರಿ ಸಾಕಣೆಯ ಸವಾಲುಗಳೇನು? : ಸಾಕಾಣಿಕೆ ಉದ್ಯಮ ಆಕರ್ಷಕವಾಗಿದ್ದರೂ ಅದರಲ್ಲಿರುವ ಅದರದ್ದೇ ಆದ ಸವಾಲು ಇರುವುದು ಸಹಜ. ಕರ್ನಾಟಕದಲ್ಲಿ ಕುರಿ ಸಾಕಾಣಿಕೆಗೆ ಸಂಬಂಧಿಸಿದಂತೆ ಇರುವ ಮುಖ್ಯ ಸವಾಲು ಎಂದರೆ ಸಾಕಲು ಯೋಗ್ಯವಾದ ಕುರಿ ತಳಿಯನ್ನು ಹುಡುಕುವುದು ಕಷ್ಟ. ಈ ಉದ್ಯಮದಲ್ಲಿ ಯಶಸ್ಸು ಪಡೆಯಲು ಉದ್ಯಮಿಗಳು ಆರೋಗ್ಯಕರವಾದ ಹಾಗೂ ಗುಣಮಟ್ಟದ ಕುರಿ ತಳಿಗಳನ್ನು ಗುರುತಿಸಬಹುದಾಗಿದೆ. ಈ ಅಂಶವನ್ನು ಗಮನದಲ್ಲಿರಿಸಿಕೊಂಡು ರಾಜ್ಯ ಸರ್ಕಾರವು ತಳಿ ಅಭಿವೃದ್ಧಿ ಕೇಂದ್ರಗಳು ಹಾಗೂ ಗುಣಮಟ್ಟದ ಕುರಿ ಫಾರ್ಮ್ ಗಳನ್ನು ಸ್ಥಾಪಿಸಿದೆ.

ಇದರ ಜೊತೆಗೆ ಸರ್ಕಾರವು ಕುರಿ ಸಾಕಾಣಿಕೆಯಲ್ಲಿ ತೊಡಗುವ ರೈತರಿಗೆ ವಿವಿಧ ಬಗೆಯ ಪ್ರೋತ್ಸಾಹದ ಬೆಂಬಲಗಳನ್ನೂ ಸಹ ಒದಗಿಸುತ್ತದೆ. ಇದು ತರಬೇತಿ ಕಾರ್ಯಕ್ರಮಗಳು, ಸಾಕಣೆ ತಂತ್ರಗಾರಿಕೆಗಳು, ಆರ್ಥಿಕ ಹಾಗೂ ತಾಂತ್ರಿಕ ನೆರವುಗಳನ್ನು ಒಳಗೊಂಡಿದೆ. ಜೊತೆಗೆ ಸರ್ಕಾರವು ರೈತರಿಗೆ ಪ್ರೋತ್ಸಾಹ ಧನ ಹಾಗೂ ಸಬ್ಸಿಡಿಗಳನ್ನು ಸಹ ನೀಡಲಾಗುತ್ತದೆ ಎಂದು ಹೆಬ್ಬಾಳದ ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಪ್ರಸ್ತುತ ಕುರಿ ಸಾಕಾಣಿಕೆ ಉದ್ಯಮವು ಒಂದು ಮಹತ್ವದ ಉದ್ಯಮವಾಗಿ ಗುರುತಿಸಿಕೊಂಡಿದೆ. ಈ ಉದ್ಯಮವು ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದಷ್ಟೇ ಅಲ್ಲದೆ ಅನೇಕ ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸುವ ಜೀವನೋಪಾಯದ ಮಾರ್ಗವಾಗಿಯೂ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ.

ಕುರಿ ಸಾಕಣೆ ಪ್ರಾರಂಭಿಸುವುದು ಹೇಗೆ? : ಈ ಉದ್ಯಮ ಆರಂಭಿಸುವುದಕ್ಕೂ ಮುನ್ನ ಈ ಕೆಳಗೆ ನೀಡಲಾದ ಅಂಶಗಳ ಬಗ್ಗೆ ಗಮನಹರಿಸುವುದು ಮಹತ್ತರವಾಗಿದೆ.

