ಕರ್ನಾಟಕ

karnataka

ಕಾಡಾನೆ ದಾಳಿ; ಎಂಟು ಬಾರಿ ಅಂಬಾರಿ ಹೊತ್ತಿದ್ದ ಅರ್ಜುನ ಸಾವು, ಕಣ್ಣೀರಿಟ್ಟ ಮಾವುತರು

By ETV Bharat Karnataka Team

Published : Dec 4, 2023, 5:21 PM IST

Updated : Dec 5, 2023, 6:33 AM IST

ಮೈಸೂರು ದಸರಾದಲ್ಲಿ ಎಂಟು ಬಾರಿ ಅಂಬಾರಿ ಹೊತ್ತಿದ್ದ ಅರ್ಜುನ ಆನೆ ಕಾಡಾನೆ ಕಾಳಗದಲ್ಲಿ ಮೃತಪಟ್ಟಿದೆ.

Arjuna Death
ಅರ್ಜುನ ಸಾವು

ಎಂಟು ಬಾರಿ ಅಂಬಾರಿ ಹೊತ್ತಿದ್ದ ಅರ್ಜುನ ಸಾವು

ಹಾಸನ: ಕಾಡಾನೆ ದಾಳಿಗೆ ಅಂಬಾರಿ ಹೊತ್ತಿದ್ದ ಅರ್ಜುನ ಆನೆ ಬಲಿಯಾಗಿರುವ ಘಟನೆ ಜಿಲ್ಲೆಯ ಸಕಲೇಶಪುರ ತಾಲೂಕಿನ ಯಸಳೂರು ಬಾಳೆಕೆರೆ ಅರಣ್ಯ ಪ್ರದೇಶದಲ್ಲಿ ಇಂದು ನಡೆದಿದೆ. ಅರ್ಜುನ ಸೇರಿ ನಾಲ್ಕು ಪಳಗಿದ ಆನೆಗಳೊಂದಿಗೆ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸುವ ವೇಳೆ ಘಟನೆ ಸಂಭವಿಸಿದೆ.

ಅಂಬಾರಿ ಹೊತ್ತು ಗಾಂಭೀರ್ಯದ ನಡೆಯೊಂದಿಗೆ ಅರ್ಜುನ

ಅರಣ್ಯ ಇಲಾಖೆ ಸಿಬ್ಬಂದಿ ಪುಂಡಾನೆಗೆ ಅರವಳಿಕೆ ಚುಚ್ಚು ಮದ್ದು ನೀಡುವಾಗ ಆ ಆನೆ ಅರ್ಜುನನ ಮೇಲೆ ದಾಳಿ ನಡೆಸಿದೆ. ಒಂಟಿ ಸಲಗದ ಜೊತೆ ಕಾಳಗಕ್ಕಿಳಿದ ಅರ್ಜುನ ಹೋರಾಟ ನಡೆಸುತ್ತಿದ್ದಂತೆ, ಅರ್ಜುನನ ಮೇಲಿನಿಂದ ಮಾವುತರು ಕೆಳಗಿಳಿದಿದ್ದಾರೆ. ಬಳಿಕ ಕಾಳಗದಲ್ಲಿ ಹೋರಾಡುವಾಗ ಹೊಟ್ಟೆ ಭಾಗಕ್ಕೆ ಒಂಟಿ ಸಲಗ ತಿವಿದಿದ್ದರಿಂದಾಗಿ ಅರ್ಜುನ ಮೃತಪಟ್ಟಿದೆ.

ಇದನ್ನೂ ಓದಿ :ಮೈಸೂರು ದಸರಾ: ಸೊಂಡಿಲನ್ನು ಎತ್ತಿ ದಂತಗಳನ್ನು ಕೂಡಿಸಿಕೊಂಡು ಆಟವಾಡಿದ ಅರ್ಜುನ - ಭೀಮ ಆನೆಗಳು

