ಕರ್ನಾಟಕ

karnataka

ಕಾಂಗ್ರೆಸ್​ ಹೇಳುವುದು ಜಾತ್ಯತೀತವಾದ, ಮಾಡುವುದು ಹಿಂದೂ ವಿರೋಧಿ : ಮಾಜಿ ಸಚಿವ ಈಶ್ವರಪ್ಪ

By

Published : Jun 24, 2023, 6:52 PM IST

Updated : Jun 24, 2023, 7:27 PM IST

ಮೋಸದಿಂದ ರಾಜ್ಯದಲ್ಲಿ ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದಿದೆ. ಈ ಬಗ್ಗೆ ಕಾಂಗ್ರೆಸ್​ ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಮಾಜಿ ಸಚಿವ ಕೆ ಎಸ್​ ಈಶ್ವರಪ್ಪ ಹೇಳಿದ್ದಾರೆ.

former-minister-ks-eshwarappa-slams-congress
ಕಾಂಗ್ರೆಸ್​ ಹೇಳುವುದು ಜಾತ್ಯತೀತವಾದ, ಮಾಡುವುದು ಹಿಂದೂ ವಿರೋಧಿ : ಮಾಜಿ ಸಚಿವ ಈಶ್ವರಪ್ಪ

ಕಾಂಗ್ರೆಸ್​ ಹೇಳುವುದು ಜಾತ್ಯತೀತವಾದ, ಮಾಡುವುದು ಹಿಂದೂ ವಿರೋಧಿ : ಮಾಜಿ ಸಚಿವ ಈಶ್ವರಪ್ಪ

ಹಾವೇರಿ: ಕಾಂಗ್ರೆಸ್​​ ಹೇಳುವುದು ಜಾತ್ಯತೀತವಾದ. ಮಾಡುವುದು ಹಿಂದೂ ವಿರೋಧಿ ನೀತಿ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಲವಂತದ ಮತಾಂತರ ನಿಷೇಧ ಮತ್ತು ಗೋಹತ್ಯೆ ನಿಷೇಧ ಕಾಯ್ದೆಯನ್ನು ನಾವು ತಂದಿದ್ದೆವು. ಕಾಂಗ್ರೆಸ್ ಸರ್ಕಾರ ಇದೀಗ ಅವುಗಳನ್ನು ವಾಪಸ್ ಪಡೆಯಲು ಮುಂದಾಗಿದೆ. ಈ ಮೂಲಕ ಮುಸ್ಲಿಮರನ್ನು ಸಂತೃಪ್ತಿಗೊಳಿಸಲು ಸಜ್ಜಾಗಿದೆ ಎಂದು ಈಶ್ವರಪ್ಪ ಆರೋಪಿಸಿದರು.

ಕಾಂಗ್ರೆಸ್ ಆರ್ಟಿಕಲ್​​ 370 ಜಾರಿ ಆಗಬಾರದು ಅಂದುಕೊಂಡಿತ್ತು. ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಬಾರದು ಎಂದಿತ್ತು. ಆದರೆ ಇವುಗಳಲ್ಲಿ ಕಾಂಗ್ರೆಸ್‌ಗೆ ನಿರಾಸೆಯಾಗಿದೆ. ದೇಶದಲ್ಲಿ ಮೊಗಲರ ಕಾಲದಲ್ಲಿ ಯಾವ ಯಾವ ದೇವಸ್ಥಾನಗಳನ್ನು ಧ್ವಂಸ ಮಾಡಿ ಮಸೀದಿ ಕಟ್ಟಿದ್ದಾರೋ ಅಲ್ಲೆಲ್ಲ ಮತ್ತೆ ದೇವಸ್ಥಾನ ಕಟ್ಟುತ್ತೇವೆ. ಕಾಶಿ ವಿಶ್ವನಾಥ್ ದೇವಸ್ಥಾನ, ಮಥುರಾದಲ್ಲಿ ಶ್ರೀಕೃಷ್ಣನ ದೇವಾಲಯ ನಿರ್ಮಿಸುತ್ತೇವೆ. ಆದರೆ ಹೊಸದಾಗಿ ಕಟ್ಟಿಸಿದ ಮಸೀದಿಗಳನ್ನು ತೆರವುಗೊಳಿಸುವುದಿಲ್ಲ ಎಂದು ಹೇಳಿದರು.

ಮೋಸದಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಂದು ಜನರು ಪರಿತಪಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಎಷ್ಟು ದಿನ ಇರುತ್ತದೆ ಗೊತ್ತಿಲ್ಲ. ಈ ಯೋಜನೆಗಳಿಗೆ ಸಿಎಂ ಸಿದ್ದರಾಮಯ್ಯ ಎಲ್ಲಿಂದ ಹಣ ತರುತ್ತಾರೆ ಎಂಬುದನ್ನು ಬಹಿರಂಗಪಡಿಸಬೇಕು ಎಂದರು. ನಮಗೆ ಚುನಾವಣೆಯಲ್ಲಿ ಸೋಲಾಗಿದೆ. ಆದರೆ ಜನರೆ ಇದೀಗ ಕಾಂಗ್ರೆಸ್ ನಮಗೆ ಮೋಸ ಮಾಡಿದೆ ಎಂದು ಹೇಳುತ್ತಿದ್ದಾರೆ. ಚುನಾವಣೆಯ ಸೋಲುಗಳು ಬಿಜೆಪಿಗೆ ಹೊಸದಲ್ಲ. ಮುಂಬರುವ ಚುನಾವಣೆಯಲ್ಲಿ ನಾವು ಗೆಲ್ಲುತ್ತೇವೆ. ವಿಧಾನಸಭೆಯಲ್ಲಿ ಸೋತಿರುವುದು ಕೆಟ್ಟ ಕನಸು ಎಂದು ಮರೆತಿದ್ದೇವೆ. ಅದನ್ನು ಪುನಃ ಪುನಃ ನೆನಪು ಮಾಡಬೇಡಿ ಎಂದು ಈಶ್ವರಪ್ಪ ತಿಳಿಸಿದರು.