ಕುರಿಗಳ ಶೆಲ್ಟರ್ : ಕುರಿಗಳ ಮೇಲೆ ವಾತಾವರಣದ ಬದಲಾವಣೆಗಳು ಸಾಕಷ್ಟು ಪ್ರಭಾವ ಬೀರುವುದರಿಂದ ಕುರಿಗಳು ವಾಸಿಸಲು ಶೆಲ್ಟರ್ ನಿರ್ಮಾಣ ಪ್ರಮುಖವಾಗಿದೆ. ಹೀಗೆ ನಿರ್ಮಿಸಲಾಗುವ ಕುರಿಗಳ ವಾಸ ಸ್ಥಳವು ಒಣಗಿರಬೇಕು ಹಾಗೂ ಸ್ವಚ್ಛವಾಗಿರಬೇಕು. ಸಾಕಷ್ಟು ಗಾಳಿ - ಬೆಳಕು ಆಡುವಂತಿರಬೇಕು. ಇಲ್ಲಿ ಮುಖ್ಯವಾದ ವಿಷಯವೆಂದರೆ, ಅದು ಯಾವಾಗಲೂ ತೆರೆದಿರುವ ಅಥವಾ ಮುಚ್ಚಿರುವ ಸ್ಥಿತಿಯಲ್ಲಿರಬಾರದು. ಬದಲಾಗಿ ಭಾಗಶಃ ಮಾತ್ರ ಮುಚ್ಚಿರಬೇಕು. ಕುರಿ ಶೆಲ್ಟರ್ ಅಗಲವು 20 ಅಡಿ ಮೀರುವಂತಿರಬಾರದು. ಆದರೆ ಅದು ಎಷ್ಟು ಬೇಕಾದರೂ ಉದ್ದವಾಗಿರಬಹುದು. ಅಲ್ಲದೆ ಕುರಿಗಳಿಗೆ ಸದಾ ಕಾಲ ಕುಡಿಯಲು ನೀರಿನ ವ್ಯವಸ್ಥೆ ಇರಬೇಕು.

ಸಾಮಾನ್ಯವಾಗಿ ಎಲ್ಲರೂ ಉತ್ತಮ ತಳಿಯ ಕುರಿಗಳನ್ನು ಸಾಕಾಣಿಕೆ ಮಾಡಲು ಬಯಸುತ್ತಾರೆ. ಪ್ರದೇಶಗಳಿಂದ ಪ್ರದೇಶಕ್ಕೆ ತಳಿಗಳು ಬದಲಾದ ಹಾಗೆ ಅವುಗಳ ಗುಣಮಟ್ಟದಲ್ಲೂ ವ್ಯತ್ಯಾಸ ಕಂಡುಬರುತ್ತವೆ. ಹಾಗಾಗಿ ಕರ್ನಾಟಕದ ವಾತಾವರಣಕ್ಕೆ ಹೊಂದುವಂತೆ ಸೂಕ್ತವಾಗಿರುವ ತಳಿಗಳನ್ನು ಗುರುತಿಸಿ ಸಾಕುವುದು ಉತ್ತಮ. ಇದಕ್ಕಾಗಿ ಸಂಬಂಧಿಸಿದ ತಾಂತ್ರಿಕ ಅಧಿಕಾರಿಗಳಿಂದ ಸಲಹೆ ಪಡೆಯಬಹುದು. ಆರಂಭಿಕ ಹಂತದಲ್ಲಿ ಕರ್ನಾಟಕಕ್ಕೆ ಸ್ಥಳೀಯವಾಗಿರುವ ಕುರಿಗಳನ್ನು ಸಾಕುವುದು ಉತ್ತಮ.

ರಾಜ್ಯದ ವಾತಾವರಣಕ್ಕೆ ಸೂಕ್ತವಾಗಿರುವ ತಳಿಗಳು: ಮಲಬರಿ, ಸಿರೋಹಿ, ಒಸ್ಮಾನಾಬಾದಿ, ಸನ್ನೆನ್, ಡಕ್ಕಣಿ, ನಂದಿದುರ್ಗ, ಬಿದರಿ ಹಾಗೂ ಅನೇಕ ದೇಶಿ ತಳಿಗಳು ಕಂಡು ಬರುತ್ತವೆ.

ಕರ್ನಾಟಕದಲ್ಲಿ ಪ್ರಚಲಿತದಲ್ಲಿರುವ ಮುಖ್ಯ ತಳಿಗಳು ಮಧ್ಯಮ ಗಾತ್ರ ಮೈಕಟ್ಟು ಹೊಂದಿದ್ದು, ಕಪ್ಪು ಕಂದು ಅಥವಾ ಬಿಳಿ ಬಣ್ಣದ್ದಾಗಿವೆ. ಇವುಗಳ ಉತ್ಪಾದನೆ ಸಾಧಾರಣವಾಗಿದ್ದು, ಉತ್ತಮ ಮಾಂಸವನ್ನು ಕೊಡುವ ಉಭಯ ತಳಿಗಳು ಆಗಿರುತ್ತವೆ. ವಿದೇಶಿ ತಳಿಗಳಾದ ಟೋಗನ್ ಬರ್ಗ್, ಸಾನನ್ ಹಾಗೂ ಆಲೈನ್ ತಳಿಗಳಿಂದ ಸಂಕರಣಗೊಳಿಸಿ ತಳಿ ಅಭಿವೃದ್ಧಿ ಮಾಡಲು ಸಾಧ್ಯವಿದೆ.