ಮೈಸೂರು ದಸರಾದಲ್ಲಿ ಅರ್ಜುನ 8 ಬಾರಿ ಅಂಬಾರಿಯನ್ನು ಹೊತ್ತಿದ್ದ. 2012 ರಿಂದ 2019ರ ವರೆಗೆ ಅಂಬಾರಿ ಹೊತ್ತು ಸೈ ಎನಿಸಿಕೊಂಡಿದ್ದ ಅರ್ಜುನ, ಎಲ್ಲಾ ರೀತಿಯಲ್ಲೂ ಜನರ ಪ್ರೀತಿಗೆ ಪಾತ್ರವಾಗಿತ್ತು. ಅಲ್ಲದೆ 22 ಬಾರಿ ದಸರಾ ಮೆರವಣಿಗೆಯಲ್ಲಿ ಪಾಲ್ಗೊಂಡಿತ್ತು. ಕಳೆದ ನಾಲ್ಕು ವರ್ಷಗಳಿಂದ ನಿಶಾನೆ ಆನೆಯಾಗಿ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸುತ್ತಿತ್ತು. ಕ್ಯಾಪ್ಟನ್ ಅರ್ಜುನನ ಹಠಾತ್ ಸಾವು ಕಂಡು ಮಾವುತರು ಕಣ್ಣೀರಿಟ್ಟಿದ್ದಾರೆ.

ಕಳೆದ ತಿಂಗಳು ನ. 24 ರಿಂದ ರೇಡಿಯೋ ಕಾಲರ್ ಅಳವಡಿಕೆ ಕಾರ್ಯಾಚರಣೆ ನಡೆಯುತ್ತಿತ್ತು. ಕಾಡಾನೆ ಪಳಗಿಸುವ ಕಾರ್ಯಾಚರಣೆ ವೇಳೆ ಈ ಘಟನೆ ಸಂಭವಿಸಿದ್ದು, ಪ್ರಾಣಿ ಪ್ರಿಯರಿಗೆ ನೋವುಂಟು ಮಾಡಿದೆ.

ಎಂಟು ಬಾರಿ ಮೈಸೂರು ದಸರಾ ಅಂಬಾರಿ ಹೊತ್ತಿದ್ದ ಅರ್ಜುನ ಇನ್ನಿಲ್ಲ

ಇದನ್ನೂ ಓದಿ :ಚಿನ್ನದ ಅಂಬಾರಿ ಹೊತ್ತ ಅರ್ಜುನನ ಗಾಂಭೀರ್ಯದ ನಡಿಗೆ, ತಾಯಿ ಚಾಮುಂಡೇಶ್ವರಿ ದರ್ಶನ ಪಡೆದ ಜನಸಾಗರ!

ಅರ್ಜುನ ಆನೆಯ ಹಿನ್ನೆಲೆ :ಅರ್ಜುನ ಆನೆಯನ್ನು 1968ರಲ್ಲಿ ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿತ್ತು. ಸುಮಾರು 22 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ 64 ವರ್ಷದ ಅರ್ಜುನ ಆನೆ ಭಾಗವಹಿಸಿತ್ತು. ಅರ್ಜುನ ನಾಗರಹೊಳೆಯ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಬಳ್ಳೆ ಆನೆ ಶಿಬಿರದಲ್ಲಿ ನೆಲೆಸಿತ್ತು. ಹುಲಿ, ಆನೆ ಸೆರೆ ಅರ್ಜುನನ ಪಾತ್ರ ಮಹತ್ವದ್ದಾಗಿತ್ತು.

ಸಿಎಂ ಸಂತಾಪ:''ಐತಿಹಾಸಿಕ ಮೈಸೂರು ದಸರಾದ ಕೇಂದ್ರ ಬಿಂದುವಾದ ಜಂಬೂಸವಾರಿಯನ್ನು ಎಂಟು ವರ್ಷಗಳ ಕಾಲ ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟು ಜನರ ಪ್ರೀತಿಪಾತ್ರವಾಗಿದ್ದ ಆನೆ ‘ಅರ್ಜುನ’ ಇನ್ನಿಲ್ಲ ಎಂಬ ಸುದ್ದಿ ಕೇಳಿ ನೋವಾಯಿತು. ಬರೋಬ್ಬರಿ 750 ಕೆ.ಜಿ ತೂಕದ ಚಿನ್ನದ ಅಂಬಾರಿ ಹೊತ್ತು, ಅತ್ಯಂತ ಸಂಯಮದಿಂದ ಮೆರವಣಿಗೆಯಲ್ಲಿ ಸಾಗುವ ಮೂಲಕ ತಾಯಿ ಚಾಮುಂಡೇಶ್ವರಿಯ ಸೇವೆಗೈದಿದ್ದ ಅರ್ಜುನ ಕಾಡಾನೆ ಜೊತೆಗಿನ ಕಾದಾಟದಲ್ಲಿ ಮೃತಪಟ್ಟಿದೆ. ಲಕ್ಷಾಂತರ ಜನರ ನಡುವೆ ಗಾಂಭೀರ್ಯದಿಂದ ಸಾಗುತ್ತಿದ್ದ ಅರ್ಜುನನ ನಡಿಗೆ ನನ್ನಂತಹ ಕೋಟ್ಯಂತರ ಕನ್ನಡಿಗರ ಮನದಲ್ಲಿ ಶಾಶ್ವತವಾಗಿ ಇರಲಿದೆ'' ಎಂದು ಸಿಎಂ ಸಿದ್ದರಾಮಯ್ಯ ಜಾಲತಾಣ ಎಕ್ಸ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.

