ETV Bharat / state

ಮೈಸೂರು ದಸರಾ: ಸೊಂಡಿಲನ್ನು ಎತ್ತಿ ದಂತಗಳನ್ನು ಕೂಡಿಸಿಕೊಂಡು ಆಟವಾಡಿದ ಅರ್ಜುನ - ಭೀಮ ಆನೆಗಳು

author img

By ETV Bharat Karnataka Team

Published : Oct 11, 2023, 2:25 PM IST

ಮೈಸೂರು ರಾಜ ವಂಶಸ್ಥರ ಶರನ್ನವರಾತ್ರಿಯಲ್ಲಿ ಪಟ್ಟದ ಆನೆಯಾಗಿರುವ ಭೀಮ ಮತ್ತು ಜಂಬೂ ಸವಾರಿಯ ಮಾಜಿ ಕ್ಯಾಪ್ಟನ್ ಅರ್ಜುನ ಆನೆಯು ಸ್ನೇಹಿತರಾದ ವಿಡಿಯೋ ಇಲ್ಲಿದೆ ನೋಡಿ.

Arjuna and Bhima elephants
ಆನೆ ಶಿಬಿರದಲ್ಲಿ ಅರ್ಜುನ - ಭೀಮ ಮಸ್ತಿ

ಆನೆ ಶಿಬಿರದಲ್ಲಿ ಅರ್ಜುನ - ಭೀಮ ಮಸ್ತಿ

ಮೈಸೂರು : ದಸರಾ 2023ಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. ಹಬ್ಬಕ್ಕೆ ದಿನಗಣನೆ ಆರಂಭಗೊಂಡಿದ್ದು, ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವ ನಿರೀಕ್ಷೆ ಇದೆ. ಅರಮನೆಯ ಕೋಡಿ ಸೋಮೇಶ್ವರ ದೇವಾಲಯದ ಬಳಿ ಇರುವ ಗಜಪಡೆ ಶಿಬಿರದಲ್ಲಿ ಮಾಜಿ ಜಂಬೂ ಸವಾರಿಯ ಕ್ಯಾಪ್ಟನ್ ಹಾಗೂ ಹಿರಿಯ ಆನೆ ಅರ್ಜುನ ಮತ್ತು ರಾಜ ವಂಶಸ್ಥರ ಶರನ್ನವರಾತ್ರಿಯಲ್ಲಿ ಪಟ್ಟದ ಆನೆಯಾಗಿರುವ ಭೀಮ ಸದ್ಯಕ್ಕೆ ಶಿಬಿರದಲ್ಲಿ ಪರಸ್ಪರ ಮಸ್ತಿಯಲ್ಲಿ ತೊಡಗಿದ್ದು, ಅದರ ವಿಡಿಯೋ ಝಲಕ್ ಇಲ್ಲಿದೆ.

ಮೈಸೂರು ದಸರಾದ ಗಜಪಡೆಯಲ್ಲಿ ಆಕರ್ಷಕ ಮೈಕಟ್ಟು ಹೊಂದಿರುವ ಅರ್ಜುನ ಆನೆ ಹಾಗೂ ಅರಮನೆಯ ರಾಜ ವಂಶಸ್ಥರ ಶರನ್ನವರಾತ್ರಿಯ ಪಟ್ಟದ ಆನೆಯಾಗಿರುವ ಭೀಮ ಆನೆ ಶಿಬಿರದಲ್ಲಿ ದಷ್ಟಪುಷ್ಟ ಆಹಾರವನ್ನು ತಿಂದು, ಸ್ನಾನ ಮಾಡಿ ಬಳಿಕ ಜಂಬೂ ಸವಾರಿ ತಾಲೀಮು ಮುಗಿಸಿಕೊಂಡು ಶಿಬಿರಕ್ಕೆ ಆಗಮಿಸಿದ್ದವು. ಈ ವೇಳೆ ಅರ್ಜುನ - ಭೀಮ ಪರಸ್ಪರ ಸ್ನೇಹ ಮಾಡಿಕೊಳ್ಳುತ್ತಿದ್ದ ದೃಶ್ಯ ಕಂಡು ಬಂದಿತು.

ಈ ಬಾರಿಯ ದಸರಾ ಮಹೋತ್ಸವಕ್ಕೆ ಆಗಮಿಸಿರುವ ಅತ್ಯಂತ ಹಿರಿಯ ಗಂಡು ಆನೆ ಎಂಬ ಖ್ಯಾತಿ ಪಡೆದಿರುವ ಹಾಗೂ 8 ಬಾರಿಗೂ ಹೆಚ್ಚು ಬಾರಿ ಜಂಬೂ ಸವಾರಿಯನ್ನು ಯಶಸ್ವಿಯಾಗಿ ಹೊತ್ತಿರುವ ಅರ್ಜುನ ನಾಗರಹೊಳೆಯ ಹುಲಿ ಸಂರಕ್ಷಿತ ಬಳ್ಳೆ ಆನೆ ಶಿಬಿರದಿಂದ ಆಗಮಿಸಿದೆ. ಇದರ ಜೊತೆಗೆ ಕಿರಿಯ ವಯಸ್ಸಿನ ಸದೃಢ ಮೈಕಟ್ಟು ಹೊಂದಿರುವ ಭೀಮ ಆನೆ ರಾಜ ವಂಶಸ್ಥರ ಶರನ್ನವರಾತ್ರಿಯಲ್ಲಿ ಪಟ್ಟದ ಆನೆಯಾಗಿ ಆಯ್ಕೆಯಾಗಿದ್ದು, ಇದು ನಾಗರಹೊಳೆಯ ಹುಲಿ ಸಂರಕ್ಷಿತ ಪ್ರದೇಶದಲ್ಲಿರುವ ಮತ್ತಿಗೋಡು ಆನೆ ಶಿಬಿರದಿಂದ ಆಗಮಿಸಿದೆ.