ಗ್ರಾಮೀಣ ನೈಸರ್ಗಿಕ ವಾತಾವರಣಕ್ಕೆ ಅನುಗುಣವಾಗಿ ಆಡುಗಳಿಗೆ ಪ್ರತ್ಯೇಕವಾದ ಮನೆಗಳ ಅವಶ್ಯಕತೆ ಇರುವುದಿಲ್ಲ. ಒಂದು ಅಡಿಗೆ 1.5 ರಿಂದ 2 ಚ. ಮೀ. ಸ್ಥಳಾವಕಾಶ ಬೇಕು. ಆಡುಗಳ ವಸತಿಯಲ್ಲಿ ವಿಶೇಷವಾಗಿ ನೆಲ ಒಣದಾಗಿರಬೇಕು. ಮತ್ತು ನಿತ್ಯ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಆಡುಗಳಿಗೆ ಕುಡಿಯಲು ಸ್ವಚ್ಛ ನೀರಿನ ಸೂಕ್ತ ವ್ಯವಸ್ಥೆ ಮತ್ತು ಮೇವು ದಾಣಿ ಹಾಕಲು ಗೊದಲಿಯ ವ್ಯವಸ್ಥೆ ಮಾಡಬೇಕು.

ಆಹಾರವೇನು : ಇತ್ತೀಚಿಗೆ ಸುಧಾರಿತ ಪದ್ಧತಿಯಲ್ಲಿ ಆಡುಗಳನ್ನು ಒಂದೇ ಸ್ಥಳದಲ್ಲಿ ಕಟ್ಟಿ ಜೋಪಾನ ಮಾಡುವ ಪದ್ಧತಿ ಜನಪ್ರಿಯವಾಗಿದೆ. ಈ ಪದ್ಧತಿಯಲ್ಲಿ ಒಂದು ಆಡಿಗೆ ಕನಿಷ್ಠ 6 ಚ. ಅಡಿ ಚಾವಣಿ ಸ್ಥಳ ಮತ್ತು ಕನಿಷ್ಠ 30 ಚ. ಅಡಿ. ಚಾವಣಿ ಇಲ್ಲದ ಸ್ಥಳವನ್ನು ಅನುಕೂಲ ಮಾಡಿ ವಸತಿಯನ್ನು ಕಲ್ಪಿಸಬೇಕು. ವಿವಿಧ ಮೇವಿನ ಸೌಕರ್ಯವನ್ನು ಮಾಡಿ ಒಂದು ಆಡಿಗೆ ಕನಿಷ್ಠ 4 ರಿಂದ 6 ಕಿ.ಗ್ರಾಂ ಹಸಿರು ಮೇವು ನಿತ್ಯ ತಿನ್ನಿಸಬೇಕು. ಹಸಿರು ಮೇವಿನ ಕೊರತೆ ಇದ್ದಲ್ಲಿ ಉತ್ತಮ ಗುಣಮಟ್ಟದ 1 ಕಿ. ಗ್ರಾಂ ಒಣ ಮೇವು ತಿನ್ನಿಸಬೇಕು. ಜೊತೆಗೆ ಬೆಳವಣಿಗೆಗೆ ಅನುಕೂಲವಾಗುವಂತಹ ಕಡಿಮೆ ದರದಲ್ಲಿ ದಾಣಿ ಮಿಶ್ರಣ ಮಾಡಿ 100 ರಿಂದ 200 ಗ್ರಾಂ ತಿನ್ನಿಸಬೇಕು. ಯಾವಾಗಲೂ ಸ್ವಚ್ಛವಾದ ಮೇವಿನ ಸೌಲಭ್ಯವನ್ನು ಕಲ್ಪಿಸಬೇಕು.