22 ಬಾರಿ ದಸರಾ ಮಹೋತ್ಸದಲ್ಲಿ ಭಾಗವಹಿಸಿದ್ದ ಅರ್ಜುನ

ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ಮಾಜಿ ಸಿಎಂ ಹೆಚ್.​​ಡಿ ಕುಮಾರಸ್ವಾಮಿ, ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಯಸಳೂರು ಬಳಿ ಕಾಡಾನೆಗಳ ಸೆರೆಗೆ ನಡೆಸಿದ ಕಾರ್ಯಾಚರಣೆ ವೇಳೆ ಒಂಟಿ ಸಲಗದ ದಾಳಿಗೆ ತುತ್ತಾಗಿ ಸಾಕಾನೆ ಅರ್ಜುನ ವೀರಮರಣ ಹೊಂದಿದ ಘಟನೆ ತಿಳಿದು ಬಹಳ ನೋವುಂಟಾಯಿತು. ದಸರಾ ಅಂಬಾರಿಯನ್ನು ಹೊತ್ತು ಸಾಗಿದ್ದ ಅರ್ಜುನ ಇನ್ನು ನೆನಪಷ್ಟೇ.

ಕಾಡಾನೆ ದಾಳಿಗೆ ಅರ್ಜುನ ಸಾವು

ಇದನ್ನೂ ಓದಿ :ನವ ವರನಂತೆ ತಯಾರಾದ ಅರ್ಜುನ: ಅಂಬಾರಿ ಕಟ್ಟುವ ಕೆಲಸ ಪ್ರಾರಂಭ

ಸ್ಥಳಾಂತರ ಕಾರ್ಯಾಚರಣೆ ವೇಳೆ ಸಾಕಾನೆಗಳು-ಕಾಡಾನೆಗಳ ನಡುವಿನ ಭೀಕರ ಕಾಳಗದ ವೇಳೆ ಇತರೆ ಸಾಕಾನೆಗಳು ಪಲಾಯನ ಮಾಡಿದರೆ, ಅರ್ಜುನ ಮಾತ್ರ ಒಂಟಿ ಸಲಗದ ಜತೆ ವಿರೋಚಿತವಾಗಿ ಸೆಣಸಾಡಿತ್ತು. ಇಂಥ ವಿರೋಚಿತ ಆನೆ ಸಾವನ್ನಪ್ಪಿರುವುದು ಅತ್ಯಂತ ದುಃಖದ ಸಂಗತಿ. ಕಾಡಾನೆಗಳನ್ನು ಸೆರೆ ಹಿಡಿಯುವಾಗ ತಮ್ಮ ಪ್ರಾಣ ರಕ್ಷಣೆಯ ಜತೆಗೆ ವನ್ಯಮೃಗಗಳ ಜೀವಕ್ಕೆ ಹಾನಿ ಆಗದಂತೆ ಅರಣ್ಯ ಸಿಬ್ಬಂದಿ ಮುನ್ನೆಚ್ಚರಿಕೆ ವಹಿಸಲಿ. ಅರ್ಜುನನ ಆತ್ಮಕ್ಕೆ ಚಿರಶಾಂತಿ ಸಿಗಲಿ. ಆ ತಾಯಿ ಚಾಮುಂಡೇಶ್ವರಿ ಸದ್ಗತಿ ಕರುಣಿಸಲಿ ಎಂದು ಹೇಳಿದ್ದಾರೆ.

ಇದನ್ನೂ ಓದಿ :ಮೈಸೂರು ದಸರಾ: ಸೊಂಡಿಲನ್ನು ಎತ್ತಿ ದಂತಗಳನ್ನು ಕೂಡಿಸಿಕೊಂಡು ಆಟವಾಡಿದ ಅರ್ಜುನ - ಭೀಮ ಆನೆಗಳು

Last Updated :Dec 5, 2023, 6:33 AM IST

ABOUT THE AUTHOR

...view details