ಕಾಂಗ್ರೆಸ್ ಸ್ವಾರ್ಥಿಗಳ ಕೂಟ. ಆದರೆ ಬಿಜೆಪಿ ಆ ರೀತಿಯ ಪಕ್ಷವಲ್ಲ. ಕಾಂಗ್ರೆಸ್ ನೇರವಾಗಿ ಮತದಾರನ ಬಳಿ ಕ್ಷಮೆ ಕೇಳಬೇಕು. ಕಾಂಗ್ರೆಸ್​ ಜನರಿಗೆ ಟೋಪಿ ಹಾಕಿದ್ದೇವೆ ಎಂದು ಒಪ್ಪಿಕೊಳ್ಳಲಿ. ಕೇಂದ್ರ ಸರ್ಕಾರವು ರಾಜ್ಯಕ್ಕೆ ಐದು ಕೆಜಿ ಅಕ್ಕಿ ವಿತರಿಸುತ್ತಿದೆ. ಕಾಂಗ್ರೆಸ್ ಯಾವಾಗಲಾದರೂ ಪ್ರಧಾನಿಗೆ ಅಭಿನಂದನೆ ಸಲ್ಲಿಸಿದೆಯಾ ಎಂದು ಈಶ್ವರಪ್ಪ ಪ್ರಶ್ನಿಸಿದರು. ತಾವು ಮೋಸ ಮಾಡಿದ ಮೇಲೆ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಾರೆ ಎಂದು ಟೀಕಿಸಿದರು.

ಪ್ರಧಾನಿ ಮೋದಿ ವಿರುದ್ಧ ಕಳೆದ ಬಾರಿ ಎಲ್ಲ ಪ್ರತಿಪಕ್ಷಗಳು ಒಗ್ಗಟ್ಟು ಪ್ರದರ್ಶಿಸಿದರು. ಈ ಬಾರಿ ಪಾಂಡವರ ವಿರುದ್ಧ ಕೌರವರು ಒಗ್ಗಟ್ಟು ಪ್ರದರ್ಶಿಸಿದಂತೆ ಪ್ರತಿಪಕ್ಷಗಳು ಒಟ್ಟಾಗಿವೆ. ಆದರೆ ಪ್ರಧಾನಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದರಲ್ಲಿ ಎರಡು ಮಾತಿಲ್ಲ ಎಂದರು.

ನಮ್ಮ ಮಗ ಕಾಂತೇಶ್ ಲೋಕಸಭೆ ಚುನಾವಣೆಯಲ್ಲಿ ಹಾವೇರಿಯಿಂದ ಸ್ಪರ್ಧಿಸುವಂತೆ ಒತ್ತಾಯ ಕೇಳಿಬಂದಿದೆ. ಅದಕ್ಕೆ ಕೇಂದ್ರ ನಾಯಕರು ಮತ್ತು ರಾಜ್ಯದ ನಾಯಕರು ಯಾವ ತೀರ್ಮಾನ ಕೈಗೊಳ್ಳುತ್ತಾರೆ ಎಂಬುದನ್ನು ನೋಡಬೇಕು. ಈ ಕುರಿತಂತೆ ಹಾವೇರಿ ಸಂಸದ ಶಿವಕುಮಾರ್ ಉದಾಸಿ ತಾವು ವೈಯಕ್ತಿಕ ಕಾರಣದಿಂದ ಸ್ಪರ್ಧಿಸುವುದಿಲ್ಲ ಎಂದು ತಿಳಿಸಿದ್ದಾರೆ ಎಂದರು.

ಬಿಜೆಪಿಯಲ್ಲಿರುವ ಎಲ್ಲರೂ ಹಿಂದುತ್ವವಾದಿಗಳು. ಸಿದ್ದರಾಮಯ್ಯ ಹಿಂದುಳಿದವರ ದಲಿತರಿಗೆ ಅನ್ಯಾಯ ಮಾಡಿ ಸಿಎಂ ಆಗಿದ್ದಾರೆ ಎಂದು ಈಶ್ವರಪ್ಪ ಆರೋಪಿಸಿದರು. ಕಾಂಗ್ರೆಸ್‌ನವರಿಗೆ ಹಿಂದು ಧರ್ಮದ ಬಗ್ಗೆ ದ್ವೇಷ, ಆದ್ರೆ ಮುಸ್ಲಿಂರು ಅವರಿಗೆ ಬೀಗರು. ದೇಶದಲ್ಲಿ ಮುಸ್ಲಿಂ ಇರುವುದರಿಂದಲೇ ಕಾಂಗ್ರೆಸ್ ಇದೆ. ಇಲ್ಲದಿದ್ದರೇ ದೇಶದಲ್ಲಿ ಕಾಂಗ್ರೆಸ್ ನಿರ್ನಾಮವಾಗುತ್ತಿತ್ತು ಎಂದರು.

ಇದನ್ನೂ ಓದಿ :Congress Guarantee scheme: ಪೂರ್ಣ ಪ್ರಮಾಣದ 2.29 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಎಲ್ಲಿಯೂ ಸಿಗುತ್ತಿಲ್ಲ: ಸಿಎಂ ಸಿದ್ದರಾಮಯ್ಯ

Last Updated :Jun 24, 2023, 7:27 PM IST

ABOUT THE AUTHOR

...view details