ಕುರಿಸಾಕಾಣಿಕೆ ಉದ್ಯಮದ ಮಹತ್ತರ ಗುರಿ, ಕುರಿಗಳ ತೂಕವನ್ನು ಹೆಚ್ಚಿಸುವುದಾಗಿದೆ. ನೀವು ಕೊಡುವ ಆಹಾರದ ಗುಣಮಟ್ಟವು ಕುರಿಗಳ ಒಟ್ಟಾರೆ ಬೆಳವಣಿಗೆ ಹಾಗೂ ಅವು ಪಡೆಯುವಂತಹ ತೂಕವನ್ನು ಪ್ರಭಾವಿಸುತ್ತದೆ. ಇದಕ್ಕೆ ನೀಡಲಾಗುವ ಆಹಾರವು ಸಾಕಷ್ಟು ಹಸಿರು, ಒಣ ಹಾಗೂ ಪೊಷಕಾಂಶಯುಕ್ತವಾಗಿರಬೇಕು.

ಕುರಿಗಳ ನಿರ್ವಹಣೆ ಮತ್ತು ಆರೈಕೆ : ಶೆಲ್ಟರ್ ಅನ್ನು ನಿರ್ಮಿಸಿ ಕುರಿಗಳನ್ನು ಸಾಕಿಕೊಂಡು ಹೋದರಾಯಿತು ಎನ್ನುವಷ್ಟು ಸುಲಭದ ಮಾತಲ್ಲ ಇದು. ಕುರಿಗಳ ನಿರ್ವಹಣೆ ಹಾಗೂ ಅವುಗಳ ಆರೈಕೆಯು ಈ ಉದ್ಯಮದಲ್ಲಿ ಗಮನಾರ್ಹವಾಗಿ ನಿರ್ವಹಿಸಬೇಕಾದ ಜವಾಬ್ದಾರಿಯಾಗಿದೆ. ಕುರಿಗಳು ಒಣ ಪ್ರದೇಶದಲ್ಲಿ ಹೆಚ್ಚಾಗಿ ಇರ ಬಯಸುತ್ತವೆ. ಹಾಗಾಗಿ ಅವು ಇರುವ ಪ್ರದೇಶ ಡ್ರೈ ಆಗಿರುವುದಲ್ಲದೆ ಸ್ವಚ್ಛ ಹಾಗೂ ಹೈಜೆನಿಕ್ ಆಗಿರುವಂತೆ ನೋಡಿಕೊಳ್ಳಬೇಕಾಗುತ್ತದೆ.

ಇನ್ನು ಕುರಿ, ಮೇಕೆ, ಕೋಳಿ, ಪಶು ಆಹಾರ ಮತ್ತು ಮೇವು ಅಭಿವೃದ್ಧಿಯಲ್ಲಿ ಗ್ರಾಮೀಣ ಯುವಕರನ್ನು ಸ್ವಯಂ ಸಕ್ರಿಯಗೊಳಿಸುವುದು ಹಾಗೂ ಈ ಕ್ಷೇತ್ರದಲ್ಲಿ ಉದ್ಯಮಶೀಲರನ್ನು ಪ್ರೋತ್ಸಾಹಿಸುವ ಹಿನ್ನಲೆ ಕೇಂದ್ರ ಸರ್ಕಾರ ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆ ಜಾರಿಗೊಳಿಸಿದ್ದು, ಈ ಯೋಜನೆಯ 2021-22 ನೇ ಸಾಲಿನಿಂದ 2025-26 ನೇ ಸಾಲಿನವರೆಗೆ ಜಾರಿಯಲ್ಲಿರುತ್ತದೆ. ಈ ಯೋಜನೆ ಅನುಷ್ಠಾನ ಜಾರಿಗೆ ಮೂಲ ಬಂಡವಾಳದಲ್ಲಿ ಶೇ. 50 ರಷ್ಟು ಸಹಾಯಧನವನ್ನು ಎರಡು ಕಂತುಗಳ ರೂಪದಲ್ಲಿ ಫಲಾನುಭವಿಗಳಿಗೆ ನೀಡಲಾಗುತ್ತದೆ.

