ಕರ್ನಾಟಕ

karnataka

ಕಲ್ಯಾಣ ಕರ್ನಾಟಕದಲ್ಲಿ ಸಿಎಂ ಬೊಮ್ಮಾಯಿ ಮಿಂಚಿನ ಸಂಚಾರ: ಕಮಲದ ಕಲಿಗಳ ಪರ ಬಿರುಸಿನ ಪ್ರಚಾರ

By

Published : Apr 21, 2023, 8:51 AM IST

ಸಿಎಂ ಬಸವರಾಜ​ ಬೊಮ್ಮಾಯಿ ಬೀದರ್, ಕಲಬುರಗಿಯಲ್ಲಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿ ಮತಯಾಚನೆ ಮಾಡಿದ್ದಾರೆ.

ಸಿಎಂ ಬೊಮ್ಮಾಯಿ ಮತಯಾಚನೆ
ಸಿಎಂ ಬೊಮ್ಮಾಯಿ ಮತಯಾಚನೆ

ಕಲಬುರಗಿ:ರಾಜ್ಯದಲ್ಲಿ 2023ರ ವಿಧಾನಸಭೆ ಚುನಾವಣೆ ಕುರುಕ್ಷೇತ್ರ ಅಖಾಡ ರಂಗೇರಿದೆ‌. ಆಡಳಿತಾರೂಢ ಬಿಜೆಪಿ ಪಕ್ಷ ಎಲೆಕ್ಷನ್​ನಲ್ಲಿ ದಿಗ್ವಿಜಯ ಸಾಧಿಸಲು ಅಬ್ಬರದ ಪ್ರಚಾರ ನಡೆಸಿದೆ. ಅದರಲ್ಲೂ ಸಿಎಂ ಬಸವರಾಜ ಬೊಮ್ಮಾಯಿ ರಾಜ್ಯದಲ್ಲಿ ಮಿಂಚಿನ ಸಂಚಾರ ನಡೆಸುತ್ತ ಅಭ್ಯರ್ಥಿಗಳ ಪರ ಮತ ಬೇಟೆ ನಡೆಸ್ತಿದ್ದಾರೆ. ಕಲ್ಯಾಣ ಕರ್ನಾಟಕದ ಬೀದರ್, ಕಲಬುರಗಿಯಲ್ಲಿ ಗುರುವಾರ ಸಿಎಂ ಪ್ರಚಾರ ನಡೆಸುತ್ತ ಎದುರಾಳಿಗಳ ವಿರುದ್ಧ ಅಬ್ಬರಿಸಿದ್ದಾರೆ.

ಕಲಬುರಗಿ ಜಿಲ್ಲೆಯ ಅಫಜಲಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಲೀಕಯ್ಯ ಗುತ್ತೇದಾರ್ ಪರ ಸಿಎಂ ಬೊಮ್ಮಾಯಿ ಅಬ್ಬರದ ಪ್ರಚಾರ ನಡೆಸಿದರು. ನಾಮಪತ್ರ ಸಲ್ಲಿಕೆ ಹಿನ್ನೆಲೆ ನಗರದ ಶೆಟ್ಟಿ ಫಂಕ್ಷನ್ ಹಾಲ್​ನಲ್ಲಿ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಭಾಗಿಯಾದ ಸಿಎಂ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಭಿವೃದ್ಧಿ ಕೆಲಸಗಳು ಮತ್ತು ಮೀಸಲಾತಿ ಹೆಚ್ಚಳ ಮುಂದಿಟ್ಟು ಬಿಜೆಪಿಗೆ ಆಶೀರ್ವಾದ ಮಾಡುವಂತೆ ಮನವಿ ಮಾಡಿದ್ರು. ಸಿದ್ದರಾಮಯ್ಯ ಸರ್ಕಾರದ ಆಡಳಿತ ಮತ್ತು ಕಾಂಗ್ರೆಸ್ ವಿರುದ್ಧ ಸಿಎಂ ಗುಡುಗಿದ್ರು. ಕಾಂಗ್ರೆಸ್ ಮೀಸಲಾತಿ ಹೆಚ್ಚಳ ವಿಚಾರದಲ್ಲಿ ಜೇನುಗೂಡಿಗೆ ಕೈ ಹಾಕಬೇಡಿ ಅಂದ್ರು ಜೇನು ಹುಳ ಕಚ್ಚಿಸಿಕೊಂಡು ಜೇನಿನ ಸಿಹಿ ಕೊಟ್ಟಿದ್ದೇನೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಮೀಸಲಾತಿ ಹೆಚ್ಚಳ ರದ್ದು ಮಾಡ್ತೇವೆ ಅಂತಾ ಹೇಳ್ತಿದ್ದಾರೆ. ಮೀಸಲಾತಿ ಹೆಚ್ಚಳ ರದ್ದತಿಗೆ ಕೈ ಹಾಕಿದ್ರೆ ಸಾಮಾಜಿಕ ಕ್ರಾಂತಿ ಆಗುತ್ತೆ ಅಂತಾ ಕಾಂಗ್ರೆಸ್​ಗೆ ಬೊಮ್ಮಾಯಿ ಖಡಕ್ ಎಚ್ಚರಿಕೆ ಕೊಟ್ರು.