ಈ ಎರಡು ಆನೆಗಳನ್ನು ಅರಮನೆಯ ಶಿಬಿರಗಲ್ಲಿ ಅಕ್ಕ ಪಕ್ಕ ಕಟ್ಟಲಾಗಿದ್ದು, ಈ ವೇಳೆ ಪರಸ್ಪರ ತಮ್ಮ ಸೊಂಡಿಲನ್ನು ಎತ್ತಿ ಇಬ್ಬರು ದಂತಗಳನ್ನು ಕೂಡಿಸಿಕೊಂಡು ಸ್ನೇಹದಿಂದ ಆಟವಾಡಿ ಗಮನ ಸೆಳೆದಿದ್ದಾರೆ. ಬಳಿಕ, ಆನೆಗಳನ್ನು ನೋಡಿಕೊಳ್ಳುವ ಮಾವುತರು, ಕವಾಡಿಗರು ಶಿಬಿರದಲ್ಲೇ ಇದ್ದು ಇದನ್ನು ನೋಡಿ ಆನೆಗಳಿಗೆ ಸನ್ನೆ ಮೂಲಕ ಸೂಚನೆಗಳನ್ನು ನೀಡಿದರು.

ಹೀಗೆ ದಸರಾ ಗಜಪಡೆಯ ಶಿಬಿರಗಳಲ್ಲಿ ಬೇರೆ ಬೇರೆ ಶಿಬಿರಗಳಿಂದ ಬಂದಿರುವ ಆನೆಗಳು ಪರಸ್ಪರ ಸ್ನೇಹ ಮಾಡಿಕೊಂಡು ಮಸ್ತಿಯಲ್ಲಿ ತೊಡಗಿರುವ ದೃಶ್ಯ ನೋಡುವುದೇ ಕಣ್ಣಿಗೆ ಹಬ್ಬದಂತಿದೆ.

ಯುವ ದಸರಾ ಸಮಾರಂಭ : ಇನ್ನು ನಾಡಹಬ್ಬ ದಸರಾ ಅಂಗವಾಗಿ ಈ ಬಾರಿಯ ಯುವ ದಸರಾ ಕಾರ್ಯಕ್ರಮ ನಾಲ್ಕು ದಿನಗಳ ಕಾಲ ನಡೆಯಲಿದೆ. ಶಿವರಾಜ್​​ಕುಮಾರ್ ಹಾಗೂ ಹಂಸಲೇಖ ಉದ್ಘಾಟನೆ ಮಾಡಲಿದ್ದಾರೆ. ಅಕ್ಟೋಬರ್ 18 ರಿಂದ ಅಕ್ಟೋಬರ್ 21ರ ವರೆಗೆ ಯುವ ದಸರಾ ನಡೆಯಲಿದ್ದು, ಗಾಯಕ ಸಂಜಿತ್ ಹೆಗ್ಡೆ ಹಾಗೂ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹಾದೇವಪ್ಪ ಉದ್ಘಾಟನೆ ಸಮಾರಂಭದಲ್ಲಿ ಗಣ್ಯರಿಗೆ ಸಾಥ್ ನೀಡಲಿದ್ದಾರೆ. ನಾಲ್ಕು ದಿನಗಳ ಕಾಲ ಸಂಜೆ 6:30 ರಿಂದ 10:30ರ ವರೆಗೆ ಕಾರ್ಯಕ್ರಮ ನಡೆಯಲಿದೆ. ಸಾಧುಕೋಕಿಲ ತಂಡದಿಂದ ಸಂಗೀತ ರಸದೌತಣ ಕಾರ್ಯಕ್ರಮ ಇರಲಿದೆ. ಸ್ಥಳೀಯ ಪ್ರತಿಭೆಗಳ ಜೊತೆಗೆ ಬಾಲಿವುಡ್ ಹಾಡುಗಾರರು ಕೂಡ ಈ ಬಾರಿಯ ಭಾಗವಹಿಸಲಿದ್ದಾರೆ.

ಇದನ್ನೂ ಓದಿ : ಶಿವಣ್ಣ, ಹಂಸಲೇಖರಿಂದ ಯುವದಸರಾ ಉದ್ಘಾಟನೆ : ಸಂಪೂರ್ಣ ಮಾಹಿತಿ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.