ದೇಶಿಯ ಆಡುಗಳು ಬೇರೆ ಬೇರೆ ಪರಿಸರ ಹಾಗೂ ವಾತಾವರಣಗಳಿಗೆ ಹೊಂದಿಕೊಳ್ಳುವ ಗುಣ ಪಡೆದಿರುತ್ತವೆ. ಹೆಣ್ಣು ಆಡು ಒಂದು ವರ್ಷ ವಯಸ್ಸಿನಲ್ಲಿ ಗರ್ಭ ಧರಿಸಬಹುದು. ಒಂದು ಉತ್ತಮ ಆಡು 6 ರಿಂದ 8 ವರ್ಷಗಳವರೆಗೆ ಮರಿಗಳನ್ನು ಹಾಕಬಹುದು. ಮತ್ತು ಹಾಲನ್ನು ಕೊಡಬಲ್ಲದು. ನಮ್ಮ ದೇಶಿ ಆಡು ಒಂದು ಸೂಲಿನಲ್ಲಿ ಸುಮಾರು 60-90 ಕಿ.ಗ್ರಾಂ ಹಾಲು ಅಲ್ಲದೆ, ಉತ್ತಮ ಗುಣಮಟ್ಟದ ಮಾಂಸವನ್ನು ಕೊಡುತ್ತವೆ. ಆದ್ದರಿಂದಲೇ ಅದನ್ನು ಬಡವರ ಕಾಮಧೇನು ಎಂದು ಹೇಳಲಾಗುತ್ತದೆ.

ಪ್ರಯೋಜನಗಳೇನು : ಆಡು ಸಾಕಾಣಿಕೆಯನ್ನು ಒಂದು ಮುಖ್ಯ ಇಲ್ಲವೇ ಉಪಕಸುಬನ್ನಾಗಿ ರೈತರು, ಭೂಹೀನರು, ರೈತ ಕಾರ್ಮಿಕರು ಗ್ರಾಮೀಣ ನಿರುದ್ಯೋಗಿ ಯುವಕರು ಇಲ್ಲವೇ ಇತರ ಉದ್ಯೋಗಸ್ಥರು ಅಳವಡಿಸಿಕೊಳ್ಳಬಹುದು. ಆಡು ಸಾಕಾಣಿಕೆಗೆ ಹೆಚ್ಚು ಹಣ ತೊಡಗಿಸಬೇಕಾಗಿಲ್ಲ. ಆಡುಗಳನ್ನು ಸಾಕಲು ಹೆಚ್ಚು ವೆಚ್ಚದ ಕಟ್ಟಡ ಮತ್ತು ಸಲಕರಣೆಗಳು ಬೇಕಾಗಿಲ್ಲ. ಆಡುಗಳು 15 ರಿಂದ 17 ತಿಂಗಳ ವಯಸ್ಸಿನಲ್ಲಿ ಹಾಲು ಕೊಡಲು ಪ್ರಾರಂಭಿಸುತ್ತವೆ.

ಮಾಂಸದ ಸಲುವಾಗಿ 5 ರಿಂದ 6 ತಿಂಗಳಲ್ಲಿ ಬೆಳೆದು ತಯಾರಾಗುತ್ತವೆ ಹಾಗೂ ತ್ವರಿತವಾಗಿ ಸಂತಾನೋತ್ಪತ್ತಿ ಮಾಡುತ್ತವೆ. (ಎರಡು ವರ್ಷಕ್ಕೆ ಮೂರು ಸಲ) ಪ್ರತಿ ಸೂಲಕ್ಕೆ 1 ರಿಂದ 2 ಮರಿ ಹಾಕುತ್ತವೆ. ಆಡುಗಳು ಆಹಾರ ಸೇವಿಸುವ ಪ್ರಮಾಣ ಕಡಿಮೆ ಇರುತ್ತದೆ. ಒಂದು ಆಕಳು ತಿನ್ನುವ ಆಹಾರದಲ್ಲಿ 3 ಆಡುಗಳನ್ನು ಸಾಕಬಹುದು. ಆಡಿನ ಹಾಲು ಆರೋಗ್ಯಕ್ಕೆ ಮತ್ತು ಔಷಧಿಗೆ ಬಹಳ ಸೂಕ್ತವಾಗಿರುತ್ತದೆ. ಆಡಿನ ಗೊಬ್ಬರ, ಮೂತ್ರ ಭೂಮಿಗೆ ಮತ್ತು ಸಾವಯವ ಕೃಷಿ ಪದ್ಧತಿಯಲ್ಲಿ ಬಹಳ ಬೇಡಿಕೆ ಇದೆ. ಆಡುಗಳ ಸಾಕಾಣಿಕೆಯಿಂದ ವರ್ಷವಿಡೀ ಕೆಲಸ ಮತ್ತು ಆದಾಯವನ್ನು ಪಡೆಯಬಹುದು ಎಂದು ಕೃಷಿ ತಜ್ಞರು ಹೇಳಿದ್ದಾರೆ.

ಓದಿ : 11 ವರ್ಷಗಳ ಬಳಿಕ ಹಕ್ಕಿ ಗಣತಿ: ಬಿಳಿಗಿರಿ ಬನದಲ್ಲಿ 274 ಪಕ್ಷಿ ಗುರುತು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.