ಇನ್ನು ಮಾತೇತ್ತಿದ್ರೆ ಸಾಮಾಜಿಕ ನ್ಯಾಯದ ಬಗ್ಗೆ ಮಾತಾಡುವ ಸಿದ್ದರಾಮಯ್ಯ ಯಾರಿಗೆ ಸಾಮಾಜಿಕ ನ್ಯಾಯ ಕೊಟ್ಟಿದ್ದಾರೆ?, ಅಲ್ಪಸಂಖ್ಯಾತ, ಹಿಂದುಳಿದ ದೀನ ದಲಿತರನ್ನ ವೋಟ್ ಬ್ಯಾಂಕ್ ಆಗಿ ಬಳಸಿಕೊಂಡರೇ ವಿನಹ ಅವರ ಉದ್ದಾರ ಮಾಡಿಲ್ಲ. ಕಾಂಗ್ರೆಸ್​ಗೆ ಒಂದೂ ವೋಟ್ ಕೊಡಬಾರದು. ಕರ್ನಾಟಕದಲ್ಲಿ ಬಿಜೆಪಿ ಗಾಳಿ ಬೀಸುತ್ತಿದೆ. ಅಫಜಲಪುರ ಹುಲಿ ಮಾಲೀಕಯ್ಯರನ್ನು ಗೆಲ್ಲಿಸಿ ಅಂತಾ ಕ್ಷೇತ್ರದ ಮತದಾರರಲ್ಲಿ ಸಿಎಂ ಮನವಿ ಮಾಡಿದ್ರು.

ಸಮಾವೇಶಕ್ಕೂ ಮುನ್ನ ಅಫಜಲಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಲೀಕಯ್ಯ ಗುತ್ತೇದಾರ್ ಸಾವಿರಾರು ಬೆಂಬಲಿಗರೊಂದಿಗೆ ಬೃಹತ್ ರೋಡ್ ಶೋ ನಡೆಸಿ ಶಕ್ತಿ ಪ್ರದರ್ಶನ ಮಾಡಿ ಉಮೇದುವಾರಿಕೆ ಸಲ್ಲಿಸಿದ್ರು. ಸಮಾವೇಶದಲ್ಲಿ ಮಾತಾಡಿದ ಮಾಲೀಕಯ್ಯ, ನಮ್ಮಲ್ಲಿ ಕೆಲವು ತುಕಡಿ ತುಕಡಿ ಗ್ಯಾಂಗ್ ಇವೆ. ಬ್ಲಾಕ್ ಮೇಲ್ ಮಾಡಿ ನಮ್ಮ ಮನೆ ಒಡೆಯುವ ಕೆಲಸ ಮಾಡುತ್ತಿದ್ದಾರೆ. ನನ್ನ ತಮ್ಮನ ತಲೆ ಕೆಡಿಸಿ ಚುನಾವಣೆಗೆ ನಿಲ್ಲಿಸಿದ್ದಾರೆ ಎಂದು ನಿತೀನ್ ಬೆಂಬಲಿಗರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಅಲ್ಲದೆ ಆರು ಬಾರಿ ಶಾಸಕನಾಗಿ ಕ್ಷೇತ್ರದಲ್ಲಿ ನೀರಾವರಿ ಯೋಜನೆ, ಹಸಿರು ಕ್ರಾಂತಿ ಮಾಡಿದ್ದೇನೆ. ಸಮಗ್ರ ಅಫಜಲಪುರ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ‌. ಮತ್ತೆ ನಿಮ್ಮ ಮುಂದೆ ಬಂದಿದ್ದೇನೆ, ಬಿಜೆಪಿ ಪಕ್ಷ ನನ್ನನ್ನ ಅಭ್ಯರ್ಥಿ ಮಾಡಿ ನಿಮ್ಮ ಉಡಿಗೆ ಹಾಕಿದೆ. ಆಶೀರ್ವಾದ ಮಾಡಿ ಅಂತಾ ಕ್ಷೇತ್ರದ ಮತದಾರರಲ್ಲಿ ಮಾಲೀಕಯ್ಯ ಗುತ್ತೇದಾರ್ ಮತಯಾಚನೆ ಮಾಡಿದ್ರು.

ಇದಕ್ಕೂ ಮುನ್ನ ಸಿಎಂ ಬೊಮ್ಮಾಯಿ, ಬಸವಣ್ಣನ ಕರ್ಮಭೂಮಿ ಬೀದರ್ ಜಿಲ್ಲೆಯ ಭಾಲ್ಕಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಕಾಶ ಖಂಡ್ರೆ ಮತ್ತು ಹುಮನಾಬಾದ್ ಕ್ಷೇತ್ರದ ಕಮಲ ಪಕ್ಷದ ಅಭ್ಯರ್ಥಿ ಸಿದ್ದು ಪಾಟೀಲ್ ನಾಮಪತ್ರ ಸಲ್ಲಿಕೆಯಲ್ಲಿ ಭಾಗಿಯಾಗಿ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿದ್ರು.

ಇದನ್ನೂಓದಿ:ಬಿಜೆಪಿ ಕುತಂತ್ರದಿಂದ 5 ಸಾವಿರ ಜನರಿಂದ ನನ್ನ ಆಸ್ತಿ ಪತ್ರ ಡೌನ್​ಲೋಡ್: ಡಿಕೆಶಿ

ABOUT THE AUTHOR

...view details